ಚಿದಂಬರ ಬರೆಯುವ ವಡ್ಡರ್ಸೆ ಸರಣಿ-14 : ಮುಂಗಾರು ಕೊಂಡಿ ಕಳಚಿಕೊಂಡಿತು |
ಪ್ರಕಟಿಸಿದ ದಿನಾಂಕ : 2010-08-29
ಮುಂಗಾರು ಕೊಂಡಿ ಕಳಚಿಕೊಂಡಿತು
ಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಈ ಸರಣಿಯ ಕೊನೆಯ ಲೇಖನ.
‘ಮುಂಗಾರು' ಮುನ್ನಡೆಸಲು ಅಂತಿಮವಾಗಿ ರಘುರಾಮ ಶೆಟ್ರು ಹೊಸ ದಾರಿ ಕಂಡು ಕೊಂಡರು. ಪತ್ರಿಕೆಯ ಆಡಳಿತ ಸೂತ್ರವನ್ನು ಹೊಸದಾಗಿ ಬಂಡವಾಳ ತೊಡಗಿಸುವವರಿಗೆ ವಹಿಸಿಕೊಡು ವುದು ಮತ್ತು ತಾವು ಸಂಪಾದಕರಾಗಿ ಮುಂದುವರಿ ಯುವುದು ಶೆಟ್ರು ಕಂಡುಕೊಂಡ ಹೊಸ ದಾರಿ. ಶ್ರಮ ಪಟ್ಟು ಹುಟ್ಟು ಹಾಕಿದ ಸಂಸ್ಥೆ ಯಾವುದೇ ಕಾರಣಕ್ಕೂ ಮುಚ್ಚಬಾರದು ಎನ್ನುವ ಕಾಳಜಿ ಯಿಂದಾಗಿ ಆಡಳಿತ ನಿರ್ವಹಣೆಯನ್ನು ತೊರೆಯಲು ಶೆಟ್ರು ಮುಂದಾಗಿದ್ದರು ಮತ್ತು ಅದು ಅನಿವಾರ್ಯವೂ ಆಗಿತ್ತು.
ಮೂಲತ: ತುಳುವರಾಗಿದ್ದು ಬೆಂಗಳೂರಲ್ಲಿ ಉದ್ದಿಮೆ ನಡೆಸಿ ಹೆಸರುವಾಸಿಯಾಗಿದ್ದ ಡಿ.ಕೆ.ಚೌಟ ಅವರ ಹೆಗಲಿಗೆ ‘ಮುಂಗಾರು' ಹೊಣೆ ವಹಿಸಿಕೊಟ್ಟರು. ಆಗ ಅವರ ಸಹೋದರ ಡಾ.ಡಿ.ಸಿ.ಚೌಟ ಅವರು ಆಡಳಿತ ನಿರ್ದೇಶಕರಾದರು. ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂತು. ಅಂತೂ ರಘು ರಾಮ ಶೆಟ್ರು ಸಂಸ್ಥೆ ಮುನ್ನಡೆಸಲು ಹಣ ಹೊಂದಿಸುವ ಜವಾಬ್ದಾರಿಯಿಂದ ಮುಕ್ತರಾದರು, ಸಂಪಾದಕರಾಗಿ ಮುಂದುವರಿದರು.
