|
ಪ್ರಕಟಿಸಿದ ದಿನಾಂಕ : 2010-07-29
ಬಳ್ಳಾರಿ ಗಣಿಧಣಿಗಳ ಗುರಾಣಿ ರಾಜಕೀಯ.. ಕಾಂಗ್ರೆಸ್ ಪಾದಯಾತ್ರೆಗೆ ತಿರುಗೇಟು.. ಕಮಲದಲ್ಲಿ ಬಿರುಕು.. ರೆಡ್ಡಿಗಳ ಸೆಡ್ಡು...ಬಳ್ಳಾರಿಯಲ್ಲಿ ಪಾದಯಾತ್ರೆ ಸಮಾವೇಶ
ಬೆಂಗಳೂರು, ಜು. 28: ಅಕ್ರಮ ಗಣಿಗಾರಿಕೆ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಹೊರಡುತ್ತಿದ್ದಂತೆಯೇ ರೆಡ್ಡಿ ಸಹೋದರ ಸಚಿವರು ಆತ್ಮರಕ್ಷಣೆಯ ಗುರಾಣಿ ಹಿಡಿದು ಹೋರಾಟದ ಅಂಗಳಕ್ಕೆ ದಿಢೀರನೆ ಜಿಗಿದಿದ್ದಾರೆ.
ಒಂದು ಕಡೆ ತಮ್ಮನ್ನೇ ಗುರಿಯಾಗಿಸಿಕೊಂಡ ಕಾಂಗ್ರೆಸ್ ಪಾದಯಾತ್ರೆ , ಅದಕ್ಕೆ ಪ್ರತಿಯಾಗಿ ನಡೆಸಲು ಉದ್ದೇಶಿಸಿದ್ದ ಬಳ್ಳಾರಿ ಮೈಸೂರು ಪಾದಯಾತ್ರೆಗೆ ಬಿಜೆಪಿ ವರಿಷ್ಠರ ಬ್ರೇಕ್, ಪಕ್ಷದಲ್ಲಿ ಕರಗುತ್ತಿರುವ ತಮ್ಮ ಬೆಂಬಲ ಪ್ರಾಬಲ್ಯ ಮತ್ತಿತರ ಕಾರಣ ಗಳಿಂದ ಅದೀರರಾದಂತೆ ಕಂಡು ಬಂದಿರುವ ರೆಡ್ಡಿ ಸಹೋದರರು ಅಂತಿಮವಾಗಿ ತಮ್ಮ ಸ್ವರಕ್ಷಣೆಗೆ ಎನ್ನುವಂತೆ ಬಳ್ಳಾರಿಯಲ್ಲಿ ತಮ್ಮದೇ ಹೋರಾಟವನ್ನು ಘೋಷಿಸಿದ್ದಾರೆ.
ಬಳ್ಳಾರಿಯಲ್ಲಿ ಇಂದು ಇಡೀ ದಿನ ನಡೆದ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ರೆಡ್ಡಿ ಸಹೋದರರು ಯಡಿಯೂರಪ್ಪ ನೇತೃತ್ವದ ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದು ಸ್ವಯಂ ರಕ್ಷಣೆಗಾಗಿ ಪಾದಯಾತ್ರೆ ಹಾಗೂ ಬಳ್ಳಾರಿ ಜಿಲ್ಲೆಯಾದ್ಯಂತ ಆಗಸ್ಟ್ 6ರ ವರೆಗೆ ಸಮಾವೇಶ ನಡೆಸುವ ಕಾರ್ಯಕ್ರಮ ಘೋಷಿಸುವುದರೊಂದಿಗೆ ರೆಡ್ಡಿಗಳು ಪಕ್ಷದ ಆದೇಶ ಉಲ್ಲಂಘಿಸಿದಂತೆ ಆಗಿದೆ. ಇದರೊಂದಿಗೆ 'ಕಮಲ' ದೊಳಗೆ ಬಿರುಕು ಕಾಣಿಸಿಕೊಂಡಿದೆ.
