ಬೇಲೆಕೇರಿ ಅದಿರು ನಾಪತ್ತೆ - ಸಿಐಡಿ ಆರೋಪ ಪಟ್ಟಿ ಸಲ್ಲಿಕೆ: ಬಂದರು ಅಧಿಕಾರಿ ಬಂಧನ |
ಪ್ರಕಟಿಸಿದ ದಿನಾಂಕ : 2010-09-03
ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರು ಸಂರಕ್ಷಣಾಧಿಕಾರಿ ಮಹೇಶ ಬಿಲಿಯೆ ಅವರನ್ನು ಬಂಧಿಸಲಾಗಿದೆ� ಎಂದು ಪೊಲೀಸ್ ಮಹಾನಿರ್ದೇಶಕ (ಸಿಐಡಿ) ಡಾ.ಡಿ.ವಿ.ಗುರುಪ್ರಸಾದ್ ತಿಳಿಸಿದರು.
ಧಾರವಾಡ: ‘ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಪ್ರಥಮ ಆರೋಪ ಪಟ್ಟಿಯನ್ನು ಗುರುವಾರ ಅಂಕೋಲಾದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರು ಸಂರಕ್ಷಣಾಧಿಕಾರಿ ಮಹೇಶ ಬಿಲಿಯೆ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮಹಾನಿರ್ದೇಶಕ (ಸಿಐಡಿ) ಡಾ.ಡಿ.ವಿ.ಗುರುಪ್ರಸಾದ್ ತಿಳಿಸಿದರು.
ಹೈಕೋರ್ಟ್ ಸಂಚಾರಿ ಪೀಠದಲ್ಲಿ ಅದಿರು ನಾಪತ್ತೆ ಪ್ರಕರಣದ ತನಿಖೆ ಕುರಿತು ನ್ಯಾಯಮೂರ್ತಿ ಅರಳಿ ನಾಗರಾಜ ಅವರಿದ್ದ ಪೀಠದ ಮುಂದೆ ಹಾಜರಾಗಿ, ತನಿಖೆ ಯಾವ ಹಂತದಲ್ಲಿದೆ ಎಂಬುದರ ಮಾಹಿತಿ ನೀಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಮಹೇಶ ಬಿಲಿಯೆ ಅವರನ್ನು ಗುರುವಾರ ಅಂಕೋಲಾದ ನ್ಯಾಯಾಲಯದ ಎದುರು ಹಾಜರುಪಡಿಸಿದ್ದು, ಎರಡು ದಿನಗಳವರೆಗೆ ಸಿಐಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆಯಿಂದ ಮತ್ತೆಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಅದಾನಿ ಎಂಟರ್‌ಪ್ರೈಸಸ್‌ನ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆದರೆ ಇವರಿಬ್ಬರೂ ಹೈಕೋರ್ಟ್ ಸಂಚಾರಿ ಪೀಠದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಯಿತು’ ಎಂದು ತಿಳಿಸಿದರು.
ಅರಣ್ಯ ಅಧಿಕಾರಿಗಳು ಜಪ್ತ್ ಮಾಡಿದ್ದ ಅದಿರನ್ನು ಸಂರಕ್ಷಿಸುವಲ್ಲಿ ವಿಫಲರಾಗಿದ್ದು ಹಾಗೂ ಬೇರೆ ಕಂಪೆನಿಗಳ ಜೊತೆಗೆ ಸೇರಿಕೊಂಡು ನಾಪತ್ತೆಗೆ ಸಹಕರಿಸಿದ್ದಾರೆ ಎಂಬ ಆರೋಪವನ್ನು ಮಹೇಶ ಬಿಲಿಯೆ ಎದುರಿಸುತ್ತಿದ್ದಾರೆ ಎಂದರು.
ಐಎಲ್‌ಸಿ ಎಕ್ಸ್‌ಪೋರ್ಟ್, ಸತ್ಯಾ ಗ್ರಾನೈಟ್ಸ್ ಹಾಗೂ ಎಸ್‌ಬಿ ಲಾಜಿಸ್ಟಿಕ್ಸ್ ಕಂಪೆನಿಗಳು ಹಾಗೂ ಅವುಗಳ ಪ್ರತಿನಿಧಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಅದಿರು ನಾಪತ್ತೆ ಪ್ರಕರಣ ಕುರಿತಂತೆ ಒಟ್ಟು ಕಂಪೆನಿಗಳು ಸೇರಿದಂತೆ ವೈಯಕ್ತಿಕವಾಗಿ ಒಟ್ಟು 58 ಜನರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 11 ಜನರನ್ನು ಬಂಧಿಸಿದ್ದು, ಆರು ಜನರು ಜಾಮೀನು ಪಡೆದಿದ್ದಾರೆ ಎಂದು ವಿವರಿಸಿದರು.
ಅದಿರು ಸಂಗ್ರಹಣೆ ಮಾಡಿದ್ದ ನಾಲ್ಕು ಸ್ಟಿವ್‌ಡೋರ್ (ಯಾರ್ಡ) ವಿರುದ್ಧ ಸಹ ಪ್ರಕರಣ ದಾಖಲಾಗಿದೆ ಎಂದ ಅವರು, ಬೇಲೆಕೇರಿ ಬಂದರಿನಿಂದ ಮಾರ್ಚ್ ತಿಂಗಳಿನಿಂದ ಜೂನ್‌ವರೆಗೆ 4,65,078 ಟನ್ ಅದಿರು ನಾಪತ್ತೆಯಾಗಿದೆ. ಈ ಅದಿರನ್ನು ಯಾರು, ಯಾವಾಗ ಸಾಗಾಟ ಮಾಡಿದ್ದಾರೆ ಎಂಬುದರ ತನಿಖೆ ನಡೆಯುತ್ತಿದೆ ಎಂದರು.
ಅದಿರು ನಾಪತ್ತೆ ಬಗ್ಗೆ ತನಿಖೆ ನಡೆಸಲು ಎಸ್‌ಪಿ ಕೆ.ಪಿ.ಭೀಮಯ್ಯ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಎಸ್‌ಪಿ ಲೋಕೇಶ, ನಾಲ್ವರು ಡಿಎಸ್‌ಪಿ, ನಾಲ್ವರು ಇನ್ಸಪೆಕ್ಟರ್‌ಗಳು ತಂಡದಲ್ಲಿದ್ದಾರೆ.
ಡಿಐಜಿ ಚರಣರೆಡ್ಡಿ ತನಿಖೆಯ ನೇರ ಉಸ್ತುವಾರಿ ವವಹಿಸಲಿದ್ದಾರೆ ಎಂದು ಹೇಳಿದರು. ಸೆಪ್ಟೆಂಬರ್ 9ಕ್ಕೆ ತನಿಖೆಯ ಪ್ರಗತಿ ಕುರಿತು ವರದಿ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ ಎಂದು ತಿಳಿಸಿದರು. ಡಿಐಜಿ ಚರಣರೆಡ್ಡಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|