ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ |
ಪ್ರಕಟಿಸಿದ ದಿನಾಂಕ : 2010-09-03
ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು
» ಅಕ್ರಮ ಗಣಿಗಾರಿಕೆ ಯಲ್ಲಿ ತೊಡಗಿರುವ ಪ್ರಭಾವಿ ನಾಯಕರನ್ನು ಬೆತ್ತಲೆಗೊಳಿಸದಿದ್ದರೆ ತಾನು ಯಡಿಯೂರಪ್ಪನೇ ಅಲ್ಲ.
» ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ನಡೆದಿರುವ ಅಕ್ರಮ ‘ಗಣಿ’ಯ ತನಿಖೆಯನ್ನು ಲೋಕಾಯುಕ್ತರಿಂದ ನಡೆಸಿ, ಅದರ ಸಮಗ್ರ ವರದಿಯನ್ನು ಬಹಿರಂಗಪಡಿಸುತ್ತೇನೆ. ಯಾರೆಲ್ಲ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಜನರ ಮುಂದಿಡುತ್ತೇನೆ.
» ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರನ್ನು ಬಂಧಿಸಿಡಲು ನಮ್ಮಲ್ಲಿರುವ ಜೈಲುಗಳು ಸಾಕಾಗುವುದಿಲ್ಲ. ಇನ್ನಷ್ಟು ಜೈಲುಗಳನ್ನು ಸ್ಥಾಪಿಸುವ ಅನಿವಾರ್ಯವಿದೆ
ಬೆಂಗಳೂರು : ಅಕ್ರಮ ಗಣಿಗಾರಿಕೆ ಕುರಿತು ಕಾಂಗ್ರೆಸ್, ಜೆಡಿಎಸ್ ನಾಯಕರು ಪದೇ ಪದೇ ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಗೆ ಕೇಂದ್ರ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಅದರಲ್ಲಿ ಕೇಂದ್ರ ಸಚಿವರು ಶಾಮೀಲಾಗಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ಅಕ್ರಮ ಗಣಿಗಾರಿಕೆ ತಡೆಗೆ ಕಾನೂನು ರಚಿಸುವ ಬದಲಿಗೆ ಕೇಂದ್ರ ಸರ್ಕಾರ ಮೌನವಾಗಿರುವುದು ಏಕೆ? ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಹಾಗೂ ಭದ್ರಾವತಿಯ ವಿಎಸ್‌ಐಎಲ್ ಕಂಪೆನಿ ಗಳಿಗೆ ಗಣಿ ಗುತ್ತಿಗೆ ಮಂಜೂರಾತಿಗೆ ಹಿಂದೆ ಮುಂದೆ ನೋಡುವ ಕೇಂದ್ರ ಸರ್ಕಾರ, ಖಾಸಗಿ ಕಂಪೆನಿ ಗಳಿಗೆ ಗಣಿ ಗುತ್ತಿಗೆಗೆ ಅನುಮತಿ ನೀಡುತ್ತಿರುವುದು ಏಕೆ? ಸರ್ಕಾರಿ ಸ್ವಾಮ್ಯದ ಕಂಪೆನಿ ಗಳು 'ಕೈ ಬಿಸಿ' ಮಾಡಲಿಲ್ಲ ಎಂಬ ಕಾರಣಕ್ಕಾಗಿ ಅವುಗಳ ಪ್ರಸ್ತಾವನೆ ತಿರಸ್ಕರಿಸಲಾಗುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೂ ಗಣಿಗಾರಿಕೆಗೆ ಲೈಸೆನ್ಸ್ ನೀಡಲಾಗುತ್ತಿದೆ, ಗುತ್ತಿಗೆ ಅವಧಿಯನ್ನು ನವೀಕರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ ಹಾಗೂ ಕೊಂಡಯ್ಯ ಅವರು ಆರೋಪಿಸಿದ್ದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್, ಜೆಡಿಎಸ್ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಜತೆಗೆ ತಮ್ಮ ಸರ್ಕಾರದ ಅವಧಿಯಲ್ಲಿ 'ವ್ಯಾಲ್ಯೂ ಅಡಿಷನ್' ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ಹಟ್ಟಿ ಮೈನ್ಸ್ ಹಾಗೂ ಸುಶೀಲಮ್ಮ ಅಂಡ್ ಕಂಪೆನಿಗೆ ಗಣಿಗಾರಿಕೆಗೆ ಲೈಸೆನ್ಸ್ ನೀಡಿರುವುದು ನಿಜ. ಜತೆಗೆ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಆಗಿರುವ ಒಪ್ಪಂದದಂತೆ ಮೌಲ್ಯವರ್ಧಿತ ಸಿದ್ಧ ವಸ್ತುಗಳ ಉತ್ಪಾದನೆಗೆ ಅವಕಾಶವಾಗುವಂತೆ ಕೈಗಾರಿಕೆಗಳನ್ನು ಸ್ಥಾಪಿ ಸಲು ಮುಂದೆ ಬಂದಿರುವ ಹಲವು ಕಂಪೆನಿಗಳಿಗೆ ಗಣಿಗಾರಿಕೆಗೆ ಶಿಫಾರಸು ಮಾಡಲಾಗಿದೆ. ಇದನ್ನು ಹೊರತುಪಡಿಸಿದರೆ ನಮ್ಮ ಸರ್ಕಾರ ಹೊಸ ಲೈಸೆನ್ಸ್ ನೀಡಿಲ್ಲ . ಕೆಲವು ಕಂಪೆನಿಗಳ ಲೈಸನ್ಸ್ ನವೀಕರಿಸಿದ್ದೇವೆ. ಹಿಂದಿನ ಸರ್ಕಾರಗಳು ಲೈಸನ್ಸ್ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಕೇಂದ್ರದ ಅನುಮತಿ ಬಂದ ನಂತರ ಅಧಿಸೂಚನೆ ಹೊರಡಿಸುವುದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು.
ಗಣಿಗಾರಿಕೆಗೆ ನಮ್ಮ ಸರ್ಕಾರ ವಿರೋಧಿಯಲ್ಲ , ಸಂಪೂರ್ಣವಾಗಿ ಗಣಿಗಾರಿಕೆ ನಿಲ್ಲಿಸಬೇಕೆಂಬುದು ನಮ್ಮ ನಿಲುವಲ್ಲ . ಅದಿರು ರಫಿ¤ಗೆ ನಮ್ಮ ವಿರೋಧವಿದೆ. ರಾಜ್ಯದಲ್ಲಿ ಒಂದು ವರ್ಷ ಕಾಲ ಕಬ್ಬಿಣದ ಅದಿರು ರಫ್ತು ನಿಷೇಧಿಸಲು ಅನುಮತಿ ಕೊಡಿ, ನಂತರ ಬೇರೆ ರಾಜ್ಯಕ್ಕೆ ಅನ್ವಯಿಸಿ ಎಂದು ಪ್ರಧಾನಿಗೆ ಮನವಿ ಮಾಡುವೆ. ಕಾನೂನು ಬಾಹಿರವಾಗಿ ಅದಿರು ರಫ್ತು ಮಾಡೊಕೆ ಬಿಡುವುದಿಲ್ಲ . ಸುಪ್ರೀಂಕೋರ್ಟ್‌ಗೆ ಹೋಗಲು ಸಿದ್ಧನಿದ್ದೇನೆ. ಆದರೆ, ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ನನ್ನ ಕೈಕಟ್ಟುವುದರಲ್ಲಿ ಅರ್ಥವಿಲ್ಲ ಎಂದು ದೂರಿದರು.