ಅಕ್ರಮ ಗಣಿಗಾರಿಕೆ ಬಿಜೆಪಿ ಸರ್ಕಾರವನ್ನು ಸುತ್ತಿಕೊಳ್ಳುತ್ತಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಬಳಸುತ್ತಿರುವ ಈ ಬ್ರಹ್ಮಾಸ್ತ್ರದ ಮೂನಚು ಬಳ್ಳಾರಿಯ ಸಚಿವತ್ರಯರಾದ ಜನಾರ್ದನರೆಡ್ಡಿ , ಶ್ರೀರಾಮುಲು ಹಾಗೂ ಕರುಣಾಕರರೆಡ್ಡಿ ಅವರ ಕಡೆಗೇ ತಿರುಗಿದೆ. ವಿಧಾನಮಂಡಲದ ಉಭಯ ಸದನಗಳಲ್ಲಿ ಆರಂಭವಾದ ಹೋರಾಟ ಈಗ ರಾಜಧಾನಿಯಿಂದ ಬಳ್ಳಾರಿ ಮಾರ್ಗದಲ್ಲಿ ಹೊರಟಿದೆ.
ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹಣೆಯುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ವರ್ಚಸ್ಸು ಉಳಿಸಲು ರಫ್ತು ನಿಷೇಧದಂತಹ ದಿಟ್ಟ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ರೆಡ್ಡಿಗಳನ್ನು ರಕ್ಷಿಸುವ ಇರಾದೆ ಅವರಿಗೆ ಇಲ್ಲ ಎನ್ನುವುದು ಸ್ವತಃ ರೆಡ್ಡಿ ಸಹೋದರರಿಗೇ ಅರ್ಥವಾಗಿರುವುದು ಆತ್ಮರಕ್ಷಣೆಯ ಹೊಸ ವರಸೆಗೆ ಕಾರಣವಾಗಿದೆ.
ಅಕ್ರಮ ಗಣಿಗಾರಿಕೆ ವಿಷಯ ಪ್ರಸ್ತಾಪದ ವೇಳೆ ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಪ್ರತಿಪಕ್ಷಗಳು ರೆಡ್ಡಿ ಸಹೋದರ ಸಚಿವರ ವಿರುದ್ದ ಮುಗಿಬಿದ್ದರೂ ಆಡಳಿತ ಪಕ್ಷದ ಸಾಲಿನಲ್ಲಿ ಅವರನ್ನು ಸಮರ್ಥಿಸುವ ಉತ್ಸಾಹ ಕಾಣಲಿಲ್ಲ . ಅಕ್ರಮ ಗಣಿಗಾರಿಕೆ ಬಗ್ಗೆ ಸರ್ಕಾರದ ನಿಲುವು ವ್ಯಕ್ತಪಡಿಸುವುದು, ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುವುದು ಮುಖ್ಯಮಂತ್ರಿಗಳಿಗೆ ಅನಿವಾರ್ಯವಾಗಿತ್ತು .
ರೆಡ್ಡಿ ಸಹೋದರರ ಬಗ್ಗೆ ಆಡಳಿತ ಪಕ್ಷದಲ್ಲಿಯೇ ಕರಗುತ್ತಿರುವ ಸಹಾನುಭೂತಿಯ ಲಕ್ಷಣಗಳು ಅಧವೇಶನದಲ್ಲಿ ಸ್ಪೆ ಷ್ಟವಾಗಿ ಕಾಣಿಸಿದವು. ಪ್ರತಿಪಕ್ಷ ನಾಯಕರು ತಮ್ಮ ವಿರುದ್ಧ ಅಪರೋಕ್ಷವಾಗಿ ಮಾಡಿದ ಆರೋಪಗಳಿಗೆ ಉತ್ತರಿಸುವ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಸದನದ ಹೊರಗಿನ ವೇದಿಕೆ ಬಳಸಿಕೊಳ್ಳಬೇಕಾಗಿ ಬಂತು.
