ಮೆಟ್ರೋ ರೀಚ್ 2ಕ್ಕೆ ಕೇಂದ್ರದ ಅನುಮತಿ ಇನ್ನೂ ಇಲ್ಲ |
ಪ್ರಕಟಿಸಿದ ದಿನಾಂಕ : 2010-09-03
ಬೆಂಗಳೂರು : ಬಹು ನಿರೀಕ್ಷಿತ ಮೆಟ್ರೋ ಯೋಜನೆಯ 2ನೇ ಹಂತದ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂಬ ವಿಚಾರ ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಬಹಿರಂಗಗೊಂಡಿದೆ.
ಅಂಬೇಡ್ಕರ್ ವೀದಿ ಮಾರ್ಗವಾಗಿ ಹಾದು ಹೋಗುವ ಮೆಟ್ರೋ ರೀಚ್- 2 ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ ಇದು ಜಂಟಿ ಯೋಜನೆ ಆಗಿರುವುದರಿಂದ ಕೇಂದ್ರ ಸರ್ಕಾರದ ಅನುಮತಿಯೂ ಕಡ್ಡಾಯ. ಇದುವರೆಗೆ ಕೇಂದ್ರ ಎರಡನೇ ಹಂತದ ಯೋಜನೆಗೆ ಅನುಮತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.
ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಪ್ರಮುಖ ಕಚೇರಿಗಳ ಕಟ್ಟಡ ಗಳಿರುವ ಅಂಬೇಡ್ಕರ್ ವೀದಿಯಲ್ಲಿ ಸುರಂಗ ಮೆಟ್ರೋ ನಿಲ್ದಾಣ ನಿರ್ಮಾಣ ವಿರೋಧಿಸಿ ಪ್ರೊ. ಜಿ.ಕೆ. ಗೋವಿಂದರಾವ್ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಮೆಟ್ರೋ ರೀಚ್- 2 ಯೋಜನೆಯ ಹಲವು ಸಂಗತಿಗಳು ಬಹಿರಂಗಗೊಂಡವು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಮಿನ್ಸ್$R ವೃತ್ತದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ಅದರ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು. ಅಂಬೇಡ್ಕರ್ ವೀದಿಯಲ್ಲಿ ಸುರಂಗ ಮೆಟ್ರೋ ರೈಲು ನಿಲ್ದಾಣ ನಿರ್ಮಿಸುವುದರಿಂದ ವಿಧಾನಸೌಧ ಹಾಗೂ ಹೈಕೋರ್ಟ್ ಭದ್ರತೆಗೆ ಧಕ್ಕೆಯಾಗುತ್ತದೆ. ಜತೆಗೆ ಕಬ್ಬನ್ ಪಾರ್ಕ್‌ನಲ್ಲಿರುವ 116 ಮರಗಳನ್ನು ಕಡಿಯಲಾಗುತ್ತದೆ. ಇದರಿಂದ ಶಬ್ಧ ಹಾಗೂ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ಆರೋಪಿಸಿದರು.
ಅಂಬೇಡ್ಕರ್ ವೀದಿಯಲ್ಲಿ ಪ್ರತಿ ಗಂಟೆಗೆ 15 ಸಾವಿರ ವಾಹನಗಳು ಓಡಾಡುತ್ತವೆ. ಮೆಟ್ರೋ ಕಾಮಗಾರಿ ಆರಂಭಿಸಿದರೆ ಈ ವಾಹನಗಳ ಸಂಚಾರಕ್ಕೆ ಯಾವ ಪ್ರರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ ಎಂದು ವಾದಿಸಿದರು.
ಕಬ್ಬನ್ ಪಾರ್ಕ್ ಮೂಲಕ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಆದರೆ ಇದರಿಂದ ಹೈಕೋರ್ಟ್ ಕಲಾಪಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು.
ವಾದ ಆಲಿಸಿದ ಮುಖ್ಯ ನ್ಯಾ . ಜೆ.ಎಸ್. ಖೇಹರ್ ಮತ್ತು ನ್ಯಾ. ಮಂಜುಳಾ ಚಲ್ಲೂರ್ ಅವರಿದ್ದ ವಿಭಾಗೀಯ ಪೀಠ, ಸೆ. 6ಕ್ಕೆ ವಿಚಾರಣೆಯನ್ನು ಮುಂದೂಡಿತು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|