ವೈದ್ಯಕೀಯ ಕಾಲೇಜು ನೇಮಕಾತಿಯಲ್ಲಿ ಅವ್ಯವಹಾರ: ವೈದ್ಯಕೀಯ ಸಚಿವರ ಪುತ್ರ ಸಹಿತ ಹಲವರು ಭಾಗಿ |
ಪ್ರಕಟಿಸಿದ ದಿನಾಂಕ : 2010-09-03
♦ ರಾಮಚಂದ್ರ ಗೌಡರ ವಜಾಕ್ಕೆ ರೇವಣ್ಣ ಆಗ್ರಹ ♦ ಸಿಡಿ ಇನ್ನಿತರ ದಾಖಲೆ ಬಹಿರಂಗ ♦ ನ್ಯಾಯಾಂಗ ತನಿಖೆಗೆ ಒತ್ತಾಯ
ಬೆಂಗಳೂರು, ಸೆ.2: ಬಿಜೆಪಿ ಸರಕಾರದ ವಿರುದ್ಧ ರಣಕಹಳೆ ಮೊಳಗಿಸಿರುವ ಪ್ರತಿಪಕ್ಷಗಳು, ಮೇಲಿಂದ ಮೇಲೆಗೆ ಗಂಭೀರ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದು, ನಿನ್ನೆ ಅಕ್ರಮ ಗಣಿಗಾರಿಕೆಯ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹಾಗೂ ಕೆ.ಸಿ.ಕೊಂಡಯ್ಯ ಆರೋಪ ಮಾಡಿದ್ದರೆ, ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ರೇವಣ್ಣ, ಹಾಸನದ ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಾಂಬ್‌ಒಂದನ್ನು ಸಿಡಿಸಿದ್ದಾರೆ.
ಹಾಸನದ ವೈದ್ಯಕೀಯ ಕಾಲೇಜು ನೇಮಕಾತಿ ಹಗರಣದ ರಹಸ್ಯವನ್ನು ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಮುಂದೆ ಬಿಚ್ಚಿಟ್ಟ ರೇವಣ್ಣ, ನೇಮಕಾತಿಯಲ್ಲಿ ಹಣ ಕಳೆದುಕೊಂಡ ಅಭ್ಯರ್ಥಿಗಳ ಹೇಳಿಕೆಯನ್ನು ಬಹಿರಂಗಪಡಿಸಿದರು. ಅವ್ಯವಹಾರಕ್ಕೆ ಕಾರಣರಾಗಿರುವ ವೈದ್ಯಕೀಯ ಸಚಿವ ರಾಮಚಂದ್ರ ಗೌಡರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಿ, ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಮುಖ್ಯಮಂತ್ರಿಯನ್ನು ಅವರು ಆಗ್ರಹಿಸಿದರು.
ಇಂತಹ ದೊಡ್ಡ ಅವ್ಯವಹಾರದ ಕುರಿತು ಬಿಜೆಪಿಯವರೇ ಆಗಿರುವ ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಇದಕ್ಕೆ ತಮ್ಮ ಯಾವುದೇ ಅಭ್ಯಂತರ ವಿಲ್ಲ. ಸಚಿವ, ಶಾಸಕರು ಈ ಅವ್ಯವಹಾರದಲ್ಲಿ ಭಾಗಿಯಾಗಿರುವುದರಿಂದ ಲೋಕಾಯುಕ್ತ ತನಿಖೆಗೆ ಇದನ್ನು ನೀಡುವಂತಿಲ್ಲ. ಆದುದರಿಂದ ನ್ಯಾಯಾಂಗ ತನಿಖೆಗೆ ತಕ್ಷಣವೇ ಒಪ್ಪಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಬೇಕು ಎಂದು ರೇವಣ್ಣ ಒತ್ತಾಯಿಸಿದರು.