ರೆಡ್ಡಿ ಬಣಕ್ಕೆ ಶಾಕ್:
ರೆಡ್ಡಿ ಬಣಕ್ಕೆ ಮೂದಲು ಶಾಕ್ ನೀಡಿದ್ದು ಶ್ರೀರಾಮುಲು ಪಾದಯಾತ್ರೆ ಬಗ್ಗೆ ಪಕ್ಷದ ಕಠಿಣ ನಿಲುವು. ಕಾಂಗ್ರೆಸ್ಯಾತ್ರೆಗೆ ಪರ್ಯಾಯ ವಾಗಿ ಬಳ್ಳಾರಿ ಮೈಸೂರು ಪಾದಯಾತ್ರೆ ನಡೆಸುವ ಆರೋಗ್ಯ ಸಚಿವ ಶ್ರೀರಾಮಲು ಏಕಪಕ್ಷೀಯ ನಿರ್ಧಾರವನ್ನು ಪಕ್ಷ ತಳ್ಳಿ ಹಾಕಿತು. ಆ ಮೂಲಕ ನೀವು ಪಕ್ಷದ ಚೌಕಟ್ಟಿನ ಲಕ್ಷ್ಮಣ ರೇಖೆಯಲ್ಲಿ ಇದ್ದೀರಿ ಎನ್ನುವ ನಿಷೂರ ಎಚ್ಚರಿಕೆ ಮುಖ್ಯಮಂತ್ರಿ ನೀಡಿದರು. ತಾವು ಆಡಿದ್ದೇ ಆಟ ಎನ್ನುವ ರೆಡ್ಡಿ ಸಹೋದರರಿಗೆ ಇದು ಮೂದಲ ಶಾಕ್. ಪಕ್ಷದ ನಿಲುವಿನಿಂದ ಅಸಮಾಧಾನ ಗೊಂಡ ಅವರು ದೆಹಲಿಗೆ ತೆರಳಿ, ವರಿಷ್ಠರ ಮೂರೆ ಹೋದರು. ಆದರೆ ಸಚಿವರೇ ಪಾದಯಾತ್ರೆಗೆ ಇಳಿಯುವ ನಿರ್ಧಾರಕ್ಕೆ ವರಿಷ್ಠ ರು ಸಮ್ಮತಿ ಸೂಚಿಸಲಿಲ್ಲ . ಬದಲಾಗಿ 'ತಾಯಿ' ಸುಷಾ ಅವರೇ ಪಕ್ಷದ ಶಿಸ್ತಿನ ಪಾಠ ಹೇಳಿದರು. ತಮ್ಮ ಮೇಲಿನ ಆರೋಪ ಗಳಿಗೆ ಬೀದಿ ಹೋರಾಟದ ಮೂಲಕ ಉತ್ತರ ಹೇಳಲು ಹೊರಟಿದ್ದ ರೆಡ್ಡಿ ಸಹೋದರರಿಗೆ ಅಭಿಮಾನ ಭಂಗವಾಯಿತು.
