ಹೋರಾಟಕ್ಕೆ ಸಿದ್ಧ ಲಾಲೂ ಯಾದವ್ |
ಪ್ರಕಟಿಸಿದ ದಿನಾಂಕ : 2010-09-01
ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲೂ ಪ್ರಸಾದ ಯಾದವ್ ಮತ್ತೆ ಹೋರಾಟಕ್ಕೆ ತೊಡೆ ತಟ್ಟಿ ಸಿದ್ಧವಾಗುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ, ಅವರ ಪಕ್ಷವಾದ ರಾಷ್ಟ್ರೀಯ ಜನತಾದಳಕ್ಕೆ ಅವರೇ ನಾಯಕರು, ಪ್ರಣಾಳಿಕೆ ಎಲ್ಲ.
ಇತರ ಪಕ್ಷಗಳ ಚುನಾವಣೆ ಸಿದ್ಧತೆಯ ಆರಂಭಕ್ಕೆ ಮುಂಚೆಯೇ, ಲಾಲೂ ಪ್ರಸಾದ ಯಾದವ್, ತಮ್ಮ ಒಂದು ಕಾಲದ ಮಿತ್ರ, ಅನಂತರದ ರಾಜಕೀಯ ವೈರಿ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ ಪಾಸ್ವಾನ್‌ರ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಚುನಾವಣೆ ಪ್ರಣಾಳಿಕೆ ಇನ್ನೂ ಸಿದ್ಧವಾಗಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ತಮ್ಮ ಕೂಟದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ನಾನೇ ಎಂದು ಪ್ರಕಟಿಸಿದ್ದಾಗಿದೆ. ಅದನ್ನು ಪ್ರಶ್ನಿಸುವವರು ಅವರ ಪಕ್ಷದಲ್ಲೂ ಇಲ್ಲ, ಹೊರಗಡೆಯೂ ಇಲ್ಲ.
ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲೂ ಗೊಂದಲವೇನೂ ಇಲ್ಲ. ಲಾಲೂ ಪ್ರಸಾದ ಯಾದವ್ ಅವರೇ ಎಲ್ಲ ಅಭ್ಯರ್ಥಿಗಳನ್ನು ಆರಿಸುವುದು. ಇದುವರೆಗೆ ಪಕ್ಷದಲ್ಲಿ, ವಿಧಾನ ಮಂಡಲದಲ್ಲಿ ಪ್ರಮುಖವಾದ ಕುರ್ಚಿಯಲ್ಲಿ ಭದ್ರವಾಗಿ ಕೂತಿದ್ದ ಲಾಲೂ ಪತ್ನಿ ರಾಬ್ಡೀದೇವಿ ಪ್ರಾಯಶಃ ಅವರ ವಿಚಾರವನ್ನೇ ಬದಲಾಯಿಸಬೇಕಾಗಬಹುದು.
ಲಾಲೂ ಪ್ರಸಾದ ಯಾದವ್ ಅವರಿಗೀಗ ೬೩ ವರ್ಷ. ಸ್ವಾತಂತ್ರ್ಯ ಬಂದ ವರ್ಷದಲ್ಲಿ ಜನ್ಮತಾಳಿದ ಲಾಲೂ ಅಪ್ಪಟ ದೇಸೀ ರಾಜಕಾರಣಿಯಂತೆ ವರ್ತಿಸಿದರೂ, ಅವರು ಉನ್ನತ ಮಟ್ಟದ ವ್ಯಾಸಂಗ ಲಾಭ ಪಡೆದವರೇ, ಪಟನಾ ವಿಶ್ವವಿದ್ಯಾಲಯದಲ್ಲಿ ಎಂ.ಎ., ಎಲ್‌ಎಲ್‌ಬಿ ಪದವಿ ಗಳಿಸಿ, ಸಾರ್ವಜನಿಕ ಜೀವನಕ್ಕೆ ಧುಮುಕಿದವರೇ.
ವಿದ್ಯಾರ್ಥಿ ದೆಸೆಯಲ್ಲೇ ಸಂಘಟನೆಯಲ್ಲಿ ಆಸಕ್ತಿ. ಅದರಲ್ಲೂ ಸಾಮಾಜಿಕ ನ್ಯಾಯದ ವಿತರಣೆಯನ್ನು ಪ್ರತಿಪಾದಿಸುತ್ತಿದ್ದ ಜಯಪ್ರಕಾಶ ನಾರಾಯಣ, ರಾಮಮನೋಹರ ಲೋಹಿಯಾ, ಕರ್ಪೂರಿ ಠಾಕೂರ್ ಅವರೆಲ್ಲರ ಅಭಿಮಾನಿ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಹೇಳಿಕೊಳ್ಳುವಂತಹ ಹೋರಾಟದ ಪಾತ್ರವಿಲ್ಲ ದಿದ್ದರೂ, ಜೈಲಿನ ದರ್ಶನವಾಗಿತ್ತು.
