ಭ್ರಷ್ಟರ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ಹಿಂದೇಟು: ಸಾರಿಗೆ ಇಲಾಖೆಯಲ್ಲಿ 'ಪ್ರಭಾವಿ' ಅಧಿಕಾರಿಗಳ ರಕ್ಷಣೆ |
ಪ್ರಕಟಿಸಿದ ದಿನಾಂಕ : 2010-09-03
ಇಲಾಖೆಯಲ್ಲೇ 'ಪ್ರಭಾವಿಗಳು' ಎಂದು ಹೆಸರಾದ ಕೆಲವು ಮೋಟಾರು ವಾಹನ ನಿರೀಕ್ಷಕರು, ಸಾರಿಗೆ ಅಧಿಕಾರಿಗಳ ವಿರುದ್ಧ ವಿಚಾರಣಾ ಅನುಮತಿ ಕೋರಿರುವ ಕಡತಗಳು ವರ್ಷಕ್ಕೂ ಹೆಚ್ಚು ಕಾಲದಿಂದ ಸಾರಿಗೆ ಇಲಾಖೆಯಲ್ಲೇ ಕುಳಿತಿವೆ. ಇನ್ನು ಕೆಲವರ ವಿರುದ್ಧ ವಿಚಾರಣೆಗೆ ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಸಮ್ಮತಿ ನೀಡಲಾಗಿದೆ!
ಬೆಂಗಳೂರು: ಸಾರಿಗೆ ಇಲಾಖೆಯಲ್ಲಿನ ‘ಪ್ರಭಾವಿ’ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದ ಸಮರಕ್ಕೆ ‘ಅನುಮತಿ’ಯ ಗ್ರಹಣ ಪದೇ ಪದೇ ಕಾಡುತ್ತಿದೆ. ಅದರ ಜೊತೆಯಲ್ಲೇ ಕೆಲವು ಆರೋಪಿಗಳು ತನಿಖೆಗೆ ಅಸಹಕಾರ ತೋರುವ ಮೂಲಕ ಪ್ರಕರಣವನ್ನೇ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಇಲಾಖೆಯಲ್ಲೇ ‘ಪ್ರಭಾವಿಗಳು’ ಎಂದು ಹೆಸರಾದ ಕೆಲವು ಮೋಟಾರು ವಾಹನ ನಿರೀಕ್ಷಕರು, ಸಾರಿಗೆ ಅಧಿಕಾರಿಗಳ ವಿರುದ್ಧ ವಿಚಾರಣಾ ಅನುಮತಿ ಕೋರಿರುವ ಕಡತಗಳು ವರ್ಷಕ್ಕೂ ಹೆಚ್ಚು ಕಾಲದಿಂದ ಸಾರಿಗೆ ಇಲಾಖೆಯಲ್ಲೇ ಕುಳಿತಿವೆ. ಇನ್ನು ಕೆಲವರ ವಿರುದ್ಧ ವಿಚಾರಣೆಗೆ ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಸಮ್ಮತಿ ನೀಡಲಾಗಿದೆ!
ವಿಜಾಪುರದ ಮೋಟಾರು ವಾಹನ ನಿರೀಕ್ಷಕ (ಐಎಂವಿ) ಡಿ.ಸಿ.ಮಂಜೇಗೌಡ ಅವರ ಮೇಲೆ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ 2007ರ ಡಿಸೆಂಬರ್ 19ರಂದು ದಾಳಿ ನಡೆದಿತ್ತು. ಕ್ಷಿಪ್ರಗತಿಯಲ್ಲಿ ತನಿಖೆ ಪೂರ್ಣಗೊಳಿಸಿದ್ದ ತನಿಖಾ ತಂಡ, ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ವರ್ಷದ ಹಿಂದೆ ಸಾರಿಗೆ ಇಲಾಖೆಗೆ ಪ್ರಸ್ತಾವ ಕಳುಹಿಸಿತ್ತು. ಅಂದಿನಿಂದಲೂ ಕಡತ ಅಲ್ಲಿಯೇ ದೂಳು ತಿನ್ನುತ್ತಿದೆ.
ಮಂಜೇಗೌಡ ಹಿಂದಿನ ಸಾರಿಗೆ ಸಚಿವರಿಗೆ ಅತ್ಯಂತ ಆಪ್ತರಾಗಿದ್ದವರು. ಮಾಜಿ ಸಾರಿಗೆ ಸಚಿವರ ಸಹೋದರನ ಬ್ಯಾಂಕ್ ಖಾತೆಯಿಂದಲೇ ಆರೋಪಿ ಅಧಿಕಾರಿಯ ಖಾತೆಗೆ 70 ಲಕ್ಷ ರೂಪಾಯಿ ವರ್ಗಾವಣೆ ಆಗಿರುವುದೂ ತನಿಖೆಯಲ್ಲಿ ಪತ್ತೆಯಾಗಿತ್ತು.
