ಬೆ೦ಗಳೂರು: ರಾಜ್ಯಪಾಲರ ವಿರುದ್ಧ ದೂರು ರಾಷ್ಟ್ರಪತಿಗೆ: ವಿಮಾನ ನಿಲ್ದಾಣ ಅಭಿವೃದ್ಧಿ: ಅದಿರು ಅಕ್ರಮದಲ್ಲಿ ಅಧಿಕಾರಿಗಳೇ ಶಾಮೀಲು: ಸಿಎಂ |
ಪ್ರಕಟಿಸಿದ ದಿನಾಂಕ : 2010-07-30
ಬೆಂಗಳೂರು, ಜು.29: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್)ವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿರುವ ತನ್ನ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಬಿಐಎಎಲ್, ಬಿಡಿಎ ಹಾಗೂ ಜಿವಿಕೆ ಸಮೂಹದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನ ಮುಂಚೂಣಿಯ ವಿಮಾನ ನಿಲ್ದಾಣಗಳಿಗೆ ಸರಿ ಸಮನಾಗಿ ಬೆಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರೂಪುಗೊಳಿಸಲಾಗುವುದು ಎಂದರು.
ಬಿಡಿಎನಲ್ಲಿ ಶೇ.29ರಷ್ಟು ಈಕ್ವಿಟಿ ಹೂಡುವ ಮೂಲಕ ಬಿಐಎಎಲ್‌ನ ವಿಸ್ತರಣಾ ಕಾರ್ಯಕ್ಕೆ ಎರಡು ಹಂತಗಳಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಹಣ ತೊಡಗಿಸಲು ಜಿವಿಕೆ ಸಮೂಹ ಮುಂದಾ ಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ದೇಶೀಯ ಬಳಕೆಗೆ ಉಪಯೋಗಿಸಿಕೊ ಳ್ಳುವ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದರು.
ರಾಜ್ಯಪಾಲರ ವಿರುದ್ಧ ದೂರು ರಾಷ್ಟ್ರಪತಿಗೆ: ಯಡಿಯೂರಪ್ಪ
ಬೆಂಗಳೂರು, ಜು. ೨೯ : ಅಕ್ರಮ ಗಣಿಗಾರಿಕೆಯಷ್ಟೇ ಅಲ್ಲ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮ ದಂಧೆಗಳಿಗೂ ಕಡಿವಾಣ ಹಾಕಲು ನಿರ್ಧರಿಸಿದ್ದೇನೆ, ಅದಕ್ಕಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ಧನಾಗಿದ್ದೇನೆ...
ರಾಜಕೀಯದಲ್ಲಿ ಏರುಪೇರುಗಳು ಇದ್ದೇ ಇರುತ್ತವೆ. ಅಕ್ರಮ ಗಣಿಗಾರಿಕೆ ನಿಷೇಧದ ಸವಾಲನ್ನು ರಾಜಕೀಯವಾಗಿ ಎದುರಿಸಲು ಸಿದ್ಧನಿದ್ದೇನೆ, ಏನೇ ಬರಲಿ ಎದುರಿಸುತ್ತೇನೆ... ಆತ್ಮವಿಶ್ವಾಸದಿಂ ದ ಬೀಗುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಖಚಿತ ನುಡಿಗಳಿವು. ಗುರುವಾರ ಹಿರಿಯ ಪತ್ರಕರ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ಅಕ್ರಮ ಗಣಿಗಾರಿಕೆ ತಡೆಯಲು ಕೈಗೊಂಡಿರುವ ನಿರ್ಧಾರ ಹಾಗೂ ಅದರ ಹಿನ್ನೆಲೆಯನ್ನು ಬಿಡಿಸಿಟ್ಟರು. ಅದಿರು ರಫ್ತು ಹಾಗೂ ಸಾಗಣೆ ನಿರ್ಬಂಧಿಸಿ ಹೊರಡಿಸಿದ ಆದೇಶದಿಂದಾಗುವ ಪರಿಣಾಮಗಳ ಬಗ್ಗೆ ಪತ್ರಕರ್ತರಿಗಿದ್ದ ಕುತೂಹಲವನ್ನು ತಣಿಸಿದರು.
ರಾಷ್ಟ್ರದ, ರಾಜ್ಯದ ಸಂಪತ್ತನ್ನು ಉಳಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ಇದು ರೆಡ್ಡಿಗಳ ವಿರುದ್ಧವಾಗಲೀ ಅಥವಾ ಕಾಂಗ್ರೆಸ್ ನಾಯಕರ ವಿರುದ್ಧವಾಗಲಿ ಮಾಡುತ್ತಿರುವ ಹೋರಾಟ ಅಲ್ಲ, ಎಲ್ಲವನ್ನು ಯೋಚಿಸಿ, ಚಿಂತಿಸಿ ತಜ್ಞರೊಂದಿಗೆ ಚರ್ಚಿಸಿಯೇ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಸ್ಪಷ್ಟಪಡಿಸಿದರು.
ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಹಿಂದಿನ ಮುಖ್ಯಮಂತ್ರಿ ಧರಂಸಿಂಗ್ ಅವರ ಕಾಲದಲ್ಲಿ ಪರ್ಮಿಟ್ ನೀಡಿದಾಗ ಬೊಕ್ಕಸಕ್ಕೆ ಆಗಿರುವ ೨೦ ಕೋಟಿ ರುಪಾಯಿ ನಷ್ಟವನ್ನು ಧರಂ ಸಿಂಗ್ ಅವರರಿಂದಲೇ ಪಡೆಯಬೇಕೆಂದು ಉಲ್ಲೇಖಿಸಿದ್ದಾರೆ. ಆದರೆ, ಈ ಅಂಶವನ್ನು ರಾಜ್ಯಪಾಲರು ವಾಪಸ್ ಪಡೆದಿದ್ದಾರೆ.
ರಾಜ್ಯಪಾಲರ ಈ ಕ್ರಮ ಕಾನೂನು ಬಾಹಿರ. ಈ ಬಗ್ಗೆ ರಾಷ್ಟ್ರಪತಿಗಳಿಗೂ ದೂರು ನೀಡುತ್ತೇನೆ, ಅಗತ್ಯಬಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗಲು ಚಿಂತನೆ ನಡೆಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಆಡಳಿತದಲ್ಲಿ ಸಂಪೂರ್ಣ ಸುಧಾರಣೆ ಮಾಡುತ್ತೇನೆ, ಎರಡುವಾರಗಳ ಕಾಲ ಕಾಯಿರಿ ಏನು ಮಾಡುತ್ತೇನೆಂದು ನೀವೇ ನೋಡುವಿರಿ.
ಅಕ್ರಮ ಗಣಿಗಾರಿಕೆ ತಡೆಯಲು ನಾನು ಕೈಗೊಂಡಿರುವ ಎಲ್ಲಾ ಕ್ರಮಗಳಿಗೂ ಪಕ್ಷದ ವರಿಷ್ಠರ ಬೆಂಬಲ ಇದೆ. ನಾನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಗೆ ಹೋಗುವ ಮುನ್ನ ಪಕ್ಷದ ಹಿರಿಯ ನಾಯಕರಿಗೆ ನನ್ನ ನಿರ್ಧಾರವನ್ನು ತಿಳಿಸಿ ಒಪ್ಪಿಗೆ ಪಡೆದಿದ್ದೇನೆ. ಆ ನಂತರವೇ ಅಕ್ರಮ ಗಣಿ ಗಾರಿಕೆ ಹಾಗೂ ಅದಿರು ರಫ್ತು ನಿಷೇಧ ಮಾಡುವ ಕ್ರಮ ಕೈಗೊಂಡಿದ್ದೇನೆ. ಈ ಬಗ್ಗೆ ಒರಿಸ್ಸಾ ರಾಜ್ಯ ಸರ್ಕಾರ ಹೊರತು ಪಡಿಸಿ ಎಲ್ಲಾ ರಾಜ್ಯ ಸರ್ಕಾರಗಳು ಸಹಮತ ವ್ಯಕ್ತಪಡಿಸಿವೆ ಎಂದರು.
ಅಕ್ರಮ ಅದಿರು ಸಾಗಣೆ ತಡೆಗೆ ಬಾರ್‌ಕೋಡ್ ವ್ಯವಸ್ಥೆ, ಪರ್ಮಿಟ್‌ಗಳ ಬಳಕೆಗೆ ಒಂದುವಾರ ಮಾತ್ರ ಅವಕಾಶ, ಲಾರಿಗಳ ಮೇಲೆ ನಿಗಾ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಯಾವುದೇ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬಾರದೆಂಬುದು ನಮ್ಮ ಪಕ್ಷದ ರಾಷ್ಟ್ರೀ ಯ ನಾಯಕರ ತೀರ್ಮಾನ. ಹೀಗಾಗಿ ಅಕ್ರಮ ಗಣಿಗಾರಿಕೆ ಸೇರಿದಂತೆ ಯಾವುದೇ ಪ್ರಕರಣ ವನ್ನು ಸಿಬಿಐಗೆ ಒಪ್ಪಿಸುವುದಿಲ್ಲ. ಲೋಕಾಯುಕ್ತರು ತನಿಖೆ ನಡೆಸಿ ವರದಿ ನೀಡಿದ ನಂತರ ಎಲ್ಲಾ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಬೇನಾಮಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಪ್ರಭಾವಿಗಳು ಈ ಕೆಲಸ ಮಾಡುತ್ತಿದ್ದಾರೆ. ಉಪ್ಪುತಿಂದವರು ನೀರು ಕುಡಿಯಲೇ ಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಅದಿರು ಅಕ್ರಮದಲ್ಲಿ ಅಧಿಕಾರಿಗಳೇ ಶಾಮೀಲು: ಯಡ್ಡಿ
