ನಿನೋ ವಿಶ್ವದ ಅತ್ಯಂತ ಕುಳ್ಳ! |
ಪ್ರಕಟಿಸಿದ ದಿನಾಂಕ : 2010-09-08
ಬೊಗೋಟ : ಕೊಲಂಬಿಯಾದ 24ರ ಹರೆಯದ ಎಡ್ವರ್ಡ್ ನಿನೋ ಹರ್ನಂಡೇಜ್ ಅವರನ್ನು ವಿಶ್ವದ ಅತ್ಯಂತ ಕುಳ್ಳನೆಯ ಪುರುಷ ಎಂದು ಗಿನ್ನೆಸ್ ವರ್ಲ್ಡ್ ರಿಕಾಡ್ಸ್ ಘೋಷಿಸಿದೆ. ಅವರ ಎತ್ತರ ಕೇವಲ 27.46 ಇಂಚುಗಳು (70.21 ಸೆಂ.ಮೀ) ಮತ್ತು ತೂಕ 10 ಕೆಜಿ. ಆದರೆ ಆತನಿಗೆ ನೃತ್ಯದಲ್ಲಿ ಆಸಕ್ತಿ. ಅವನಿಗೆ ಮರ್ಸಿಡಿಸ್ ಕಾರು ಖರೀದಿಸುವ ಮತ್ತು ಪ್ರಪಂಚವನ್ನು ಸುತ್ತುವ ಕನಸುಗಳಿವೆ!
ಆತ ಭೇಟಿ ಮಾಡಲು ಬಯಸುವ ವ್ಯಕ್ತಿಗಳ ಯಾದಿಯಲ್ಲಿ ಜಾಕಿ ಚಾನ್, ಸಿಲ್ವಸ್ಟರ್ ಸ್ಟಾಲೋನ್ ಮತ್ತು ಕೊಲಂಬಿಯಾದ ಮಾಜಿ ಅಧ್ಯಕ್ಷ ಅಲ್ವರೊ ಯುರಿಬ್ ಸೇರಿದ್ದಾರೆ.
ಇದಕ್ಕೆ ಮುನ್ನ ವಿಶ್ವದ ಅತ್ಯಂತ ಕುಳ್ಳನೆಯ ವ್ಯಕ್ತಿ ಎಂಬ ದಾಖಲೆ ಚೀನದ ಹಿ ಪಿಂಗ್‌ಪಿಂಗ್ ಹೆಸರಿನಲ್ಲಿತ್ತು. ಆತ ನಿನೋಗಿಂತ ಒಂದು ಇಂಚು ಎತ್ತರವಿದ್ದನು. ಆತ ಕಳೆದ ಮಾ. 13ರಂದು ನಿಧನ ಹೊಂದಿದನು.
ನಿನೋ ಹುಟ್ಟುವಾಗ ಕೇವಲ 1.5 ಕೆಜಿ ತೂಕವಿದ್ದನು. ಆತನ ವಯಸ್ಸು ಎರಡು ವರ್ಷ ತಲುಪಿದ ಬಳಿಕ ಆತನ ಬೆಳವಣಿಗೆ ನಿಂತಿತು ಎಂದು ಆತನ ತಾಯಿ ಹೇಳುತ್ತಾರೆ.
ವಿಶ್ವದ ಅತ್ಯಂತ ಕುಳ್ಳನೆನ್ನುವ ಆತನ ಪಟ್ಟ ಹೆಚ್ಚು ಕಾಲ ಬಾಳದು. ಏಕೆಂದರೆ, ನೇಪಾಲದ ಖಗೇಂದ್ರ ಥಾಪಾ ಮಾಗರ್ ಈ ವರ್ಷದ ಅಕ್ಟೋಬರ್ 14ರಂದು 18ರ ಹರೆಯವನ್ನು ತಲುಪಲಿದ್ದಾನೆ. ಆತನ ಎತ್ತರ 56 ಸೆಂ.ಮೀ.ಗಳು (22 ಇಂಚುಗಳು). ಆತನನ್ನು ಈಗ ವಿಶ್ವದ ಅತ್ಯಂತ ಕುಳ್ಳನೆಯ ಬಾಲಕನೆಂದು ಗಿನ್ನೆಸ್ ಗುರುತಿಸಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|