ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ: ಕನ್ನಡ ಬೃಹತ್ ನಿಘಂಟುಗಳಿಗೆ ಮರು ಮುದ್ರಣದ ಭಾಗ್ಯ; 15 ವರ್ಷಗಳ ತರುವಾಯ ಮರು ಮುದ್ರಣ |
ಪ್ರಕಟಿಸಿದ ದಿನಾಂಕ : 2010-08-30
*15 ವರ್ಷಗಳ ತರುವಾಯ ಮರು ಮುದ್ರಣ
*ಅಕಾರದಿಂದ ಳ ಕಾರದವರೆಗಿನ ಶಬ್ಧಸಾಗರ
*8 ಸಂಪುಟ 9ಸಾವಿರ ಪುಟದಷ್ಟು ವಿಸ್ತಾರ
*ಒಟ್ಟೂ ಸಂಪುಟದ ಮುಂಗಡ ಬೆಲೆ 2800ರೂ.
*ಒಂದು ಕೋಟಿ ಕೊಟ್ಟ ಸಿಎಂ ಯಡಿಯೂರಪ್ಪ
ಬೆಂಗಳೂರು : ಹದಿನೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ-ಕನ್ನಡ ಬೃಹತ್ ನಿಘಂಟು ಪುನರ್ ಮುದ್ರಣಗೊಂಡಿದ್ದು, ಕನ್ನಡಿಗರ ಕೈಸೇರಲು ಸಜ್ಜಾಗಿವೆ.
ಕನ್ನಡ ಸಾಹಿತ್ಯ ಪರಿಷತ್ತಿನ ಹಿರೀಕರು 1970ಕ್ಕೂ ವೊದಲು ಆರಂಭಿಸಿದ ಕನ್ನಡ-ಕನ್ನಡ ನಿಘಂಟು ರಚನೆಯ ಕೆಲಸ 1995ರಲ್ಲಿ ಮುಕ್ತಾಯಗೊಂಡಿತ್ತು. ಅ'ಕಾರದಿಂದ ಳ'ಕಾರದವರೆಗಿನ ಕನ್ನಡದ ಎಲ್ಲಾ ಅಕ್ಷರಗಳಿಂದ ಶುರುವಾಗುವ ಅಪೂರ್ವ ಶಬ್ಧಕೋಶ ಇದಾಗಿತ್ತು. ಆರಂಭಿಕ ನಿಘಂಟಿನ ಕನ್ನಡ ಬಹುಶ್ರುತ ವಿದ್ವಾಂಸ ಡಿ.ಎಲ್. ನರಸಿಂಹಾಚಾರ್ ಪ್ರಧಾನ ಸಂಪಾದಕರಾಗಿದ್ದರು. ಆನಂತರದ ಬಹುತೇಕ ನಿಘಂಟು ಕನ್ನಡ ಶಬ್ಧರ್ಷಿ ಎಂದೇ ಖ್ಯಾತರಾದ ಜಿ. ವೆಂಕಟಸುಬ್ಬಯ್ಯನವರ ನೇತೃತ್ವದಲ್ಲಿ ನಡೆದಿತ್ತು. ಹತ್ತಾರು ಮಂದಿ ನಿಘಂಟು ಪರಿಣಿತರು ಈ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದರು.
ಅ ಕಾರದಿಂದ ಔ ಕಾರದವರೆಗಿನ ಶಬ್ಧಗಳನ್ನೊಳಗೊಂಡ ಒಂದನೇ ಸಂಪುಟ 1970ರಲ್ಲಿ ಪ್ರಕಟವಾಗಿತ್ತು. ಆ ತರುವಾಯ ನಿರಂತರವಾಗಿ ಸಂಪುಟದ ಕೆಲಸ ನಡೆದೇ ಇತ್ತು. ವ ಕಾರದಿಂದ ಳ ಕಾರದವರೆಗಿನ ಶಬ್ಧಗಳನ್ನೊಳಗೊಂಡ 8 ನೇ ಸಂಪುಟ 1995ರಲ್ಲಿ ಬಿಡುಗಡೆಯಾಗಿತ್ತು.