ವಿಧಾನಮಂಡಲ ಮತ್ತು ಹೊರಗಿನ ಹೋರಾಟದ ಪ್ರತಿತಂತ್ರಗಳಲ್ಲಿ ರೆಡ್ಡಿಗಳನ್ನು ಅನಿವಾರ್ಯವಾಗಿ ಸಮರ್ಥಿಸಬೇಕಾದ ಮುಖ್ಯಮಂತ್ರಿಗಳಿಗೆ ಅವರನ್ನು ರಕ್ಷಿಸುವ ಇರಾದೆ ಇಲ್ಲ . ಕಳೆದ ಅಕ್ಟೋಬರ್ನಲ್ಲಿ ತಮ್ಮ ವಿರುದ್ಧವೇ ಬಂಡಾಯದ ಭಾವುಟ ಹಾರಿಸಿ, ಸರ್ಕಾರದ ಕುತ್ತಿಗೆ ಹಿಡಿದಿದ್ದ ಗಣಿದಣಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸಹಾನುಭೂತಿಯೂ ಇಲ್ಲ . ಸರ್ಕಾರಕ್ಕೆ 'ತಲೆ ನೋವಾಗಿರುವ' ರೆಡ್ಡಿ ಸಹೋದರರನ್ನು ಕಟ್ಟಿಕೊಂಡೇ ಆಡಳಿತ ನಡೆಸುವ ಉತ್ಸಾಹವೂ ಇಲ್ಲ . ಆದರೆ ರೆಡ್ಡಿಗಳಿಗಿರುವ ವರಿಷ್ಠರ ರಕ್ಷಣೆ ಮುಖ್ಯಮಂತ್ರಿಗಳ ಕೈ ಕಟ್ಟಿ ಹಾಕಿದೆ. ಇದು ರೆಡ್ಡಿ ಬಳಗಕ್ಕೂ ಗೊತ್ತಿದೆ. ಆ ಹಿನ್ನೆಲೆಯಲ್ಲಿಯೇ ಜನಾದೇಶ ಪಡೆಯುವ ಮಾತುಗಳು ಆಗಾಗ ಮುಖ್ಯಮಂತ್ರಿಗಳಿಂದ ಹೊರ ಬಿದ್ದಿದೆ. ಒಂದು ವೇಳೆ ಅಕ್ರಮ ಗಣಿಗಾರಿಗೆ ವಿಷಯವೇ ಸರ್ಕಾರಕ್ಕೆ ತಲೆನೋವಾದರೆ, ಅದೇ ವಿಷಯ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಮಧ್ಯಂತರ ಚುನಾವಣೆಗೂ ಮುಂದಾಗಬಹುದು. ಅದಕ್ಕಾಗಿಯೇ ರಫ್ತು ನಿಷೇಧದಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿರಬಹುದು ಎನ್ನುವ ಅನುವಾನವೂ ರೆಡ್ಡಿ ಬಳಗದಲ್ಲಿ ಸೃಷ್ಟಿಯಾಗಿದೆ.
ಕೈ ಬಿಟ್ಟ ಮಿತ್ರರು:
ದಕ್ಷಿಣ ಭಾರತದಲ್ಲಿ ಮೂಟ್ಟ ಮೂದಲು ಅರಳಿದ ಕಮಲದ ಸರ್ಕಾರಕ್ಕೆ ಸ್ಥಿರತೆ ತಂದುಕೊಡುವಲ್ಲಿ ತಮ್ಮ ಶಕ್ತಿಧಾರೆ ಎರೆದ ರೆಡ್ಡಿ ಸಹೋದರರು ತ್ರಿವಿಕ್ರಮರಂತೆ ಪಕ್ಷ ಮತ್ತು ಸರ್ಕಾರದಲ್ಲಿ ಬೆಳೆದು ನಿಂತರು. ವಿಧಾನಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ 'ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಅತ್ಯಲ್ಪ ಅವಧಯಲ್ಲಿ ಪಕ್ಷ ಮತ್ತು ಸರ್ಕಾರದ ಮೇಲೆ ಹಿಡಿತ ಸಾಧಸಿದರು. ಒಂದೊಂದೇ ಹೆಜ್ಜೆಯಿಟ್ಟ ರೆಡ್ಡಿ ಬಳಗ ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ತೊಡೆತಟ್ಟುವ ಧೈರ್ಯ ಪ್ರದರ್ಶಿಸಿದ್ದು ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಗಣಿಸಿತ್ತು . ಅವರ ಬಗ್ಗೆ ಪಕ್ಷದೊಳಗೇ ಇರುವ ಅಸಮಾಧಾನ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗುತ್ತಿದೆ.
