ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ |
ಪ್ರಕಟಿಸಿದ ದಿನಾಂಕ : 2010-09-03
ಕಾರೊಂದು ತುಂಗಭದ್ರಾ ಬಲದಂಡೆ ಕಾಲುವೆಗೆ ಬಿದ್ದ ಪರಿಣಾಮ ಐವರು ಜಲ ಸಮಾಧಿ ಆಗಿರುವ ದುರ್ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ಗುರುವಾರ ನಸುಕಿನಲ್ಲಿ ಸಂಭವಿಸಿದೆ.
ಬಳ್ಳಾರಿ: ಕಾರೊಂದು ತುಂಗಭದ್ರಾ ಬಲದಂಡೆ ಕಾಲುವೆಗೆ ಬಿದ್ದ ಪರಿಣಾಮ ಐವರು ಜಲ ಸಮಾಧಿ ಆಗಿರುವ ದುರ್ಘಟನೆ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗುರುವಾರ ನಸುಕಿನಲ್ಲಿ ಸಂಭವಿಸಿದೆ.
ಇತ್ತೀಚೆಗಷ್ಟೇ ಹೊಸ ಕಾರು ಖರೀದಿಸಿದ್ದ ಬಳ್ಳಾರಿಯ ಶ್ರೀನಗರ ನಿವಾಸಿ ಮಲ್ಲಿಕಾರ್ಜುನ ಎಂಬ ಆಟೋ ಚಾಲಕ ಕುಟುಂಬ ಸಹಿತ ಶಿರಡಿ ಸಾಯಿಬಾಬಾ ದರ್ಶನಕ್ಕೆಂದು ತೆರಳಿದ್ದರು. ವಾಪಸ್ ಬರುವಾಗ ಕಾರು ಕಾಲುವೆಗೆ ಬಿದ್ದು, ಅವರ ತಾಯಿ ಹಂಪಮ್ಮ (50), ಪತ್ನಿ ಮಧುಬಾಲ (25), ನಾದಿನಿ ಪುಷ್ಪಾ (27), ಮಕ್ಕಳಾದ ತ್ರಿಭುವನ್ (4) ಮತ್ತು ವರುಣ್ (9 ತಿಂಗಳು) ಮೃತಪಟ್ಟರು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗುರುವಾರ ಬೆಳಗಿನ ಜಾವ ಕಾಲುವೆಗೆ ಬಿದ್ದ ಕಾರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದರು.
ಮಲ್ಲಿಕಾರ್ಜುನ ಹಾಗೂ ಚಾಲಕ ಕೃಷ್ಣ (45) ಅದೃಷ್ಟವಶಾತ್ ಬದುಕಿ ಉಳಿದಿದ್ದಾರೆ. ಇವರು ಕಾರಿನ ಬಾಗಿಲು ಒದ್ದು ಹೊರ ಬಂದು ಕಾಲುವೆಯಿಂದ ಈಜಿ ಮೇಲೆ ಬಂದಿದ್ದಾರೆ.
ಹೊಸ ಇಂಡಿಕಾ ಕಾರು ಖರೀದಿಸಿದ್ದ ಮಲ್ಲಿಕಾರ್ಜುನ ತನ್ನ ಕುಟುಂಬ ಸಹಿತ ಮಂಗಳವಾರ ಬೆಳಿಗ್ಗೆ ಬಳ್ಳಾರಿಯಿಂದ ಶಿರಡಿಗೆ ತೆರಳಿ, ಬುಧವಾರ ಬೆಳಗಿನ ಜಾವ ಸಾಯಿಬಾಬಾ ದರ್ಶನ ಪಡೆದು, ಅಲ್ಲಿಂದ ಬೆಳಿಗ್ಗೆ 9ಕ್ಕೆ ಹೊರಟಿದ್ದರು.
ಗುರುವಾರ ಬೆಳಗಿನ ಜಾವ 2.45ರ ವೇಳೆಗೆ ಬಳ್ಳಾರಿ ಇನ್ನು ಕೆಲವೇ ಕಿಮೀ ಅಂತರದಲ್ಲಿರುವಾಗ ಈ ದುರ್ಘಟನೆ ಸಂಭವಿಸಿದೆ.
ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರನ್ನು ಕಾಲುವೆಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
‘ಶಿರಡಿಯಿಂದ ಬರುವಾಗ ನಾನು ಮತ್ತು ಕುಟುಂಬದವರು ಕಾರಿನಲ್ಲಿ ನಿದ್ದೆ ಮಾಡ್ತಾ ಇದ್ವಿ. ಇದ್ದಕ್ಕಿದ್ದಂತೆಯೇ ನನ್ನ ಹಣೆಗೆ ಪೆಟ್ಟಾದಂತಾಗಿ ಎಚ್ಚರವಾಯಿತು. ನೋಡನೋಡುತ್ತಿದ್ದಂತೆಯೇ ಕಾರು ನೀರಲ್ಲಿ ಮುಳುಗುತ್ತಿತ್ತು. ಅಪಾಯದ ಮುನ್ಸೂಚನೆ ಅರಿತು ಕಾರಿನ ಬಾಗಿಲು ಒದ್ದು ಹೊರಬಂದೆ. ನಾನು ಹೊರಗೆ ಜಿಗಿಯುತ್ತಿದ್ದಂತೆಯೇ ಕಾರು ನೀರಲ್ಲಿ ಸಂಪೂರ್ಣ ಮುಳುಗಿತು.
ನೀರು ರಭಸದಿಂದ ಹರಿಯುತ್ತಿತ್ತು. ಮೇಲಕ್ಕೆ ಬಂದು ರಸ್ತೆ ಮೇಲೆ ಹೊರಟಿದ್ದ ಕೆಲವು ವಾಹನಗಳನ್ನು ಸಹಾಯ ಕೋರಿ ನಿಲ್ಲಿಸಲು ಯತ್ನಿಸಿದೆ. ಆದರೆ, ಯಾವ ಲಾರಿಯೂ ನಿಲ್ಲಲಿಲ್ಲ. ಹೈದರಾಬಾದ್ ಕಡೆ ಹೋಗುತ್ತಿದ್ದ ಕಾರೊಂದು ನಿಂತಿತು. ಅದರ ಚಾಲಕ ಗಾದಿಗನೂರು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿಂದ ನನ್ನನ್ನು ತೋರಣಗಲ್ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಕಾರನ್ನು ಹೊರ ತೆಗೆದರು. ಕುಟುಂಬದ ಸದಸ್ಯರ ಶವಗಳು ಅದರಲ್ಲೇ ಇದ್ದವು ’ ಎಂದು ಮಲ್ಲಿಕಾರ್ಜುನ ತನ್ನನ್ನು ಭೇಟಿ ಮಾಡಿದ ಎದುರು ಕಣ್ಣೀರು ಸುರಿಸಿದರು.
ಕಾರು ಚಾಲಕ ಕೃಷ್ಣ ತಾನು ನೀರಿನಲ್ಲಿ ಈಜಿ ಪಾರಾಗಿದ್ದಾಗಿ ಸ್ನೇಹಿತರಿಗೆ ದೂರವಾಣಿಯಲ್ಲಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|