ಆನಂತರವೂ ಕೆಲಸ ಮುಂದುವರೆದು ಪರಿಷ್ಕೃತ ನಿಘಂಟುಗಳು ಹೊರಬೇಕಿತ್ತು. ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದವರ ಆಸ್ಥೆ ವಹಿಸದೇ ಇದ್ದುದರಿಂದ ನಿಘಂಟು ಕೆಲಸ ನೆನೆಗುದಿಗೆ ಬಿದ್ದಿತ್ತು.
ಗರಿಗೆದರಿದ ಕನಸು:
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದ ಡಾ. ನಲ್ಲೂರು ಪ್ರಸಾದ್‌ರವರು ತಮ್ಮನ್ನು ಗೆಲ್ಲಿಸಿದರೆ ನಿಘಂಟು ಮರುಮುದ್ರಣ ಮಾಡುವುದಾಗಿ ಭರವಸೆ ನೀಡಿದ್ದರು.
ನಲ್ಲೂರು ಅಧ್ಯಕ್ಷರಾದ ಕೂಡಲೇ ಈ ಕೆಲಸಕ್ಕೆ ಚಾಲನೆ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಿಘಂಟು ಮರು ಮುದ್ರಣದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟರು. ಮುಖ್ಯಮಂತ್ರಿಗಳು ಒಂದು ಕೋಟಿ ರೂ. ಗಳನ್ನು ಇದಕ್ಕಾಗಿಯೇ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಟ್ಟರು.
ಇದೀಗ ಕನ್ನಡ ಬೃಹತ್ ನಿಘಂಟು ಮುದ್ರಣಗೊಂಡಿದ್ದು, ಬೈಂಡಿಂಗ್‌ನ ಅಂತಿಮ ಕೆಲಸ ಅಚ್ಚುಕೂಟದಲ್ಲಿ ನಡೆಯುತ್ತಿದೆ. ಸೆಪ್ಟೆಂಬರ್ ವೊದಲ ವಾರದ ಹೊತ್ತಿಗೆ ಮಾರಾಟಕ್ಕೆ ಸಿದ್ಧವಾಗಲಿದೆ. ಕೊಟ್ಟ ಭರವಸೆಯನ್ನು ಈಡೇರಿಸಿದ ಸಮಾಧಾನ ತಮಗಿದೆ ಎಂದು ನಲ್ಲೂರು ಪ್ರಸಾದ್ ಹೇಳುತ್ತಾರೆ.
ಸುಮಾರು 60 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ 8 ಸಂಪುಟಗಳನ್ನು ಮುದ್ರಿಸಲಾಗಿದೆ. ಸುಮಾರು 9ಸಾವಿರಕ್ಕೂ ಹೆಚ್ಚು ಪುಟಗಳಲ್ಲಿ ಕನ್ನಡದ ಶಬ್ಧಸಾಗರ ಹರಿದಿದೆ. ಮುದ್ರಣ ಪೂರ್ವ ಮುಂಗಡ ಬೆಲೆ 2800 ರೂ.ಗಳಾಗಿದೆ.
ನಿಘಂಟು ಕಚೇರಿ: ನಿಘಂಟು ಕೆಲಸ ನಿರಂತವಾಗಿ ಮುಂದುವರೆದು ಕಾಲಕಾಲಕ್ಕೆ ಕನ್ನಡ ಭಾಷೆಗೆ ಸೇರ್ಪಡೆಗೊಂಡ ಪದಗಳನ್ನು ಸೇರಿಸಿ ಪರಿಷ್ಕೃತ ನಿಘಂಟು ತರುವ ಜರೂರು ಕನ್ನಡಿಗರ ಮುಂದಿದೆ. 1970ರಲ್ಲಿ ಹೊರಬಂದ ನಿಘಂಟಿನ ಕಾಲಕ್ಕೂ ಆನಂತರದ 40 ವರ್ಷಗಳ ಕಾಲಕ್ಕೂ ಕನ್ನಡ ಸಾಕಷ್ಟು ಹೊರಳು ದಾರಿಯಲ್ಲಿ ಸಾಗಿದೆ. ಸಾವಿರಾರು ಹೊಸ ಪದಗಳು ಬಳಕೆಯಲ್ಲಿವೆ. ಇಂಗ್ಲಿಷು, ಹಿಂದಿಯ ಅನೇಕ ಪದಗಳು ಕನ್ನಡದ್ದೇ ಎಂಬಷ್ಟು ಸಹಜವಾಗಿ ಕನ್ನಡೀಕರಣಗೊಂಡಿವೆ.
