'ಅಕ್ಕ' ಸಮ್ಮೇಳನ: ವೀಸಾ ನಿರಾಕರಣೆ: ಕೆಲವರಿಗೆ ಅಮೆರಿಕ ಕನಸು ಭಗ್ನ |
ಪ್ರಕಟಿಸಿದ ದಿನಾಂಕ : 2010-08-27
ಬೆಂಗಳೂರು : ಅಮೆರಿಕದಲ್ಲಿ ಸೆಪೆrಂಬರ್ ಮೂದಲ ವಾರದಲ್ಲಿ ನಡೆಯುವ 'ಅಕ್ಕ' ಸಮ್ಮೇಳನದಲ್ಲಿ ಭಾಗವಹಿಸಬೇಕೆಂಬ ಕೆಲವು ಸಾಹಿತಿ-ಕಲಾವಿದರ ಕನಸು ಭಗ್ನವಾಗಿದೆ.
ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ವೀಸಾ ನಿರಾಕರಣೆ ಮಾಡಿರುವುದರಿಂದ ಪ್ರವಾಸ ಕೈಗೊಳ್ಳುವುದು ಸಾಧ್ಯ ವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ 2 ಹಂತದಲ್ಲಿ ಸಿದ್ದಪಡಿಸಿದ್ದ 67 ಜನ ಸಾಹಿತಿ, ಕಲಾವಿದರು, ಅಧಿಕಾರೇತ ರರು ಮತ್ತು ಅಧಿಕಾರಿಗಳ ಪಟ್ಟಿಯಲ್ಲಿ 16 ಜನರಿಗೆ ವೀಸಾ ನಿರಾಕರಣೆಯಾಗಿದೆ.
ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಅಮೆರಿಕ ಪ್ರವಾಸದ ಪಟ್ಟಿಗೆ ಸೇರಿದ್ದ ಕೆಲವು ಸಾಹಿತಿ ಮತ್ತು ಕಲಾವಿದರಿಗೆ ಹೆಚ್ಚಿನ ನಿರಾಸೆ ಯಾಗಿದೆ. ಆದರೆ ವೀಸಾ ನಿರಾಕರಿಸಲ್ಪಟ್ಟವರಲ್ಲಿ ಅರ್ಹರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಗಮನಾರ್ಹ ಸಂಗತಿ ಯಾಗಿದೆ.
ಯಕ್ಷಗಾನ, ನಾಟಕ ಪ್ರದರ್ಶನಗಳಿಗೆ ತಲಾ ಮೂರು ಜನರ ಹೆಸರಿನ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧ ಪಡಿಸಿತ್ತು. ಆದರೆ ಈ ಎರಡು ಕ್ಷೇತ್ರಗಳಲ್ಲಿ ತಲಾ ಒಬ್ಬರಿಗೆ ಮಾತ್ರ ವೀಸಾ ಸಿಕ್ಕಿದೆ. ನಾಟಕ ಕ್ಷೇತ್ರದಲ್ಲಿ ನಾಯಕಿ ಪಾತ್ರ ಮಾಡಲು ಸಿದ್ಧಪಡಿಸಿದ್ದ ಮಾಲತಿ ಸರ್ದೇಶಪಾಂಡೆ ಅವರಿಗೆ ವೀಸಾ ನೀಡಿರುವ ಅಮೆರಿಕ ರಾಯಭಾರಿ ಕಚೇರಿ, ನಾಯಕ ಮತ್ತು ಪೋಷಕ ಪಾತ್ರಧಾರಿಗಳಬೇಕಾಗಿದ್ದ ಚಪ್ಪರ್ ಮತ್ತು ಧರ್ಮಣ್ಣ ಅವರಿಗೆ ನಿರಾಕರಿಸಲ್ಪಟ್ಟಿದೆ. ಇದರಿಂದಾಗಿ ನಾಟಕ ಪ್ರದರ್ಶನ ನೀಡುವುದಾದರೂ ಹೇಗೆ ಎಂಬ ಪ್ರಶ್ನೆ ಇಲಾಖೆಯನ್ನು ಕಾಡಲಾರಂಭಿಸಿದೆ.
ಯಕ್ಷಗಾನ ಪ್ರದರ್ಶನ ನೀಡಲು ಮುಂದಾಗಿದ್ದ ತಂಡದಲ್ಲಿ ಪ್ರಮುಖರಾದ ಸುಬ್ರಮಣ್ಯ ಹೆಗಡೆ ಮತ್ತು ಭಾಸ್ಕರ ಎಂಬುವವರಿಗೆ ವೀಸಾ ಸಿಕ್ಕಿಲ್ಲ. ಯಕ್ಷಗಾನ ಪ್ರದರ್ಶನವನ್ನು ಅಮೆರಿಕದಲ್ಲಿ ಕೊಡಿಸುವ ಇಲಾಖೆಯ ಆಸೆ ಇಲ್ಲಿ ಭಗ್ನವಾಗಿದೆ.
