ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್ |
ಪ್ರಕಟಿಸಿದ ದಿನಾಂಕ : 2010-07-28
ಮಂಗಳೂರು, ಜು. 28: ನಗರದ ಪಾಂಡೇಶ್ವರದಲ್ಲಿ ಬುಧವಾರ ಬೆಳಗ್ಗೆ ಗೂಡ್ಸ್ ಟ್ರೈನ್ನ 7 ಬೋಗಿಗಳು ಹಳಿ ತಪ್ಪಿದ ಘಟನೆ ಸಂಭವಿಸಿದೆ.
ಇದರಿಂದ ಒಂದು ಕಡೆ ಹಳಿ ತಪ್ಪಿದ ಜಾಗದಲ್ಲಿ ರೈಲು ಹಳಿ ಅಸ್ತವ್ಯಸ್ತಗೊಂಡಿದೆ ಹಾಗೂ ಇನ್ನೊಂದು ಕಡೆ ಬೆಳಗ್ಗೆ ಸುಮಾರು ಅರ್ಧ ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರ ಹೊರತು ಬೇರೆ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಆಂಧ್ರ ಪ್ರದೇಶದ ಚಿತ್ತೂರಿನಿಂದ ಮಂಗಳೂರಿನ ಹಳೆ ಬಂದರಿಗೆ (ಗೂಡ್ಸ್ಶೆಡ್) ಸಿಮೆಂಟ್ ಸಾಗಿಸುತ್ತಿದ್ದ ಗೂಡ್ಸ್ ಟ್ರೈನ್ ಮುಖ್ಯ ರೈಲು ಮಾರ್ಗವನ್ನು ದಾಟಿ ಬಂದರ್ಗೆ ಹೊಗುತ್ತಿದ್ದ ಮಾರ್ಗದಲ್ಲಿ ಸಾಗುತ್ತಿದ್ದಾಗ ಹಿಂಭಾಗದ 7 ಬೋಗಿಗಳು ಹಳಿ ತಪ್ಪಿದವು. ಈ ಪೈಕಿ 3 ಬೋಗಿಗಳು ರೈಲು ಮಾರ್ಗದಲ್ಲಿ ವಾಲಿಕೊಂಡು ನಿಂತಿವೆ. ಅದರಲ್ಲಿ ಒಂದು ಬೋಗಿ ಸೇತುವೆ ಮೇಲೆ ತೀರಾ ಅಪಾಯಕರವಾದ ಸ್ಥಿತಿಯಲ್ಲಿದೆ.
ಬೆಳಗ್ಗೆ 5.20 ರ ವೇಳೆಗೆ ಘಟನೆ ಸಂಭವಿಸಿದೆ. ಗೂಡ್ಸ್ಟ್ರೈನ್ನಲ್ಲಿ ಒಟ್ಟು 42 ಬೋಗಿಗಳಿದ್ದು, ಹಿಂಭಾಗದಿಂದ ಮುಂದುಗಡೆ ಇರುವ 6 ರಿಂದ 12 ವರೆಗಿನ 7 ಬೋಗಿಗಳು ಮಾತ್ರ ಹಳಿ ತಪ್ಪಿವೆ. ಘಟನೆ ಸಂಭವಿಸಿದಾಗ ಟ್ರೈನಿನ ಎಂಜಿನ್ ಭಾಗವು ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸ್ನಲ್ಲಿತ್ತು.
