ಕಾಮನ್‌ವೆಲ್ತ್ ಗೇಮ್ಸ್: ಯಾದವ್‌ಗೆ ಒಲಿದ ಅದೃಷ್ಟ |
ಪ್ರಕಟಿಸಿದ ದಿನಾಂಕ : 2010-09-09
ಮುಂಬಯಿ : ಮುಂಬಯಿಯ ಕುಸ್ತಿಪಟು ನರಸಿಂಗ ಯಾದವ್ ಅವರಿಗೆ ಕೊನೆಗೂ ಅದೃಷ್ಟ ಒಲಿದಿದೆ. 74 ಕೆ.ಜಿ. ವಿಭಾಗದ ಕುಸ್ತಿಪಟು ಸುಮಿತ್ ದ್ರವ್ಯ ಪರೀಕ್ಷೆಯಲ್ಲಿ ವಿಫಲರಾದ ಹಿನ್ನಲೆಯಲ್ಲಿ ಜೋಗೇಶ್ವರಿಯ ಯಾದವ್ ಅವರನ್ನು ಗೇಮ್ಸ್ನ ಕುಸ್ತಿ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
2009ರಲ್ಲಿ ನಡೆದ ಕಾಮನ್‌ವೆಲ್ತ್ ಮತ್ತು ಈ ವರ್ಷದ ಆರಂಭದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದ ಯಾದವ್ ಗೇಮ್ಸ್ನ ಕುಸ್ತಿ ತಂಡಕ್ಕೆ ಸ್ಪರ್ಧಿಯಾಗಿದ್ದರು. ಆದರೆ ಗೇಮ್ಸ್ನ ಟ್ರಯಲ್ಸ್‌ನ ನಿರ್ಣಾಯಕ ಪಂದ್ಯವೊಂದರಲ್ಲಿ ಸೋತ ಕಾರಣ ಅವರನ್ನು ಕೈಬಿಡಲಾಗಿತ್ತು. ಅವರೀಗ ಸೆ. 9ರಿಂದ ಆರಂಭವಾಗುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಮಾಸ್ಕೋಗೆ ತೆರಳಿದ್ದಾರೆ.
2001ರಿಂದ ಇಲ್ಲಿನ ಕಾಂಡಿವಿಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿ ಕಾರದಲ್ಲಿ ತರಬೇತಿ ಪಡೆಯುತ್ತಿರುವ ಯಾದವ್ ಸ್ಥಿರವಾದ ನಿರ್ವಹಣೆ ನೀಡುತ್ತಾ ಬಂದಿದ್ದಾರೆ. ಅವರ ಹಿರಿಯ ಸಹೋದರ ವಿನೋದ್ ಕೂಡ ಕುಸ್ತಿಪಟು ಆಗಿದ್ದಾರೆ. ಇದೀಗ ಗೇಮ್ಸ್‌ಗೆ ಆಯ್ಕೆಯಾದ ಕಾರಣ ದಿಲ್ಲಿ ಗೇಮ್ಸ್ನಲ್ಲಿ ಅವರಿಂದ ಪದಕ ನಿರೀಕ್ಷಿಸಬಹುದು ಎಂದು ಕೋಚ್ ಜಗಲ್ ಸಿಂಗ್ ಹೇಳಿದ್ದಾರೆ. ಟ್ರಯಲ್ಸ್ ವೇಳೆ ಅವರು ಕಳೆದ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ನ ಕಂಚು ವಿಜೇತ ರಮೇಶ್ ಕುಮಾರ್ ಅವರನ್ನು ಕೆಡಹಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|