ರವಿ ಪೂಜಾರಿ ಗ್ಯಾಂಗಿನ ಮೂವರ ಸೆರೆ |
ಪ್ರಕಟಿಸಿದ ದಿನಾಂಕ : 2010-09-03
ಮುಂಬಯಿ: ಇತ್ತೀಚೆಗೆ ಆಯಕೆ ಗ್ರೂಪ್‌ನ ಮಾಲಕ ಬಿಲ್ಡರ್ ಪ್ರವೀಣ್ ದೋಶಿಯ ಸೆಕ್ಯೂರಿಟಿ ಗಾರ್ಡ್ ಮೇಲೆ ಗುಂಡು ಹಾರಿಸಿ ಪಲಾಯನ ಮಾಡಿದ್ದ ರವಿ ಪೂಜಾರಿ ಗ್ಯಾಂಗಿನ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷವೆಂದರೆ ಈ ಮೂವರು ದುಷ್ಕರ್ಮಿಗಳು ಗ್ಯಾಂಗ್‌ಸ್ಟರ್‌ಗಳು ಮಾತ್ರವಲ್ಲ ದರೋಡೆಕೋರರೂ ಆಗಿದ್ದಾರೆ. ಕಳೆದ ವರ್ಷ ಅವರು ಮೀರಾ ರೋಡ್‌ನ ಜೈನ ಮಂದಿರದಿಂದ ಪಂಚಲೋಹದ ವಿಗ್ರಹವನ್ನು ಕದ್ದಿದ್ದರು. ರವಿ ಪೂಜಾರಿಗಾಗಿ ಪಶ್ಚಿಮ ಉಪನಗರದಲ್ಲಿ ಕಳೆದೆರಡು ತಿಂಗಳಲ್ಲಿ ಈ ದುಷ್ಕರ್ಮಿಗಳು ಹಲವು ಪಾತಕ ಕೃತ್ಯಗಳನ್ನು ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಮೂವರು ಸೆರೆಯಾಗುವುದರೊಂದಿಗೆ ರವಿ ಪೂಜಾರಿ ಗ್ಯಾಂಗಿನ ಬಗ್ಗೆ ಹಲವು ಮಹತ್ವದ ಮಾಹಿತಿಗಳು ಸಿಕ್ಕಿವೆ. ಕಳವಾಗಿದ್ದ ವಿಗ್ರಹವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಮಿತಾಭ್ ಗುಪ್ತ ತಿಳಿಸಿದ್ದಾರೆ.
ಬಿಲ್ಡರ್ ಪ್ರವೀಣ್ ದೋಶಿಯವರಿಂದ ಹಫಾ¤ ವಸೂಲು ಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ಕಳೆದ ವಾರ ಅವರ ಸೆಕ್ಯೂರಿಟಿಗಾರ್ಡ್ ಮೇಲೆ ಗುಂಡು ಹಾರಿಸಿದ್ದರು. ಸೆರೆಯಾಗಿರುವ ಆರೋಪಿಗಳು ಈ ಕೃತ್ಯ ತಮ್ಮದೆಂದು ಒಪ್ಪಿಕೊಳ್ಳದಿದ್ದರೂ ಅವರು ಇದರಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಸಿಕ್ಕಿವೆ ಎಂದು ಗುಪ್ತ ಹೇಳಿದ್ದಾರೆ.
ದೀಪಕ್ ಸಿಂಗ್ ಅಲಿಯಾಸ್ ಠಾಕೂರ್ ಅಲಿಯಾಸ್ ವಿಕ್ರಮ್, ವಿಕ್ಕಿ ದೇವಲ್ ಮತ್ತು ಕಿಶನ್ ಧನರಾಜ್ ಸೆರೆಯಾಗಿರುವ ಪಾತಕಿಗಳು. ಈ ಪೈಕಿ ದೀಪಕ್ ಸಿಂಗ್ ವಿರುದ್ಧ 15ಕ್ಕೂ ಹೆಚ್ಚು ಕೇಸುಗಳಿವೆ.
ಕಳೆದ ಮಂಗಳವಾರ ರಾತ್ರಿ ಕೆಲವು ದುಷ್ಕರ್ಮಿಗಳು ಜೋಗೇಶ್ವರಿಗೆ ಬರುವ ಕುರಿತು ಸುಳಿವು ಸಿಕ್ಕಿ ಮೇಘವಾಡಿಯ ಪೊಲೀಸರು ಅಲ್ಲಿ ಹೊಂಚು ಹಾಕಿದ್ದರು. ಅಲ್ಲಿಗೆ ಬಂದ ಇಬ್ಬರು ಪಾತಕಿಗಳು ಪೊಲೀಸರ ಬಲೆಗೆ ಬಿದ್ದರು. ಮೂರನೇ ಆರೋಪಿಯನ್ನು ನಂತರ ಬಂಧಿಸಲಾಯಿತು. ಅಶೋಕ್ ಚೌಧರಿ ಎಂಬಾತ ಈ ಗುಂಪಿನ ನಾಯಕನಾಗಿದ್ದು, ಅವನು ತಲೆಮರೆಸಿಕೊಂಡಿದ್ದಾನೆ.
ರವಿ ಪೂಜಾರಿ ಗ್ಯಾಂಗಿನ ಸದಸ್ಯರು ಚಿಕ್ಕಪುಟ್ಟ ರೌಡಿಗಳು, ಕಳ್ಳರು ಮತ್ತು ದರೋಡೆಕೋರರು. ಇಂತವರನ್ನು ಬಾಡಿಗೆ ಮೇಲೆ ನೇಮಿಸಿ ಪೂಜಾರಿ ಹಫ್ತಾ ವಸೂಲು ಮಾಡುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|