ಮುಖ್ಯ ರೈಲು ಮಾರ್ಗದಿಂದ ಹಳೆ ಬಂದರ್ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಬಂದರ್ಗೆ ಸಂಪರ್ಕ ಹೊಂದುವ ಜಂಕ್ಷನ್ ಮಧ್ಯೆ ಇರುವ ಬೋಗಿಗಳು ಮಾತ್ರ ಹಳಿ ತಪ್ಪಿದ ಕಾರಣ ಬಂದರ್ಗೆ ಹೋಗುವ ರೈಲು ಮಾರ್ಗದಲ್ಲಿ ರೈಲು/ ಎಂಜಿನ್ ಸಂಚಾರಕ್ಕೆ ಅಡ್ಡಿ ಉಂಟಾಗಿಲ್ಲ. ಹಳಿ ತಪ್ಪಿದ 7 ಬೋಗಿಗಳು ಸೇರಿದಂತೆ 10 ಬೋಗಿ ಗಳನ್ನು ಹಳಿಯಲ್ಲಿ ಉಳಿಸಿಕೊಂಡು ಉಳಿದ ಬೋಗಿಗಳನ್ನು ಅಲ್ಲಿಂದ ಬೇರ್ಪಡಿಸಿ ಬಂದರ್ಗೆ ಕೊಂಡೊಯ್ಯಲಾಗಿದೆ ಅದೇ ರೀತಿ ಹಿಂಭಾಗದಲ್ಲಿರುವ 5 ಬೋಗಿಗಳನ್ನು ಕೂಡಾ ಹಳಿ ತಪ್ಪಿದ ಬೋಗಿಗಳಿಂದ ಬೇರ್ಪಡಿಸಲಾಗಿದೆ. ಹಾಗಾಗಿ ಪಾಂಡೇಶ್ವರ ಮತ್ತು ಹೊçಗೆ ಬಜಾರ್ ಲೆವೆಲ್ ಕ್ರಾಸಿಂಗ್ನಲ್ಲಾಗಲಿ, ಅತ್ತಾವರ ಮೈನ್ ಲೈನ್ನಲ್ಲಾಗಲಿ ಬೇರೆ ವಾಹನಗಳ/ ರೈಲು ಸಂಚಾರಕ್ಕೆ ಅಡೆ ತಡೆ ಉಂಟಾಗಿಲ್ಲ. ಪಾಂಡೇಶ್ವರದಲ್ಲಿ ಬೆಳಗ್ಗೆ ಮಾತ್ರ ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.
ಹಳಿ ತಪ್ಪಿದ ಬೋಗಿಗಳನ್ನು ಮೇಲೆತ್ತುವ ಬಗ್ಗೆ ರೈಲ್ವೆ ಇಲಾಖೆಯ ಬ್ರೇಕ್ ಡೌನ್ ಸ್ಪೆಷಲಿಸ್ಟ್ (ಬಿ.ಡಿ.ಎಸ್) ಗಳನ್ನು ಕರೆಸಲಾಗಿದೆ. ಕಾಮಗಾರಿಗೆ ಅನುಕೂಲವಾಗುವಂತೆ ರೈಲು ಮಾರ್ಗದ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಹುಲ್ಲು ಮತ್ತು ಪೊದೆಗಳನ್ನು ಕೀಳುವ ಕಾಮಗಾರಿ ನಡೆದಿದೆ.
ಹಳಿ ತಪ್ಪಿದ ಬೋಗಿಗಳಿಂದ ಸಿಮೆಂಟ್ ಚೀಲಗಳನ್ನು ಅನ್ಲೋಡ್ ಮಾಡಿ ಬಳಿಕ ಹಳಿ ತಪ್ಪಿದ ಬೋಗಿಗಳನ್ನು ಮೇಲೆತ್ತಿ ಹಳಿ ಮೇಲೆ ನಿಲ್ಲಿಸ ಬೇಕಾಗಿದೆ. 3 ಬೋಗಿಗಳು ವಾಲಿಕೊಂಡು ನಿಂತಿರುವ ಜಾಗದಲ್ಲಿ ರೈಲು ಹಳಿಗಳು ಅಸ್ತವ್ಯಸ್ತಗೊಂಡಿವೆ. ಹಳಿ ತುಂಡರಿಸಲ್ಪಟ್ಟು ಅದರ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಾಗಾಗಿ ಬೋಗಿಗಳನ್ನು ಮೇಲಕ್ಕೆತ್ತುವ ಕೆಲಸದ ಜತೆಗೆ ಅಸ್ತವ್ಯಸ್ತಗೊಂಡಿರುವ ಹಳಿಗಳನ್ನು ದುರಸ್ತಿ ಮಾಡಿ ಯಥಾ ಸ್ಥಿತಿಗೆ ತರುವ ಕೆಲಸ ಕೂಡಾ ಆಗ ಬೇಕಾಗಿದೆ.
ವರದಿಯ ವಿವರಗಳು |
 |
ಕೃಪೆ : Udayavani ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28 00:00:00
|
|
|