ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ. |
ಪ್ರಕಟಿಸಿದ ದಿನಾಂಕ : 2010-09-08
ಮಂಗಳೂರು: ನಗರದ ಕೇಂದ್ರ ಮಾರುಕಟ್ಟೆಯ ಸಮೀಪದ ಎರಡು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ನಕಲಿ ವಸ್ತುಗಳನ್ನು ಬಂದರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ ಸುಮಾರು 1.62 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸೆಂಟ್ರಲ್ ಮಾರುಕಟ್ಟೆಯಲ್ಲಿ ಬಳಿ ಇರುವ ದುಬ್ಯಾ ಮಾರ್ಕೆಟ್‌ನಲ್ಲಿರುವ ಪೂಜಾ ಕಾಸ್ಮೆಟಿಕ್ಸ್‌ನ ಶೇಟನ್ ಸಿಂಗ್ ಪುರೋಹಿತ್ ಹಾಗೂ ಬ್ಯೂಟಿವರ್ಲ್ಡ್ ನ ಅರ್ಜುನ್ ದೇಸಾಯಿ ಅವರು ಬಂಧಿತ ಆರೋಪಿಗಳು.
ಈ ಮಳಿಗೆಗಳಲ್ಲಿ ತಮ್ಮ ಕಂಪೆನಿಯ ಉತ್ಪನ್ನಗಳ ಹೆಸರಿನಲ್ಲಿ ನಕಲಿ ಕಾಸ್ಮೆಟಿಕ್ಸ್ ಸಾಮಗ್ರಿಗಳನ್ನು ಹಾಗೂ ಇತರ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹಿಂದೂಸ್ತಾನ್ ಲೀವರ್ ಕಂಪೆನಿಯವರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ಮಂಗಳವಾರ ಬಂದರು ಪೊಲೀಸ್ ಇನ್ಸೆಪೆಕ್ಟರ್ ವಿನಯ ಗಾಂವ್ಕರ್ ಹಾಗೂ ಸಬ್ ಇನ್ಸೆಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡವು ಮಳಿಗೆಗಳಿಗೆ ದಾಳಿ ನಡೆಸಿ ನಕಲಿ ಮಾಲುಗಳನ್ನು ವಶಪಡಿಸಿಕೊಂಡಿತು. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|