ದಾಖಲೆ ಬಹಿರಂಗ
ನೇಮಕಾತಿ ಸಂಬಂಧ ಉದ್ಯೋಗಾಕಾಂಕ್ಷಿಗಳು ಕಾಲೇಜಿಗೆ ಸಂಬಂಧಪಟ್ಟವರಿಗೆ ನೀಡಿದ ಹಣ, ಚೆಕ್ಕುಗಳು, ಪಡೆದ ಹಣವನ್ನು ಹಿಂದಿರುಗಿಸುತ್ತಿರುವ ವಿಡಿಯೊ, ಈ ಕುರಿತು ಮೊಬೈಲ್‌ನಲ್ಲಿ ನಡೆದ ಸಂಭಾಷಣೆಯ ದಾಖಲೆ ಸೇರಿದಂತೆ ಹಲವು ಮಹತ್ವದ ವಿವರಗಳನ್ನು ರೇವಣ್ಣ ಎಳೆಎಳೆಯಾಗಿ ಬಿಚ್ಚಿಟ್ಟ್ಟರು. ಅವ್ಯವಹಾರ ನಡೆದಿರುವುದಕ್ಕೆ ಎಲ್ಲ ರೀತಿಯ ದಾಖಲೆಗಳಿದ್ದರೂ, ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದ ಅವರು ಇಂತಹ ಅವ್ಯವಹಾರದಲ್ಲಿ ತಾನು ಸಹಿತ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಹಾಗೂ ಎಲ್ಲ ಮೆಡಿಕಲ್ ಕಾಲೇಜು ಗಳ ಅವ್ಯವಹಾರದ ಕುರಿತು ತನಿಖೆಗೆ ಸರಕಾರ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.
ವೈದ್ಯಕೀಯ ಸಚಿವರ ಪುತ್ರ, ಪ್ರಾಂಶುಪಾಲರು ಹಾಗೂ ಇತರರು ಭಾಗಿ
ಈ ನೇಮಕಾತಿ ಅವ್ಯವಹಾರದಲ್ಲಿ ಸಚಿವ ರಾಮಚಂದ್ರ ಗೌಡರ ಪುತ್ರ ಸಪ್ತಗಿರಿ ಗೌಡ ಕೂಡಾ ಭಾಗಿಯಾಗಿದ್ದು, ಅವರ ವಿರುದ್ಧ ದೂರು ಪಡೆಯಲು ಪೊಲೀಸರು ನಿರಾಕರಿಸಿದ್ದು, ಇಂತಹ ದೊಡ್ಡ ಹಗರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಸಂಚು ನಡೆದಿದೆ ಎಂದು ರೇವಣ್ಣ ಆರೋಪಿಸಿದರು. ಹಣ ನೀಡಿಯೂ ನೇಮಕಾತಿಯಾಗದವರು ಅವ್ಯ ವಹಾರದ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಸಚಿವ ರಾಮಚಂದ್ರ ಗೌಡರ ಪುತ್ರ ಸಪ್ತಗಿರಿ ಗೌಡರ ಹೆಸರಿತ್ತು.
ಇದನ್ನು ಗಮನಿಸಿದ ಯಡಿಯೂರಪ್ಪನವರ ಸಂಬಂಧಿ ಹಾಸನದ ಡಿವೈಎಸ್‌ಪಿ ಚನ್ನಬಸವ ಎಂಬವರು ಸಪ್ತಗಿರಿ ಗೌಡರ ಹೆಸರನ್ನು ತೆಗೆದುಹಾಕಿ, ಅನಂತರ ದೂರನ್ನು ದಾಖಲಿಸಿಕೊಂಡಿದ್ದಾರೆ ಎಂದು ಅವರು ದೂರಿದರು. ಅವ್ಯವಹಾರದ ಪ್ರಮುಖ ಪಾತ್ರಧಾರಿ ಗಳಲ್ಲೋರ್ವರಾದ ಕಾಲೇಜಿನ ಪ್ರಾಂಶುಪಾಲ, ನಿರ್ದೇಶಕ ಗಂಗಾಧರ್, ಅವರ ಆಪ್ತ ಸಹಾಯಕರಾದ ಅಶ್ವತ್ಥ್, ಅನಂತ, ರವಿ, ಗಿರಿ ಮತ್ತು ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ ಎಂಬವರು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ಕುರಿತು ದೂರು ಕೂಡಾ ನೀಡಲಾಗಿದೆ ಎಂದು ರೇವಣ್ಣ ಆರೋಪಿಸಿದರು.