ಬೆಂಗಳೂರು, ಶುಕ್ರವಾರ, 30 ಜುಲೈ 2010
''ಅದಿರು ಸಾಗಣೆ ದಾರಿಯುದ್ದಕ್ಕೂ ಅಧಿಕಾರಿಗಳು ಶಾಮೀಲಾಗಿರುವುದು ನನಗೆ ತಿಳಿದಿದೆ. ಶೀಘ್ರದಲ್ಲೇ ಆಡಳಿತಕ್ಕೆ ಚುರುಕು ನೀಡುತ್ತೇನೆ. ಕಾದು ನೋಡಿ'' ಹೀಗೆ ಹೇಳಿದ್ದು ಇನ್ಯಾರೂ ಅಲ್ಲ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಅದಿರು ರಫ್ತು ನಿಷೇಧ ನಿರ್ಧಾರ ಕೈಗೊಂಡ ಸಂದರ್ಭ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಪಕ್ಷದ ಹೈಕಮಾಂಡ್‌ನ ಅನುಮತಿ ಪಡೆದೇ ತಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರಧಾನಿಯವರನ್ನು ಕಂಡು ಅದಿರು ರಫ್ತು ನಿಷೇಧ ಮಾಡಲು ಆಗ್ರಹಿಸಿದೆ. ಆದರೆ ಅವರಿಂದ ಸಕಾರಾತ್ಮಕ ವಾದ ಯಾವುದೇ ಪ್ರತಿಕ್ರಿಯೆ ಕಂಡುಬರಲಿಲ್ಲ. ದಾರಿ ಕಾಣದೆ ಕೊನೆಗೆ ನಮ್ಮ ಪಕ್ಷದ ಹಿರಿಯರಲ್ಲಿ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನಗೆ ಬೇರೆ ಯಾವುದೇ ದಾರಿಯಿಲ್ಲ. ಇರೋದು ಇದೊಂದೇ ದಾರಿ ಎಂದರು.
ಆದರೆ ಈ ಕುರಿತು ತಾವು ಪಕ್ಷದ ಹಿರಿಯರಾದ ಸುಷ್ಮಾ ಸ್ವರಾಜ್ ಅವರ ಅನುಮತಿ ಕೇಳಿದ್ದೀರಾ ಎಂಬ ಪ್ರಶ್ನೆಗೆ ಏನೂ ಉತ್ತರಿಸದೆ ಕೇಳಿಸದಂತೆ ನಗುವಿನಲ್ಲೇ ಮಾತು ಹಾರಿಸಿದರು.
ಅಕ್ರಮ ಗಣಿಗಾರಿಕೆ ಹಗರಣದ ತನಿಖೆಯನ್ನು ಯಾವುದೇ ಕಾರಣಕ್ಕೆ ಸಿಬಿಐಗೆ ನೀಡುವ ಕೆಲಸ ಮಾಡೋದಿಲ್ಲ ಎಂದು ಒತ್ತಿ ಹೇಳಿದ ಅವರು ಸಿಬಿಐ ಕಾಂಗ್ರೆಸ್‌ನ ಕೈಗೊಂಬೆ ಎಂಬುದು ತಿಳಿದಿದೆ. ಹಾಗಾಗಿ ಯಾವ ಕಾರಣಕ್ಕೂ ಸಿಬಿಐಗೆ ತನಿಖೆಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅದಿರು ರಫ್ತಿಗೆ ನಿಷೇಧ ಹೇರುವುದರಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗು ತ್ತಾರೆ ಎಂಬ ಸಚಿವ ಜನಾರ್ಧನ ರೆಡ್ಡಿ ಹೇಳಿಕೆಯನ್ನು ಪತ್ರಕರ್ತರು ಮುಖ್ಯಮಂತ್ರಿಗಳ ಗಮನ ಸೆಳೆದಾಗ ಅವರು, ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವುದರಿಂದ ಆಗುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಅದಿರು ಸಾಗಣೆಯ ಅಕ್ರಮದಲ್ಲಿ ಸಾಕಷ್ಟು ಅಧಿಕಾರಿಗಳು ಶಾಮೀಲಾಗಿರುವುದು ನನಗೆ ಗೊತ್ತು. ಶೀಘ್ರದಲ್ಲಿಯೇ ಇವೆಲ್ಲವುಗಳಿಗೆ ಉತ್ತರ ನೀಡಿ ಆಡಳಿತಕ್ಕೆ ಚುರುಕು ನೀಡುತ್ತೇನೆ, ಕಾದು ನೋಡಿ ಎಂದು ಯಡಿಯೂರಪ್ಪ ತಿಳಿಸಿದರು.
| |
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30 00:00:00
|
|
|