ವಿವಾದಿತ ಬಾಬರಿ ಮಸೀದಿ ನಿವೇಶನದ ಒಡೆತನ ಹಕ್ಕು ವಿವಾದ: ಸೆ.24 ತೀರ್ಪು |
ಪ್ರಕಟಿಸಿದ ದಿನಾಂಕ : 2010-09-09
ಲಕ್ನೋ: ಅರುವತ್ತು ವರ್ಷಗಳ ಹಿಂದಿನ ಅಯೋಧ್ಯೆ ಮಾಲಕತ್ವ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಸೆಪ್ಟಂಬರ್ 24 ರಂದು ಪ್ರಕಟಿಸಲಿದೆ.
ಜುಲೈ 26 ರಂದು ಅಯೋಧ್ಯೆಯಲ್ಲಿನ ವಿವಾದಿತ ಸ್ಥಳದ ಮಾಲಕತ್ವಕ್ಕೆ ಸಂಬಂಧಿಸಿ ತೀರ್ಪು ಕಾಯ್ದಿರಿಸಿದ್ದ ಜಸ್ಟೀಸ್ ಎಸ್.ಯು.ಖಾನ್, ಸುದೀರ್ ಅಗರ್ವಾಲ್ ಹಾಗೂ ಡಿ.ವಿ.ಶರ್ಮ ಅವರನ್ನೊಳಗೊಂಡ ವಿಶೇಷ ಪೂರ್ಣ ಪೀಠವು ಬುಧವಾರ ಅರ್ಜಿದಾರರ ಉಪಸ್ಥಿತಿಯಲ್ಲಿ ಸೆಪ್ಟಂಬರ್ 24 ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
ನ್ಯಾಯಾಲಯದ ತೀರ್ಪು ಮೂರು ವಿಚಾರಗಳ ಮೇಲೆ ಬೆಳಕು ಚೆಲ್ಲಲಿದೆ. 1538 ಕ್ಕೂ ಮುನ್ನ ವಿವಾದಿತ ಸ್ಥಳದಲ್ಲಿ ರಾಮ ಮಂದಿರವಿತ್ತೇ, 1961 ರಲ್ಲಿ ಬಾಬರಿ ಸಮಿತಿ ಸಲ್ಲಿಸಿದ ಅರ್ಜಿಯ ಕೆಲವೊಂದು ನಿರ್ಬಂಧಗಳನ್ನು ಹೊಂದಿತ್ತೇ ಹಾಗೂ ವ್ಯತಿರಿಕ್ತ ವಿಧಾನಗಳ ಮೂಲಕ ಮುಸ್ಲಿಮರು ಹಕ್ಕುದಾರಿಕೆಯನ್ನು ಪ್ರತಿಪಾದಿಸುವ ಸಾಧ್ಯತೆ ಇದೆಯೇ ಎಂಬುದು ಹೈಕೋರ್ಟ್ ತೀರ್ಪನ್ನು ಅವಲಂಬಿಸಿದೆ.
1950 ರಲ್ಲಿ ವಿವಾದಿತ ಸ್ಥಳದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಮೊದಲ ಬಾರಿಗೆ ಗೋಪಾಲ್ ಸಿಂಗ್ ವಿಶಾರದ್ ಅವರು ಅರ್ಜಿ ಸಲ್ಲಿಸಿದ್ದರು.
ಇದೇ ವರ್ಷ ಪರಮಹಂಸ ತಾಮ್ಚಂದ್ರ ದಾಸ್ ಅವರು ಸಹ ಶ್ರೀರಾಮನಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಎರಡನೇ ಅರ್ಜಿ ಸಲ್ಲಿಸಿದ್ದರು. ಆದರೆ, ಅದನ್ನು ಬಳಿಕ ಹಿಂದಕ್ಕೆ ಪಡೆಯಲಾಯಿತು.
