ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....! |
ಪ್ರಕಟಿಸಿದ ದಿನಾಂಕ : 2010-09-03
(ವಿಶೇಷ ಸ೦ದರ್ಶನ: ಜಯಪ್ರಕಾಶ್ ಕಿಣಿ, ಉಡುಪಿ)
ಮಣಿಪಾಲ:ಸೆ,2.ಬಡತನ, ಅಂಗವೈಕಲ್ಯತೆ ಹೊಂದಿರುವ ಅದರಲ್ಲೂ ಬುದ್ಧಿಮಾಂದ್ಯ ಮಕ್ಕಳೆಂದರೆ ದೂರ ತಳ್ಳುವ ದೇಶೀಯರಿಗೆ ವಿದೇಶೀ ಯುವತಿಯೊಬ್ಬಳು ಮಾದರಿ ಯಾಗಿದ್ದಾಳೆ.ಆಕೆ ಭಾರತೀಯ ಬಡ ವಿಶೇಷ ಮಕ್ಕಳ ಆರೈಕೆಗಾಗಿ ವಿದೇಶ ದಲ್ಲಿರುವ ತನ್ನಾಸ್ತಿಯನ್ನು ತೊರೆದ ಬಂದವಳಾಗಿದ್ದಾಳೆ..!
ಹಾಲೆಂಡ್‌ನ ಆಮ್‌ಸ್ಟರ್ಡನ್‌ನ ನಿವಾಸಿಯಾಗಿರುವ ಮಾರ್ತೇಜೇ(33) ಎಂಬಾಕೆಯೇ ಉಡುಪಿ ಜಿಲ್ಲೆಯ ಕುಂದಾಪುರದ ಜಪ್ತಿಯಲ್ಲಿರುವ ಮಾನಸ ವಿಶೇಷ ಮಕ್ಕಳ ವಸತಿ ಶಾಲೆಯ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡ ಯುವತಿ. ಈಕೆ ಕಳೆದ ಮೂರು ವರ್ಷಗಳ ಹಿಂದೆ (ಆ.15.2007) ಎನ್‌ಜಿಓ ಸಂಸ್ಥೆಯಾದ ಎಫ್‌ಎಸ್‌ಎಲ್ ಮೂಲಕ ಕುಂದಾಪುರದ ವಿಶೇಷ ಮಕ್ಕಳ ವಸತಿ ಶಾಲೆಗೆ ಹಾಲೆಂಡ್‌ನಿಂದ ಕುಂದಾಪುರಕ್ಕೆ ವೀಕ್ಷಣೆಗಾಗಿ ಬಂದಿದ್ದಳು. ಇಲ್ಲಿನ ಮಕ್ಕಳ ಬಡತನ, ಬುದ್ಧಿಮಾಂದ್ಯತೆ, ಅಂಗವೈಕಲ್ಯತೆಯನ್ನು ಕಂಡು ಮರುಗಿ ಹೋದ ಮಾರ್ತೇಜೇ ಮತ್ತೆ ವಿದೇಶಕ್ಕೆ ತೆರಳುವ ಕನಸೇ ಕಂಡಿಲ್ಲ. ನಾನಿನ್ನು ತನ್ನ ದೇಶಕ್ಕೆ ಹೋಗಲಾರೆ. ಇಲ್ಲಿನ ಮಕ್ಕಳ ಮುಗ್ದತೆ-ಪ್ರೀತಿ-ಮಮತೆಯಿಂದ ತಾನು ನೆಮ್ಮದಿ ಕಾಣು ತ್ತಿದ್ದೇನೆ. ಈ ಮಕ್ಕಳ ಆರೈಕೆಯೇ ನನಗೆ ತುಂಬಾ ಮಾನಸಿಕ ಸಂತೋಷ ನೀಡುತ್ತಿದೆ ಎನ್ನುತ್ತಾಳೆ ಮಾರ್ತೇಜೇ.