ಭದ್ರಾವತಿಯ ವಿಎಸ್‌ಐಎಲ್ ಕಂಪೆನಿಯಲ್ಲಿ ಒಂದು ಕಾಲದಲ್ಲಿ 16 ಸಾವಿರ ಮಂದಿ ನೌಕರ ರಿದ್ದರು, ಈಗ 1,600 ಮಂದಿ ಮಾತ್ರ ಇದ್ದಾರೆ. ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಗೆ ಅನುಮತಿ ಕೊಡಬೇಕೆಂದು ನಾನು ಶಿಫಾರಸು ಮಾಡಿದ ಮೇಲೂ ಗಣಿಗಾರಿಕೆ ಪ್ರಭಾವಕ್ಕೆ ಬಿದ್ದು 'ಕೈ ಬಿಸಿ' ಮಾಡಲಿಲ್ಲ ಎಂಬ ಕಾರಣಕ್ಕೆ ಕೇಂದ್ರದವರು ಅನುಮತಿ ಕೊಡಲಿಲ್ಲ . ಯಾರು ಕೈಬಿಸಿ ಮಾಡುತ್ತಾರೋ ಅಂಥವರಿಗೆ ಕೇಂದ್ರದವರು ಅನುಮತಿ ಕೊಡುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗಾœಳಿ ನಡೆಸಿದರು.
ಗಣಿಗಾರಿಕೆ ನಡೆಸುವವರು ಬೆವರು ಸುರಿಸುತ್ತಿಲ್ಲ , ಟನ್ ಅದಿರನ್ನು 4 ಸಾವಿರ ರೂ.ಗೆ ಮಾರಾಟ ಮಾಡಿ, ಸರ್ಕಾರಕ್ಕೆ 150 ರಿಂದ 200 ರೂ. ಕೊಡುತ್ತಾರೆ. ಇಷ್ಟೆಲ್ಲಾ ಕೇಂದ್ರ ಸರ್ಕಾರಕ್ಕೆ ಗೊತ್ತಿ ದ್ದರೂ ಕೈಕಟ್ಟಿ ಕುಳಿತಿರುವುದು ಏಕೆ? ರಫ್ತು ಬೇಕು ಅನ್ನುವ ಉದ್ದೇಶವಾದರೂ ಏನು? ಕಾನೂನು ಕ್ರಮ ಏಕೆ ಕೈಗೊಳ್ಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ರಾತ್ರಿ ಒತ್ತಡ, ಬೆಳಗ್ಗೆ ಟೀಕೆ
ಅಕ್ರಮ ಗಣಿಗಾರಿಕೆಯಲ್ಲಿ ತಮ್ಮ ಹಾಗೂ ತಮ್ಮ ಮಕ್ಕಳನ್ನು ರಕ್ಷಿಸಲು ಮುಂದಾಗಿರುವ ಕೇಂದ್ರದ ಸಚಿವರು ಮತ್ತು ರಾಜ್ಯದ ಮಾಜಿ ಸಚಿವರು, ಹಗರಣ ಬಹಿರಂಗವಾಗದಂತೆ ನನ್ನ ಮೇಲೆ ಒತ್ತಡ ತರುತ್ತಿದ್ದಾರೆ. ರಾತ್ರಿ ಒತ್ತಡ ತರುತ್ತಿದ್ದರೆ, ಬೆಳಗ್ಗೆ ಬಹಿರಂಗವಾಗಿ ಸರಕಾರವನ್ನು ಟೀಕಿಸುತ್ತಿದ್ದಾರೆ ಎಂದ ಯಡಿಯೂರಪ್ಪ, ಇನ್ನು ತಾನು ಈ ನಾಯಕರನ್ನು ಸುಮ್ಮನೆಬಿಡುವುದಿಲ್ಲ. ಇವರ ಜನ್ಮವನ್ನು ಜಾಲಾಡುತ್ತೇನೆ ಎಂದು ಎಚ್ಚರಿಸಿದರು.
