ಮ೦ಗಳೂರು : ‘ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ’ ಕುರಿತ ರಾಷ್ಟ್ರ ಮಟ್ಟದ ಸಮ್ಮೇಳನಕ್ಕೆ ಚಾಲನೆ: ಮೌಲ್ಯಾಧಾರಿತ ಶಿಕ್ಷಣದಿಂದ ಕ್ರಾಂತಿ: ಪ್ರೊ.ಪಿ.ವಿ.ಕೃಷ್ಣ ಭಟ್ಟ |
ಪ್ರಕಟಿಸಿದ ದಿನಾಂಕ : 2010-09-08
ಮಂಗಳೂರು, ಸೆ.7: ಶಿಕ್ಷಣ ಸಂಸ್ಥೆಗಳು ತಂತ್ರಜ್ಞಾನದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದಲ್ಲಿ ಶಿಕ್ಷಣ ಕ್ರಾಂತಿ ಸಾಧ್ಯ ಎಂದು ಪ್ರಜ್ಞಾ ಪ್ರವಾಹ್‌ನ ರಾಷ್ಟ್ರೀಯ ಸಂಚಾಲಕ ಪ್ರೊ.ಪಿ.ವಿ.ಕೃಷ್ಣ ಭಟ್ಟ ಅಭಿಪ್ರಾಯಿಸಿದ್ದಾರೆ.
ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಕೆನರಾ ಕಾಲೇಜಿನ ಸೆಂಟರ್ ಫೋರ್ ಅಡ್ವಾನ್ಸ್‌ಡ್ ಸ್ಟಡೀಸ್ ಇನ್ ಕಾಮರ್ಸ್ ಆಯಂಡ್ ಮ್ಯಾನೇಜ್‌ಮೆಂಟ್ ಹಾಗೂ ಅಮುಕ್ತ್ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ‘ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ’ ಎಂಬ ವಿಷಯದ ಕುರಿತ ರಾಷ್ಟ್ರ ಮಟ್ಟದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಬ್ರಿಟಿಶ್ ಶಿಕ್ಷಣ ವ್ಯವಸ್ಥೆಯಿಂದ ದಾಸ್ಯದ ಮನೋಭಾವ ಬೇರೂರುತ್ತದೆ ಎಂಬ ಕಾರಣದಿಂದ ದೇಶದ ಲ್ಲಿ ಸ್ವತಂತ್ರ ಮನೋಭಾವದ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಇದಕ್ಕಾಗಿ ನೇಮಕಗೊಂಡ ಕೊ ಠಾರಿ ಆಯೋಗವು ಮೌಲ್ಯಾಧಾರಿತ ಹಾಗೂ ಸೌಹಾರ್ದಯುತ ಶಿಕ್ಷಣದ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸಿತು. ಈ ಆಯೋಗದ ಕೆಲವು ಉದ್ದೇಶಗಳನ್ನು ಸರಕಾರ ಜಾರಿಗೆ ತಂದಿವೆಯಾದರೂ, ಪ್ರಮುಖ ಅಂಶಗಳನ್ನು ಜಾರಿಗೊಳಿಸುವ ಪ್ರಯತ್ನವನ್ನು ಸರಕಾರ ಮಾಡಿಲ್ಲ ಎಂದು ಪ್ರೊ.ಕೃಷ್ಣ ಭಟ್ಟ ಬೇಸರ ವ್ಯಕ್ತಪಡಿಸಿದರು.
ದಿಕ್ಸೂಚಿ ಭಾಷಣ ನೀಡಿದ ಇನ್ನೋರ್ವ ಕಣ್ಣೂರು ಮತ್ತು ಕ್ಯಾಲಿಕಟ್ ವಿವಿಯ ಮಾಜಿ ಉಪ ಕುಲಪತಿ ಪ್ರೊ.ಡಾ.ಎಂ.ಅಬ್ದುರ್ರಹ್ಮಾನ್, ಮಕ್ಕಳಲ್ಲಿ ನೈತಿಕ ವೌಲ್ಯಗಳನ್ನು ಬೆಳೆಸುವುದಕ್ಕಾಗಿ ಶಿಕ್ಷಕರು ತಮ್ಮ ಪಠ್ಯಕ್ರಮಗಳಲ್ಲಿ ಹೊಸ ಕೋರ್ಸ್‌ಗಳನ್ನು ಅಳವಡಿಸುವ ಸ್ವಾತಂತ್ರ ಹೊಂದುವಂತಾಗಬೇಕು ಎಂದರು.
ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಕೂಡಾ ಪಠ್ಯ ವಿಷಯದ ಜೊತೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಪ್ರೊ.ಅಬ್ದುರ್ರಹ್ಮಾನ್ ಕರೆ ನೀಡಿದರು.
ಶಿಕ್ಷಣದಲ್ಲಿ ಇಂದು ಇಂಗ್ಲಿಷ್ ವ್ಯಾಮೋಹ ಅತ್ಯಂತ ದಟ್ಟವಾಗುತ್ತಿದ್ದು, ಅಂತಾರಾಷ್ಟ್ರೀಯವಾಗಿ ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಅತ್ಯಗತ್ಯವಾಗಿದೆ. ಆದರೆ, ನಮಗೆ ಶೇಕ್ಸ್‌ಪಿಯರ್‌ನ ಇಂಗ್ಲಿಷ್ ಜ್ಞಾನದ ಅಗತ್ಯವಿಲ್ಲ. ಬದಲಾಗಿ ಸಂಪರ್ಕ ಮಾಧ್ಯಮಕ್ಕೆ ಅಗತ್ಯವಾದ ಇಂಗ್ಲಿಷ್ ಅಗತ್ಯ ಎಂದು ಅವರು ಅಭಿಪ್ರಾಯಿಸಿದರು.
ಅಧ್ಯಕ್ಷತೆಯನ್ನು ಕೆನರಾ ಕಾಲೇಜಿನ ಕರೆಸ್ಪಾಂಡೆಂಟ್ ಎಸ್.ಎಸ್.ಕಾಮತ್ ವಹಿಸಿದ್ದರು. ಸೀಮಾ ಪ್ರಭು, ಪ್ರೊ.ಉಮ್ಮಪ್ಪ ಪೂಜಾರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇಜಮ್ಮ ಸ್ವಾಗತಿ ಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|