ಹುಡುಗನಾಗಿದ್ದ ರಘುರಾಮ ಶೆಟ್ರು ಉದ್ಯೋಗ ಹರಸಿಕೊಂಡು ಮುಂಬೈ ನಗರ ಸೇರಿ ಹೊಟೇಲ್ ನಲ್ಲಿ ಚಹಾ ಸರಬರಾಜು ಮಾಡುವ ಕಾಯಕದಲ್ಲಿದ್ದರು. ಆಗ ಆ ಹೋಟೆಲ್ ಸಮೀ ಪವೇ ‘ಪ್ರೀಪ್ರೆಸ್ ಜರ್ನಲ್' ಆಂಗ್ಲ ದಿನಪತ್ರಿಕೆ ಕಚೇರಿಯಿತ್ತು. ಅಲ್ಲಿ ಆ ಕಾಲದಲ್ಲಿ ಉಪಸಂಪಾದಕ ರಾಗಿದ್ದವರು ವೈ. ಎಂ.ಹೆಗ್ಡೆ(ಎಕ್ಕಾರು ಮಹಾಬಲ ಹೆಗ್ಡೆ)ಯವರು. ಅವರು ಅಲ್ಲಿ ನಿವೃತ್ತಿ ಹೊಂದಿ ಮಂಗಳೂರಲ್ಲಿ ನೆಲೆಸಿದ್ದರು. ಶೆಟ್ರಿಗೂ ಪರಿಚಿತರಾಗಿದ್ದ ವೈ.ಎಂ.ಹೆಗ್ಡೆಯವರು ‘ಮುಂಗಾರು' ಪತ್ರಿಕೆಯ ನೂತನ ಎಕ್ಸಿಕ್ಯುಟಿವ್ ಎಡಿಟರ್ ಆದರು. ನಿತ್ಯದ ಸುದ್ದಿಗಳ ನಿರ್ವಹಣೆಯನ್ನು ವೈ.ಎಂ.ಹೆಗ್ಡೆ ಯವರು ನೋಡಿ ಕೊಳ್ಳುತ್ತಿದ್ದುದರಿಂದ ರಘುರಾಮ ಶೆಟ್ರಿಗೆ ತುಸು ಹಗುರವಾಗಿತ್ತು. ಸಂಪಾದಕೀಯ, ವಿಶೇಷ ಬರಹ ಗಳಿಗೆ ಗಮನ ಕೊಡಲು ಸಾಧ್ಯವಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ.
ರಘುರಾಮ ಶೆಟ್ರು ಆಡಳಿತವನ್ನು ವಹಿಸಿಕೊಟ್ಟ ಮೇಲೆ ಖಿನ್ನರಾಗಿಬಿಟ್ಟರು. ಸಂಪಾದಕೀಯ ಬರೆಯಲು ಉದಾಸೀನ ತೋರಿದರು. ಅಗ್ರಲೇಖನ ಬರೆಯಲು ಒತ್ತಾಯಿಸಬೇಕಾಯಿತು. ಬೀಡಿ ಸೇದಿಕೊಂಡು ಅವರು ಬರೆಯುತ್ತಿದ್ದ ಭಂಗಿಯನ್ನು ನೋಡಿ ಆನಂದಿಸುತ್ತಿದ್ದ ನನ್ನಂಥವರು ಶೆಟ್ರು ಬೀಡಿ ಸೇದುವುದನ್ನೇ ನೋಡಬೇಕಾಯಿತೇ ಹೊರತು ಅವರ ಲೇಖನಿಯಿಂದ ಲೇಖನಗಳು ಹರಿದು ಬರುವುದು ಅಪರೂಪವಾಯಿತು.
ಶೆಟ್ರಿಗೆ ಏನಾಗಿದೆ? ಯಾಕೆ ಲೇಖನ ಬರೆಯುತ್ತಿಲ್ಲ? ಇತ್ಯಾದಿ ಪ್ರಶ್ನೆಗಳನ್ನು ಪತ್ರಿಕೆ ಮಾರುವ ಅಂಗಡಿಯವರು ಓದುಗರಿಂದ ಎದುರಿಸಬೇಕಾಯಿತು. ಮೊದಲಿನಂತೆ ಸುದ್ದಿಗಳ ಬಗ್ಗೆ ನನ್ನೊಂದಿಗೆ ಚರ್ಚಿ ಸುವುದನ್ನು ಬಿಟ್ಟರು. ನಾನೇ ಅವರ ಗಮನಕ್ಕೆ ತಂದರೂ ಅಷ್ಟೊಂದು ಉತ್ಸಾಹ ತೋರಿಸುತ್ತಿರಲಿಲ್ಲ. ಏನೇ ಹೇಳಿದರೂ ಅವರಿಂದ ಬರುತ್ತಿದ್ದ ಉತ್ತರ ‘ನೀನೇ ನೋಡ್ಕೊಳ್ಳೋ ತಮ್ಮಾ'.
