ಮಕ್ಕಾದಲ್ಲಿ ಲಕ್ಷಾಂತರ ಮುಸ್ಲಿಮರಿಂದ ಭಕ್ತಿ, ಶ್ರದ್ಧೆಯ ಲೈಲತುಲ್ ಖದ್‌ರ್ ಪ್ರಾರ್ಥನೆ |
ಪ್ರಕಟಿಸಿದ ದಿನಾಂಕ : 2010-09-07
ಮಕ್ಕಾ/ಮದೀನಾ,ಸೆ.6: ಸೌದಿ ಆರೇಬಿಯದಲ್ಲಿ ಪವಿತ್ರ ರಮಝಾನ್ ಮಾಸದ 27ನೆ ದಿನವಾದ ರವಿವಾರವನ್ನು ಲೈಲತುಲ್ ಖದ್‌ರ್(ವಿಶೇಷ ಅನುಗ್ರಹಗಳ ರಾತ್ರಿ) ಆಗಿ ಆಚರಿಸಲಾಯಿತು.ಆ ಪ್ರಯುಕ್ತ ವಿಶ್ವದ ಕೋಟ್ಯಂತರ ಮುಸ್ಲಿಮರ ಶ್ರದ್ಧಾಭಕ್ತಿಯ ತಾಣವಾದ ಮಕ್ಕಾದ ಮಸ್ಜಿದುಲ್ ಹರಮ್‌ನಲ್ಲಿ ರವಿವಾರ ರಾತ್ರಿ ಮೂವತ್ತು ಲಕ್ಷಕ್ಕೂ ಅಧಿಕ ಮುಸ್ಲಿಮರು ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಿದರು.
ಉಮ್ರಾ ವಿಧಿಯನ್ನು ನಿರ್ವಹಿಸಲು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಆಗಮಿಸಿದ್ದ ಮುಸ್ಲಿಂ ಯಾತ್ರಿಕರು ಪವಿತ್ರ ಮಕ್ಕಾ ದ ಮಸ್ಜಿದುಲ್ ಹರಮ್‌ನಲ್ಲಿ ತರಾವೀಹ್ ಹಾಗೂ ಕಿಯಾಮುಲ್ಲೈಲ್ ಪ್ರಾರ್ಥನೆಗಳನ್ನು ಸಲ್ಲಿಸಿದರು. ಲೈಲತುಲ್ ಖದ್‌ರ್‌ನಂದು ಸಲ್ಲಿಸುವ ಪ್ರಾರ್ಥನೆ ಹಾಗೂ ಆಚರಿಸುವ ಸತ್ಕರ್ಮಗಳು 1 ಸಾವಿರ ತಿಂಗಳುಗಳಲ್ಲಿ ಸಲ್ಲಿಸಿದ ಪ್ರಾರ್ಥನೆಗಳು, ಸತ್ಕರ್ಮಗಳಿಗೆ ಸಮಾನ ವಾದ ಫಲವನ್ನು ನೀಡುವುದೆಂಬ ವಿಶ್ವಾಸ ಮುಸ್ಲಿಂ ಸಮುದಾಯದಲ್ಲಿದೆ.
