ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ |
ಪ್ರಕಟಿಸಿದ ದಿನಾಂಕ : 2010-09-03
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಸತತ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಗೊಳ್ಳುವುದು ಖಚಿತಗೊಂಡಿದೆ.
ಹೊಸದಿಲ್ಲಿ : ಪಕ್ಷಾಧ್ಯಕ್ಷ ಹುದ್ದೆಗೆ ಸೋನಿಯಾಗಾಂಧಿ ಅವರೊಬ್ಬರೇ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವರು ಸತತ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಗೊಳ್ಳುವುದು ಖಚಿತಗೊಂಡಿದೆ. ಹಾಗಿದ್ದರೂ ಈ ಸಂಬಂಧ ಶುಕ್ರವಾರ ಅಧಿಕೃತ ಘೋಷಣೆ ಹೊರಬೀಳಲಿದೆ.
ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನಡೆಯಬೇಕಿದ್ದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಗಡೆಯ ದಿನವಾಗಿತ್ತು. 63ರ ಹರೆಯದ ಸೋನಿಯಾಗಾಂಧಿ ಅವರ ಪರವಾಗಿ 55 ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ ಹೊರತಾಗಿ ಇತರ ಯಾರು ಕೂಡ ನಾಮಪತ್ರ ಸಲ್ಲಿಸಿರಲಿಲ್ಲ. ಸೋನಿಯಾ ಅವರ ಆಯ್ಕೆ ಸಂಬಂಧ ಅಧಿಕೃತ ಘೋಷಣೆ ಹಾಗೂ ಪ್ರಮಾಣ ಪತ್ರವನ್ನು ಶುಕ್ರವಾರ ಎಐಸಿಸಿ ಮುಖ್ಯ ಕಚೇರಿಯಲ್ಲಿ ನೀಡಲಾಗುವುದು ಎಂದು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರು ಗುರುವಾರ ಪ್ರಥಮವಾಗಿ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿ ಪಕ್ಷಾಧ್ಯಕ್ಷ ಹುದ್ದೆಗೆ ಸೋನಿಯಾ ಹೆಸರನ್ನು ಪ್ರಸ್ತಾಪಿಸಿದರು. ಬಳಿಕ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದಲ್ಲಿ ಸಂಪುಟ ಸಚಿವರು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನೊಳಗೊಂಡ ಪಕ್ಷದ ಖಜಾಂಚಿ ಮೋತಿಲಾಲ್ ವೋರಾ ನೇತೃತ್ವದ ಮತ್ತೂಂದು ತಂಡ ಈ ಹುದ್ದೆಗೆ ಸೋನಿಯಾ ಹೆಸರನ್ನು ಪ್ರಸ್ತಾಪಿಸಿ ನಾಮಪತ್ರ ಸಲ್ಲಿಸಿತು.
ಪಕ್ಷಾಧ್ಯಕ್ಷ ಹುದ್ದೆಗೆ ಸೋನಿಯಾ ಗಾಂಧಿ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದ ಬಳಿಕ ಪಕ್ಷದ ಕಾರ್ಯಕಾರಿ ಸಮಿತಿ ವಿಸರ್ಜನೆಗೊಳ್ಳಲಿದೆ ಎಂದು ಫೆರ್ನಾಂಡಿಸ್ ತಿಳಿಸಿದರು.
ದಿಲ್ಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್, ರಾಜಸ್ಥಾನದ ಅಶೋಕ್ ಗೆಹೊಟ್, ಹರಿಯಾಣದ ಭೂಪಿಂದರ್ ಸಿಂಗ್ ಹೂಡಾ ಅವರು ಸೇರಿದಂತೆ ಪಕ್ಷದ ಮುಖ್ಯಮಂತ್ರಿಗಳು ಸಹ ಪಕ್ಷಾಧ್ಯಕ್ಷ ಹುದ್ದೆಗೆ ಸೋನಿಯಾ ಹೆಸರು ಪ್ರಸ್ತಾವನೆ ಮಾಡಿದರು. ಇದಕ್ಕೂ ಮುನ್ನ 10 ಜನಪಥ್‌ನಲ್ಲಿರುವ ಸೋನಿಯಾ ನಿವಾಸಕ್ಕೆ ತೆರಳಿದ ಸಿಂಗ್, ರಾಹುಲ್ ಹಾಗೂ ಮುಖರ್ಜಿ ಅವರು ಸೋನಿಯಾ ಅವರನ್ನು ಭೇಟಿಯಾಗಿ ಪಕ್ಷಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಸಂಬಂಧ ಅವರ ಒಪ್ಪಿಗೆ ಪಡೆದರು.
ಪಕ್ಷ ಅವನತಿಯ ಅಂಚಿಗೆ ತಲುಪಿದ್ದ ಸಂದರ್ಭ ಅದರ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಸೋನಿಯಾ ಅವರು ಪ್ರಸ್ತುತ ಕೇಂದ್ರದಲ್ಲಿ ಎರಡನೇ ಅವಧಿ ಗೆ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 1998ರಲ್ಲಿ ಸೀತಾರಾಂ ಕೇಸರಿ ಅವರ ಉತ್ತರಾಧಿಕಾರಿಯಾಗಿ ಸೋನಿಯಾ ಅವರು ಪಕ್ಷದ ಚುಕ್ಕಾಣಿ ಹಿಡಿದಿದ್ದರು.
ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ

ಪಕ್ಷದ ಅಧ್ಯಕ್ಷ ಹುದ್ದೆಯನ್ನು ಗಾಂಧಿ ಕುಟುಂಬದ ಹೊರಗಿನವರಿಗೆ ಕೊಡುಗೆಯಾಗಿ ನೀಡಬೇಕು ಎಂದು ಬಿಜೆಪಿ ಹೇಳಿದೆ.