ಮನೆಗೆ ಬಂದು ಹೋಗಲು ಹೇಳುತ್ತಿದ್ದರು. ಏನೋ ಇರಬೇಕು ಅಂದುಕೊಂಡು ಮನೆಗೆ ಹೋದರೆ ಆರಾಮ ಕುರ್ಚಿಯಲ್ಲಿ ಒರಗಿಕೊಂಡು ಬೀಡಿ ಸೇದುತ್ತಿದ್ದರು. ‘ಸಾರ್ ಅದೇನೋ ಮಾತಾಡಲಿಕ್ಕಿದೆ ಅಂದಿರಿ' ಅಂದ್ರೆ ‘ಏನೂ ಇಲ್ಲಾ ಕಣೋ, ಸುಮ್ಮನೆ ಕರೆದೆ' ಎಂದೇಳಿ ನಿರ್ಲಿಪ್ತರಾಗುತ್ತಿದ್ದರು. ಅಲ್ಲಿ ಅವರು ಮಾತಾಡುತ್ತಿದ್ದು ಲೋಕಾಭಿರಾಮವಾಗಿ ಮಾತ್ರ. ಚಹಾ ಕುಡಿದು ಹೊರಟ ಮೇಲೆ ‘ಸಂಜೆ ಫೋನ್ ಮಾಡು ಹೇಳ್ತೇನೆ' ಎನ್ನುತ್ತಿದ್ದರು. ಮತ್ತೆ ಸಂಜೆ ಫೋನ್ ಮಾಡಿದರೆ ‘ಬೆಳಿಗ್ಗೆ ಮನೆಗೆ ಬಾ'. ಅಂತೂ ನನ್ನ ಮನೆಯಲ್ಲಿ ಚಹಾ ಕುಡಿಯದಿದ್ದರೂ ಶೆಟ್ರ ಮನೆಯಲ್ಲಿ ನಿತ್ಯವೂ ಸೇವೆ ತಪ್ಪುತ್ತಿರ ಲಿಲ್ಲ.
ಅಂದರೆ ರಘುರಾಮ ಶೆಟ್ರು ಆಡಳಿತವನ್ನು ವಹಿಸಿಕೊಟ್ಟ ಮೇಲೆ ಮಾನಸಿಕವಾಗಿ ಕುಬ್ಜರಾಗಿ ಬಿಟ್ಟರು. ಮನಸ್ಸಿಲ್ಲದ ಮನಸ್ಸಿನಿಂದಲೇ ಕೆಲವು ತಿಂಗಳುಗಳನ್ನು ಸಂಪಾದಕರಾಗಿ ಶೆಟ್ರು ಕಳೆದರು. ಆದರೂ ಪತ್ರಿಕೆಯ ಪ್ರಸಾರ ಸಂಖ್ಯೆ ಇಳಿಯಲಿಲ್ಲ. ನಿನ್ನ ನಾಮದ ಬಲ ವೊಂದಿದ್ದರೆ ಸಾಕು ಅನ್ನುವಂತೆ ಪತ್ರಿ ಕೆಯ ಸಂಪಾದಕರಾಗಿ ಶೆಟ್ರು ಮುಂದುವರಿಯುತ್ತಿರುವುದನ್ನು ಓದುಗರು ಖಾತ್ರಿಪಡಿಸಿಕೊಂಡು ಅದೇ ನೆಮ್ಮದಿಯಿಂದ ಪತ್ರಿಕೆ ಓದುತ್ತಿದ್ದರು.