ಇದಕ್ಕೆ ಪ್ರತಿಯಾಗಿ ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮ ಶಕ್ತಿ ಕ್ಷೀಣವಾಗುತ್ತಿರುವ ಆತಂಕ ರೆಡ್ಡಿ ಬಳಗವನ್ನು ಕಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಬಂಡಾಯದಲ್ಲಿ ತಮ್ಮದೇ ಪ್ರತ್ಯೇಕ ಅಜೆಂಡಾ ಇಟ್ಟುಕೊಂಡು ರೆಡ್ಡಿಗಳ ಜತೆ ಕೈ ಜೋಡಿಸಿದ್ದ ಸಚಿವ ರೇಣುಕಾಚಾರ್ಯ ಬಳಗ ರೆಡ್ಡಿಗಳ ವಿರುದ್ಧವೇ ಈಗ ತಿರುಗಿ ಬಿದ್ದಿದೆ. ಇನ್ನೊಂದೆಡೆ ಎಲ್ಲಾ ಚುನಾವಣೆ ಗಳಲ್ಲಿಯೂ ಸಾರಥ್ಯ ವಹಿಸಿದ ಯಡಿಯೂರಪ್ಪ ಪಕ್ಷದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೆಳೆಯುತ್ತಲೇ ಹೋಗುತ್ತಿದ್ದಾರೆ. ಅಗತ್ಯ ಬಿದ್ದರೆ ಜನಾದೇಶಕ್ಕೆ ತೆರಳುವ ಆತ್ಮವಿತ್ವಾಸದ ಮಾತುಗಳು ಅವರಿಂದ ಹೊರ ಬಿದ್ದಿದೆ. ಈ ಎಲ್ಲಾ ವಿದ್ಯಮಾನಗಳಿಂದ ತಾವು ನಿಂತ ನೆಲವೇ ಅದರುತ್ತಿರುವ ಅನುಭವ ರೆಡ್ಡಿ ಬಳಗಕ್ಕೆ ಆಗಿದೆಯೇ?
ಕಪ್ಪುಬಟ್ಟೆ ಧರಿಸಿ ಬರಿಗಾಲಲ್ಲಿಯೇ ಬಳ್ಳಾರಿಯಲ್ಲಿ ಇಂದು ಪಾದಾಯಾತ್ರೆ ನಡೆಸಿದ ಶ್ರೀರಾಮುಲು ಮತ್ತು ಅವರ ಬಳಗದಲ್ಲಿ ಆತ್ಮರಕ್ಷಣೆಗೆ ಗುರಾಣಿ ಹಿಡಿಯುವ ಅನಿವಾರ್ಯತೆ ಎದ್ದು ಕಾಣುತಿತ್ತು . ಸ್ವಂತ ಜಿಲ್ಲೆಯಲ್ಲಿಯೇ ರಾಯಲಿ ನಡೆಸುವ ಅವರ ನಿರ್ಧಾರ, ರಾಜ್ಯ ಬಿಜೆಪಿ ವರಿಷ್ಠರಿಗೆ ಎಸೆದ ಸಣ್ಣ ಸವಾಲಿನಂತೆಯೂ ಇತ್ತು . ಭೋರ್ಗರೆವ ನದಿಯಂತೆ ಬಳ್ಳಾರಿಯತ್ತಲೇ ಬರುತ್ತಿರುವ ಕಾಂಗ್ರೆಸ್ ಪಾದಯಾತ್ರೆಯ ಅಲೆಗಳಿಂದ ರಕ್ಷಿಸಿಕೊಳ್ಳುವ ಆತುರ ಎದ್ದು ಕಾಣುತಿತ್ತು .
ತಮ್ಮ ವಿರುದ್ಧವೇ ಸೆಡ್ಡು ಹೊಡೆದಿದ್ದ ರೆಡ್ಡಿ ಸಹೋದರರ ಈ ಆತ್ಮರಕ್ಷಣೆಯ ಹೋರಾಟ ಒಂದು ರೀತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿನ ಹಾದಿ ಸುಗಮವೂ ಆಗಬಹುದು, ಇಲ್ಲವೇ ಸರ್ಕಾರದ ಸ್ಥಿರತೆಗೆ ಭಂಗ ತರಲೂ ಬಹುದು.
ವರದಿಯ ವಿವರಗಳು |
 |
ಕೃಪೆ : Udayavani ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-29 00:00:00
|
|
|