‘ಅಕ್ಕ’ರೆಯ ವಿಶ್ವ ಕನ್ನಡಿಗರ ಜಾತ್ರೆ : ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಸ೦ಭ್ರಮದ ಚಾಲನೆ |
ಪ್ರಕಟಿಸಿದ ದಿನಾಂಕ : 2010-09-05
ಸರ್ವಾಲಂಕಾರ ಶೋಭಿತಳಾದ ದುರ್ಗಾ ದೇವಿಯ ಕಂಚಿನ ಪ್ರತಿಮೆ ಪ್ರತಿಷ್ಠಾಪಿ ಸಿದ ಅಂಬಾರಿಯನ್ನು ಹೊತ್ತ ಆನೆ ಅಮೆರಿಕಾದ ಬೀದಿಗಳಲ್ಲಿ ಮೆಲ್ಲಮೆಲ್ಲನೆ ಹೆಜ್ಜೆ ಹಾಕಲಾ ರಂಭಿಸಿದಂತೆ ವಿಶ್ವವಿಖ್ಯಾತ ಮೈಸೂರು ದಸರೆಯ ದೃಶ್ಯಾವಳಿಗಳು ಮನಃಪಟಲದಲ್ಲಿ ಮತ್ತೆ ಹಾದುಹೋಗತೊಡಗಿದವು. ಮೈಸೂರಿನ ವೈಭವ ಮನೆ ಬಾಗಿಲಿಗೇ ಬಂದಂತೆ ಜನತೆ ಪುಳಕಿತರಾಗತೊಡಗಿದರು.
ಮಾವುತರಿಬ್ಬರ ಆದೇಶದಂತೆ ಹೆಜ್ಜೆಹಾಕುತ್ತಿದ್ದ ೩೨ ವರ್ಷದ ಹೆಣ್ಣಾನೆ ’ಮಿನ್ನಿಯ’ ಗಜಗಾಂಭೀ ರ್ಯಕ್ಕೆ ಬೆರಗಾದ ಕನ್ನಡಿಗರ ಹರ್ಷೋದ್ಗಾರಗಳು ಮೋಡಾಚ್ಛಾದಿತ ಆಕಾಶ ತಲುಪಿತು, ಅಮೆರಿಕನ್ನಡಿಗರಿಗೆ ನಿಂತಲ್ಲೇ ಮೈಸೂರು ದರ್ಶನವಾದರೆ ಅವರ ಮಕ್ಕಳು ಮರಿಗಳಿಗೆ ಇದೇ ಮೊದಲಬಾರಿಗೆ ಎಲಿಫೆಂಟ್ ನೋಡುವ ಭಾಗ್ಯ ಸಿಕ್ಕಿತು.
ನ್ಯೂಜೆರ್ಸಿ ರಾಜ್ಯದ ಎಡಿಸನ್ ನಗರದಲ್ಲಿ ಶುಕ್ರವಾರ ಹೀಗೆ ಆರಂಭವಾದ ಮೂರು ದಿನಗಳ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ, ಅಮೆರಿಕಾ ನೆಲದಲ್ಲಿ ಕರ್ನಾಟಕ ಸಂಸ್ಕ್ರತಿಯ ಸೀಮೋಲ್ಲಂಘ ನಕ್ಕೆ ಹೊಸ ಭಾಷ್ಯ ಬರೆಯಿತು. ಕನ್ನಡಿಗರ ಸಮಾವೇಶಕ್ಕೆ ಹೊಸ ರಂಗು ತರುವ ಅಕ್ಕ ಮತ್ತು ಸಮಾ ವೇಶದ ಆತಿಥ್ಯ ವಹಿಸಿರುವ ಬೃಂದಾವನ ಕನ್ನಡ ಸಂಘದ ಕನಸುಗಳು ದಸರಾ ಮೆರವಣಿಗೆಯ ತದ್ರೂಪು ಸೃಷ್ಟಿಸುವುದರೊಂದಿಗೆ ವಿಧ್ಯುಕ್ತವಾಗಿ ಆರಂಭಗೊಂಡಿತು.
ಗಜಗಾಂಭೀರ್ಯ: ಕನೆಕ್ಟಿಕಟ್ ರಾಜ್ಯದಿಂದ ದಿನಕ್ಕೆ ಆರು ಸಾವಿರ ಡಾಲರ್ ಬಾಡಿಗೆ ದರದಲ್ಲಿ ಮಿನ್ನಿ ಯ ಎನ್ನುವ ಆನೆಯನ್ನು ‘ಅಕ್ಕ’ನ ಅಂಬಾರಿ ಸಂಭ್ರಮಕ್ಕಾಗಿ ಕರೆಸಲಾಗಿತ್ತು. ಕನ್ನಡ ನಕಾಶೆಯ ನಾನಾ ಪ್ರದೇಶಗಳಿಂದ ಆಗಮಿಸಿರುವ ನಾಲ್ಕು ಸಾವಿರ ಪ್ರತಿನಿಧಿಗಳು, ಕರ್ನಾಟಕ ದಿಂದ ಆಗಮಿಸಿ ರುವ ಗಣ್ಯರು ಹಾಗೂ ಇಲ್ಲಿ ಚಾತು ರ್ಮಾಸ್ಯ ನಡೆಯುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಸಮ್ಮುಖದಲ್ಲಿ ಸಂಭ್ರಮದ ಅಕ್ಕ ಸಮ್ಮೇಳನಕ್ಕೆ ಈ ಬಾರಿ ಈ ಬಗೆಯ ಚಾಲನೆ ಸಿಕ್ಕಿತು.
