ಸುಳ್ಯದಲ್ಲಿ ಮತ್ತೆ ಕಳ್ಳತನ ಮನೆಗೆ ನುಗ್ಗಿ 28 ಪವನ್ ಚಿನ್ನಾಭರಣ ಕಳವು |
ಪ್ರಕಟಿಸಿದ ದಿನಾಂಕ : 2010-07-30
ಸುಳ್ಯ, ಜು.29: ನಗರದಲ್ಲಿ ಸರಣಿ ಕಳ್ಳತನ ಮತ್ತೆ ಮುಂದುವರಿದಿದೆ. ಇತ್ತೀಚೆಗಷ್ಟೆ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ ಬೆನ್ನಿಗೆ ನಗರದ ಮನೆಯೊಂದರಲ್ಲಿ ಮತ್ತೆ ಕಳ್ಳತನ ನಡೆದಿದ್ದು, 28 ಪವನ್ ಚಿನ್ನಾಭರಣ ಹಾಗೂ ಒಂದು ಸಾವಿರ ನಗದು ಕಳವಾಗಿದೆ.
ಕಾನತ್ತಿಲ ಎಂಬಲ್ಲಿರುವ ನಿವೃತ್ತ ಶಿಕ್ಷಕ ಶಂಕರನಾರಾಯಣ ಭಟ್ ಎಂಬವರು ಬುಧವಾರ ಸಂಬಂಧಿಕರ ಮನೆಗೆ ತೆರಳಿದ್ದರು. ಅವರ ಪತ್ನಿ ಇಂದಿರಾ, ಮಕ್ಕಳಾದ ಕೃಷ್ಣ ಮತ್ತು ಗೌರಿ ಮನೆಯ ಮಹಡಿಯಲ್ಲಿ ಮಲಗಿದ್ದರು. ರಾತ್ರಿ 2.15ಕ್ಕೆ ಬಾಯಾರಿಕೆಯಾಗಿ ನೀರು ಕುಡಿಯಲು ಇಂದಿರಾ ಕೆಳಗೆ ಬಂದಾಗ ಕಳ್ಳತನ ತಿಳಿಯಿತೆನ್ನಲಾಗಿದೆ
ಬೆದರಿಸಿದ ಕಳ್ಳ: ನೀರು ಕುಡಿಯಲು ಇಂದಿರಾ ಮಹಡಿಯಿಂದ ಕೆಳಗಿಳಿದು ಬಂದಾಗ ಮನೆಯ ಬೀಗ ತೆಗಿದಿತ್ತೆನ್ನಲಾಗಿದೆ. ರಾತ್ರಿ ಮೇಲಿನ ರೂಮಿಗೆ ತೆರಳುವಾಗ ತಾನೇ ಬೀಗ ಹಾಕಲು ಮರೆತಿರಬಹುದೆಂದು ಸಂದೇಹಿಸಿದ ಆಕೆ ಒಳ ಹೊಕ್ಕು ಲೈಟ್ ಹಾಕಿದಾಗ ಕಳ್ಳ ತಿಜೋರಿ ಒಡೆದು 28 ಪವನ್ ಚಿನ್ನಾಭರಣ ಹಾಗೂ ಒಂದು ಸಾವಿರ ನಗದನ್ನು ಪ್ಯಾಕ್ ಮಾಡುತ್ತಿದ್ದ, ಯಾರು ಎಂದು ಇಂದಿರಾ ಪ್ರಶ್ನಿಸಿದಾಗ ‘ಮಾತನಾಡಬೇಡ ಬಾಗಿಲು ಹಾಕು’ ಎಂದು ಆತ ಬೆದರಿಸಿದ ಎನ್ನಲಾಗಿದೆ. ಕೂಡಲೇ ಆಕೆ ಬೊಬ್ಬೆ ಹೊಡೆದುದರಿಂದ ಗಾಬರಿಗೊಂಡ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಮಧ್ಯೆ ಇಲ್ಲಿಯೆ ಹತ್ತಿರದ ಸೀತಾರಾಮ ಚೀಮುಳ್ಳು ಎಂಬವರ ಮನೆಯ ಬೀಗವನ್ನು ಕೂಡಾ ಒಡೆಯಲು ವಿಫಲ ಪ್ರಯತ್ನ ನಡೆಸಿರುವುದು ಕಂಡು ಬಂದಿದೆ. ಪುತ್ತೂರು ಎಎಸ್‌ಪಿ ಅಮಿತ್ ಸಿಂಗ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕೂಡಾ ಆಗಮಿಸಿದೆ. ಇತ್ತೀಚೆಗಷ್ಟೆ ಇದೆ ನಗರದಲ್ಲಿ ಎರಡು ಕಡೆ ಚಿನ್ನಾಭರಣ ಕಳವು ಕೃತ್ಯ ನಡೆದಿತ್ತು. ಕಳವು ಪ್ರಕರಣಕ್ಕೆ ಸಂಬಂಧಿಸಿ ಹಕ್ಕಿ-ಪಿಕ್ಕಿ ಜನಾಂಗದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30 00:00:00
|
|
|