ಹೊಸದಿಲ್ಲಿ : ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಯನ್ನು 'ತ್ಯಾಗ' ಮಾಡಿದಂತೆ, ಪಕ್ಷದ ಅಧ್ಯಕ್ಷ ಹುದ್ದೆಯನ್ನು ಗಾಂಧಿ ಕುಟುಂಬದ ಹೊರಗಿನವರಿಗೆ ಕೊಡುಗೆಯಾಗಿ ನೀಡಬೇಕು ಎಂದು ಬಿಜೆಪಿ ಹೇಳಿದೆ. ಸೋನಿಯಾ ಅವರು ಸತತ ನಾಲ್ಕನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೇರಲಿದ್ದಾರೆ.
'ಸೋನಿಯಾ ಗಾಂಧಿಯವರು ನಾಲ್ಕನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ಇದಕ್ಕೆ ಯಾವುದೇ ವಿರೋಧವಿರುವುದಿಲ್ಲ. ಕಾಂಗ್ರೆಸ್ ಸಂವಿಧಾನದ ಪ್ರಕಾರ, ಯಾವುದೇ ಪದಾಧಿ ಕಾರಿ ಎರಡು ಅವಧಿ ಗಿಂತ ಹೆಚ್ಚು ಸಲ ಯಾವುದೇ ಬ್ಲಾಕ್, ಜಿಲ್ಲೆ ಅಥವಾ ರಾಜ್ಯ ಘಟಕದ ಅಧ್ಯಕ್ಷನಾಗುವಂತಿಲ್ಲ' ಎಂದು ಬಿಜೆಪಿ ಮುಖ್ಯ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದರು.
ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆದ ಬಳಿಕ ಸೋನಿಯಾ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವರೆಂದು ಘೋಷಿಸುವ ನಿರೀಕ್ಷೆಯಿದೆ.
'ಕಾಂಗ್ರೆಸ್ ಒಂದು ಪ್ರಜಾತಾಂತ್ರಿಕ ಪಕ್ಷವಾಗಿದ್ದರೆ- ಅವರು ಹಾಗೆಂದು ಪ್ರತಿಪಾದಿಸಿಕೊಳ್ಳುತ್ತಾರೆ- ಅವರದೇ ಸಂವಿಧಾನದ ಸೂ–ರ್ತಿಯಲ್ಲಿ ಅಂಥದೇ ನಿಷೇಧವನ್ನು ತಮ್ಮ ರಾಷ್ಟ್ರೀಯ ಅಧ್ಯಕ್ಷರಿಗೂ ಅನ್ವಯಿಸುವುದಕ್ಕೆ ಇದು ಅತ್ಯಂತ ಸೂಕ್ತ ಕಾಲ' ಎಂದು ಪ್ರಸಾದ್ ತಿಳಿಸಿದರು.
ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸುವ ಅರ್ಹತೆಯುಳ್ಳ ಹಲವು ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಹೊರಗೆ ಸಿಗುವರು ಎನ್ನುವುದು ಬಿಜೆಪಿ ನಂಬಿಕೆಯಾಗಿದೆ ಎಂದವರು ಹೇಳಿದರು.
'ಸೋನಿಯಾ ನಾಲ್ಕೇಕೆ, 40 ಸಲವೂ ಅಧ್ಯಕ್ಷರಾಗಬಲ್ಲರು'
ಹೊಸದಿಲ್ಲಿ, ಸೆ. 2: ಸೋನಿಯಾ ಗಾಂಧಿಯವರು ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದಂತೆ, ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನೂ ತ್ಯಾಗ ಮಾಡಬೇಕೆಂಬ ಬಿಜೆಪಿ ಸಲಹೆಗೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ ಹಾಗೂ ಅವರು 40 ಬಾರಿಯೂ ಕಾಂಗ್ರೆಸ್ ಅಧ್ಯಕ್ಷರಾಗಬಲ್ಲರು ಎಂದಿದೆ.
'ನಾವು ಇತರ ಪಕ್ಷದ ಸಂವಿಧಾನದ ಕುರಿತು ಚರ್ಚಿಸುವುದಿಲ್ಲ. ನಾಲ್ಕು ಬಾರಿ ಸೋನಿಯಾ ಗಾಂಧಿ ಅಧ್ಯಕ್ಷರಾಗುವ ಮಾತಂತಿರಲಿ, ಪಕ್ಷ ಬಯಸಿದರೆ ಅವರು 40 ಬಾರಿಯೂ ಅಧ್ಯಕ್ಷರಾಗಬಲ್ಲರು' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ.
ತನ್ನ ಅಧ್ಯಕ್ಷರನ್ನು ಚುನಾಯಿಸುವ ವೇಳೆ ಕಾಂಗ್ರೆಸ್ ತನ್ನ ಸಂವಿಧಾನವನ್ನು ಪಾಲಿಸುತ್ತಿದೆ ಎಂದು ಪಕ್ಷದ ಕೇಂದ್ರಿಯ ಚುನಾವಣಾ ಪ್ರಾಧಿ ಕಾರದ ಅಧ್ಯಕ್ಷ ಆಸ್ಕರ್ ಫೆರ್ನಾಂಡಿಸ್ ಪ್ರತಿಪಾದಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಓರ್ವ ನಾಯಕ ಎರಡು ಅವಧಿ ಗೆ ಪಿಸಿಸಿ ಅಧ್ಯಕ್ಷನಾಗಬಹುದು, ಅದಕ್ಕಿಂತ ಹೆಚ್ಚು ಸಾಧ್ಯವಿಲ್ಲ. ಆದರೆ ಅದು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಅನ್ವಯಿಸುವುದಿಲ್ಲವೆಂದು ಅವರು ಹೇಳಿದ್ದಾರೆ
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|