ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್ |
ಪ್ರಕಟಿಸಿದ ದಿನಾಂಕ : 2010-09-08
ಮಣಿಪಾಲ, ಸೆ.7: ಪಾಕಿಸ್ತಾನದಲ್ಲಿ ಪ್ರಾಬಲ್ಯ ಹೊಂದಿರುವ ಮಿಲಿಟರಿ ಹಾಗೂ ಗುಪ್ತದಳಗಳೇ ಭಾರತ ಮತ್ತು ಪಾಕಿಸ್ತಾನ ನಡುವಿನ ಉತ್ತಮ ಸಂಬಂಧಕ್ಕೆ ಅಡ್ಡಿಯಾಗಿವೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ, ಕೇಂದ್ರ ಸರಕಾರದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅಭಿಪ್ರಾಯಪಟ್ಟಿದ್ದಾರೆ.
ಮಣಿಪಾಲದ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ ನಡೆದಿರುವ ಲೀಡರ್‌ಶಿಪ್ ಉಪನ್ಯಾಸ ಮಾಲಿಕೆಯಲ್ಲಿ ‘ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಈ ಎರಡು ಶಕ್ತಿ ಕೇಂದ್ರಗಳ ನಿಲುವುಗಳಲ್ಲಿ ಬದಲಾವಣೆಗಳೇನಾದರೂ ಕಂಡುಬಂದಲ್ಲಿ ಮಾತ್ರ ನೆರೆಕರೆಯ ಎರಡು ದೇಶಗಳ ಮಧ್ಯೆ ಆಶಾದಾಯಕ ಸಂಬಂಧ ಮೂಡಿಬರಲು ಸಾಧ್ಯ ಎಂದು ನಾರಾಯಣನ್ ಹೇಳಿದರು.
ಭಾರತ- ಪಾಕ್ ನಡುವಿನ ಸಂಬಂಧ ನಾವು ಊಹಿಸಿದ್ದಕ್ಕಿಂತಲೂ ಹೆಚ್ಚು ಕಠಿಣವಾಗಿದೆ. 2004-05ರಲ್ಲಿ ಎರಡು ದೇಶಗಳ ನಡುವೆ ಸೌಹಾರ್ದ ಸಂಬಂಧಕ್ಕಾಗಿ ಹಲವು ಪ್ರಯತ್ನಗಳು ನಡೆದು ಅವು 2006ರವರೆಗೂ ಮುಂದುವರಿದವು. ಆದರೆ 2008ರಲ್ಲಿ ನಡೆದ ಮುಂಬೈ ಸ್ಫೋಟ ಎಲ್ಲಕ್ಕೂ ಬ್ರೇಕ್ ಹಾಕಿತು. ಎಂದು ಅವರು ತಿಳಿಸಿದರು.
ಇನ್ನೊಂದು ನೆರೆ ರಾಷ್ಟ್ರವಾದ ಚೀನದೊಂದಿಗಿನ ಸಂಬಂಧದ ಕುರಿತಂತೆ ಮಾತನಾಡಿದ ನಾರಾಯ ಣನ್, ಮಾಧ್ಯಮಗಳಲ್ಲಿ ಪ್ರತಿಬಿಂಬಿತವಾದಷ್ಟು ಕಠಿಣ ಸಂಬಂಧವಿಲ್ಲ. ಆದರೆ ಭಾರತ ಅದರೊಂದಿಗಿನ ಸಂಬಂಧವನ್ನು ಬೆಳೆಸುವಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.
ಸೌಹಾರ್ದ ಸಂಬಂಧಕ್ಕಾಗಿ ಭಾರತ ಮತ್ತು ಚೀನ ಪ್ರಯತ್ನ ನಡೆಸುತ್ತಿವೆ. ಆದರೆ ಇತ್ತೀಚಿನ ದಿನಗಳ ಲ್ಲಿ ಚೀನ, ಪಾಕಿಸ್ತಾನದೊಂದಿಗೆ ಹೆಚ್ಚು ನಿಕಟ ಸಂಬಂಧ ಬೆಳೆಸಿಕೊಳ್ಳುತ್ತಿರುವುದು ಹಾಗೂ ಜಮ್ಮು ಕಾಶ್ಮೀರ ಸಂಬಂಧದಲ್ಲಿ ಹೊಂದಿದ್ದ ತಟಸ್ಥ ಧೋರಣೆಯಿಂದ ಸ್ವಲ್ಪ ಬದಿಗೆ ಸರಿದಿರುವುದು ಚಿಂತೆಗೆ ಕಾರಣವಾಗಿದೆ ಎಂದರು.
ಅಮೆರಿಕದೊಂದಿಗಿನ ಭಾರತದ ಸಂಬಂಧದಲ್ಲಿ ಈಚಿನ ವರ್ಷಗಳಲ್ಲಿ ಭಾರೀ ಬದಲಾವಣೆಗಳು ಗೋಚರಿಸಿವೆ. ತಂತ್ರಜ್ಞಾನ, ಬಾಹ್ಯಾಕಾಶ, ಕೃಷಿ, ಅಣು, ರಕ್ಷಣೆ ಹಾಗೂ ಭಯೋತ್ಪಾದನೆಗೆ ವಿರೋಧ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಉತ್ತಮ ಬಾಂಧವ್ಯವನ್ನು ಸಾಧಿಸಿವೆ. ಎರಡೂ ದೇಶಗಳ ನಡುವಿನ ಅಣ್ವಸ್ತ್ರ ಒಪ್ಪಂದ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಪ್ರಮುಖ ಮೈಲುಗಲ್ಲು ಎಂದರು.
ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನಗಳೊಂದಿಗೆ ಭಾರತ ಸೌಹಾರ್ದ ಸಂಬಂಧವನ್ನು ಹೊಂದಿವೆ ಎಂದರು. ಉಪನ್ಯಾಸದ ಬಳಿಕ ನಾರಾಯಣನ್ ರೊಂದಿಗೆ ಸಂವಾದ ನಡೆಯಿತು.
ಮಣಿಪಾಲ ವಿವಿಯ ಚಾನ್ಸಲರ್ ಹಾಗೂ ಟ್ಯಾಪ್ಮಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ರಾಮದಾಸ ಎಂ. ಪೈ ಉಪಸ್ಥಿತರಿದ್ದರು. ಟ್ಯಾಪ್ಮಿಯ ನಿರ್ದೇಶಕ ಡಾ.ಸಜಿ ಗೋಪಿನಾಥ್ ಸ್ವಾಗತಿಸಿದರು. ಡಾ.ಎಂ.ಸಿ. ನಟರಾಜನ್ ಕಾರ್ಯಕ್ರಮ ನಿರ್ವಹಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|