ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು |
ಪ್ರಕಟಿಸಿದ ದಿನಾಂಕ : 2010-09-03
ಬರೇಲಿ, ಶುಕ್ರವಾರ, 3 ಸೆಪ್ಟೆಂಬರ್ 2010
ಲಂಚ ಸ್ವೀಕರಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರನ್ನು ಆರೋಪಿ ಸಂಚಾರಿ ಪೊಲೀಸ್ ಪೇದೆಗಳು ರಸ್ತೆಯಲ್ಲಿ ಎಳೆದಾಡಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ.
ತೀವ್ರವಾಗಿ ಗಾಯಗೊಂಡಿರುವ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ (ಟ್ರಾಫಿಕ್) ಕಲ್ಪನಾ ಸಕ್ಸೇನಾ ಇದೀಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕೈ ಮುರಿತಕ್ಕೊಳಗಾಗಿದ್ದು, ತಲೆಗೂ ಏಟಾಗಿದೆ.
ಕೆಲವು ಟ್ರಾಫಿಕ್ ಕಾನ್ಸ್‌ಟೇಬಲ್‌ಗಳು ಜಾತ್ ರೆಜಿಮೆಂಟಲ್ ಕೇಂದ್ರದಲ್ಲಿ ಟ್ರಕ್ ಚಾಲಕರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಸೇನಾ ಜವಾನನೊಬ್ಬ ನೀಡಿದ ಮಾಹಿತಿಯಂತೆ ಕಲ್ಪನಾ ಸ್ಥಳಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ನಡೆದಿರುವ ಘಟನೆಯನ್ನು ಪೊಲೀಸ್ ಅಧಿಕಾರಿ ಕಲ್ಪನಾ ಅವರು ವಿವರಿಸುವುದು ಹೀಗೆ.
ಲಂಚ ಸ್ವೀಕರಿಸುತ್ತಿರುವುದನ್ನು ರೆಡ್ ಹ್ಯಾಂಡಾಗಿ ಹಿಡಿಯಬೇಕೆಂದು ನಾನು ನನ್ನ ಶೂಟರ್ ಜತೆಗೆ ಖಾಸಗಿ ಕಾರೊಂದರಲ್ಲಿ ಸ್ಥಳಕ್ಕೆ ತೆರಳಿದ್ದೆ. ಪೊಲೀಸ್ ಪೇದೆಗಳು ಲಂಚ ಪಡೆಯುತ್ತಿರುವುದನ್ನೂ ನೋಡಿದೆ. ಅಷ್ಟರಲ್ಲಿ ನನ್ನನ್ನು ಗುರುತಿಸಿದ ಪೊಲೀಸರು ಪರಾರಿಗೆ ಯತ್ನಿಸಿದ್ದಲ್ಲದೆ, ನನ್ನನ್ನು ಪೊಲೀಸ್ ವಾಹನದಡಿಗೆ ಹಾಕಲು ಪ್ರಯತ್ನಿಸಿದರು ಎಂದು ಎಸ್‌ಪಿ ಹೇಳಿದ್ದಾರೆ.
ಕಾನ್ಸ್‌ಟೇಬಲ್‌ಗಳು ಪರಾರಿಗೆ ಯತ್ನಿಸಿದಾ ನಾನು ಅವರ ವಾಹನದ ಚಾಲಕ ಕತ್ತನ್ನು ಹಿಡಿದುಕೊಂಡಿದ್ದೆ. ಆದರೂ ವಾಹನ ನಿಲ್ಲಿಸದೆ ಅವರು ಎಲ್ಲರೂ ನೋಡನೋಡುತ್ತಿದ್ದಂತೆ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ನನ್ನನ್ನು ರಸ್ತೆಯಲ್ಲೇ ಎಳೆದುಕೊಂಡು ಹೋದರು. ನಂತರ ಒಂದು ಕಡೆ ರಸ್ತೆಗೆ ಒಗೆದು ಬಿಟ್ಟರು ಎಂದು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಇತರ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಮುಂದುವರಿಸಿದ್ದಾರೆ.
ಆರಂಭದಲ್ಲಿ ಸ್ಥಳಕ್ಕೆ ತೆರಳಿದ್ದ ಕಲ್ಪನಾ ಅವರು ಪೇದೆಗಳನ್ನು ವಿಚಾರಿಸಿದ್ದರು. ಆದರೆ ತಾವು ಲಂಚ ಪಡೆದಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರಿಂದ, ಅವರ ಕಿಸೆಗಳನ್ನು ಪರಿಶೀಲನೆ ನಡೆಸುವಂತೆ ತನ್ನ ಜತೆಗಿದ್ದ ಅಧಿಕಾರಿಯೊಬ್ಬರಿಗೆ ವರಿಷ್ಠಾಧಿಕಾರಿ ಸೂಚನೆ ನೀಡಿದ್ದರು.
ತಾವು ಸಮಸ್ಯೆಗೆ ಸಿಲುಕುತ್ತಿರುವುದನ್ನು ಅರಿತ ಮೂವರೂ ಪೇದೆಗಳು ಸಕ್ಸೇನಾ ಅವರ ಮೇಲೆ ದಾಳಿ ಮಾಡಿ, ಪರಾರಿಗೆ ಯತ್ನಿಸಿದರು. ಆರೋಪಿಗಳು ವಾಹನ ಹತ್ತುತ್ತಿದ್ದಂತೆ ಕಲ್ಪನಾ ಓರ್ವ ಪೇದೆಯ ಕಾಲರ್ ಹಿಡಿದುಕೊಂಡಿದ್ದರೂ ಲೆಕ್ಕಿಸದೆ ವಾಹನ ಚಲಾಯಿಸಿದ್ದರು.
ಈ ಮೂವರೂ ಆರೋಪಿ ಪೇದೆಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಸೂಕ್ತ ತನಿಖೆ ನಡೆಯುತ್ತಿದೆ ಎಂದು ಡಿಐಜಿ ಎನ್.ಕೆ. ಶ್ರೀವಾತ್ಸವ್ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|