ಎಲ್ಲವನ್ನೂ ತೊರೆದವಳಿವಳು..! : ಭಾರತೀಯ ಬಡ ವಿಶೇಷ ಮಕ್ಕಳ ಆರೈಕೆಗಾಗಿ ತನ್ನೂರಾದ ಹಾಲೆಂಡ್‌ನಲ್ಲಿ ತನಗಾಗಿ ಇದ್ದ ಎಲ್ಲಾ ಆಸ್ತಿಯನ್ನು ಮಾರ್ತೇಜೇ ತೊರೆದಿದ್ದಾಳೆ. ಮೂವತ್ತಮೂರರ ಹರೆಯದ ಈಕೆ ತನ್ನ 24ನೇ ವಯಸ್ಸಿನಲ್ಲಿ ನಾಲ್ಕು ವರ್ಷಗಳ ಫಿಸಿಯೋಥೆರಾಪಿ ಪದವಿಯನ್ನು ಹಾಲೆಂಡ್‌ನಲ್ಲಿ ಪೂರ್ತಿಗೊಳಿಸಿದ್ದಳು. ಆ ಬಳಿಕ ಇಂಡೋನೇಷ್ಯಾಕ್ಕೆ ತೆರಳಿದ ಈಕೆ ಅಲ್ಲಿನ ಸ್ಲಮ್ ಏರಿಯಾದ ಅಂಗವೈಕಲ್ಯತೆ ಹೊಂದಿದ್ದ ಮಕ್ಕಳ ಜೊತೆ ಒಂದು ವರ್ಷ ಕಳೆದಿದ್ದಳು. ಆ ಬಳಿಕ ತನ್ನೂರಿಗೆ ಮರಳಿದ ಮಾರ್ತೇಜೇ,ಅಲ್ಲಿನ ನೂರಾರು ವಿಶೇಷ ಮಕ್ಕಳಿಗೆ ಫಿಸಿಯೋತೆರಾಪಿ ಕೌನ್ಸೆಲ್ಲಿಂಗ್ ಹಾಗೂ ಶಿಕ್ಷಣ ನೀಡುತ್ತಿದ್ದಳು. ಉತ್ತಮ ವೇತನವೂ ಇವಳಿಗಿತ್ತು. ಆ ಬಳಿಕ 2007ರಲ್ಲಿ ಸರಕಾರೇತರ ಸಂಸ್ಥೆಯ ಮೂಲಕ ಇಂಡಿಯಾಕ್ಕೆ ಬಂದ ಮಾರ್ತೇಜ್, ಇಲ್ಲಿನ ಮಕ್ಕಳೊಂದಿಗೆ ಬೆರೆತು ಹೋಗಿದ್ದಳು.
ಹಾಲೆಂಡ್‌ನಲ್ಲಿ ಉತ್ತಮ ವೇತನದ ಕೆಲಸದಲ್ಲಿದ್ದ ಈಕೆಗೆ ಸ್ವಂತಕ್ಕೆಂದು ಒಂದು ಫ್ಲ್ಯಾಟ್, ಕಾರು ಎಲ್ಲವೂ ಇತ್ತು. ಭಾರತಕ್ಕೆ ಬಂದು ಇಲ್ಲಿನ ಸಂಸ್ಕೃತಿ, ಮಕ್ಕಳ ಬಡತನದ ಬೇಗೆ ಇವೆಲ್ಲವನ್ನು ಹತ್ತಿರದಿಂದ ಕಂಡ ಮಾರ್ತೇಜೇ ಮರುಗಿ ಹೋದಳು. ಅಲ್ಲಿದ್ದ ತನ್ನ ಆಸ್ತಿಯನ್ನು ಹೆತ್ತವರ ವಶಕ್ಕೆ ಒಪ್ಪಿಸಿ ಭಾರತ ಮಣ್ಣಿಗೆ ಮನಸೋತು ಹೋದಳು.

ಹೆತ್ತವರ ಪ್ರೇರಣೆ :- ಮಾರ್ತೇಜೆಳ ತಂದೆ ಜಾನ್ ಜೇವ್ ಸುಪರಿಂಟೆಂಡ್ ಆಗಿ ರಿಟೈರ್ಮೆಂಟ್ ಹೊಂದಿದ್ದರು.ಬಳಿಕ 10ವರ್ಷಗಳ ಕಾಲ ಯೂನಿಸೆಫ್ ಇನ್ನಿತರ ಸಮಾಜಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ತಾಯಿ ಬಿರ್ಜಿತ್ತೇ ಕೂಡಾ ಸಮಾಜಸೇವಕಿಯಾಗಿದ್ದಳು.ಅಲ್ಲಿನ ಕ್ಯಾನ್ಸರ್ ರೋಗಿಗಳಿಗೆ ಕೌನ್ಸೆಲ್ಲಿಂಗ್ ಹಾಗೂ ಯೋಗ ತರಬೇತಿಯನ್ನು ನಿರಂತರವಾಗಿ ನೀಡುತ್ತಿದ್ದಳು.ಇವರ ಸಾಮಾಜಿಕ ಸೇವೆಯನ್ನು ಕಂಡ ಮಾರ್ತೇಜೆ ಕೂಡಾ ತಾನೂ ಸಮಾಜ ಸೇವಕಿ ಯಾಗಬೇಕೆಂಬ ಕನಸು ಹೊತ್ತು ಭಾರತಕ್ಕೆ ಬಂದಿದ್ಳು.ತಂದೆ-ತಾಯಿಯ ಸಾಮಾಜಿಕ ಕಾಳಜಿಯ ಪ್ರೇರಣೆಯೆ ನನಗೆ ಬಡ ಮಕ್ಕಳ ಆರೈಕೆಗೆ ಸ್ಪೂರ್ತಿಯಾಯಿತು.ನನ್ನನ್ನು ನೋಡಬೇಕೆಂದಾಗ ನನ್ನ ಹೆತ್ತವರು ಕುಂದಾಪುರಕ್ಕೆ ಬಂದು ನೋಡಿ ಹೋಗು ತ್ತಾರೆ. ನನಗೆ ಮಕ್ಕಳನ್ನು ಬಿಟ್ಟು ಹೋಗಲಾಗುವುದಿಲ್ಲ ಎನ್ನುತ್ತಾಳೆ ಮಾರ್ತೇಜೇ.

