ಬೆಂಗಳೂರು ನಗರಕ್ಕೆ ಆಗಮಿಸಿದ ಕಾಮನ್‌ವೆಲ್ತ್ ಎಕ್ಸ್‌ಪ್ರೆಸ್ |
ಪ್ರಕಟಿಸಿದ ದಿನಾಂಕ : 2010-09-03
ಬೆಂಗಳೂರು: ದೆಹಲಿಯಲ್ಲಿ ಮುಂದಿನ ತಿಂಗಳ 3 ರಿಂದ 14ರ ವರೆಗೆ ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಕ್ರೀಡೆಯ ಮಾಹಿತಿ ಮತ್ತು ಮಹತ್ವವನ್ನು ಸಾರುವ ‘ಕಾಮನ್‌ವೆಲ್ತ್ ಎಕ್ಸ್‌ಪ್ರೆಸ್’ ರೈಲು ನಗರಕ್ಕೆ ಆಗಮಿಸಿದೆ.
ಕಂಟೋನ್ಮೆಂಟ್ ರೈಲು ನಿಲ್ದಾಣದ ಮೂರನೇ ಪ್ಲಾಟ್‌ಫಾರಂನಲ್ಲಿ ನಿಲ್ಲಿಸಲಾಗಿರುವ ರೈಲನ್ನು ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಆಟಗಾರ ಸಯ್ಯದ್ ಕಿರ್ಮಾನಿ ಉದ್ಘಾಟಿಸಿದರು. ‘ಆಟದ ಮೇಲೆ ಗಮನವಿಟ್ಟು ಪದಕ ಗೆಲ್ಲುವತ್ತ ಚಿತ್ತ ಹರಿಸಿರಿ’ ಎಂದು ಕರೆ ನೀಡಿದ ಕಿರ್ಮಾನಿ ಅವರು, ಅತ್ಯುತ್ತಮ ಪ್ರದರ್ಶನ ತೋರಿದರೆ ಖಂಡಿತವಾಗಿಯೂ ಕೀರ್ತಿ ಸಿಕ್ಕೇ ಸಿಗುತ್ತದೆ ಎಂದರು.



ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ನೈರುತ್ಯ ರೈಲ್ವೆಯ ಅಥ್ಲೀಟ್‌ಗಳಾದ ಪ್ರಮೀಳಾ ಅಯ್ಯಪ್ಪ, ಅರ್ಜುನ್, ಎಂ. ಎ. ಪ್ರಜೂಶಾ ಅವರು ಉಪಸ್ಥಿತರಿದ್ದರು.
ಸೆಪ್ಟೆಂಬರ್ 2 ಹಾಗೂ 3ರಂದು ರೈಲು ನಗರದಲ್ಲಿ ತಂಗಲಿದ್ದು, ಬಳಿಕ ಇದು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದೆ. ಜೂನ್ 24ರಂದು ದೆಹಲಿಯ ಸಫ್‌ದರ್‌ಜಂಗ್ ರೈಲು ನಿಲ್ದಾಣದಿಂದ ಹೊರಟ ರೈಲು, ವಿವಿಧ ರಾಜ್ಯಗಳ ಪ್ರಮುಖ ನಗರಗಳ ಮೂಲಕ ಸಾಗಿ ಬೆಂಗಳೂರಿಗೆ ಆಗಮಿಸಿತು.
ರೈಲಿನಲ್ಲಿ ಕಾಮನ್‌ವೆಲ್ತ್ ಕ್ರೀಡಾ ಕೂಟ ನಡೆಯುವ ಕ್ರೀಡಾಂಗಣಗಳು, ವೇಳಾಪಟ್ಟಿ, ಕ್ರೀಡಾಪಟುಗಳು ಹಾಗೂ ಕ್ರೀಡೆಗೆ ಭಾರತೀಯ ರೈಲು ನೀಡಿರುವ ಕೊಡುಗೆ ಸೇರಿದಂತೆ ಅನೇಕ ಮಾಹಿತಿ ಇವೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|