ಆಂಗ್ಲ ಪತ್ರಿಕೆಯಲ್ಲಿ ದುಡಿದ ವೈ.ಎಂ.ಹೆಗ್ಡೆಯವರಿಗೆ ಕನ್ನಡ ಪತ್ರಿಕೋದ್ಯಮ ಹೊಸತು, ಹಾಗಾಗಿ ಅವರಿಂದ ಚಮತ್ಕಾರ ನಿರೀಕ್ಷಿಸುವಂತಿರಲಿಲ್ಲ. ಈ ಸತ್ಯವನ್ನು ಹೆಗ್ಡೆಯವರು ಹೇಳಿಕೊಳ್ಳುತ್ತಿದ್ದರು. ಆದರೆ ಅವರು ಅತ್ಯಂತ ಸಜ್ಜನ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ರಘುರಾಮ ಶೆಟ್ರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಹೆಗ್ಡೆಯವರು ಆಗಾಗ ಶೆಟ್ರ ಮನಸ್ಸನ್ನು ಹದಗೊಳಿಸುವ ಪ್ರಯತ್ನ ಮಾಡಿದ್ದರು.
ಅದೊಂದು ದಿನ ಮುಸ್ಸಂಜೆ. ಫೋನ್ ರಿಂಗಣಿಸಿತು. ರಿಸೀವ್ ಮಾಡಿದೆ. ಆ ಕಡೆಯಲ್ಲಿದ್ದವರು ರಘು ರಾಮ ಶೆಟ್ರು. ‘ಸಾರ್' ಅಂದೆ. ಕ್ಷಣ ಮಾತೇ ಇಲ್ಲ. ಮತ್ತೆ ಸಾರ್... ಸಾರ್ ಅಂದೆ.
‘ತಮ್ಮಾ ನಾನು ಸೂಸೈಡ್ ಮಾಡ್ಕೊಳ್ತಾ ಇದ್ದೀನಿ' ಅಂದ್ರು. ದಿಗಿಲಾಯ್ತು. ಇದೇನಪ್ಪಾ ಅಚಾತುರ್ಯ ಎಂದವನೇ ‘ಸಾರ್ ಏನ್ ಮಾತಾಡ್ತಿದ್ದೀರಿ ' ಅಂದೆ ಗಾಬರಿಯಿಂದಲೇ.
‘ಹೌದು ತಮ್ಮಾ ನಾನು ಸಾಯಲು ಹೊರಟಿದ್ದೀನಿ. ಬಾವಿಗೆ ಬೀಳುತ್ತಿದ್ದೇನೆ'. ನನಗೆ ಏನು ಹೇಳಬೇಕು ಅಂತಲೇ ತೋಚಲಿಲ್ಲ. ‘ಸಾರ್... ಹೀಗೆಲ್ಲ ಯಾಕೆ ಮಾತಾಡ್ತೀರಿ?' ಅಂದೆ.
‘ನನ್ನಿಂದ ಇನ್ನು ಮುಂದೆ ನಿಮ್ಮಂಥ ಯುವಕರನ್ನು ಬೆಳೆಸಲು ಸಾಧ್ಯವಿಲ್ಲ. ನಿನ್ನನ್ನು ಅರ್ಧದಲ್ಲಿ ಕೈ ಬಿಡುತ್ತಿದ್ದೇನೆ, ಬೇಸರ ಪಟ್ಟುಕೊಳ್ಳಬೇಡ,
ಸಂಪಾದಕನ ಹುದ್ದೆಗೆ ರಾಜೀನಾಮೆ ಕೊಡುತ್ತಿದ್ದೇನೆ ' ಅಂದ್ರು.
