ಮೂಡುಬಿದಿರೆ ಪುರಸಭೆ ಮತ್ತೆ ಕಾಂಗ್ರೆಸ್ ಗೆ ಆಡಳಿತ: ಅಧ್ಯಕ್ಷರಾಗಿ ರತ್ನಾಕರ; ಉಪಾಧ್ಯಕ್ಷೆಯಾಗಿ ರಮಣಿ ಆಯ್ಕೆ |
ಪ್ರಕಟಿಸಿದ ದಿನಾಂಕ : 2010-08-30
( ವಿಶೇಷ ಚಿತ್ರ ವರದಿ: ರಾಜ್ ಶೇಖರ್, ಅಜೆಕಾರ್ )
ಮೂಡುಬಿದಿರೆ: ಮೂಡುಬಿದಿರೆ ಪುರಸಭೆಯ ಅಧ್ಯಕ್ಷ - ಉಪಾಧ್ಯಕ್ಷ ಗಾದಿಗೆ ಇಂದು (ಆ ೩೦) ಚುನಾವಣೆ ನಡೆದಿದೆ. ಕಾಂಗ್ರೆಸ್‌ನ ರತ್ನಾಕರ ದೇವಾಡಿಗ ಅಧ್ಯಕ್ಷರಾಗಿ ಮತ್ತು ಸಿ.ಪಿ.ಎಂ ನ, ಕಾಂಗ್ರೆಸ್ ಬೆಂಬಲಿತ ಸದಸ್ಯೆ ರಮಣಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಹುದ್ದೆಗೆ ಸಾಮಾನ್ಯ’ ಮೀಸಲಾತಿ ಬಂದಿರುವುದರಿಂದ ಸಾಮಾನ್ಯವಾಗಿ ಎಲ್ಲರೂ ಆಕಾಂಕ್ಷಿಗಳೇ ಆಗಿದ್ದರು. ಆದರೆ ಕಾಂಗ್ರೆಸ್‌ನ ರತ್ನಾಕರ ದೇವಾಡಿಗ ಮತ್ತು ಸುರೇಶ್ ಕೋಟ್ಯಾನ್ ರವರ ಹೆಸರು ಹೆಚ್ಚು ಪ್ರಚಾರದಲ್ಲಿತ್ತು.
ಇದೀಗ ಹೆಚ್ಚಿನ ಸದಸ್ಯರು ರತ್ನಾಕರ ದೇವಾಡಿಗ ಅವರ ಪರವಾಗಿಯೇ ಬೆಂಬಲ ವ್ಯಕ್ತಪಡೆ ದಿರುವುದರಿಂದ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಲಾಭದಾಯಕ ಹುದ್ದೆ ಆರೋಪದಡಿ ಕಾಂಗ್ರೆಸ್‌ನ ರತ್ನಾಕರ ದೇವಾಡಿಗ ಮತ್ತು ಪಿ.ಕೆ. ಥೋಮಸ್ ತಮ್ಮ ಸದಸ್ಯತ್ವ ಕಳೆದುಕೊಂಡು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಅದಕ್ಕೆ ತಡೆಯಾಜ್ಙೆ ಪಡೆದು ಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು.
ತಡೆ ಯಾಜ್ಞೆ ಸಿಗದೇ ಇದ್ದಲ್ಲಿ ಇಂದಿನ ಚುನಾವಣೆ ಭಾರೀ ಕುತೂಹಲ ಕೆರಳಿಸುತ್ತಿತ್ತು. ಆಗ ಜೆಡಿಎಸ್-ಬಿಜೆಪಿ ನಡುವೆ ‘ಮೈತ್ರಿ ವಿಷಯ ಮತ್ತು ಒಂದಿಷ್ಟು ಗೊಂದಲ ನಡೆಯುತ್ತಿತ್ತು. ಆದರೆ ಸರಳ ಬಹು ಮತ ಪಡೆದುಕೊಂಡಿರುವ ಕಾಂಗ್ರೆಸ್ ಅಧಿಕಾರಕ್ಕೇರುವ ಹಾದಿ ಸುಲಭವಾಯಿತು.
ಮತ್ತೆ ಕಾಂಗ್ರೆಸ್ ಕೈಗೆ ಆಡಳಿತ
ಮೂಡಬಿದಿರೆ : ಸೋಮವಾರ ಅಪರಾಹ್ನ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುರಸಭೆಯ ಎರಡನೇ ಅವಧಿ ಗೆ ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಯುವ ಸದಸ್ಯ ರತ್ನಾಕರ ದೇವಾಡಿಗ ಆಯ್ಕೆಯಾದರು. ಕಾಂಗ್ರೆಸ್ ಸಖ್ಯದ ಸಿಪಿಐನ ರಮಣಿ ಉಪಾಧ್ಯಕ್ಷೆಯಾದರು.