ಎರಡು ಕಂಪೆನಿಗಳಿಗೆ ಅನುಮತಿ
ತಾನು ಅಧಿಕಾರಕ್ಕೆ ಬಂದನಂತರ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡಿಲ್ಲ ಎಂದು ಪುನರುಚ್ಚರಿಸಿದ ಯಡಿಯೂರಪ್ಪ, ತನ್ನ ಅಧಿಕಾರಾವಧಿಯಲ್ಲಿ ಮೌಲ್ಯವರ್ಧಿತ ಆದಾಯ ಹೆಚ್ಚಿಸುವ ಉದ್ದೇಶಕ್ಕಾಗಿ ಸರಕಾರಿ ಸ್ವಾಮ್ಯದ ಹಟಿ ್ಟಗೋಲ್ಡ್ ಮೈನ್ ಮತ್ತು ಖಾಸಗಿ ಸ್ವಾಮ್ಯದ ಸುಶೀಲಮ್ಮ ಆ್ಯಂಡ್ ಕಂಪೆನಿ ಎಂಬ ಎರಡು ಸಂಸ್ಥೆಗಳಿಗೆ ಗಣಿಗಾರಿಕೆಯ ಗುತ್ತಿಗೆಗೆ ಅನುಮತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೈಗಾರಿಕೆಗಳಿಗಾಗಿ ಕೇಂದ್ರಕ್ಕೆ ಶಿಫಾರಸು:
ಹಲವು ವರ್ಷಗಳ ಕಾಲ ರಾಜ್ಯವನ್ನಾಳಿದ ಕಾಂಗ್ರೆಸ್, ಮಾಡಿದ ಪಾಪ ಕೂಸನ್ನು ತನ್ನ ಮೇಲೆ ಕೂರಿಸಲು ಮುಂದಾಗಿದ್ದಾರೆ. ಆದರೆ ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದ ಯಡಿಯೂರಪ್ಪ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಿದ್ಧ ವಸ್ತುಗಳ ಉತ್ಪಾದನೆಗೆ ಅವಕಾಶವಾಗುವಂತೆ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಿರುವ ಹಲವು ಕಂಪೆನಿಗಳಿಗೆ ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇನೆ ಹೊರತು ರಫ್ತು ನಿಷೇಧಕ್ಕೆ ಯಾವುದೇ ಅಕ್ರಮಕ್ಕೆ ಅನುವು ಮಾಡಿಕೊಟ್ಟಿಲ್ಲ ಎಂದರು.
ಅದಿರು ರಫ್ತಿಗೆ ಒತ್ತಡ ಹೇರಲಿ:
ಬಿಜೆಪಿ ಸರಕಾರ ರಾಜ್ಯದಲ್ಲಿ ನಡೆಸುತ್ತಿರುವ ಜನಪರವಾದ ಕೆಲಸ ಕಾರ್ಯವನ್ನು ಸಹಿಸಲಾಗದ ಕಾಂಗ್ರೆಸ್-ಜೆಡಿಎಸ್, ಇಲ್ಲಸಲ್ಲದ ಆರೋಪದಲ್ಲಿ ತೊಡಗಿವೆೆ. ಇವರಿಗೆ ನಿಜವಾದ ಕಾಳಜಿ ಇದ್ದರೆ ಅದಿರು ರಫ್ತು ನಿಷೇಧಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು. ಕಾಂಗ್ರೆಸ್ ತನ್ನ ಪಾದಯಾತ್ರೆಯ ಸಂದರ್ಭದಿಂದ ‘ಗಣಿ’ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಅದರೊಂದಿಗೆ ಜೆಡಿಎಸ್ ಕೂಡಾ ಸೇರಿಕೊಂಡಿದೆ. ಇವರಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಅವರು ಲೇವಡಿ ಮಾಡಿದರು.
ಸುಪ್ರೀಂಕೋರ್ಟಿನವರೆಗೂ ಹೋರಾಟ
ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಈಗ ಕೇಂದ್ರ ಸರಕಾರ ತಮ್ಮ ನಿಲುವಿನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ತಾವು ಇದನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಗುಡುಗಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಕುರಿತ ಹೋರಾಟವನ್ನು ಸುಪ್ರೀಂ ಕೋರ್ಟ್‌ನ ವರೆಗೂ ಕೊಂಡೊಯ್ಯುವುದಾಗಿ ಹೇಳಿದರು.