‘ಸಾರ್ ಯಾಕೆ ಇಂಥ ನಿರ್ಧಾರ ತೆಗೆದುಕೊಳ್ತಿದ್ದೀರಿ, ಸುಮ್ಮನಿರಿ ನಾವೆಲ್ಲಾ ಇದ್ದೀವಲ್ಲಾ' ಎಂದೆ.
‘ತಮ್ಮಾ ನಾನು ಬಹಳ ದೂರ ಹೋಗಿದ್ದೇನೆ, ನಾಳೆ ಮನೆಗೆ ಬಾ' ಅಂದವರೇ ಫೋನ್ ಇಟ್ಟು ಬಿಟ್ಟರು. ಮರುದಿನ ಅವರ ಮನೆಗೆ ಹೋದಾಗ ಶೆಟ್ರು ಒಂಥರಾ ನಿರುಮ್ಮಳರಾಗಿದ್ದರು.
‘ತಮ್ಮಾ ನಾನು ಸೋತು ಹೋದೆ. ನಾನು ನಂಬಿದವರು ಕೈಕೊಟ್ಟರು, ಮೈಫೇಟ್' ಅಂದವರೇ ಬೀಡಿಗೆ ಬೆಂಕಿ ಹಚ್ಚಿದರು. ಅವರಿಗೆ ಏನನ್ನೂ ಹೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ.
‘ಸಾರ್ ನೀವು ಅವಸರ ಮಾಡಿದಿರಿ ಅನ್ನಿಸುತ್ತೆ?' ಅಂದೆ ತುಸು ಆತಂಕದಿಂದಲೇ. ‘ನನಗೆ ಬೇರೆ ದಾರಿಯೇ ಇಲ್ಲ ತಮ್ಮಾ. ಇಲ್ಲಿಯ ಜನರ ತಲೇಲಿ ಅದೇನ್ ತುಂಬಿದೆಯೋ ಏನೋ ಬಿಡು ಹೋಗ್ಲಿ' ಅಂದ್ರು.
‘ನಾನ್ ಏನ್ ತಪ್ಪು ಮಾಡಿದೆ ಹೇಳು ತಮ್ಮಾ? ಹೊಸ ಹೊಸ ವಿಚಾರಗಳನ್ನು ಕಲಿಯಬೇಕು, ಚಿಂತನೆ ಮಾಡುವುದನ್ನು ಕಲಿತುಕೊಳ್ಳಿ ಅನ್ನೋದೂ ಅಪರಾಧವೇನೋ? ನಾನು ಯಾರ ಪರ ವಾಗಿ ಹೋರಾಟ ಮಾಡಬೇಕು ಅಂದುಕೊಂಡಿದ್ದೆನೋ ಅದು ಸಾಧ್ಯವಾಗಲಿಲ್ಲ ಅನ್ನೋ ಬೇಸರ ಇದೆ?' ಎಂದವರೇ ಮೌನಕ್ಕೆ ಶರಣಾದರು.
ಸಾರ್ ಮುಂದೇನು ಮಾಡ್ತೀರಿ? ಅಂದಾಗ ‘ವಡ್ಡರ್ಸೆಗೆ ಹೋಗ್ತೀನಿ, ಅಲ್ಲೇ ನೆಲೆಯೂರಿ ಕೃಷಿ ಮಾ ಡ್ಕೊಂಡಿರ್ತೇನೆ, ಈ ಮಣ್ಣಂಗಟ್ಟಿ ಜನರ ಸಹವಾಸವೇ ಬೇಡ' ಸಿಟ್ಟಿತ್ತು ಮಾತಿನಲ್ಲಿ.
