ಐಪಿಎಲ್‌ಗೆ 4ನೇ ಆವೃತ್ತಿಗೆ ಆಸೀಸ್ ಆಟಗಾರರಿಲ್ಲ? |
ಪ್ರಕಟಿಸಿದ ದಿನಾಂಕ : 2010-09-09
ಹೊಸದಿಲ್ಲಿ : ಐಪಿಎಲ್‌ನ 4ನೇ ಆವೃತ್ತಿಯಿಂದ ಆಸ್ಟ್ರೇಲಿಯದ ಆಟಗಾರರು ದೂರ ಉಳಿಯುವರೇ? ಇಂಥದೊಂದು ಪ್ರಶ್ನೆ ಹುಟ್ಟಿಕೊಂಡಿದೆ. ವಿದೇಶಿ ಆಟಗಾರರ ಹರಾಜಿನ ಮೊತ್ತದ ಶೇ. 10ರಷ್ಟನ್ನು ಸಂಬಂಭಪಟ್ಟ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳಿಗೆ ನೀಡಲು ಬಿಸಿಸಿಐ ಮುಂದಾಗಿರುವುದೇ ಇದಕ್ಕೆ ಕಾರಣ.
ಇತ್ತೀಚೆಗಷ್ಟೇ ಸಭೆ ಸೇರಿದ್ದ ಐಪಿಎಲ್ ಆಡಳಿತ ಮಂಡಳಿ ಇಂಥದೊಂದು ನಿರ್ಧಾರಕ್ಕೆ ಬಂದಿತ್ತು. ದುಡ್ಡಿನ ಕೊಪ್ಪರಿಗೆಯನ್ನೇ ಹೊಂದಿರುವ ಈ ಟಿ-20 ಕೂಟದಿಂದ ಆಟಗಾರರ ಏಜೆಂಟರನ್ನು ದೂರವಿಡುವುದು ಹಾಗೂ ಆಟಗಾರರ ವೇತನದ ಶೇ. 10ರಷ್ಟನ್ನು ಅವರ ದೇಶದ ಕ್ರಿಕೆಟ್ ಮಂಡಳಿಗೆ ನೀಡುವುದು ಬಿಸಿಸಿಐಯ ನೂತನ ಯೋಜನೆ.
ಆದರೆ ಬಿಸಿಸಿಐ ತೆಗೆದುಕೊಂಡಿರುವ ಈ ತೀರ್ಮಾನ ಆಸ್ಟ್ರೇಲಿಯದ ಆಟಗಾರರನ್ನು ಕೆರಳಿಸಿದೆ. ಆಸ್ಟ್ರೇಲಿಯ ಕ್ರಿಕೆಟ್ ಆಟ ಗಾರರ ಒಕ್ಕೂಟದ (ಎಸಿಎ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾಲ್ ಮಾರ್ಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದಕ್ಕೆ ಸಹಿ ಹಾಕದಂತೆ ಆಟಗಾರರಿಗೆ ಸೂಚಿಸಲಾಗುವುದು ಎಂದಿದ್ದಾರೆ. ಈ ರೀತಿಯ ಪಾಲನ್ನು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಕೇಳುವುದನ್ನು ಅಥವಾ ಅದಕ್ಕೆ ನೀಡುವುದನ್ನು ತಾನು ವಿರೋಧಿಸುತ್ತೇನೆ ಎಂಬುದು ಮಾರ್ಶ್ ನಿಲುವು.
'ತನ್ನ ಪಂದ್ಯಗಳನ್ನು ಹೊರತುಪಡಿಸಿ ಆಟಗಾರರ ಹೊರಗಿನ ಪಂದ್ಯಗಳ ದುಡಿಮೆಯಲ್ಲಿ ಪಾಲು ಕೇಳಲು ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಯಾವುದೇ ಹಕ್ಕಿಲ್ಲ. ಇದರಿಂದ, ವಾರಾಂತ್ಯದಲ್ಲಿ ಬೇರೆಡೆ ದುಡಿದು ಸಂಪಾದಿಸುವ ಹಣದಲ್ಲಿ ಮೂಲ ಉದ್ಯೋಗದಾತ ಪಾಲು ಕೇಳಿದಂತಾಗುತ್ತದೆ' ಎಂದಿದ್ದಾರೆ ಮಾರ್ಶ್.
ಆದರೆ 'ಕ್ರಿಕೆಟ್ ಆಸ್ಟ್ರೇಲಿಯ' ಬಿಸಿಸಿಐ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|