ಗಣಿಗಾರಿಕೆಗೆ ವಿರೋಧವಿಲ್ಲ
ಬಿಜೆಪಿ ಸರಕಾರ ಗಣಿಗಾರಿಕೆಯನ್ನು ವಿರೋಧಿಸುವುದಿಲ್ಲ. ಅದನ್ನು ನಿಷೇಧಿಸಬೇಕು ಎಂಬುದು ಕೂಡಾ ನಮ್ಮ ಪಕ್ಷದ ನಿಲುವಲ್ಲ. ಆದರೆ ಅದಿರು ರಫ್ತಾಗಬಾರದು ಎಂಬುದು ತಮ್ಮ ನಿಲುವು. ರಾಜ್ಯದ ನೈಸರ್ಗಿಕ ಸಂಪತ್ತು ಇಲ್ಲಿಯೇ ಬಳಕೆ ಆಗಬೇಕು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಲಾಭ ಆಗಲಿದೆ ಎಂಬುದು ತಮ್ಮ ಅಭಿಪ್ರಾಯ ಎಂದು ಯಡಿಯೂರಪ್ಪ ತಿಳಿಸಿದರು. ಅಕ್ರಮ ಗಣಿಗಾರಿಕೆಯನ್ನು ಮುಚ್ಚಿಹಾಕಲು ಕೇಂದ್ರದ ಸಚಿವರು ಹಾಗೂ ರಾಜ್ಯದ ಮಾಜಿ ಸಚಿವರು ತನ್ನ ಕೈಕಾಲನ್ನು ಹಿಡಿಯುತ್ತಿದ್ದಾರೆ
ಶೀಘ್ರವೇ ಮತ್ತೂಬ್ಬ ಉಪಲೋಕಾಯುಕ್ತ ನೇಮಕ : ಯಡಿಯೂರಪ್ಪ
ಬೆಂಗಳೂರು : ಕಳೆದ 10 ವರ್ಷಗಳಿಂದ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಆಗಿರುವ ಬಗ್ಗೆ ಲೋಕಾಯುಕ್ತದಿಂದ ಸಮಗ್ರ ತನಿಖೆ ನಡೆಸಲಾಗುವುದು, ಲೋಕಾಯುಕ್ತರ ಕೈಬಲಪಡಿಸಲು ಶೀಘ್ರವೇ ಮತ್ತೂಬ್ಬ ಉಪ ಯೋಕಾಯುಕ್ತರನ್ನು ನೇಮಿಸಿ ಅಗತ್ಯ ಸಿಬ್ಬಂದಿಯನ್ನು ಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಅಕ್ರಮ ಗಣಿಗಾರಿಕೆ ಕುರಿತು ರಾಜ್ಯ ಸರ್ಕಾರದ ಕಣ್ಣು ತೆರೆಸಿರುವ ಲೋಕಾಯುಕ್ತರನ್ನು ಅಭಿನಂದಿಸುವುದಾಗಿ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದ ಅವರು ಅಕ್ರಮ ತಡೆಗೆ ಕಾಂಗ್ರೆಸ್ ನಡೆಸಿದ ಪಾದಯಾತ್ರೆ ಪ್ರೇರಣೆ ತಂದಿದೆ. ಜತೆಗೆ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ರಫ್ತು ತಡೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದ್ದು ಅದಕ್ಕಾಗಿ ಅಭಿಂದನೆ ಸಲ್ಲಿಸುವುದಾಗಿ ಹೇಳಿದರು.
ಬೇಲೆಕೇರಿ ಬಂದರು ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ, ಸಾವಿರಾರು ಕೋಟಿ ರೂ.ಗಳ ಅವ್ಯವಹಾರದ ಸತ್ಯಾಂಶಗಳು ಹೊರ ಬರುತ್ತಿವೆ, ಬಂದರು ಅಧಿ ಕಾರಿಯೊಬ್ಬರನ್ನು ಗುರುವಾರ ಬಂಧಿಸಲಾಗಿದೆ. 10 ವರ್ಷಗಳ ಅಕ್ರಮ ರಫ್ತು ತನಿಖೆಗೆ ಲೋಕಾಯುಕ್ತರಿಗೆ ನೆರವಾಗಲು 15 ದಿನದಲ್ಲಿ ಮತ್ತೂಬ್ಬ ಉಪಲೋಕಾಯುಕ್ತರನ್ನು ನೇಮಿಸಲಾಗುವುದು ಎಂದು ತಿಳಿಸಿದರು.
