ಐಪಿಎಲ್ನಲ್ಲಿ ಶಂಕಾಸ್ಪದವಾಗಿ ಆಡಿದ್ದ ಆಟಗಾರ ಯಾರು? |
ಪ್ರಕಟಿಸಿದ ದಿನಾಂಕ : 2010-09-08
ಮೆಲ್ಬೋರ್ನ್, ಮಂಗಳವಾರ, 7 ಸೆಪ್ಟೆಂಬರ್ 2010
ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿರುವ ಭ್ರಷ್ಟಾಚಾರ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಪಸರಿಸಿರುವ ಕುರಿತು ಸಂಶಯಗಳು ಹುಟ್ಟಿಕೊಂಡಿವೆ. ವರದಿಯೊಂದರ ಪ್ರಕಾರ ಮುಂಚೂಣಿ ದಾಂಡಿಗನೊಬ್ಬ ಐಪಿಎಲ್ನಲ್ಲಿ ಸಂಶಯಾಸ್ಪದವಾಗಿ ಆಟವಾಡಿದ್ದಾನೆ ಎಂದು ಹೇಳಲಾಗಿದೆ.
ಹೀಗೆಂದು ವರದಿ ಮಾಡಿರುವುದು 'ದಿ ಆಸ್ಟ್ರೇಲಿಯನ್' ಪತ್ರಿಕೆ. 'ಓರ್ವ ಮುಂಚೂಣಿಯ ಬ್ಯಾಟ್ಸ್ಮನ್ ಸಂಶಯಾಸ್ಪದವಾಗಿ ಆಡುತ್ತಿದ್ದರು. ಅವರ ವರ್ತನೆಯನ್ನು ವಿವರಿಸುವುದು ಸಾಧ್ಯವಿಲ್ಲವಾಗಿತ್ತು. ಅದೇ ಕಾರಣದಿಂದ ಪಂದ್ಯಗಳ ಗತಿಯನ್ನು ಬದ ಲಾಯಿಸುವ ಸಾಧ್ಯತೆಗಳಿದ್ದುದರಿಂದ ಅವರ ಕ್ರಮಾಂಕವನ್ನು ಮೇಲಕ್ಕೇರಿಸಲಾಯಿತು' ಎಂದು ಇಬ್ಬರು ಹೆಸರು ಹೇಳಲಿಚ್ಛಿಸದ ಐಪಿಎಲ್ ಅಧಿಕಾರಿಗಳ ಹೇಳಿಕೆಯನ್ನು ಪತ್ರಿಕೆ ಉಲ್ಲೇಖಿಸಿದೆ.
ನಿರ್ದಿಷ್ಟ ಆಟಗಾರನ ನಿರ್ವಹಣೆಯ ಕುರಿತು ಇಬ್ಬರೂ ಅಧಿಕಾರಿಗಳು ತಾವು ಗರಿಷ್ಠ ಸಂಶಯ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಆತನ ಹೆಸರನ್ನು ಬಹಿರಂಗಪಡಿಸುವಷ್ಟು ಧೈರ್ಯ ತಮಗಿಲ್ಲ, ಹಾಗೇನಾದರೂ ಮಾಡಿದಲ್ಲಿ ನಾವು ಯಾರೆಂದು ಪತ್ತೆ ಹಚ್ಚಿ ನಮ್ಮ ವಿರುದ್ಧ ಭಾರತದಲ್ಲಿ ಸೇಡು ತೀರಿಸಿಕೊಳ್ಳುವ ವೇದಿಕೆ ಸೃಷ್ಟಿಯಾಗಬಹುದು ಎಂದು ಐಪಿಎಲ್ ಅಧಿಕಾರಿಗಳು ಹೇಳಿದ್ದಾರೆ ಎಂದು ಪತ್ರಿಕೆ ವಿವರಣೆ ನೀಡಿದೆ.
ಆತ ಬ್ಯಾಟಿಂಗ್ ಮಾಡುವ ರೀತಿ ತೀರಾ ಗೊಂದಲ ಹುಟ್ಟಿಸುತ್ತಿತ್ತು. ಅದರಲ್ಲೂ ಇನ್ನಿಂಗ್ಸ್ ಕೊನೆಯ ಹಂತಕ್ಕೆ ಬರುವಾಗ ಎದುರಾಳಿ ತಂಡ ಬಯಸಿದಂತೆ ನಿಧಾನವಾಗಿ ಆಡುವ ಪರಿ ನಮಗೆ ಅಚ್ಚರಿ ತರಿಸಿತ್ತು. ಆತ ನಿರಂತರವಾಗಿ ಕಳಪೆ ಪ್ರದರ್ಶನ ನೀಡಿದ್ದಲ್ಲದೆ, ಆಗಾಗ ಆಸಕ್ತಿ ಕಳೆದುಕೊಂಡವನಂತೆ ಅಥವಾ ಗೊಂದಲದಲ್ಲಿರುವಂತೆ ಕಾಣಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ದಿಷ್ಟ ಆಟಗಾರನನ್ನು ಆ ಸಂದರ್ಭದಲ್ಲಿ ಹೆಚ್ಚಿನ ಪರಿಶೀಲನೆಯಲ್ಲಿಡಲಾಗಿತ್ತು. ಹಲವು ಫ್ರಾಂಚೈಸಿಂಗಳ ಪಂದ್ಯಗಳಲ್ಲಿ ಮೋಸ ನಡೆಯುತ್ತಿರುವ ಬಗ್ಗೆ ತಾವು ಹಲವು ದೂರುಗಳನ್ನು ಸ್ವೀಕರಿಸುತ್ತಾ ಬಂದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವು ಆಟಗಾರರ ಶಂಕಾಸ್ಪದ ವರ್ತನೆಯ ಕುರಿತು ಸಾಕಷ್ಟು ಮಾಹಿತಿಗಳನ್ನು ಒದಗಿಸಿದರೂ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಲ್ಲಿ ಭಾರತೀಯ ಉಪಖಂಡದ ಕೆಲವು ಕ್ರಿಕೆಟ್ ಮಂಡಳಿಗಳು ವಿಫಲವಾಗಿರುವುದರ ಕುರಿತು ಐಸಿಸಿಯ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕವು ಅಸಮಾಧಾನ ವ್ಯಕ್ತಪಡಿಸಿದೆ. ಇದರ ಎರಡು ಪ್ರಮುಖ ಗುರಿಗಳಿದ್ದುದು ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಐಪಿಎಲ್ ಎಂದೂ ಆಸ್ಟ್ರೇಲಿಯಾದ ದಿನಪತ್ರಿಕೆ ಹೇಳಿದೆ
ವರದಿಯ ವಿವರಗಳು |
 |
ಕೃಪೆ : ವೆಬ್ದುನಿಯ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|