‘ಹಾಗೆಯೇ ಅವರೊಂದಿಗೆ ಮಾತಾಡಿ ಹೊರಡಬೇಕು ಅನ್ನುವಷ್ಟರಲ್ಲಿ ಶೆಟ್ರು ನನ್ನ ಹೆಗಲ ಮೇಲೆ ಕೈ ಇಟ್ಟು ಬೆನ್ನು ಸವರಿದರು. ಮಾನಗೆಟ್ಟು ಪತ್ರಿಕೋದ್ಯಮ ಮಾಡಬೇಡ ತಮ್ಮಾ. ನಿನಗೆ ಹೇಳಬೇಕಾದ್ದನ್ನು ನಿರ್ಭಯವಾಗಿ ಹೇಳು. ಜನಪರವಾಗಿರಲಿ ಬರವಣಿಗೆ' ಕಣ್ಣಾಲಿಗಳು ತುಂಬಿ ಬಂದವು. ಅವರಿಂದ ಬೀಳ್ಕೊಟ್ಟೆ. ಮತ್ತೆ ಅವರನ್ನು ಭೇಟಿ ಮಾಡಿದ್ದು ಕೆಲವು ವರ್ಷಗಳ ಬಳಿಕ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ. ಆಗಷ್ಟೇ ‘ಕನ್ನಡಪ್ರಭ' ಸೇರಿದ್ದೆ. ‘ತಮ್ಮಾ ಏನ್ ಮಾಡ್ಕೊಂಡಿ ದ್ದಿಯಾ?' ಕೇಳಿದರು. ‘ಸಾರ್ ಕನ್ನಡಪ್ರಭ ಸೇರಿದ್ದೇನೆ' ಅಂದೆ.
ಶೆಟ್ರು ನನ್ನನ್ನು ದಿಟ್ಟಿಸಿ ನೋಡಿದ್ರು. ಏನನ್ನೂ ಹೇಳಲಿಲ್ಲ. ಲೋಕಾಭಿರಾಮವಾಗಿ ಮಾತಾಡಿದರು. ಮತ್ತೆ ಅವರನ್ನು ಜೀವಂತವಾಗಿ ಕಾಣುವುದು ಸಾಧ್ಯವಾಗಲಿಲ್ಲ.
ಇಷ್ಟು ಹೇಳಿದ ಮೇಲೆ ಹೇಳಲೇಬೇಕಾದ ಕಡೆಯ ಮಾತುಗಳಿವು. ರಘುರಾಮ ಶೆಟ್ರು ಮುಂಗಾರು ಹುಟ್ಟು ಹಾಕಿದ್ದು ಸರಿ, ಅವರ ಧ್ಯೇಯೋದ್ದೇಶಗಳೂ ಸರಿಯಾದವೇ. ಆದರೆ ಅವರು ಸಂಸ್ಥೆ ಬೇಕಿದ್ದ ಸ್ಥಳ ಕರಾವಳಿ ಅಲ್ಲವೇ ಅಲ್ಲ. ಶೆಟ್ರು ಧ್ವನಿಯಾಗಿದ್ದವರು ಪತ್ರಿಕೆ ಕೊಂಡು ಓದುವಷ್ಟು ಸಬಲರಾಗಿರಲಿಲ್ಲ. ಶೆಟ್ರು ವಿರೋಧಿಸುತ್ತಿದ್ದವರೇ ಬಹುತೇಕ ಓದುಗರಾಗಿದ್ದವರು. ಅಂಥವರು ಎಷ್ಟು ದಿನ ಕೈಹಿಡಿ ದಾರು? ಬೆಂಗಳೂರು ಅಥವಾ ಮೈಸೂರಲ್ಲಿ ‘ಮುಂಗಾರು' ಜನ್ಮ ತಳೆದಿದ್ದರೆ ರಘುರಾಮ ಶೆಟ್ರು ಕನ್ನಡ ಪತ್ರಿಕೋದ್ಯಮದ ಪಾಳೆಗಾರರಾಗಿ ಇಂದಿಗೂ ನಮ್ಮ ನಡುವೆಯೇ ಇರುತ್ತಿದ್ದರು. ಕನ್ನಡಪತ್ರಿಕೋದ್ಯಮಕ್ಕೆ ಈಗಿನ ಅನಾಥಪ್ರಜೆ ಕಾಡುತ್ತಿರಲಿಲ್ಲ ಜೊತೆಗೆ ನನ್ನಂಥವರಿಗೆ ಕೂಡಾ.