ಅದೇ ಒಂದು ದೊಡ್ಡ ಅರ್ಹತೆಯ ರೂಪವನ್ನು ತಾಳಿ ೨೯ನೇ ವಯಸ್ಸಿಗೇ ಲೋಕಸಭೆಯ ಸದಸ್ಯತ್ವ ವನ್ನೂ ಗಳಿಸಿಕೊಟ್ಟಿತ್ತು. ಆರಂಭದಲ್ಲಿ ಲಾಲೂ ಪ್ರಸಾದ ಯಾದವ್ ಅವರದ್ದು, ಕಾಂಗ್ರೆಸ್ ವಿರೋಧಿ ರಾಜಕೀಯವೇ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ದುರ್ಬಲವಾಗಿ, ಅದರ ಸ್ಥಾನವ ನ್ನು ಭಾರತೀಯ ಜನತಾಪಕ್ಷ ಆಕ್ರಮಿಸಲು ಪ್ರಯತ್ನಿಸಿದಾಗ ಲಾಲೂ ಕಾಂಗ್ರೆಸ್‌ನ ಪ್ರಧಾನ ಪ್ರಚಾರ ಕರಾಗಿಯೇ ಕೆಲಸ ಮಾಡಿದ್ದೂ ನಿಜ. ಅದರಿಂದ ಏನೂ ಪ್ರಯೋಜನವಾಗಲಿಲ್ಲ ಎನ್ನುವುದು ಬೇರೆ ಮಾತು.
ಬಿಹಾರದ ಹೊರಗಿನ ಜನರಿಗೆ ಲಾಲೂ ಪ್ರಸಾದ ಯಾದವ್‌ರ ಪರಿಚಯವಾಗಿದ್ದು, ಅವರು ಮುಖ್ಯ ಮಂತ್ರಿಯಾದಾಗಲೇ ಅದರಲ್ಲೂ ಒಂದು ರಾಜ್ಯದ ಮುಖ್ಯಮಂತ್ರಿ ಎಮ್ಮೆಯ ಮೇಲೆ ಸವಾರಿ ಮಾಡು ವ ಚಿತ್ರ ಬೇರೆ ಯಾವ ರಾಜ್ಯದಿಂದಲೂ ಹೊರಗೆ ಬರುವುದು ಅಸಾಧ್ಯವೇನೋ.
ಎಮ್ಮೆಯ ಮೇಲೆ ಕೂತ ಲಾಲೂ ಒಂದು ಕಾಲದಲ್ಲಿ ಸಮಗ್ರ ಬಿಹಾರದ ಬಡವರು, ಹಿಂದುಳಿದವರ ನೈಜ ಹಾಗೂ ಸಹಜ ಪ್ರತಿನಿಧಿಯಂತೆಯೇ ಕಾಣಿಸಿದರು. ‘ನಾವೇನೂ ಬಡಜನರಿಗೆ, ಹಿಂದುಳಿದ ವರಿಗೆ ಐಶ್ವರ್ಯವನ್ನು ತಂದು ಕೊಟ್ಟಿಲ್ಲ. ಆದರೆ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಅಗತ್ಯವಾದ ಜ್ಞಾನ ಹಾಗೂ ಧ್ವನಿಯನ್ನು ಒದಗಿಸಿದ್ದೀನಿ‘ ಎನ್ನುತ್ತಾರೆ ಅವರು.
ಲಾಲೂ ಅವರ ಮಾತಿನ ಶೈಲಿ (ಅಂತರಂಗ-ಬಹಿರಂಗ) ವಿಶಿಷ್ಟವಾದದ್ದು, ಕಷ್ಟ ಕಾಲದಲ್ಲಿ, ಸಂತೋ ಷದ ಸಮಯದಲ್ಲಿ ಅವರ ಮಾತಿನ ಮೋಡಿ ಜನರ ಮನಸ್ಸನ್ನು ಸೆರೆ ಹಿಡಿದಿಡುವುದು ಖಂಡಿತ.
