ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ |
ಪ್ರಕಟಿಸಿದ ದಿನಾಂಕ : 2010-09-07
ಮಂಗಳೂರು,ಸೆ.07: ಕಾರ್ಮಿಕ ವರ್ಗದ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಇಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಿದವು. ಇಂಟಕ್, ಸಿಐಟಿಯು, ಎಐಟಿಯುಸಿ,ಎಚ್‌ಎಂಎಸ್, ಯುಟಿಯುಸಿ, ಕೆಟಿಯುಸಿ, ಸಹಿತ ವಿವಿಧ ಕಾರ್ಮಿಕ ಸಂಘಟನೆಗಳು ಈ ಮುಷ್ಕರದಲ್ಲಿ ಪಾಲ್ಗೊಂಡಿತ್ತು.


ಇಂದು ಬೆಳಿಗ್ಗೆ ಮಂಗಳೂರಿನ ಜ್ಯೋತಿ ವೃತ್ತದಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಮಿಕರು ಜಿಲ್ಲಾಧಿಕಾರಿ ಕಛೇರಿ ಎದುರು ಮುಷ್ಕರ ನಿರತರಾದರು.


ಕೇಂದ್ರ ಸರಕಾರವು ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಯಾವೂದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ. ಆಹಾರ ವಸ್ತು, ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ದೇಶದಲ್ಲಿ ಮಾಲಕವರ್ಗದಿಂದ ಕಾರ್ಮಿಕ ಕಾಯ್ದೆಗಳ ಉಲ್ಲಂಘನೆಯಾಗುತ್ತಿದೆ. ಎಲ್ಲಾ ಉದ್ಯೋಗಗಳಲ್ಲಿ "ಬಳಸು" ಮತ್ತು "ಬಿಸಾಕು" ನೀತಿಯನ್ನು ಜಾರಿಗೊಳಿಸಲು ಯತ್ನಿಸಲಾಗುತ್ತಿದೆ. ಕಳೆದ ಎರಡು ವರ್ಷಗಳ ಜಾಗತೀಕರಣದಿಂದಾಗಿ ದೊಡ್ಡ ಸಂಖ್ಯೆಯ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಮುಷ್ಕರ ನಿರತರನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳಿದರು.


ಬೆಲೆ ಏರಿಕೆಯನ್ನು ತಡೆಗಟ್ಟಿ ಅವಶ್ಯಕ ಸಾಮಾಗ್ರಿಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಹಂಚಬೇಕು. ಆರ್ಥಿಕ ಹಿಂಜರಿತವಿರುವ ವಲಯಗಳಲ್ಲಿ ಉದ್ಯೋಗದ ರಕ್ಷಣೆ ಕೊಡಲು ಸಕರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ಸರಕಾರದ ಹೂಡಿಕೆಯನ್ನು ಹೆಚ್ಚು ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ನಿರತರು ಆಗ್ರಹಿಸಿದರು.


ಕಾರ್ಮಿಕ ಮುಖಂಡರಾದ ಬಿ,ಮಾದವ, ಬಿ.ಕೆ.ಕೃಷ್ಣಪ್ಪ, ಚಂದಪ್ಪ ಅಂಚನ್, ಸುರೇಶ್ಚಂದ್ರ ಶೆಟ್ಟಿ, ಸೀತಾರಾಮ ಬೇರಿಂಜ, ಜೇ.ಬಾಲಕೃಷ್ಣ ಶೆಟ್ಟಿ, ಶಶಿರಾಜ್ ಅಂಬಟ್ ಮತ್ತಿತರರು ನೇತ್ರತ್ವ ವಹಿಸಿದ್ದರು.



ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|