ಮಹಿಳೆಯರ ಡೊಳ್ಳು ಕುಣಿತದ ಎರಡು ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಎರಡು ತಂಡಗಳು ಶಿವಮೂಗ್ಗ ಜಿಲ್ಲೆಗೆ ಸೇರಿದ್ದರೆ, ಅದರಲ್ಲಿ ಒಂದು ತಂಡ ಮುಖ್ಯಮಂತ್ರಿ ಅವರ ತವರು ಕ್ಷೇತ್ರ ಶಿಕಾರಿಪುರಕ್ಕೆ ಸೇರಿದೆ. ಎರಡು ತಂಡದ ಆರು ಜನ ಸದಸ್ಯರಿಗೂ ವೀಸಾ ನೀಡಲು ಅಮೆರಿಕ ರಾಯಭಾರಿ ಕಚೇರಿ ನಿರಾಕರಿಸಿದೆ. ಸುಜಾತಾ ಮೂರ್ತಿ ಮತ್ತು ಚೂಡಾಮಣಿ ಅವರ ತಂಡಗಳಾ ಗಿವೆ.
ಸುಮಾರು 45ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿರುವ ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ, ದಲಿತ ಕವಿ ಸುಬ್ಬು ಹೊಲೆಯಾರ್, ರಂಗಭೂಮಿಯ ಹಿರಿಯ ನಟಿ ಪ್ರತಿಭಾ ನಾರಾಯಣ್ ಅವರು ವೀಸಾ ಸಿಕ್ಕಿಲ್ಲದ ಇತರೆ ಪ್ರಮುಖರಾಗಿ ದ್ದಾರೆ. ಸಾಹಿತಿ ಮತ್ತು ಕಲಾವಿದರ ಜತೆ ಸಮನ್ವಯ ಸಾಧಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂವರು ಅಧಿಕಾರಿಗಳು ಹೊರಟಿದ್ದರು. ಅದರಲ್ಲಿ ಗೆಜೆಟೆಡ್ ಮ್ಯಾನೇಜರ್ ಭಾವಿಕಟ್ಟಿ ಅವರಿಗೆ ವೀಸಾ ಸಿಕ್ಕಿಲ್ಲ. ಇದರಿಂದಾಗಿ ನಿರ್ದೇಶಕ ಮನು ಬಳಿಗಾರ್ ಮತ್ತು ಕಾರ್ಯದರ್ಶಿ ಜಯರಾಮರಾಜೇ ಅರಸು ಅವರಿಗೆ ಕೆಲಸದ ಹೊರೆ ಹೆಚ್ಚಾಗಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂದಲಿಗೆ 45 ಜನರ ಪಟ್ಟಿ ಸಿದ್ಧಪಡಿಸಿತ್ತು. ಆದರೆ ಮುಖ್ಯಮಂತ್ರಿ ಕಚೇರಿಯಿಂದ ಪದೇ ಪದೇ ಹೆಸರುಗಳು ಸೇರ್ಪಡೆಯಾಗಿದ್ದರಿಂದ ಅಂತಿಮವಾಗಿ 67 ಜನರಾದರು.
ಒಟ್ಟು 16 ಜನರಿಗೆ ವೀಸಾ ನಿರಾಕರಿಸಲ್ಪಟ್ಟಿರುವುದನ್ನು 'ಖಚಿತ ಪಡಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಅವರು, ಪ್ರತಿ ವರ್ಷ ಒಬ್ಬರು ಅಥವಾ ಇಬ್ಬರಿಗೆ ವೀಸಾ ನಿರಾಕರಣೆಯಾಗುತ್ತಿತ್ತು. ಆದರೆ ಇದೇ ಮೂದಲ ಬಾರಿಗೆ 16 ಜನರಿಗೆ ಸಿಕ್ಕಿಲ್ಲ. ಇಲಾಖೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದೆ. ಪ್ರತಿಭಾ ನಾರಾಯಣ್ ಅವರಿಗೆ ಎರಡು ವರ್ಷ ಸಿಕ್ಕಿರಲಿಲ್ಲ ಎಂದರು.
ಇಲಾಖೆ ವಿದೇಶಾಂಗ ಸಚಿವಾಲಯ, ಹೊಸದಿಲ್ಲಿಯಲ್ಲಿ ರಾಜ್ಯದ ಹೆಚ್ಚುವರಿ ವಿಶೇಷ ಪ್ರತಿನಿಧ ಕಚೇರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಮಾಹಿತಿ ನೀಡಿದೆ.
ಸೋಮವಾರದೊಳಗೆ ವೀಸಾ ಸಿಕ್ಕರೆ ಉಳಿದವರು ನಮ್ಮ ಜತೆ ಬರುತ್ತಾರೆ. ಇಲ್ಲದಿದ್ದರೆ ಇಲ್ಲ. ಉಳಿದವರ ತಂಡ ಸೆ.1ರ ರಾತ್ರಿ ಇಲ್ಲಿಂದ ಪ್ರಯಾಣ ಬೆಳಸಲಿದೆ ಎಂದು ಸ್ಪೆಷ್ಟಪಡಿಸಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-08-27 00:00:00
|
|
|