ಇವೆಲ್ಲವೂ ಸೇರಿಸಿ ಪರಿಷ್ಕೃತ ನಿಘಂಟು ಬರಬೇಕಾಗಿದೆ. ಆ ನಿಟ್ಟಿನಲ್ಲಿಯೇ ಕಸಾಪ ನಿಘಂಟು ಕಚೇರಿ ತೆರೆದಿದೆ. ಹಿಂದಿನಿಂದ ಕೆಲಸ ಮಾಡುತ್ತಾ ಬಂದವರೊಬ್ಬರು ಇಲ್ಲಿ ಮುಂದುವರೆದಿದ್ದಾರೆ ಬಿಟ್ಟರೆ ಹೊಸ ಸಿಬ್ಬಂದಿ ನೇಮಿಸಲು ಸಾಧ್ಯವಾಗಿಲ್ಲ.
'ನಿಘಂಟು ಕೆಲಸವನ್ನು ಮುಂದುವರೆಸಬೇಕಾದರೆ ಕನಿಷ್ಟವೆಂದರೂ 15 ಹೊಸ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಸಂಶೋಧನೆ ಹಾಗೂ ಅಧ್ಯಯನದ ಕೆಲಸ ಇದಾಗಿದ್ದರಿಂದ ಕನಿಷ್ಠ 20 ಸಾವಿರ ರೂ. ಸಂಬಳವಿಲ್ಲದೇ ಬೆಂಗಳೂರಿನಲ್ಲಿ ಕೆಲಸ ಮಾಡಲು ಯಾರೂ ಸಿಗುವುದಿಲ್ಲ. ನಿಘಂಟು ಕಚೇರಿ ಆರಂಭವಾಗಿಲ್ಲ ಎಂದು ಆಕ್ಷೇಪಿಸುವುದು ಸುಲಭ. ಆದರೆ ನೇಮಿಸಿಕೊಳ್ಳುವ ಸಿಬ್ಬಂದಿಗೆ ವೇತನ ನೀಡಲು ಕನಿಷ್ಠ ಮಾಸಿಕ 3 ಲಕ್ಷ ರೂ. ಬೇಕಾಗುತ್ತದೆ ಎಂದು ಹೇಳುವ ನಲ್ಲೂರು ಪ್ರಸಾದ್, ಸರ್ಕಾರ ಮನಸ್ಸು ಮಾಡಿದರೆ ಮಾತ್ರ ಕಾಯಂ ಸಿಬ್ಬಂದಿ ನೇಮಿಸಿ ನಿಘಂಟು ಕೆಲಸ ಪುನರಾರಂಭಿಸಬಹುದು. ಕಸಾಪಕ್ಕೆ ಇರುವ ನಿಯಮಿತ ಆದಾಯದಲ್ಲಿ ಇರುವ ಸಿಬ್ಬಂದಿಗೆ ಸಂಬಳ ಕೊಡಲು ಸಾಧ್ಯವಾಗದೇ ಇದ್ದಾಗ ಹೊಸ ಸಿಬ್ಬಂದಿಯನ್ನು ಹೇಗೆ ನೇಮಿಸಿಕೊಳ್ಳುವುದು ಎಂದು ಪ್ರಶ್ನಿಸುತ್ತಾರೆ.
ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಇದಾಗಿದ್ದು, ಸರ್ಕಾರವೇ ಉದಾರ ಮನಸ್ಸು ಮಾಡಿದರೆ ಮಾತ್ರ ಜರೂರಾಗಿ ಆಗಲೇ ಬೇಕಾಗಿರುವ ಪರಿಷ್ಕೃತ ನಿಘಂಟು ಹೊರಬರಲು ಸಾಧ್ಯ.
ವರದಿಯ ವಿವರಗಳು |
 |
ಕೃಪೆ : udayavani ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-08-30 00:00:00
|
|
|