ಸ್ವಾಗತವೂ ನಿಮಗೆ: ಸಮಾವೇಶ ಸಭಾಂಗಣವನ್ನು ಪ್ರದಕ್ಷಿಣೆ ಹಾಕಿ ವೇದಿಕೆಗೆ ಬಂದ ಆನೆ ಸವಾರಿಯನ್ನು ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಇರಿಸಿದ ನಂತರ ಋತಿಜ್ವರಿಂದ ವೇದಘೋಷ, ಸಭಾಸ ದರಿಂದ ಪುಷ್ಪವೃಷ್ಟಿ ಹಾಗೂ ಸುಮಂಗಲಿಯರಿ೦ದ ಪೂಜಾ ಕೈಂಕರ್ಯಗಳು ನೆರವೇರಿದವು.
ಯೋಗ-ಧ್ಯಾನ: ಸಮಾವೇಶದ ಮೊದಲ ದಿನದ ಆಕರ್ಷಣೆಯ ಬಹುಪಾಲು ಅಂಬಾರಿಯತ್ತ ವಾಲಿದರೆ ಪ್ರಶಾಂತ ವಾತಾವರಣದಲ್ಲಿ ಆರು ಗಂಟೆಗಳ ಕಾಲ ನಡೆದ ಆರ್ಟ್ ಆಫ್ ಲಿವಿಂಗ್ ಧ್ಯಾನ ಶಿಬಿರ ಅನೇಕರ ಜೀವಾತ್ಮಗಳನ್ನು ಸಾಂತ್ವನಗೊಳಿಸಿರಬೇಕು. ಸ್ವಾಮಿ ಸೂರ್ಯಪಾದ ಅವರು ನಡೆಸಿ ಕೊಟ್ಟ ಯೋಗ, ಧ್ಯಾನ, ನಿಶ್ಯಬ್ದ ಚಿಕಿತ್ಸೆಯನ್ನು ಸುಮಾರು 200 ಮಂದಿ ಅಮೆರಿ ಕನ್ನಡಿಗರು ಪಡೆದು ಕೊಂಡರು.
ಬೃಂದಾವನ ಕನ್ನಡ ಸಂಘದ ಪರವಾಗಿ ಪ್ರಸನ್ನ ಕುಮಾರ್, ಪ್ರಸನ್ನ ಕುಮಾರ್, ಶೆಟ್ಟಿ, ಮಧುರಂಗಯ್ಯ ಸ್ವಾಗತ ಕೋರಿದರೆ, ಅಕ್ಕ ಪರವಾಗಿ ದಯಾನಂದ ಅಡಪ, ರವಿ ಡಂಕ ಕೋಟೆ, ಅಮರ ನಾಥ್ ಗೌಡ ಅವರು ಅಕ್ಕ ಸಂಸ್ಥೆಯ ಆಶೋತ್ತರಗಳನ್ನು ತಮ್ಮ ಚಿಕ್ಕ ಚೊಕ್ಕ ಭಾಷಣ ಗಳಲ್ಲಿ ಮಂಡಿಸಿದ ರು.
ವೀಣಾ ಮೋಹನ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸುಗುಣೇಂದ್ರತೀರ್ಥ ಸ್ವಾಮೀಜಿ ಸಾನ್ನಿಧ್ಯ
ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರ ದಿವ್ಯ ಸಮ್ಮುಖದಲ್ಲಿ ಸಮ್ಮೇಳನದ ಆಶಯವನ್ನು ವಿವರಿಸುವುದು ಹಾಗೂ ಸಮಾವೇಶಕ್ಕೆ ಶುಭಕೋರುವ ಕಾರ್ಯಕ್ರಮ ವೇದಿಕೆಯಲ್ಲಿ ಸಾಂಗೋಪಾಂಗ ವಾಯಿತು.
ಒಟ್ಟು ಹದಿನೈದು ಮಂದಿ ಗಣ್ಯರಿಂದ ಭಾಷಣಗಳು ಮೂಡಿಬಂದವಾದರೂ, ಪ್ರತಿಯೊಬ್ಬರೂ ಸಮಯ ಮಿತಿ, ಮತ್ತು ಸಂದರ್ಭದ ಔಚಿತ್ಯ ಅರಿತು ಮಾತನಾಡಿದುದು ಹಿತವಾಗಿತ್ತು. ಶ್ರೀಗಳ ಆಶೀರ್ವಚನ, ಸಚಿವರು ಮತ್ತು ಶಾಸಕರ ಶುಭಾಶಯ ಹರಕೆ, ಸಮಾವೇಶ ಆಯೋಜಕರ ಸ್ವಾಗತ ಮತ್ತು ನಿರೂಪಣೆಗಳು ಮಿತವಾಗಿದ್ದವು.
