ಮ೦ಗಳೂರು : ರಾಜ್ಯ ಮಟ್ಟದ ಯುವ ಲೇಖಕರ ಸಮ್ಮೇಳನಕ್ಕೆ ಸಿದ್ಧತೆ |
ಪ್ರಕಟಿಸಿದ ದಿನಾಂಕ : 2010-08-31
ಮಂಗಳೂರು, ಆ.30: ಕನ್ನಡ ಪುಸ್ತಕ ಪ್ರಾಧಿಕಾರವು ಸೆಪ್ಟಂಬರ್ ಕೊನೆಯ ವಾರದಲ್ಲಿ ನಗರದ ಪುರಭವನದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಯುವ ಲೇಖಕರ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ ಎಂದು ಪುಸ್ತಕ ಪ್ರಾಧಿಕಾರದ ಸದಸ್ಯ, ಕಾರ್ಯಕ್ರಮದ ಸಂಚಾಲಕ ಪ್ರದೀಪ್‌ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕನ್ನಡ ಸಾಹಿತ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಯುವ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದಲ್ಲಿ 18ರಿಂದ 35 ವರ್ಷದೊಳಗಿನ ಲೇಖಕ, ಲೇಖಕಿಯರು ಭಾಗವಹಿಸಬಹುದು. ಸಮ್ಮೇಳನದಲ್ಲಿ ಭಾಗವಹಿಸುವವರು ಕನಿಷ್ಠ 1 ಕೃತಿಯನ್ನಾದರೂ ಪ್ರಕಟಿಸಿರಬೇಕು ಎಂದು ಅವರು ಮಾಹಿತಿ ನೀಡಿದರು. ಪ್ರಾಧಿಕಾರದ ತಜ್ಞ ಸಮಿತಿಯು 200 ಮಂದಿ ಲೇಖಕ-ಲೇಖಕಿಯರನ್ನು ಆಯ್ಕೆ ಮಾಡಿಕೊಡಲಿದ್ದು, ಅವರಿಗೆ ಊಟ, ವಸತಿ, ಪ್ರಯಾಣ ವೆಚ್ಚವನ್ನು ನೀಡಲಿದೆ. ಉಳಿದಂತೆ ಸಾವಿರ ಕ್ಕೂ ಅಧಿಕ ಮಂದಿ ಸಮ್ಮೇಳನದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಸಮ್ಮೇಳನದಲ್ಲಿ ವಿವಿಧ ಗೋಷ್ಠಿ, ಸಂವಾದವೂ ನಡೆಯಲಿದೆ. ಈ ಸಂದರ್ಭ ವಿವಿಧ ಪ್ರಕಾಶಕರ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನೂ ಕೂಡ ಪ್ರಾಧಿಕಾರ ಹಮ್ಮಿಕೊಂಡಿದೆ ಎಂದು ಕಲ್ಕೂರಾ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಆಡಳಿತಾಧಿಕಾರಿ ಅಶೋಕ ಎನ್. ಚಲವಾದಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-31 00:00:00
|
|
|