ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ) |
ಪ್ರಕಟಿಸಿದ ದಿನಾಂಕ : 2010-09-08
ಉಡುಪಿ: ಕ್ರೈಸ್ತ ಸಮಾಜ ಬಾ೦ಧವರಿ೦ದ ಇ೦ದು ಮೋ೦ತಿ(ತೆನೆ) ಹಬ್ಬದಾಚರಣೆ
ಸಾಂತ್ ಮೇರಿ ಜನ್ಮದಿನದ ಅಂಗವಾಗಿ ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ವಿವಿಧ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಮೇರಿ ಮಾತೆಯ ಜನ್ಮ ದಿನದಂದು ಕ್ರೈಸ್ತರು ತೆನೆ ಹಬ್ಬ (ಮೋಂತಿ ಫೆಸ್ಟ್) ವನ್ನು ಸಡಗರ ಸಂಭ್ರಮದಿಂದ ಬುಧವಾರ ಆಚರಿಸಿದರು.
ಇಗರ್ಜಿಗಳಲ್ಲಿ ವಿಶೇಷ ಪೂಜೆ, ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಕೊಯ್ಲು ಹಬ್ಬ ಅಥವಾ ವೊಂತಿ ಫೆಸ್ಟ್ ಎಂದು ಕರೆಯುವ ತೆನೆ ಹಬ್ಬವನ್ನು ಕನ್ಯಾ ಮರಿಯಮ್ಮನ ಜನ್ಮದಿನದಂದು ಜಿಲ್ಲೆಯ ಎಲ್ಲೆಡೆ ಕ್ರೈಸ್ತರು ಆಚರಿಸಿದರು. ಮನೆ ಮನೆಯಲ್ಲೂ ಸಂಭ್ರಮದಿಂದ ಕೊಯ್ಲು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕನ್ಯಾ ಮರಿಯಮ್ಮನ ಜನ್ಮ ದಿನದ ಪ್ರಯುಕ್ತ 9 ದಿನಗಳ ನೊವೆನಾ ಪ್ರಾರ್ಥನೆ ನಡೆಯುತ್ತದೆ. ದಿವ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆಯೊಂದಿಗೆ ಪುಟಾಣಿ ಮಕ್ಕಳು ತಂದ ಬಣ್ಣ ಬಣ್ಣದ ಹೂವಿನ ಅರ್ಚನೆ ನಡೆಯಿತು. ಮಾತೆಯನ್ನು ಗೀತೆಗಳಿಂದ ಸ್ತುತಿಸಲಾಯಿತು. ಇಗರ್ಜಿಯಲ್ಲಿ ತೆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಅವುಗಳನ್ನು ಎಲ್ಲ ಕುಟುಂಬಗಳಿಗೆ ನೀಡಲಾಯಿತು. ಇಗರ್ಜಿಯಿಂದ ತೆನೆಯನ್ನು ಮನೆಗೆ ತರಲಾಯಿತು. ಹೊಸತನ್ನು ಹಾಲಿನಲ್ಲಿ, ತೆಂಗಿನ ರಸದಲ್ಲಿ ಬೆರೆಸಿ ಸೇವಿಸಲಾಯಿತು. ಮನೆ ಮಂದಿ ಕುಟುಂಬ ಸಮೇತ ಬಗೆ ಬಗೆಯ ಸಸ್ಯಾಹಾರಿ ಊಟ ಸವಿದರು. ಕುಟುಂಬಸ್ಥರು ಒಟ್ಟು ಸೇರಿ ಹಬ್ಬವನ್ನು ಆಚರಿಸುವುದು ವಿಶೇಷವಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|