ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ |
ಪ್ರಕಟಿಸಿದ ದಿನಾಂಕ : 2010-09-02
ಸದಾ ಶಾಂತವಾಗಿದ್ದ ಅಭಯಾರಣ್ಯದಲ್ಲಿನ ಈ ಗಡಿ ಪ್ರದೇಶದಲ್ಲಿ ಗಗನ ಮುಟ್ಟಿದ ಕ್ರೀಡಾ ಕಲರವ.
ನವದೆಹಲಿಯಲ್ಲಿ ಅಕ್ಟೋಬರ್ 3ರಿಂದ 14ರವರೆಗೆ ನಡೆಯುವ 19ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ‘ಕ್ವೀನ್ಸ್ ಬೇಟನ್’ಗೆ ರಾಜ್ಯದ ಹೆಬ್ಬಾಗಿನಲ್ಲಿ ಅಭೂತಪೂರ್ವ ಸ್ವಾಗತ.
ಕಕ್ಕೆನಹಳ್ಳ ಚೆಕ್ ಪೋಸ್ಟ್(ಕರ್ನಾಟಕ-ತಮಿಳುನಾಡು ಗಡಿ): ಹಚ್ಚ ಹಸಿರು ಹೊದ್ದ ಬಂಡೀಪುರ ಬೆಟ್ಟಗಳ ತಪ್ಪಲಿನಲ್ಲಿ ಬುಧವಾರ ಹಬ್ಬದ ವಾತಾವರಣ, ಸದಾ ಶಾಂತವಾಗಿದ್ದ ಅಭಯಾರಣ್ಯದಲ್ಲಿನ ಈ ಗಡಿ ಪ್ರದೇಶದಲ್ಲಿ ಗಗನ ಮುಟ್ಟಿದ ಕ್ರೀಡಾ ಕಲರವ. ನವದೆಹಲಿಯಲ್ಲಿ ಅಕ್ಟೋಬರ್ 3ರಿಂದ 14ರವರೆಗೆ ನಡೆಯುವ 19ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ‘ಕ್ವೀನ್ಸ್ ಬೇಟನ್’ಗೆ ರಾಜ್ಯದ ಹೆಬ್ಬಾಗಿನಲ್ಲಿ ಅಭೂತಪೂರ್ವ ಸ್ವಾಗತ.
ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಬೇಟನ್ ರಿಲೆ ಸೆಪ್ಟೆಂಬರ್ 7ರತನಕ ರಾಜ್ಯದಲ್ಲಿದ್ದು, ಬಳಿಕ ಅದನ್ನು ಗೋವಾ ಒಲಿಂಪಿಕ್ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ. ಇದೀಗ ರಾಜ್ಯ ಪ್ರವೇಶಿಸಿರುವ ಬೇಟನ್ ಮೊದಲ ದಿನವನ್ನು ಮೈಸೂರಿನಲ್ಲಿ ಕಳೆದಿದ್ದು, ಗುರುವಾರ ಬೆಂಗಳೂರಿನಲ್ಲಿ ಸಂಚರಿಸಲಿದೆ.
ಸೆಪ್ಟೆಂಬರ್ 3ರಂದು ಬೆಂಗಳೂರಿನಲ್ಲಿ ಸಾರ್ವಜನಿಕರು ಬೇಟನ್‌ನೊಂದಿಗೆ ಛಾಯಚಿತ್ರ ತೆಗೆಯಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸೆ. 4ರಂದು ಹಾಸನದಲ್ಲಿ ತಂಗಲಿದೆ, ಸೆ. 5ರಂದು ಮಂಗಳೂರಿನಲ್ಲಿ ಸಂಚರಿಸಲಿದೆ.
ಸೆಪ್ಟೆಂಬರ್ 7ರಂದು ಗೋವಾ ಅಧಿಕಾರಿಗಳಿಗೆ ಹಸ್ತಾಂತರವಾಗುವ ಮೊದಲು ಬೇಟನ್ ಸೋಮವಾರ (ಸೆ.6)ದಂದು ಕಾರವಾರ ಜಿಲ್ಲೆ ಸಂಚರಿಸಲಿದೆ.





ಹಚ್ಚಹಸಿರಿನಿಂದ ಹೊದ್ದ ಬೆಟ್ಟಗಳ ಸೆರಗಿನಲ್ಲಿರುವ ಕಕ್ಕೆನಹಳ್ಳಿಯಲ್ಲಿ ಮಧ್ಯಾಹ್ನ 1-20ಕ್ಕೆ ಆಗಮಿಸಿದ ಬೇಟನ್ ಕರ್ನಾಟಕ ಪ್ರವೇಶಿಸುತ್ತಿದ್ದಂತೆ ಗುಲಾಬಿ ಬಣ್ಣದ ಸೀರೆತೊಟ್ಟ ಗುಂಡ್ಲುಪೇಟೆಯ ಬೆಥೆಲ್ ಕಮ್ಯೂನಿಟಿ ಕಾಲೇಜ್‌ನ ನರ್ಸಿಂಗ್ ವಿದ್ಯಾರ್ಥಿನಿಯರು ಪೂರ್ಣ ಕುಂಭ ಸ್ವಾಗತ ನೀಡಿ ರಾಜ್ಯಕ್ಕೆ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಬೇಟನ್ ಸ್ವಾಗತಕ್ಕಾಗಿ ಕ್ರೀಡಾ ಆಡಳಿತಗಾರರು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು.