ವೇಷ ಭೂಷಣದಲ್ಲೂ ಅಷ್ಟೇ. ಅಚ್ಚ ಭಾರತೀಯ-ಬಿಹಾರಿ ಶೈಲಿ . ಕಡ್ಡಿ ಮುರಿದರೆ ತುಂಡಾಗಿ ಎರಡಾ ಗುವಂತಹ ಪದಗಳ ಬಳಕೆ. ಅವರ ಪ್ರಕಟಿತ ಗುರಿಯೂ ಸ್ಪಷ್ಟ. ಅವರ ಸಾಧನೆಗೆ ಅನುಸರಿಸಿದ ಮಾರ್ಗದ ವಿಚಾರದಲ್ಲಿ ಭಿನ್ನಾಭಿಪ್ರಾಯವಿರಬಹುದು. ಬಿಹಾರದ ಆಡಳಿತ ಈಗ ಪ್ರತಿಶತ ೭೫ರಷ್ಟು ಹಿಂದುಳಿದ, ದಲಿತ, ಮುಸ್ಲಿಮ್ ಸಮಾಜಗಳ ಪ್ರತಿನಿಧಿಗಳಿಂದಲೇ ನಡೆಯುತ್ತಿದೆ ಎನ್ನುವುದು ಅವರ ಹೆಮ್ಮೆ. ಮಂಡಲ್- ಮಂದಿರದ ವಿವಾದದ ಕಾಲದಲ್ಲಿ ಸಮಷ್ಟಿಪುರದ ಗಂಗಾ ತೀರದಲ್ಲಿ ಲಾಲ್‌ಕೃಷ್ಣ ಅಡ್ವಾಣಿಯವರ ರಾಮರಥ ಯಾತ್ರೆಯನ್ನೇ ಹಿಡಿದು ನಿಲ್ಲಿಸಿದ್ದನ್ನು ಅವರು ಒಂದು ದೊಡ್ಡ ಸಾಧನೆ ಎಂದೇ ಭಾವಿಸುತ್ತಾರೆ.
ಅದರ ಪರಿಣಾಮವಾಗಿ ವಿ.ಪಿ. ಸಿಂಗ್‌ರ ಸರ್ಕಾರದ ಪತನವಾಗಿದ್ದರೆ, ಅದರ ಜವಾಬ್ದಾರಿಯನ್ನು ಬೇರೆಯವರು ಹೊರಬೇಕಂತೆ. ಲಾಲೂ ಯಾದವ್ ೧೯೬೦-೭೦ರ ಸಮಾಜವಾದೀ ಆಂದೋಲನ, ಚಿಂತನೆಗಳಿಂದಲೇ ರೂಪಗೊಂಡ ಜನರ ಮಧ್ಯೆ ಕೆಲಸ ಮಾಡಿಯೇ ಮೇಲೆ ಬಂದ ರಾಜಕಾರಣಿ.
ಆದರೆ ಅಧಿಕಾರದ ಸ್ಥಾನ-ಮಾನ ಸಿಕ್ಕಿದ ಅನಂತರ ಅವರು ಪ್ರಚಾರಗಳಿಸಿದ್ದು ಭ್ರಷ್ಟಾಚಾರದ ಆರೋಪಗಳ ತನಿಖೆಯ ಮೂಲಕ. ಸಾವಿರ ಕೋಟಿ ರೂಪಾಯಿಗಳ ದನದ ಮೇವಿನ ಹಂಚಿಕೆಯ ಭ್ರಷ್ಟಾಚಾರದ ತನಿಖೆಯ ಸಂಬಂಧದಲ್ಲಿ ಜೈಲಿಗೂ ಹೋಗಬೇಕಾಯಿತು. ಅವರ ಪರವಾಗಿ ಪತ್ನಿ ರಾಬಡೀ ದೇವಿ ಅವರೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಅಷ್ಟೇ ಅಲ್ಲ ಬಿಹಾರದಲ್ಲಿ ಒಂದು ವಿಧಾನಸಭೆ ಚುನಾವಣೆಯನ್ನೂ ಗೆದ್ದರು.
ರಾಜಕೀಯದಲ್ಲಿ ಜನತಾದಳದ ಅಧ್ಯಕ್ಷರಾಗಿದ್ದ ಲಾಲೂ, ಆ ಪಕ್ಷವನ್ನೇ ಒಡೆದು, ತಮ್ಮದೇ ಆದ ರಾಷ್ಟ್ರೀಯ ಜನತಾ ದಳವನ್ನು ಸ್ಥಾಪಿಸಿದರು. ಅದು ಪ್ರಾದೇಶಿಕ ಮಟ್ಟದ ಸ್ಥಿತಿಯಲ್ಲೇ ಉಳಿದು ಬಿಟ್ಟಿತು.
ಒಮ್ಮೆ ಲಾಲೂ ಪ್ರಸಾದ ಯಾದವ್ ಲೋಕಸಭೆ ಚುನಾವಣೆಯಲ್ಲಿ ಶರದ್ ಯಾದವ್ ವಿರುದ್ಧ ಸೋತಿ ದ್ದೂ ಉಂಟು. ಮತ್ತೆ ಗೆದ್ದಿದ್ದೂ ಉಂಟು. ರೈಲ್ವೆ ಮಂತ್ರಿಯಾಗಿ ಲಾಲೂ ಪ್ರಸಾದ ಯಾದವ್, ಲಾಭ ಗಳಿಕೆಯಲ್ಲಿ ದೊಡ್ಡ ರೀತಿಯ ಜಾದೂ ಮಾಡಿದ್ದು ಆಡಳಿತ ತಜ್ಞರ ಗಮನವನ್ನು ಸೆಳೆದಿತ್ತು.
