ಬೆ೦ಗಳೂರು: ಕಾ೦ಗ್ರೆಸ್ ನ ಪಾದಯಾತ್ರೆಯ ಪ್ರತಿಯಾತ್ರೆಯಾಗಿ ಇಡೀ ರಾಜ್ಯ ಸುತ್ತಲು ಬಿಎಸ್‌ವೈ ಚಿಂತನೆ |
ಪ್ರಕಟಿಸಿದ ದಿನಾಂಕ : 2010-07-29
ಬೆಂಗಳೂರು, ಜು. ೨೮ : ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಪ್ರತಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಾ ದ್ಯಂತ ಯಾತ್ರೆ ಹಮ್ಮಿಕೊಳ್ಳಲು ಯೋಜಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಅಕ್ರಮ ಗಣಿಗಾರಿಕೆ ತಡೆಯಬೇಕೆಂಬುದು ಸರ್ಕಾರದ ಉದ್ದೇಶ. ಇದಕ್ಕಾಗಿ ಅದಿರು ರಫ್ತು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದರ ವಿರುದ್ಧ ಯಾರು ಬೇಕಾದರೂ ನ್ಯಾಯಾಲಯಕ್ಕೆ ಹೋಗಲಿ ಎಂದು ಸವಾಲು ಹಾಕಿದ ಅವರು, ಅದಿರು ರಫ್ತಿನ ಪರವಾನಗಿಯನ್ನು ನವೀಕರಣ ಮಾಡದಿರುವ ಬಗ್ಗೆ ಒಂದೆರಡು ದಿನಗಳಲ್ಲಿ ಆದೇಶ ಹೊರಡಿಸಲಾಗುತ್ತದೆ ಎಂದರು.
-ನಾನೂ ಯಾತ್ರೆ ಮಾಡುತ್ತೇನೆ: ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಗಿಸಿ ಬರಲಿ. ನಾನೂ ರಾಜ್ಯಾದ್ಯಂತ ಯಾತ್ರೆ ಕೈಗೊಳ್ಳುತ್ತೇನೆ. ಎಲ್ಲಾ ಅಂಕಿಅಂಶ ಜನತೆ ಮುಂದಿಡುತ್ತೇನೆ. ಜನರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ ಅವರು ಯಾತ್ರೆ ಯಾವ ರೀತಿ ಇರುತ್ತದೆ ಎಂಬುದನ್ನು ಮಾತ್ರ ಹೇಳಲಿಲ್ಲ. ಯಾತ್ರೆಯ ಸ್ವರೂಪ ಯಾವ ರೀತಿ ಇರಬೇಕೆಂಬುದರ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
-ಬುದ್ಧಿಜೀವಿಗಳ ಜತೆ ಚರ್ಚೆ: ಅಕ್ರಮ ಗಣಿಗಾರಿಕೆ ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮ ಮತ್ತು ರಾಜ್ಯದ ಸಂಪತ್ತು ರಕ್ಷಣೆ ಕುರಿತು ಬುದ್ಧಿಜೀವಿಗಳು, ಸಾಹಿತಿಗಳ ಜತೆ ಸಭೆ ನಡೆಸಿ ಚರ್ಚಿಸಿ ಅವರ ಸಲಹೆ ಸೂಚನೆ ಪಡೆಯುವುದಾಗಿ ತಿಳಿಸಿದ ಯಡಿಯೂರಪ್ಪ, ಅಗತ್ಯ ಬಿದ್ದರೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆಯೂ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.
-೩ ವರ್ಷದ ನಂತರ ಜನಾದೇಶ: ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಜನಾದೇಶ ಪಡೆಯು ವಂತೆ ಕಾಂಗ್ರೆಸ್ ನಾಯಕರು ಹಾಕಿರುವ ಸವಾಲಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಜನಾದೇಶಕ್ಕೆ ಇನ್ನೂ ಮೂರು ವರ್ಷವಿದೆ. ಅವಧಿ ಪೂರ್ಣಗೊಂಡ ನಂತರ ನಾವೂ ಜನರ ಬಳಿಗೆ ಹೋಗುತ್ತೇವೆ. ಕಾಂಗ್ರೆಸ್ ನಾಯಕರೂ ಬರಲೇಬೇಕು ಎನ್ನುವ ಮೂಲಕ ಪಾಟೀ ಸವಾಲು ಹಾಕಿದರು.
-ಗಣಿ ಮಾಲೀಕರ ಪರ ಪಾದಯಾತ್ರೆ: ಕಾಂಗ್ರೆಸ್ ನಾಯಕರಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವ ಬಗ್ಗೆ ಆಸಕ್ತಿ ಇಲ್ಲ. ಒಂದು ವೇಳೆ ಈ ಆಸಕ್ತಿ ಇದ್ದಿದ್ದರೆ ಅವರು ನನ್ನ ಬಳಿ ಬಂದು ಚರ್ಚೆ ನಡೆಸಿ ಸಲಹೆ ಸೂಚನೆ ನೀಡುತ್ತಿದ್ದರು. ಕಾಂಗ್ರೆಸ್‌ನವರೇ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಇಂತವರ ಪರವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
-ಕೇಂದ್ರದ ಅಸಹಕಾರ: ಅದಿರು ರಫ್ತು ನಿಷೇಧಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕೇಂದ್ರ ಆಗುವುದಿಲ್ಲ ಎಂದಿದೆ. ಅಭಿವೃದ್ಧಿ ಮಂಡಳಿ ಸಭೆಯಲ್ಲಿಯೂ ಈ ವಿಷಯ ಪ್ರತಿಪಾದಿಸಿದ ರೂ ಸಹಕರಿಸಲಿಲ್ಲ ಎಂದು ಆರೋಪಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29 00:00:00
|
|
|