ಎರಡೂವರೆ ವರ್ಷಗಳ ಹಿಂದೆ ನಡೆದ ಪುರಸಭಾ ಚುನಾವಣೆಯಲ್ಲಿ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 10, ಸಿಪಿಐ 1, ಜೆಡಿಎಸ್ 8 ಹಾಗೂ ಬಿಜೆಪಿ 4 ಸ್ಥಾನ ಗಳಿಸಿದ್ದವು.
ವೊದಲ ಅವಧಿಯಲ್ಲಿ ಬಿಜೆಪಿ ಸಖ್ಯದಿಂದ ಜೆಡಿಎಸ್‌ನ ಭೋಜ ಕೋಟ್ಯಾನ್ ಅಧ್ಯಕ್ಷರಾಗಿದ್ದರು. ಮೀಸಲಾತಿ ಲಾಭ ಪಡೆದು ಕಾಂಗ್ರೆಸ್‌ನ ಕೊರಗಪ್ಪ ಉಪಾಧ್ಯಕ್ಷ ಪದವಿ ಪಡೆದಿದ್ದರು. ಜೆಡಿಎಸ್‌ನ ಮ್ಯಾಕ್ಸಿ ಡಿ'ಸೋಜಾ ಗತಿಸಿ ಆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುರೇಶ ಕೋಟ್ಯಾನ್ ಗೆದ್ದು ಕಾಂಗ್ರೆಸ್ ಬಲ 11ಕ್ಕೇರಿತು ಚುನಾವಣೆಯಲ್ಲಿ ಸಖ್ಯ ಸಾರಿದ್ದ ಕಮ್ಯೂನಿಷ್ಟ್ ಪಕ್ಷದ ರಮಣಿ ಅವರ ಬೆಂಬಲವೂ ಸೇರಿದಂತೆ ಎರಡನೇ ಅವಧಿಗೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ವೇದಿಕೆ ನಿರ್ಮಾಣಗೊಂಡಿತ್ತು.
ಅಷ್ಟರಲ್ಲಿ ನಾಮನಿರ್ದೇಶಿತ ಸದಸ್ಯ ಹರೀಶ ಎಂ.ಕೆ. ಅವರ ದೂರಿನನ್ವಯ 'ಲಾಭ ದಾಯಕ ಹುದ್ದೆಯಲ್ಲಿರುವ' ಕಾಂಗ್ರೆಸ್‌ನ ರತ್ನಾಕರ ದೇವಾಡಿಗ ಮತ್ತು ಪಿ.ಕೆ. ಥಾಮಸ್ ಅವರ ಸದಸ್ಯತ್ವವನ್ನು ಜಿಲ್ಲಾಧಿ ಕಾರಿಗಳು ರದ್ದುಗೊಳಿಸಿದರು. ಇನ್ನೇನು ಬಿಜೆಪಿ ತನ್ನ ಹಿಂದಿನ ಮೈತ್ರಿಯಂತೆ ಅಧ್ಯಕ್ಷ ಪದವಿಗೇರುವ ಸನ್ನಾಹದಲ್ಲಿರುವಾಗ ರಾಜ್ಯದ ಉಚ್ಚ ನ್ಯಾಯಾಲಯ ಜಿಲ್ಲಾಧಿಕಾರಿಗಳ ಈ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಈಗ ಮತ್ತೆ ಕಾಂಗ್ರೆಸ್ ಹಾದಿ ಸುಗಮವಾಯಿತು.
ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕಡೆಯಿಂದ ಶಾಸಕ ಕೆ. ಅಭಯಚಂದ್ರ, ಬಿಜೆಪಿ ಕಡೆಯಿಂದ ಸಂಸದ ನಳಿನ್ ಕುಮಾರ್ ಪಾಲ್ಗೊಂಡು ತಮ್ಮ ಕಡೆಯ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.
ಕಾಂಗ್ರೆಸ್‌ನ ರತ್ನಾಕರ ದೇವಾಡಿಗ, ಬಿಜೆಪಿಯ ಬಾಹುಬಲಿ ಪ್ರಸಾದ್ ಅಧ್ಯಕ್ಷ ಪದವಿಗೆ, ಕಾಂಗ್ರೆಸ್ ಬೆಂಬಲಿತೆ ಸಿಪಿಐನ ರಮಣಿ ಮತ್ತು ಜೆಡಿಸ್‌ನ ಪ್ರೇಮಾ ಸಾಲ್ಯಾನ್ ಉಪಾಧ್ಯಕ್ಷ ಸ್ಪರ್ಧಾಳುಗಳಾಗಿದ್ದರು.