ಅಹಮದಾಬಾದ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳೂ ಅದರಲ್ಲಿ ಆಸಕ್ತಿಯನ್ನು ತೋರಿಸಿದ್ದರು. ಆದರೆ ಇನ್ನೂ ಆ ಲಾಭದ ರಹಸ್ಯ ಜನರಿಗೆ ಅರ್ಥವಾಗುವಂತೆ ಬಯ ಲಾಗಿಲ್ಲ.
ಈಗಿನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಒಂದು ಕಾಲದಲ್ಲಿ ಲಾಲೂ ಪ್ರಸಾದ ಯಾದವ್ ರ ಸಂಗಾತಿಯೇ. ಆದರೆ ಕಾರಣಾಂತರಗಳಿಂದ ಜಾರ್ಜ್ ಫರ್ನಾಂಡಿಸ್ ಹಾಗೂ ನಿತೀಶ್ ಕುಮಾರ್ ಕೈಜೋಡಿಸಿ,ಬಿಜೆಪಿಯ ಜತೆ ಸೇರಿ ಲಾಲೂ ಸರ್ಕಾರವೇ ಬೀಳುವಂತೆ ಮಾಡಿದ್ದೂ ಆಯಿತು.
ಸುಮಾರು ೩೫ ವರ್ಷಗಳ ದೀರ್ಘಕಾಲದ ಸಕ್ರಿಯ ರಾಜಕೀಯದಲ್ಲಿ ಲಾಲೂ ಪ್ರಸಾದ ಯಾದವ್ ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ, ಪ್ರಚಾರ ಮಾಧ್ಯಮದ ಗಮನದಿಂದ ದೂರವಾಗಿಲ್ಲ. ಅತ್ಯಂತ ಅದ್ಧೂರಿಯಾಗಿ ನಡೆಸಿದ ಮಗಳ ಮದುವೆಯ ವಿಚಾರವೇ ಆಗಿರಬಹುದು, ಮಗನಿಗೆ ಕ್ರಿಕೆಟ್ ಟೆಸ್ಟ್ ತಂಡದಲ್ಲಿ ಅವಕಾಶ ಸಿಗದೇ ಇರುವ ಘಟನೆಯೇ ಆಗಿರಬಹುದು, ಲಾಲೂ ವಿವಾದವನ್ನು ಸೃಷ್ಟಿಸದೇ ಬಿಡುವುದಿಲ್ಲ.
ಈಗ ಲೋಕಸಭೆಯಲ್ಲಿ ಅವರ ಪಕ್ಷದ ಸದಸ್ಯರ ಸಂಖ್ಯೆ ಬೆರಳೆಣಿಕೆಗೆ ನಿಲುಕುವಷ್ಟು ಕುಗ್ಗಿದ್ದರೂ ಎಂ.ಪಿ.ಗಳ ವೇತನ- ಭತ್ಯದ ಹೆಚ್ಚಳದ ಆಂದೋಲನದಲ್ಲಿ ಬಹುದೊಡ್ಡ ಪಾತ್ರವನ್ನೇ ನಿರ್ವಹಿಸಿ, ಎಲ್ಲ ಪಕ್ಷಗಳ ಎಂ.ಪಿ.ಗಳ ಕೃತಜ್ಞತೆಗೂ ಪಾತ್ರರಾಗಿದ್ದಾರೆ.
ಲೋಕಸಭೆಯ ಅಧಿವೇಶನ ಮುಗಿದ ಕೂಡಲೇ ಲಾಲೂಪ್ರಸಾದ ಯಾದವ್ ಬಿಹಾರದ ಹೋರಾಟ ದಲ್ಲಿ ಧುಮುಕುತ್ತಾರೆ. ಬಿಹಾರದ ಚುನಾವಣೆ ಪ್ರಚಾರ ಸಮರದಲ್ಲಿ ಲಾಲೂ ಪ್ರಸಾದ ಯಾದವ್ ಉರುಳಿಸಲಿರುವ ವಿಶಿಷ್ಟ ಘೋಷಣೆಗಳ ಹಾಗೂ ಒಂದು ಸಾಲಿನ ವಾಕ್ಯಗಳ ಮನರಂಜನೆ ಇನ್ನು ಆರಂಭ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-01 00:00:00
|
|
|