2008ರ ಅಕ್ಟೋಬರ್ 10ರಂದು ದಾಳಿಗೆ ಒಳಗಾಗಿದ್ದ ದಾವಣಗೆರೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಹನುಮಂತಪ್ಪ ಜಟ್ಟಪ್ಪ ತಂಬದ್ ಅವರಿಗೆ ಸಂಬಂಧಿಸಿದ ಕಡತವೂ ದೀರ್ಘ ಕಾಲದಿಂದ ಸಾರಿಗೆ ಇಲಾಖೆ ಕಾರ್ಯದರ್ಶಿ ಕಚೇರಿಯಲ್ಲೇ ಕುಳಿತಿದೆ.
ಒಂಬತ್ತು ತಿಂಗಳ ಬಳಿಕ ಸಮ್ಮತಿ: 2007ರಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಚಿಕ್ಕಮಗಳೂರು ಎಂವಿಐ ಕೆ.ಅಶೋಕ್, ದೇವನಹಳ್ಳಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಲಕ್ಷ್ಮಣ್, 2008ರಲ್ಲಿ ಲಂಚ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದ ಬೆಳಗಾವಿಯ ಎಂವಿಐ ಪ್ರಭುಸ್ವಾಮಿ ಹಿರೇಮಠ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಕೋರಿ ತನಿಖಾ ಅಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವಕ್ಕೆ ಒಂಬತ್ತು ತಿಂಗಳಿಗೂ ಹೆಚ್ಚು ಸಮಯದ ಬಳಿಕ ಒಪ್ಪಿಗೆ ನೀಡಲಾಗಿದೆ.
ಹಲವು ಅಧಿಕಾರಿಗಳ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಮತ್ತು ಲಂಚ ಪ್ರಕರಣಗಳ ತನಿಖೆ 2009ರಲ್ಲೇ ಪೂರ್ಣಗೊಂಡಿತ್ತು. ಆಗಲೇ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಪ್ರಸ್ತಾವ ರವಾನಿಸಿದ್ದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರೂಪಕ್‌ಕುಮಾರ್ ದತ್ತ, ಆರೋಪಿ ಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ಕೋರಿದ್ದರು. ಆದರೆ ಪ್ರಸ್ತಾವವನ್ನು ಅಲ್ಲಿಯೇ ಇರಿಸಿಕೊಂಡ ಸಾರಿಗೆ ಇಲಾಖೆ ಮೌನಕ್ಕೆ ಶರಣಾಗಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ರಾಜೀನಾಮೆ ಪ್ರಕರಣದ ಬಳಿಕ ಎಚ್ಚೆತ್ತ ಇಲಾಖೆ, ಕೆಲವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಹಸಿರುನಿಶಾನೆ ತೋರಿದೆ.
ಆಗಸ್ಟ್ ಕೊನೆಯ ವಾರದಲ್ಲಿ ಎನ್.ಲಕ್ಷ್ಮಣ್, ಕೆ.ಅಶೋಕ್ ಮತ್ತು ಪ್ರಭುಸ್ವಾಮಿ ಹಿರೇಮಠ ವಿರುದ್ಧ ನ್ಯಾಯಾಲಯದ ವಿಚಾರಣೆಗೆ ಅನುಮತಿ ನೀಡಿದ ಪತ್ರಗಳು ಲೋಕಾಯುಕ್ತರ ಕಚೇರಿ ತಲುಪಿವೆ.
ದೊಡ್ಡವರಿಗೆ ರಕ್ಷಣೆ?: ಆರೋಪಪಟ್ಟಿ ಸಲ್ಲಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿಷಯದಲ್ಲಿ ವಿಳಂಬ ಧೋರಣೆಯ ಮೊರೆ ಹೋಗುವ ಇಲಾಖೆ, ನೌಕರರ ಪ್ರಕರಣಗಳಿಗೆ ತುರ್ತಾಗಿ ಒಪ್ಪಿಗೆ ನೀಡಿ ಸತ್ಯ ಮರೆಮಾಚಲು ಪ್ರಯತ್ನಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಲೋಕಾಯುಕ್ತದ ಮೂಲಗಳ ಪ್ರಕಾರ ಈ ಆರೋಪದಲ್ಲಿ ಹುರುಳಿದೆ.