ಪಿ.ಕೆ. ಥಾಮಸ್ ಹೊರತುಪಡಿಸಿ ಉಳಿದಂತೆ 12-12 ಬಲ ಗೋಚರಿಸಿತು. ಕೋರ್ಟ್ ತಡೆಯಾಜ್ಞೆಯಂತೆ 'ಸರಿ-ಸಮ' ಬಲ ಕಂಡು ಬಂದರೆ ಮತ ಚಲಾಯಿಸುವ ಹಕ್ಕಿನ 'ಅವಕಾಶ' ಪಿ.ಕೆ. ಥಾಮಸ್‌ಗಿತ್ತು. ಅದನ್ನವರು ಬಳಸಿ 'ಕೈ' ಎತ್ತಿದಾಗ 'ಒಂದು' ಮತದ ನಿರ್ಣಾಯಕ ಶಕ್ತಿಯಾಗಿ ಪಿ.ಕೆ. ಥಾಮಸ್ ಕಂಡು ಬಂದರು.
ಚುನಾವಣಾಕಾರಿಯಾಗಿ ಮೂಡಬಿದಿರೆ ತಹಶೀಲ್ದಾರ್ ಕೆ. ಮುರಳೀಧರ , ಸಹಾಯಕ ಚುನಾವಣಾಧಿಕಾರಿಯಾಗಿ ಪ್ರ. ಮುಖ್ಯಾಧಿ ಕಾರಿ ಉಪತಹಶೀಲ್ದಾರ್ ಲೋಕೇಶ್ ಪೂಜಾರಿ ಕಾರ್ಯ ನಿರ್ವಹಿಸಿದರು.
ವೀಕ್ಷಕರಾಗಿ ಕಾಂಗ್ರೆಸ್‌ನಿಂದ ಜಿಲ್ಲಾ ಉಪಾಧ್ಯಕ್ಷ ಐವನ್ ಡಿ'ಸೋಜಾ, ಬಿಜೆಪಿಯಿಂದ ದೇವದಾಸ ಶೆಟ್ಟಿ, ಉಮಾನಾಥ ಕೊಟ್ಯಾನ್ ಆಗಮಿಸಿದ್ದರು.
48ರ ಹರೆಯದ ರತ್ನಾಕರ ದೇವಾಡಿಗರು 2ನೇ ವಾರ್ಡಿನ ಸದಸ್ಯ ಸಾರಿಗೆ ವ್ಯವಹಾರ, ಕಟ್ಟಡ ನಿರ್ಮಾಣ ಸಾಮಗ್ರಿ ಪೂರೈಕೆ ದಾರರು. ಪುರಸಭೆಯ ಬಿಲ್ ಕಲೆಕ್ಟರ್ ಕೂಸ ದೇವಾಡಿಗರ ಪುತ್ರ. ವೊದಲ ಬಾರಿ ಪುರಸಭೆ ಪ್ರವೇಶಿಸಿದವರು. ರಾಜಕೀಯ ಗುರು ಶಾಸಕ ಕೆ. ಅಭಯಚಂದ್ರರ ಮಾರ್ಗದರ್ಶನದಲ್ಲಿ ಪುರಸಭೆಯ ನೀರು ಪೂರೈಕೆ, ಒಳಚರಂಡಿ ಯೋಜನೆ ಸಹಿತ ಪುರದ ಅಭಿವೃದ್ಧಿ ಸಾಧಿಸಭೇಕು ಎಂಬ ಅಶಯ ಹೊತ್ತವರು.
ತಳದಿಂದ ತುದಿಯವರೆಗೆ ಉಪಾಧ್ಯಕ್ಷೆ: ರಮಣಿ ತಮ್ಮ ಪಕ್ಷದ ಏಕೈಕ ಪುರಸಭಾ ಸದಸ್ಯೆಯಾಗಿ 10ನೇ ವಾರ್ಡ್‌ನಿಂದ ಆಯ್ಕೆಯಾಗಿ ಇದೀಗ ಉಪಾಧ್ಯಕ್ಷೆಯಾಗುವ ಯೋಗ ಪಡೆದವರು. ಸಿಐಟಿಯುನ ರಾಜ್ಯ ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ, ಬೀಡಿ ಕಾರ್ಮಿಕರ ಸಂಘಟನೆ (ಸಿಐಟಿಯು)ಯ ರಾಷ್ಟ್ರೀಯ ಉಪಾಧ್ಯಕ್ಷೆ ರಮಣಿ. ಈ ಎಲ್ಲ ಸಂಘಟನೆಗಳ ಮೂಲಕ ಕಾರ್ಮಿಕರ, ಮಹಿಳೆಯರ ಪರವಾಗಿ ಸದಾ ಹೋರಾಡುತ್ತಾ ಬಂದವರು.
ವರದಿಯ ವಿವರಗಳು |
 |
ಕೃಪೆ : ರಾಜ್ ಶೇಖರ್, ಅಜೆಕಾರ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-30 00:00:00
|
|
|