(ಮುಗಿಯಿತು)

- ಚಿದಂಬರ ಬೈಕಂಪಾಡಿ
{ ಗುರಿಕಾರ ವಡ್ಡರ್ಸೆ ರಘುರಾಮಶೆಟ್ಟರ ಹೆಸರು ಕೇಳಿದ್ದೇ ವಿನಹ ಅವರ ಬಾಳರೀತಿ ಬಗ್ಗೆ ಹೆಚ್ಹು ತಿಳುವಳಿಕೆ ಇರಲಿಲ್ಲ. ಮುಂಗಾರು ಹೇಗೆ ಪ್ರಾರಂಭವಾಗಿ, ಜನಪ್ರಿಯವಾಗಿ ನಡೆದಿತ್ತು ಮತ್ತು ಅದೇಕೆ ಮುಚ್ಚಿ ಕೊಂಡಿತು ಎಂಬ ವಿಷಯದ ಬಗ್ಗೆ ಈ ಒಂದು ಚಾರಿತ್ರಿಕ ಅನುಭವಗಳನ್ನು 'ಗಲ್ಫ್ ಕನ್ನಡಿಗ' ದಲ್ಲಿ ಹಂಚಿ ಕೊಂಡ ಚಿದಂಬರ ಅವರಿಗೆ ಹಾಗೂ ನಮಗೆ ಯಾವಾಗಲೂ ನೆರೆವಾಗಿ ಹುರುಪು ತುಂಬುತ್ತಿರುವ ಪ. ರಾಮಚಂದ್ರರವರಿಗೆ ನಮ್ಮ ಹೃತ್ಪೂರ್ವಕ, ಕೃತಜ್ಞತೆಗಳು. - ಗ.ಕ.ಸಂಪಾದಕೀಯ ಮಂಡಳಿ }
ವರದಿಯ ವಿವರಗಳು |
 |
ಕೃಪೆ : ಕೆ೦ಡ ಸ೦ಪಿಗೆ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-29 00:00:00
|
|
| nazeerullal, ullal | 2010-09-04 | | vaddarseyavaru thukku hidida vyavasthege, manassige sane hidiva kelasa arambisiddaru. thadavagiyadaru endu pala kodutta ede. |
| hassanmukha, mangalore | 2010-08-29 | | ಚಿದಂಬರರವರ, ಈ ಕೊನೆಯ ಲೇಖನ ಓದಿ ಅರಗಿಸಿಕೊಳ್ಳಲು ತುಂಬಾ ಕಷ್ಟವಾಯಿತು.ವ.ರಘುರಾಮ ಶೆಟ್ರ ಕೊನೆಯ ಮಾತಿನಂತೆ, ಚಿದಂಬರರು ಆ ರೀತಿ ಜನಪರವಾಗಿ, ನಿರ್ಭಯವಾಗಿ ಮತ್ತು ಯಾರದೇ ಮುಲಾಜಿಲ್ಲದೆ ನಡೆಯುವ ಪತ್ರಿಕೋದ್ಯಮವನ್ನು ಸೇರಿ ಕೆಲಸ ಮಾಡಬೇಕೆಂಬುದೇ ನಮ್ಮ ಆಸೆ. ಅಂಥಹ ಪತ್ರಿಕೆಯೊಂದು ನಮ್ಮ ಕರಾವಳಿಯಲ್ಲಿದೆ ಎಂದು ನಮ್ಮ ಭಾವನೆ. ಚಿದಂಬರರವರಿಗೆ ಶುಭವಾಗಲಿ ಹಾಗು ಇದನ್ನು ಪ್ರಕಟಿಸಿದ ಗ.ಕ.ಕ್ಕೂ. |
|