ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ |
ಪ್ರಕಟಿಸಿದ ದಿನಾಂಕ : 2010-09-03
ಸಾಂಸ್ಕೃತಿಕ ನಗರ ಮೈಸೂರಿನಿಂದ ಮಧ್ಯಾಹ್ನ ಆಗಮಿಸಿದ ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬೇಟನ್ಗೆ ಅದ್ದೂರಿ ಸ್ವಾಗತ ಸಿಕ್ಕಿತು.
ಬೆಂಗಳೂರು: ಸಾಂಸ್ಕೃತಿಕ ನಗರ ಮೈಸೂರಿನಿಂದ ಮಧ್ಯಾಹ್ನ ಆಗಮಿಸಿದ ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ‘ಕ್ವೀನ್ಸ್ ಬೇಟನ್’ಗೆ ಅದ್ದೂರಿ ಸ್ವಾಗತ ಸಿಕ್ಕಿತು. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಂದ ಆಗಮಿಸಿದ ಜಾನಪದ ಕಲಾವಿದರು, ಬೇಟನ್ ಸ್ವಾಗತ ಕಾರ್ಯಕ್ರಮಕ್ಕೆ ಕಳೆಕಟ್ಟಿದರು.
ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೇಟನ್ ರಿಲೆಗೆ ಎರಡನೇ ದಿನವೂ ಅದ್ದೂರಿ ಸ್ವಾಗತಿ ಸಿಕ್ಕಿತು. ಬೆಳಿಗ್ಗೆ ಮೈಸೂರಿನಿಂದ ಹೊರಟ ಓಟ ಬೇಟನ್‌ಗೆ ಸ್ವಾಗತ ನೀಡಲು ದಾರಿಯುದ್ದಕ್ಕೂ ದೊಡ್ಡ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು.
ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ಸಂಜೆ 4-10ಕ್ಕೆ ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ.ಡಿ.ಶೇಖರ್ ಮೂಲಕ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ- ಹಿರಿಯ ಅಥ್ಲೀಟ್ ಕೆನೆತ್ ಪೋವೆಲ್ ಅವರಿಗೆ ಬೇಟನ್ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಬಣ್ಣಬಣ್ಣದ ಬಲೂನ್‌ಗಳು ಹಾಗೂ ಸಿಡಿಮದ್ದು ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ಬಳಿಕ ರಿಲೆ ಓಟದಲ್ಲಿ ಒಬ್ಬರಾದ ನಂತರ ಒಬ್ಬರಂತೆ ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ಗಣ್ಯರು ಪಾಲ್ಗೊಂಡು ನಗರ ಪ್ರದಕ್ಷಿಣ ಹಾಕಿದರು.




ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಎಂ.ಪಿ.ಗಣೇಶ್, ಎ.ಬಿ.ಸುಬ್ಬಯ್ಯ, ಆಶೀಶ್ ಬಲ್ಲಾಳ್, ನಿಷಾ ಮಿಲ್ಲೆಟ್, ಸಹನಾ ಕುಮಾರಿ, ಬಿ.ಸಿ.ರಮೇಶ್, ದಿಲೀಪ್, ರಾಜನ್, ಪೂಜಾ ಆಳ್ವಾ, ಎಸ್.ಡಿ.ಈಶನ್, ಜಯವಂತಿ, ನಂದಿನಿ ಬಸಪ್ಪ, ಷಣ್ಮುಗಂ, ಪ್ಯಾರಾಲಿಂಪಿಕ್ ಕ್ರೀಡಾಪಟುಗಳಾದ ಮಹಾದೇವ್, ರಮೇಶ್ ಟೀಕಾರಾಂ, ಕಲ್ಲೇ ಗೌಡ ಹಾಗೂ ಪದ್ಮಶ್ರೀ ಪುರಸ್ಕೃತೆ ಮಾಲತಿ ಹೊಳ್ಳ ಅವರು ಪಾಲ್ಗೊಂಡು ಬೇಟನ್ ರಿಲೆ ಮತ್ತಷ್ಟು ರಂಗು ಬರುವಂತೆ ಮಾಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾದ ಓಟ, ರಾಜರಾಮ್ ಮೋಹನ್ ರಾಯ್ ರಸ್ತೆ ಮೂಲಕ ಕಾರ್ಪೋರೇಷನ್, ಮಿಷನ್ ರಸ್ತೆ, ಲಾಲ್‌ಬಾಗ್ ಮುಖ್ಯರಸ್ತೆ, ಲಾಲ್‌ಬಾಗ್‌ನಲ್ಲಿ ಸಾಗಿತಲ್ಲದೆ, ಡಬಲ್ ರಸ್ತೆ ಮೂಲಕ ರಿಚ್ಮಂಡ್ ವೃತ್ತಕ್ಕೆ ಆಗಮಿಸಿ ಅಲ್ಲಿಂದ ಮುಂದೆ ರಾಜಾರಾಮ್ ಮೋಹನ್ ರಾಯ್ ರಸ್ತೆಯಿಂದ ಕಸ್ತೂರಬಾ ರಸ್ತೆ ಪ್ರವೇಶಿಸಿ ಅಲ್ಲಿಂದ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲಕ ಜಿಪಿಒ ಹತ್ತಿರ ಎಡತಿರುವು ಪಡೆಯಿತು. ಅಲ್ಲಿಂದ ಡಾ. ಅಂಬೇಡ್ಕರ್ ವೀಧಿ ಮೂಲಕ ಕಬ್ಬನ್ ಪಾರ್ಕ್ ಪ್ರವೇಶಿಸಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಕ್ತಾಯವಾಯಿತು. ಅಂಚೆ ಇಲಾಖೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಸಿದ್ದಪಡಿಸಲಾದ 10 ಹಾಗೂ 25 ರೂಪಾಯಿಯ ಲಕೋಟೆಯನ್ನು ಕರ್ನಾಟಕ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಯಶೋಧರಾ ಮೆನನ್ ಬಿಡುಗಡೆ ಮಾಡಿದರು.
ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬೇಟನ್ ರಿಲೇ ಪ್ರಯುಕ್ತ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಸರ್ಕಾರ ಏರ್ಪಡಿಸಿದ್ದ ಔತಣಕೂಟದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಂಡಿದ್ದರು. ಅವರು ಮಧ್ಯಾಹ್ನ ಜರುಗಿದ ಬೇಟನ್ ರಿಲೇ ಬಗ್ಗೆ ಖುಷಿ ವ್ಯಕ್ತಪಡಿಸಿದರು.
ಬೇಟನ್ ರಿಲೆ ಓಟದ ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, ನಿರ್ದೇಶಕ ಶಿವನಂಜಯ್ಯ, ಕೆಒಎ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜು ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ರಸದೌತಣ: ಬೇಟನ್ ರಿಲೆ ಒಂದೆಡೆ ನಡೆಯುತ್ತಿದ್ದರೆ, ಕ್ರೀಡಾಭಿಮಾನಿಗಳ ಮನಸೂರೆಗೊಳ್ಳುವುದಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಜಾನಪದ ಕಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವೀರಗಾಸೆ, ಪೂಜಾ ಕುಣಿತ, ಬೀಸು ಕಂಸಾಳೆ, ಡೊಳ್ಳು ಕುಣಿತ ಹಾಗೂ ಸೋಮನ ಕುಣಿತದ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
1966ರಲ್ಲಿ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದ ಬ್ರಿಟಿಷ್ ಎಂಪೈರ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕೆನೆತ್ ಪೋವೆಲ್, ‘ನನ್ನ ಕ್ರೀಡಾ ಜೀವನದ ದಿನಗಳು ಪುನಃ ನೆನಪಿಗೆ ಬಂದವು, ಅಂದಿನ ಕೂಟದಲ್ಲಿ ನಾನು ಭಾರತ ತಂಡದ ಧ್ವಜಧಾರಿಯಾಗಿದ್ದರ ಜೊತೆಯಲ್ಲಿ ನಾಯಕ ಕೂಡ ಆಗಿದ್ದೆ’ ಎಂದರು.
ಈ ನಡುವೆ ರಿಲೆ ಓಟ ಒಮ್ಮೆಗೆ ವಿಧಾನಸೌಧದ ಒಳಗೆ ನುಗ್ಗಿದಾಗ ಎಲ್ಲರೂ ಅಚ್ಚರಿಯಿಂದ ನೋಡಿದರು. ಆದರೆ ರಿಲೆ ಓಟ ಐತಿಹಾಸಿಕ ವಿಧಾನಸೌಧದಲ್ಲಿದ್ದಾಗ ಎಲ್ಲರೂ ನಾಮುಂದು ತಾ ಮುಂದು ಎಂದು ಚಿತ್ರ ತೆಗೆಸಿಕೊಳ್ಳುವುದಕ್ಕೆ ಮುಂದಾದರು. ವಿಧಾನಸೌಧದಲ್ಲಿ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಬೇಟನ್‌ಗೆ ಸ್ವಾಗತ ಕೋರಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|