1959 ರಲ್ಲಿ ವಿವಾದಿತ ಸ್ಥಳವನ್ನು ಹಸ್ತಾಂತರಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ನಿರ್ಮೋಹಿ ಅಖಾಡ ಮೂರನೇ ಅರ್ಜಿಯನ್ನು ಸಲ್ಲಿಸಿತು. 1961 ರಲ್ಲಿ ವಿವಾದಿತ ಸ್ಥಳ ತನಗೆ ಸೇರಿದ್ದೆಂದು ಹೇಳಿ ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ಬೋರ್ಡ್ ಆಫ್ ವಕ್³ ಅರ್ಜಿ ಸಲ್ಲಿಸಿತ್ತು.
1989 ರಲ್ಲಿ ಭಗವಾನ್ ಶ್ರೀ ರಾಮ್ ಲಲ್ಲಾ ವಿರಾಜ್‌ಮಾನ್ ಹೆಸರಲ್ಲಿ ವಿವಾದಿತ ಸ್ಥಳವನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿ ಐದನೇ ಅರ್ಜಿ ಸಲ್ಲಿಸಲಾಗಿತ್ತು. ಈ ಪೈಕಿ ಒಂದು ಅರ್ಜಿಯನ್ನು ಹಿಂದಕ್ಕೆ ಪಡೆಯಲಾಗಿದ್ದರೆ, ಉಳಿದ ನಾಲ್ಕು ಅರ್ಜಿಗಳು ಫೈಜಾಬಾದ್ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಉಳಿದಿತ್ತು. 1989 ರಲ್ಲಿ ಉತ್ತರಪ್ರದೇಶದ ಆಗಿನ ಅಡ್ವೊಕೇಟ್ ಜನರಲ್ ಅವರ ಮನವಿಯ ಮೇರೆಗೆ ಈ ಎಲ್ಲಾ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.
ಸೆ.24 ರಂದು ಅಯೋಧ್ಯೆ ಮಾಲಕತ್ವದ ಕುರಿತು ಹೈಕೋರ್ಟ್ ತೀರ್ಪು ನೀಡಲಿದ್ದು, ತೀರ್ಪಿನ ಬಳಿಕ ವ್ಯಕ್ತಗೊಳ್ಳಬಹುದಾದ ರಾಜಕೀಯ ಬಿಕ್ಕಟ್ಟು ಹಾಗೂ ಕೋಮು ಗಲಭೆ ಸಾಧ್ಯತೆ ಬಗ್ಗೆ ಕೇಂದ್ರ ಹಾಗೂ ಮಾಯಾವತಿ ಸರಕಾರ ತೀವ್ರ ಆತಂಕ ಗೊಂಡಿದೆ.
ಉತ್ತರಪ್ರದೇಶ ಸೇರಿದಂತೆ ದೇಶದ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಛಾಯಾಸೇನೆಯನ್ನು ಈಗಾಗಲೇ ನಿಯೋಜಿಸಲಾಗಿದೆ. ಮಹತ್ವದ ತೀರ್ಪು ಹೊರಬೀಳಲಿರುವ ಹಿನ್ನೆಲೆಯಲ್ಲಿ ವ್ಯಕ್ತಗೊಳ್ಳಬಹುದಾದ ಯಾವುದೇ ಪರಿಸ್ಥಿತಿ ಹಾಗೂ ಅದರ ನಿರ್ವಹಣೆ ಕುರಿತು ಚರ್ಚಿಸಲು ಕಳೆದ ಶುಕ್ರವಾರ ಕಾಂಗ್ರೆಸ್ ಕೋರ್ ಸಮಿತಿ ಸಭೆ ಸೇರಿತ್ತು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
| hasainar.u a e, katipalla | 2010-09-10 | | insha allah.geluvu nammadhagali endu allahanalli duva madona... |
| Zulfiakar, Mangalore/KSA | 2010-09-09 | | ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ನೀಡಲಿರುವ ತೀರ್ಪು ಶಾಂತಿಯುತವಾಗಿ ಬಗೆಹರಿಯಲಿ ಎಂದು ನಮ್ಮೆಲ್ಲರ ಹೃದಾಯಾಂತರದ ಪ್ರಾರ್ಥನೆ . |
|