ಈಕೆ ಕನ್ನಡ ಮಾತನಾಡಬಲ್ಲಳು: ಮಾರ್ತೇಜೆ ಕುಂದಾಪುರಕ್ಕೆ ಬಂದು 3ವರ್ಷ ಕಳೆಯಿತು. ಇಲ್ಲಿನ ಮಕ್ಕಳೊಂದಿಗೆ, ಸ್ಥಳೀಯರೊಂದಿಗೆ ಕನ್ನಡ ಮಾತನಾಡುತ್ತಾ ಸುಲಲಿತವಾಗಿ ಕನ್ನಡವನ್ನು ಈಕೆ ಕಲಿತುಕೊಂಡಿದ್ದಾಳೆ.
ಮಣಿಪಾಲದಲ್ಲಿ ಬುಧವಾರದ೦ದು ಮಣಿಪಾಲ ಮಹಿಳಾ ಸಮಾಜದ ವತಿಯಿ೦ದ ನಡೆಸಲಾದ ಪ್ರೇರಣಾ-2010 -ವಿಶೇಷ ಮಕ್ಕಳ ಶಿಕ್ಷಕರು-ಶಿಕ್ಷಕೇತರರಿಗಾಗಿ ನಡೆಸಲಾದ ಶಿಕ್ಷಕರ ದಿನಾಚರಣೆ ಸಮಾಜದಲ್ಲಿ ಸನ್ಮಾನವನ್ನು ಪಡೆದುಕೊ೦ಡು ಬಳಿಕ ಕನ್ನಡದಲ್ಲಿಯೇ ಮಾತನಾಡಿ ಅಲ್ಲಿ ಸೇರಿದ್ದ ಜನರನ್ನು ನಿಬ್ಬೆರಗುಗೊಳಿಸಿದ್ದಾಳೆ.
ಆಕೆಯ ಮಾತು... :ಇಲ್ಲಿನ ಮಕ್ಕಳ ಬಡತನ, ಅಪ್ಪ-ಅಮ್ಮ ಇಲ್ಲ. ಇದನ್ನೆಲ್ಲಾ ಕಂಡು ನನ್ನ ಮನಸ್ಸು ಕರಗಿ ಹೋಗಿದೆ. ಇಲ್ಲಿರುವ ಮಕ್ಕಳನ್ನು ಬಿಟ್ಟು ನಾನಿನ್ನು ಹಾಲೆಂಡ್‌ಗೆ ಹೋಗಲಾರೆ. ನನ್ನ ತಂದೆ-ತಾಯಿಯಂತೆಯೇ ತಾನು ಸಮಾಜಸೇವೆಗಾಗಿ ನನ್ನ ಜೀವನವನ್ನೇ ಮುಡಿಪಾಗಿಡುತ್ತೇನೆ. ನನಗೆ ನನ್ನ ತವರೂರ ಹಣದ ಆಸ್ತಿಗಿಂತ ಇಲ್ಲಿರುವ ಮಕ್ಕಳ ಆಸ್ತಿ ಬಲು ದೊಡ್ಡದು. ನಾನು ಆರೈಕೆ ಮಾಡುತ್ತಿರುವ ವಿಶೇಷ ಬಡ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದೊಂದೇ ನನ್ನ ಮುಂದಿರುವ ಗುರಿ ಎಂದ ಮಾರ್ತೇಜೆ,ಭಾರತದಲ್ಲಿ ನನಗೆ ಕೊನೆಯ ತನಕ ಇಲ್ಲಿಯೇ ಇರಲು ವೀಸಾ ನೀಡಿದಲ್ಲಿ ಭಾರತ ಬಿಟ್ಟು ಹೋಗಲಾರೆ.ಬಡ ಮಕ್ಕಳ ಪಾಲನೆಯಲ್ಲಿಯೇ ಜೀವನ ಸಾಗಿಸುವೆ ಎನ್ನುತ್ತಾಳೆ ಮಾರ್ತೇಜೇ.
ಕೊನೆಯದಾಗಿ ನೀವು ಮದುವೆಯಾಗುವಿರಾ..?ಎಂದು ಪ್ರಶ್ನಿಸಿದಾಗ..ಮದುವೆ ಹಣೆಬರಹದಲ್ಲಿರುವಂತೆ ಆಗುತ್ತದೆ. ಅಂತಹ ಕ್ಷಣ ಬಂದರೆ ಭಾರತೀಯ ಹುಡುಗನನ್ನೇ ಮದುವೆಯಾಗಿ ಇಲ್ಲೇ ಸೆಟ್ಲ್ ಆಗುತ್ತೇನೆ ಎನ್ನುತ್ತಾಳೆ ಮೂವತ್ತಮೂರರ ಹರೆಯದ ಮಾರ್ತೇಜೆ.
ವರದಿಯ ವಿವರಗಳು |
 |
ಕೃಪೆ : ವಿಶೇಷ ಸ೦ದರ್ಶನ: ಜಯಪ್ರಕಾಶ್ ಕಿಣಿ, ಉಡುಪಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|