ಸೌದಿ ಅರೇಬಿಯ ಮತ್ತು ಜಗತ್ತಿನ ವಿವಿಧೆಡೆಗಳಿಂದ ಈ ಪ್ರಾರ್ಥನಾ ವಿಧಿಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಲಕ್ಷಾಂತರ ಯಾತ್ರಿ ಕರ ಸೌಲಭ್ಯಕ್ಕಾಗಿ ಸರಕಾರವು ಸಕಲ ಏರ್ಪಾಡುಗಳನ್ನು ಮಾಡಿತ್ತು. ಯಾತ್ರಿಕರಿಗೆ ನೀಡಲಾಗುವ ಸೌಕರ್ಯಗಳ ಮೇಲ್ವಿ ಚಾರಣೆಗಾಗಿ ಮಕ್ಕಾ ಹಾಗೂ ಮದೀನಾ ಮಸೀದಿಗಳ ಪಾಲಕರೂ ಆಗಿರುವ, ಸೌದಿ ದೊರೆ ಅಬ್ದುಲ್ಲಾ ಸ್ವತಃ ಮಕ್ಕಾಗೆ ಆಗಮಿಸಿದ್ದರು.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸುಮಾರು 4500 ಮಂದಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸ ಲಾಗಿತ್ತು. ಮಸೀದಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಛವಾಗಿರಿಸಲು, ಮಕ್ಕಾ ನಗರಾಡಳಿತವು ಸಾವಿರಕ್ಕೂ ಅಧಿಕ ನೈರ್ಮಲ್ಯ ಕಾರ್ಮಿಕರನ್ನು ನಿಯೋಜಿಸಿತ್ತು.
ಪರಿಸರದಲ್ಲಿರುವ ಯಾತ್ರಿಕರಿಗೆ ಪರಿಶುದ್ಧ ಆಹಾರ ದೊರೆಯುವುದನ್ನು ಖಾತರಿಪಡಿಸಲು ಪೌರಾಡಳಿತ ಅಧಿಕಾರಿಗಳು ಪರಿಶೀಲನೆಗಳನ್ನು ನಡೆಸಿದ್ದರು.ಯಾತ್ರಿಕರಿಗೆ ಸ್ವಚ್ಛ ಕುಡಿಯುವ ನೀರಿನ ಪೂರೈಕೆಗಾಗಿ ಈ ಭವ್ಯ ಭವನದ ವಿವಿಧ ಭಾಗಗಳಲ್ಲಿ 20 ಸಾವಿರಕ್ಕೂ ಅಧಿಕ ನೀರಿನ ಕೂಲರ್‌ಗಳನ್ನು ಸ್ಥಾಪಿಸಲಾಗಿತ್ತು.ಯಾತ್ರಿಕರ ಪ್ರವಾಹವೇ ಹರಿದುಬಂದಿದ್ದರೂ, ಮಕ್ಕಾ ನಗರದಲ್ಲಿ ಸಾರಿಗೆ ವ್ಯವಸ್ಥೆಯು ಸುಗಮವಾಗಿತ್ತು. ಮಕ್ಕಾ ಹಾಗೂ ಆಸುಪಾಸಿನ ಪ್ರದೇಶಗಳಿಂದ ಮಸೀದಿಗೆ ಆಗಮಿಸುವ ಯಾತ್ರಿಕರಿಗಾಗಿ ಸೌದಿ ಸಾರ್ವಜನಿಕ ಸಾರಿಗೆ ಇಲಾಖೆಯು ಸಾವಿರಾರು ಸಂಖ್ಯೆಯಲ್ಲಿ ಬಸ್‌ಗಳನ್ನು ರಸ್ತೆಗಿಳಿಸಿದ್ದವು. ಮದೀನಾದ ಮಸೀದಿಯಲ್ಲಿಯೂ ನಡೆದ ತರಾವೀಹ್ ಮತ್ತು ಕಿಯಾಮುಲ್ಲೈಲ್ ಪ್ರಾರ್ಥನೆಗಳಲ್ಲಿಯೂ ಸಹಸ್ರಾರು ಮುಸ್ಲಿಮರು ಪಾಲ್ಗೊಂಡರು.ಯಾತ್ರಿಕರಿಂದ ತುಂಬಿ ತುಳುಕುತ್ತಿದ್ದ ಈ ಮಸೀದಿಯಲ್ಲಿ ಇಅ್ತಿಕಾಫ್ ನಿರ್ವಹಿಸಲು ಸುಮಾರು 10 ಸಾವಿರ ಮಂದಿ ಪಾಲ್ಗೊಂಡಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾ ಭಾರತಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|