ಮುಖ್ಯ ಕಾರ್ಯದರ್ಶಿಯ ವರದಿ ಮುಚ್ಚಿಹಾಕುವ ಷಡ್ಯಂತ್ರ
ಅವ್ಯವಹಾರ ನಡೆದಿರುವ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಗಳು ವರದಿ ನೀಡಿದ್ದರೂ, ಅದನ್ನು ಮುಚ್ಚಿ ಹಾಕುವ ಉದ್ದೇಶದಿಂದಲೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ತನಿಖೆ ನಡೆಸಲು ಸರಕಾರ ಮುಂದಾಗಿದೆ ಎಂದ ರೇವಣ್ಣ, ಮುಖ್ಯ ಕಾರ್ಯದರ್ಶಿ ಈಗಾಗಲೇ ನೀಡಿರುವ ಮೂರು ಪುಟಗಳ ವರದಿಯೇ ಎಲ್ಲವನ್ನೂ ಬಹಿರಂಗಪಡಿಸಿದ್ದು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ತನಿಖೆ ನಡೆಸಬೇಕಾಗಿರಲಿಲ್ಲ ಎಂದು ಸರಕಾರದ ವಿರುದ್ಧ ಗುಡುಗಿದರು.
ಉದ್ಯೋಗಾಕಾಂಕ್ಷಿಗಳಿಂದ ಒತ್ತಾಯ ಪೂರ್ವಕ ಅಫಿದಾವಿತ್
ವೈದ್ಯಕೀಯ ಕಾಲೇಜಿನ ನೇಮಕಾತಿ ಅವ್ಯವಹಾರ ಬಹಿರಂಗವಾಗುತ್ತಿದ್ದಂತೆಯೇ 300ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳ ಬಳಿ ಬೆದರಿಸಿ, ಸುಳ್ಳು ಅಫಿದಾವಿತ್ ಒಂದನ್ನು ಪಡೆಯಲಾಗುತ್ತಿದೆ. ಅದರಲ್ಲಿ ನೇಮಕಾತಿಗಾಗಿ ತಾವು ಯಾರಿಗೂ ಹಣ ನೀಡಿಲ್ಲ ಎಂದು ಒತ್ತಾಯ ಪೂರ್ವಕವಾಗಿ ಬರೆಸಿಕೊಳ್ಳಲಾಗಿದೆ ಎಂದು ರೇವಣ್ಣ ನುಡಿದರು.
ಅವ್ಯವಹಾರದಲ್ಲಿ ಭಾಗಿಯಾಗಿರುವ ಪ್ರಾಂಶುಪಾಲ ಗಂಗಾಧರ್, ಈ ಹಿಂದೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ತಾನು ಸೇವೆ ಸಲ್ಲಿಸಿದ್ದು, ಅಲ್ಲಿನ ಅನುಭವವಿದೆ ಎಂಬ ಸುಳ್ಳು ಪ್ರಮಾಣ ಪತ್ರ ನೀಡಿ, ಹಾಸನ ವೈದ್ಯಕೀಯ ಕಾಲೇಜಿಗೆ ಸೇರಿಕೊಂಡಿದ್ದಾರೆ. ಇವರಿಗೆ ಆಪ್ತರಾಗಿರುವ ಅನಂತ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತಿದ್ದು, ಆತನ ಪತ್ನಿಗೆ ರಾಯಚೂರು ವೈದ್ಯಕೀಯ ಕಾಲೇಜಿನಲ್ಲಿ, ಬಾಮೈದನಿಗೆ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾ ಭಾರತಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
| hassanmukha, mangalore/ksa | 2010-09-03 | | ಈ ವರದಿಗೆ ಪ್ರತಿಕ್ರಿಯೆ ನೀಡಿದರೆ ಕೋಮು ಬಣ್ಣ ಹಚ್ಚುವ ಜನರಿದ್ದಾರೆ. |
|