ಬೇಟನ್ ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು ಪ್ರವೇಶಿಸುವಂತಹ ವಾಹನಗಳು ಸಾಲಾಗಿ ನಿಂತವಲ್ಲದೆ. ಬಸ್ಸು, ಕಾರು ಹಾಗೂ ಇತರೆ ವಾಹನಗಳಲ್ಲಿದ್ದಂತಹ ಜನರು ಇಳಿದು ಸಾಲಾಗಿ ನಿಂತು ಅದಕ್ಕೆ ಗೌರವ ಸೂಚಿಸುವುದರ ಜೊತೆಯಲ್ಲಿ ತಮ್ಮ ಕ್ರೀಡಾಭಿಮಾನವನ್ನು ಪ್ರದರ್ಶಿಸಿದರು.
ಬಳಿಕ ಹಂಗಳೆ, ಗುಂಡ್ಲುಪೇಟೆ, ಬೇಗೂರು, ಹಿರಿಕಟ್ಟಿ ಮೂಲಕ ನಂಜನಗೂಡಿನಲ್ಲಿ ಸಾಗಿದ ಬೇಟನ್‌ಗೆ ಸಿಕ್ಕ ಸ್ವಾಗತವಂತೂ ವರ್ಣನಾತೀತವಾಗಿತ್ತು. ಗ್ರಾಮಸ್ಥರು ಹಾರ-ತುರಾಯಿಗಳ ಜೊತೆಯಲ್ಲಿ ಮುಗಿಲುಮುಟ್ಟುವಂತೆ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿ ಬೇಟನ್‌ಗೆ ಸ್ವಾಗತ ಕೋರಿದರು. ಅಷ್ಟೇ ಅಲ್ಲ ಗುಂಡ್ಲುಪೇಟೆಯಲ್ಲಿ ಸುಮಾರು ಮೂರರಿಂದ ನಾಲ್ಕು ಸಾವಿರ ಮಕ್ಕಳು ದಾರಿಯುದ್ದಕ್ಕೂ ಕ್ರೀಡಾಕೂಟಕ್ಕೆ ಜೈಕಾರ ಹಾಕುತ್ತಾ ಭಾರತದ ತ್ರಿವರ್ಣ ಧ್ವಜಗಳನ್ನು ಬೀಸಿ ಬರಮಾಡಿಕೊಂಡರು. ಶಾಲಾ ಬ್ಯಾಂಡ್‌ಗಳು ಮಕ್ಕಳ ಕೇಕೆಗೆ ಪುಷ್ಠಿ ನೀಡಿ ಅಭಿಮಾನ ತಾರಕಕ್ಕೇರುವಂತೆ ಮಾಡಿತು.
ಬಳಿಕ ಮೈಸೂರಿನಲ್ಲಿ ಕ್ವೀನ್ಸ್ ಬೇಟನ್ ರಿಲೇ ಜರುಗಿತು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ಮೊದಲ ದಿನ ಬೇಟನ್‌ಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ, ಮುಂದಿನ ಆರೂ ದಿನಗಳ ಕಾಲ ರಾಜ್ಯದಲ್ಲಿ ಇದೇ ರೀತಿಯ ಸ್ವಾಗತ ಸಿಕ್ಕುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅದರಲ್ಲಿಯೂ ಚಾಮರಾಜನಗರ ಹಾಗೂ ಮೈಸೂರಿನ ಯುವಕರು ಮತ್ತು ಮಕ್ಕಳು ಕ್ರೀಡೆಯತ್ತ ಉತ್ಸಾಹದಾಯಕ ಆಸಕ್ತಿ ತೋರಿದ್ದಾರೆ, ಇದರಿಂದಾಗಿ ಭವಿಷ್ಯದಲ್ಲಿ ಉತ್ತಮ ಸಂಖ್ಯೆಯ ಕ್ರೀಡಾಪಟುಗಳು ಗ್ರಾಮಾಂತರ ಪ್ರದೇಶದಿಂದ ಮೂಡಿ ಬರುತ್ತಾರೆ ಎಂದು ಹೇಳಿದರು.
‘ಬೇಟನ್‌ಗೆ ಇಷ್ಟೊಂದು ಉತ್ಸಾಹದಾಯಕ ಸ್ವಾಗತವನ್ನು ಕಂಡು ಆನಂದವಾಗಿದೆ, ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಸ್ಥಳಗಳಲ್ಲಿಯೂ ಇದೇ ರೀತಿಯ ಪ್ರೋತ್ಸಾಹವನ್ನು ಎದುರು ನೋಡುತ್ತಿದ್ದೇನೆ, ಬೆಂಗಳೂರಿನಲ್ಲಿ ಗುರುವಾರ ನಡೆಯುವ ಕಾರ್ಯಕ್ರಮ ಸ್ಮರಣೀಯವಾಗಿಸುವುದಕ್ಕೆ ಕ್ರಮ ತೆಗೆದುಕೊಂಡಿರುವುದಾಗಿ’ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಗೂಳಿಹಟ್ಟಿ.ಡಿ.ಶೇಖರ್ ಅವರು ತಿಳಿಸಿದರು.
ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, ನಿರ್ದೇಶಕ ಶಿವನಂಜಯ್ಯ, ಚಾಮರಾಜನಗರ ಜಿಲ್ಲಾಧಿಕಾರಿ ಚಕ್ರವರ್ತಿ ಮೋಹನ್, ಜಿಲ್ಲಾ ರಕ್ಷಣಾಧಿಕಾರಿ ಬಿ.ಎಸ್. ಪ್ರಕಾಶ್ ಹಾಗೂ ಕೆಒಎ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ಜಿ. ಸುಭಾಷ್ ಚಂದ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00
|
|
|