ಮಂಗಳೂರು, ಜು. 29: ಮೈಸೂರಿನ ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ 2010-11ನೇ ಸಾಲಿನಿಂದ ಲಲಿತಕಲೆಗಳ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು 'ಸ್ಥಾನಿಕ ದೂರಶಿಕ್ಷಣ' ಎಂಬ ಹೊಸ ಬೋಧನಾ ಪದ್ಧತಿಯಲ್ಲಿ ನಡೆಸಲು ಅನುಮತಿ ನೀಡಿದೆ.
ಸ್ಥಾನಿಕ ಶಿಕ್ಷಣವೆಂದರೆ ವಿದ್ಯಾರ್ಥಿ ತಾನಿರುವ ಸ್ಥಳದಲ್ಲಿ ಕಲಾ ಶಿಕ್ಷಕರಿಂದ ಪಾಠ ಕಲಿತು ಪ್ರಮಾಣಪತ್ರ ಪಡೆಯುವುದು. ನೃತ್ಯ, ಸಂಗೀತ ಹಾಗೂ ದೃಶ್ಯಕಲೆಗಳಾದ ಚಿತ್ರಕಲೆ, ಶಿಲ್ಪಕಲೆ, ಅನ್ವಯಕಲೆ, ಕಲಾವಿಮರ್ಶೆ ಹಾಗೂ ಕಲಾ ಇತಿಹಾಸ ಈ ವಿಷಯಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಾದ ಬಿ.ಮ್ಯೂಸಿಕ್, ಬಿ.ಡ್ಯಾನ್ಸ್, ಪ್ರದರ್ಶನ ಕಲೆ ಮತ್ತು ದೃಶ್ಯ ಕಲೆಗಳು ಪ್ರಾರಂಭವಾಗಿವೆ ಎಂದು ಆಡಳಿತಾಧಿಕಾರಿ ಡಾ. ಉಪಾಧ್ಯ ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ 16 ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇನ್ನೂ 12 ಕಡೆಗಳಲ್ಲಿ ಕೇಂದ್ರ ಆರಂಭಿಸ ಲಾಗುತ್ತಿದೆ. ಪ್ರತಿ 50 ಕಿ.ಮೀ. ಅಂತರದಲ್ಲಿ ಕೇಂದ್ರ ಆರಂಭಿಸಲಾಗುತ್ತದೆ. ಪ್ರದರ್ಶನ ಕಲೆಗಳು ಮತ್ತು ದೃಶ್ಯ ಕಲೆಗಳು ದೇಶದಲ್ಲಿಯೇ ಪ್ರಥಮ ದೂರ ಶಿಕ್ಷಣ ಕಲಾಪದವಿಗಳಾಗಿವೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ರಾಘವೇಂದ್ರ ಉಪಸ್ಥಿತರಿದ್ದರು.