10 ವರ್ಷಗಳ ಕಾನೂನು ಬಾಹಿರ ರಫ್ತು ಹೊರ ಬರಬೇಕು, ಅದರಲ್ಲಿ ಪ್ರಭಾವಿ ರಾಜಕಾರಣಿಗಳು, ಉದ್ದಿಮೆದಾರರು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆ. ಚೀನಾಕ್ಕೆ ಅಕ್ರಮಕ್ಕೆ ರಫ್ತು ಆಗಿರುವುದು ಸಾಬೀತಾಗಿದೆ. ಕೆಲವು ಮಾಜಿ ಮಂತ್ರಿಗಳು ಕೈಕಾಲು ಹಿಡಿಯಲು ಶುರು ಮಾಡಿದ್ದಾರೆ. ಅಷ್ಟು ಸುಲಭಕ್ಕೆ ಬಿಡುವುದಿಲ್ಲ . 45 ಕಂಪೆನಿಗಳು ಭಾಗಿಯಾಗಿದ್ದು 58 ಜನರ ಮೇಲೆ ಸಿಐಡಿ ವೊಕದ್ದಮೆ ದಾಖಲಿಸಿದೆ. ಅವರಿಗೋಸ್ಕರವೇ ಒಂದು ಸ್ಪೆಷಲ್ ಜೈಲು ಕಟ್ಟಿಸಬೇಕಾಗುತ್ತದೆ. ಅವರು ಯಾರು? ಅವರ ವಿಳಾಸ ಗೊತ್ತಿಲ್ಲವೇ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ ಯಡಿಯೂರಪ್ಪ ಅವರು, ಪ್ರಭಾವಿ ಕೇಂದ್ರ ಸಚಿವರ ಅವರ ಜತೆಗಿದ್ದಾರೆ ಎಂದು ಬೊಟ್ಟು ಮಾಡಿದರು.
ತಮ್ಮ ಕಾಲದಲ್ಲಿ ಯಾವುದೇ ಅಕ್ರಮ ಲೈಸನ್ಸ್ , ನವೀಕರಣ ಆಗಿದ್ದರೆ ಅದನ್ನು ಲೋಕಾಯುಕ್ತಕ್ಕೆ ಸಲ್ಲಿಸಲಿ, ಉಗ್ರಪ್ಪ , ತಿಮ್ಮಪ್ಪ , ಶಿವಕುಮಾರ್ ಅವರಂತಹವರಿಗೆ ಉತ್ತರ ಕೊಡಲು ಹೋಗುವುದಿಲ್ಲ , ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವುದಲ್ಲ ಎಂದು ಕಿಡಿ ಕಾರಿದ ಅವರು ಕಾಂಗ್ರೆಸ್‌ನವರಿಗೆ ಮಾನ, ಮರ್ಯಾದೆ ಇದ್ದರೆ ಆ ರೀತಿ ನಡೆದುಕೊಳ್ಳುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಗಣಿ ಗುತ್ತಿಗೆಗೆ ಮಂಜೂರಾತಿ ಹಾಗೂ ನವೀಕರಣಕ್ಕಾಗಿ ಅಧಿಸೂಚನೆ ಹೊರಡಿಸಿರುವ 13 ಪ್ರಕರಣಗಳಲ್ಲಿ ಅವಶ್ಯಕ ದಾಖಲಾತಿಗಳನ್ನು ಈಗ ಸಲ್ಲಿಸಿದ್ದು ಗಣಿ ಮತ್ತು ಭೂ ವಿಜ್ಞಾನ ನಿರ್ದೆàಶಕರು ಗಣಿ ಗುತ್ತಿಗೆಯನ್ನು ಮಂಜೂರು ಮಾಡಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಗಣಿ ಗುತ್ತಿಗೆಗೆ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವು ಅನುಮತಿ ನೀಡಿದ ನಂತರ ರಾಜ್ಯ ಸರ್ಕಾರ ಅಧಿಸೂಚನೆಯನ್ನು 16 ಗಣಿ ಗುತ್ತಿಗೆಗಳಿಗೆ ಹೊರಡಿಸಿದೆ ಎಂದು ಸರ್ಕಾರದ ತೀರ್ಮಾನಗಳನ್ನು ಯಡಿಯೂರಪ್ಪ ಸಮರ್ಥಿಸಿಕೊಂಡರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|