ಸಚಿವ ಜಗದೀಶ್ ಶೆಟ್ಟರ್, ಶಾಸಕರುಗಳಾದ ಡಿ.ಎಚ್. ಶಂಕರಮೂರ್ತಿ, ಸತೀಶ್ ರೆಡ್ಡಿ, ಜಗ್ಗೇಶ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಾರ್ತಾ ಇಲಾಖೆಯ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅಮೆರಿಕನ್ನಡಿಗರ ಕನ್ನಡೋತ್ಸಾಹಕ್ಕೆ ಬೆನ್ನು ತಟ್ಟಿದರೆ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶುಭಕೋರುವ ಸಂದೇಶವನ್ನು ವಾಚಿಸಿದರು.
ಕಣ್ಮನಗಳಿಗೆ ಹಬ್ಬ
ತುಂಬಿದ ಗುಬ್ಬಿ ವೀರಣ್ಣ ಸಭಾಂಗಣವನ್ನು ಆನಂತರ ಮನಸೂರೆಗೊಂಡದ್ದು ಉದ್ಘಾಟನಾ ಕಾರ್ಯಕ್ರಮ.
ಗಣ್ಯರ ಭಾಷಣ ಸರಣಿ ಆರಂಭಗೊಳ್ಳುವುದಕ್ಕೂ ಮುನ್ನ ಬೃಂದಾವನ ಕನ್ನಡ ಸಂಘದ ಪ್ರತಿಭಾ ವಂತ ಕಲಾವಿದರು ಪ್ರಸ್ತುತಪಡಿಸಿದ ವಿನೂತನ ಸಾಂಸ್ಕೃತಿಕ ಸಮಾರಾಧನೆಗಳು ಕಣ್ಮನಗಳ ನ್ನು ಅಪಹರಿಸಿತು.
ಭೂಮಿಯ ಉಗಮದ ಕಲ್ಪನೆಯನ್ನು ಸಾರುತ್ತ, ಭರತ ಖಂಡದ ವೈಭವವನ್ನು ವೇದೋಪನಿಷತ್ತು ಗಳ ಘೋಷದೊಂದಿಗೆ ಬಿಂಬಿಸುವ ಮಂತ್ರಮುಗ್ಧಗೊಳಿಸುವ ಒಂದು ಝೇಂಕಾರ, ಕರ್ನಾಟಕ ಬಗೆಬಗೆಯ ಜಾನಪದ ನೃತ್ಯಗಳ ಕೊಲಾಜ್, ಕನ್ನಡ ಭಾಷೆ ಮತ್ತು ಪಾರಂಪರಿಕ ಸತ್ವವನ್ನು ತೆರೆದಿಟ್ಟ ಸಮೂಹ ನೃತ್ಯ, ಭರತ ನಾಟ್ಯ, ಅಮೆರಿಕಾ, ಮತ್ತು ಭಾರತ ರಾಷ್ಟ್ರಗೀತೆಗಳ ಲಯಬದ್ದ ಗಾನಗಳು ಸಮಾವೇ ಶದ ಮೊದಲ ದಿನದ ರಸಸಂಜೆಗೆ ಜೇನು ಹನಿಸಿದವು.
ಮಿಂಚಿದ ಪುನೀತ್, ರಮ್ಯಾ
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ನಟಿ ರಮ್ಯಾ ಮತ್ತು ಪುನೀತ್ ಸುತ್ತ ಅಭಿಮಾನಿಗಳ ದಂಡು.
‘ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ತಮಗೆ ತುಂಬಾ ಸಂತೋಷವಾಗುತ್ತಿದೆ’ ಎಂದು ನಟಿ ರಮ್ಯಾ ನುಡಿದರೆ, ‘ಅಮೆರಿಕನ್ನಡಿಗರ ಕನ್ನಡ ಪ್ರೀತಿಯನ್ನು ಕರ್ನಾಟಕ ವಾಸಿ ಕನ್ನಡಿಗರು ನೋಡಿ ಕಲಿಯ ಬೇಕಾಗಿದೆ’ ಎಂದವರು ನಟ ಪುನೀತ್ ರಾಜ್ ಕುಮಾರ್.
ಅನಿವಾಸಿ ಕನ್ನಡಿಗರಿಗೆ ಸಂಗೀತ ವಿದ್ವಾಂಸ ಬಾಲಮುರಳಿಕೃಷ್ಣ ಅವರ ಗಾನಸುಧೆ.
ವರದಿಯ ವಿವರಗಳು |
 |
ಕೃಪೆ : ಎಸ್ಕೆ. ಶಾಮಸುಂದರ/ ದಟ್ಸ್ ಕನ್ನಡ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-05 00:00:00
|
|
|