‘ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ಕೋರುವ ಕಡತಗಳು ಬಹುಕಾಲ ಸಾರಿಗೆ ಇಲಾಖೆಯಲ್ಲೇ ಉಳಿಯುತ್ತಿವೆ. ಆದರೆ ನೌಕರರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹಾಗೆ ಆಗುವುದಿಲ್ಲ. ಬೇಗನೆ ಒಪ್ಪಿಗೆ ಸಿಗುತ್ತದೆ. ಅಂಕಿಅಂಶಗಳಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ಇಲಾಖೆಯ ಹಿರಿಯ ಅಧಿಕಾರಿಗಳು ಇಂತಹ ಉಪಾಯದ ಮೊರೆ ಹೋಗಿರಬಹುದು’ ಎನ್ನುತ್ತಾರೆ ಲೋಕಾಯುಕ್ತದ ಹಿರಿಯ ಅಧಿಕಾರಿಯೊಬ್ಬರು.
ತನಿಖೆಗೆ ಅಸಹಕಾರ: ತನಿಖಾ ಹಂತದಲ್ಲಿರುವ ಹಲವು ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಅವರ ಜೊತೆ ವ್ಯಾವಹಾರಿಕ ನಂಟು ಹೊಂದಿದ್ದವರಿಂದ ಸತ್ಯ ಬಯಲಿಗೆ ತರುವುದೇ ಕಷ್ಟದ ಕೆಲಸವಾಗುತ್ತಿದೆ. ಸಂಶಯಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ನೀಡುವ ನೋಟಿಸ್‌ಗಳಿಗೆ ದೀರ್ಘಕಾಲ ಉತ್ತರ ನೀಡದೇ ಸತಾಯಿಸುತ್ತಿರುವ ಹಲವು ಅಧಿಕಾರಿಗಳು, ಪ್ರಕರಣಗಳನ್ನೇ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಲೋಕಾಯುಕ್ತ ತನಿಖಾ ತಂಡ ಕಳುಹಿಸಿದ ಪ್ರಶ್ನಾವಳಿ ಮತ್ತು ನೋಟಿಸ್‌ಗಳಿಗೆ ತಿಂಗಳುಗಟ್ಟಲೆ ಉತ್ತರ ನೀಡದೇ ಸತಾಯಿಸಿದ್ದಾರೆ. ಇನ್ನೂ ಕೆಲವರು ಉತ್ತರ ನೀಡುವುದರಲ್ಲೇ ಇದ್ದಾರೆ. ಆರೋಪಿಗಳಷ್ಟೇ ಅಲ್ಲ ಸರ್ಕಾರದ ವಿವಿಧ ಇಲಾಖೆಗಳೂ ಕೂಡ ಆರೋಪಿ ಅಧಿಕಾರಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತನಿಖಾ ತಂಡಕ್ಕೆ ಒದಗಿಸುವಲ್ಲಿ ವಿಳಂಬ ಮಾಡುತ್ತಿವೆ. ಎಲ್ಲರ ಅಸಹಕಾರದ ಪರಿಣಾಮವಾಗಿ ಭ್ರಷ್ಟರನ್ನು ಶಿಕ್ಷಿಸುವ ಕಾರ್ಯಾಚರಣೆಯೇ ಸಡಿಲಗೊಳ್ಳುತ್ತಿದೆ.
ಕಾರಣ ಬಹಿರಂಗವಾಗಲಿ: ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವ ವಿಷಯದಲ್ಲಿ ಸಾರಿಗೆ ಇಲಾಖೆ ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ‘ಪ್ರಭಾವಿ ಅಧಿಕಾರಿಗಳಿಗೆ ರಕ್ಷಣೆ ನೀಡುವ ಕೆಲಸ ಬಹಳ ದಿನಗಳಿಂದ ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿದೆ. ಭ್ರಷ್ಟರ ವಿರುದ್ಧ ಏಕೆ ವಿಚಾರಣೆಗೆ ಅನುಮತಿ ನೀಡುತ್ತಿಲ್ಲ ಎಂಬುದನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಬಹಿರಂಗವಾಗಿ ಹೇಳಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಹಲವು ಬಾರಿ ಕಿರಿಯ ನೌಕರರ ವಿರುದ್ಧ ವಿಚಾರಣೆಗೆ ಬೇಗ ಒಪ್ಪಿಗೆ ಸಿಗುತ್ತದೆ. ಇದು ಜನರ ಕಣ್ಣೊರೆಸಲು ಹಿರಿಯ ಅಧಿಕಾರಿಗಳು ಮಾಡುವ ತಂತ್ರ. ರಾಜಕೀಯ ಪ್ರಭಾವ ಇರುವ ಆರೋಪಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡಲು ವರ್ಷಗಟ್ಟಲೆ ವಿಳಂಬ ಮಾಡಲಾಗುತ್ತಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಅಡ್ಡಿಯಾಗುತ್ತಿರುವ ಇಂತಹ ಸಮಸ್ಯೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ’ ಎಂದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವಿ.ಎಸ್.ಸುಬ್ರಹ್ಮಣ್ಯ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|