ಪಾದಯಾತ್ರೆ: ಡಾಬಸ್‌ಪೇಟೆಯ ಅರಳಿಕಟ್ಟೆಯಲ್ಲಿ ಪ೦ಚಾಯ್ತಿ : ಜನಾದೇಶಕ್ಕೆ ಬನ್ನಿ: ಯಡಿಯೂರಪ್ಪಗೆ ಸಿದ್ದು ಪಂಥಾಹ್ವಾನ |
ಪ್ರಕಟಿಸಿದ ದಿನಾಂಕ : 2010-07-28
ಅರಳಿಕಟ್ಟೆ ಪಂಚಾಯ್ತಿ..... ಪಾದಯಾತ್ರೆಯ ಮಧ್ಯೆ ದಾಬಸ್‌ಪೇಟೆಯ ಬಿಲ್ಲವನಕಟ್ಟೆ ಯಲ್ಲಿ ಗ್ರಾಮಸ್ಥರ ಜತೆ ಸಂವಾದದಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರಾದ ಡಿಕೆಶಿ, ಇಬ್ರಾಹಿಂ, ಸಿದ್ದು ಹಾಗೂ ದೇಶಪಾಂಡೆ.
ಡಾಬಸ್‌ಪೇಟೆ, ಜು.೨೭ : ಬಿಸಿಲ ನಾಡಿಗೆ ದಂಡೆತ್ತಿ ಹೊರಟಿರುವ ಕಾಂಗ್ರೆಸ್ ಪದಾತಿದಳ ಪಾದಯಾತ್ರೆಗೆ ದೊರೆಯುತ್ತಿರುವ ಜನಸ್ಪಂದನೆಯಿಂದ ಹೊಸ ಕನಸು ಕಾಣತೊಡಗಿರುವ ಕಾಂಗ್ರೆಸ್ ನಾಯಕರಿಗೆ ತುರ್ತಾಗಿ ಹೊಸ ಜನಾದೇಶ ಬೇಕಾಗಿದೆ.
ನಾಡ ರಕ್ಷಣಾ ನಡಿಗೆಯ ಮೂರನೇ ದಿನ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮತ್ತು ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಭಿಪ್ರಾಯ ಒಂದೇ ಆಗಿತ್ತು ಅದು- ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವ ಸಾಮರ್ಥ್ಯವಿಲ್ಲದಿದ್ದರೆ ಕೂಡಲೇ ವಿಧಾನಸಭೆ ವಿಸರ್ಜಿಸಿ ಹೊಸ ಜನಾದೇಶ ಕೋರಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಬೇಕು.
ಪದೇ ಪದೇ ಪಾದಯಾತ್ರೆ ಕೈ ಬಿಟ್ಟು ಮಾತುಕತೆಗೆ ಬನ್ನಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ಆಗ್ರಹಿಸುತ್ತಿದ್ದಾರೆ. ಇದರಲ್ಲಿ ಮಾತುಕತೆ ನಡೆಸುವುದು ಏನೂ ಇಲ್ಲ. ರಾಜ್ಯದ ಸಂಪತ್ತಿನ ಲೂಟಿ ತಡೆಗಟ್ಟಲು ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ, ಕಾಂಗ್ರೆಸ್ ಈ ಆಗ್ರಹಕ್ಕೆ ಜನ ಬೆಂಬಲವಿಲ್ಲ ಎಂಬುದು ಬಿಜೆಪಿ ನಾಯಕರ ನಿರ್ಧಾರವಾಗಿದ್ದರೆ, ಕೂಡಲೇ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ.
ಜನರೇ ಈ ವಿಚಾರದಲ್ಲಿ ಯಾರ ನಿಲುವು ಸರಿ ಎಂದು ತೀರ್ಪು ನೀಡಲಿ ಎಂದು ಅವರು ಹೇಳಿದರು.
ಅಲ್ಲದೆ, ಒಂದು ವೇಳೆ ಮುಖ್ಯಮಂತ್ರಿಯವರು ಗಣಿ ಅಕ್ರಮ ಕುರಿತು ಸಿಬಿಐ ತನಿಖೆಗೆ ವಹಿಸಿದ ರೂ ಪಾದಯಾತ್ರೆ ನಿಲ್ಲುವುದಿಲ್ಲ. ಅದು ಬಳ್ಳಾರಿವರೆಗೂ ಮುಟ್ಟಿಯೇ ಹಿಂತಿರುಗುತ್ತದೆ. ಏಕೆಂದರೆ, ಬಳ್ಳಾರಿಗೆ ಬನ್ನಿ ಎಂಬ ಗಣಿ ಧಣಿಗಳ ಸವಾಲಿಗೂ ಕಾಂಗ್ರೆಸ್ ಉತ್ತರ ನೀಡಬೇಕಿದೆ ಎಂದು ಈ ನಾಯಕರು ತಿಳಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಯಿದ್ದರೆ ಕಾಂಗ್ರೆಸ್ ಪಾದಯಾತ್ರೆ ನೋಡಿ ಬೆದರಬೇಕು. ಮೂರು ಬಿಟ್ಟವರಾಗಿದ್ದರೆ ಮಾತ್ರ ಬೆದರು ವುದಿಲ್ಲ. ಪಾದಯಾತ್ರೆ ಹೋದಲೆಲ್ಲ ಜನರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುತ್ತಿದ್ದಾರೆ. ಎಳನೀರು, ಶರಬತ್ತು ನೀಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವವರನ್ನು ಉಪಚರಿಸುತ್ತಿದ್ದಾರೆ. ಹಳ್ಳಿಜನರಂತೂ ಹೆದ್ದಾರಿವರೆಗೂ ನಡೆದು ಬಂದು ಶುಭಾಶಯ ಕೋರುತ್ತಿದ್ದಾರೆ. ಜನರ ಈ ನಡವಳಿಕೆ ಯಾವ ಸಂದೇಶ ನೀಡುತ್ತಿದೆ ಎಂಬುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳ ಬೇಕು. ಅಕ್ರಮ ಗಣಿಗಾರಿಕೆ ವಿರುದ್ಧದ ಕಾಂಗ್ರೆಸ್ ಹೋರಾಟ ಈಗ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗದೇ ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ.
ಮಾನ ಮರ್ಯಾದೆ ಇರುವ ಸರ್ಕಾರವಾದರೇ ಈ ಸ್ಪಂದನೆ ನೋಡಿ ಕೂಡಲೇ ಸಿಬಿಐಗೆ ಅಕ್ರಮ ಗಣಿಗಾರಿಕೆಯನ್ನು ವಹಿಸಬೇಕು. ಜನರು ಕಾಂಗ್ರೆಸ್ ನಿಲವಿಗೆ ಬೆಂಬಲ ನೀಡುತ್ತಿರುವ ಬಗ್ಗೆ ಯಡಿಯೂರಪ್ಪ ಅವರಿಗೆ ಸಂಶಯವಿದ್ದರೆ, ಕೂಡಲೇ ವಿಧಾನಸಭೆ ವಿಸರ್ಜಿಸಿ ಹೊಸ ಜನಾದೇಶ ಕೇಳಲಿ. ಆಗ ಜನರು ಯಾರ ನಿಲವಿಗೆ ಬೆಂಬಲ ನೀಡುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದರು.
ರಾಜ್ಯದ ಬಂದರುಗಳಿಂದ ಅದಿರು ರಫ್ತು ನಿಷೇಧ ಮಾಡಿರುವುದು ಸರ್ಕಾರ ಪಾದಯಾತ್ರೆಗೆ ನೀಡಿರುವ ಸರಿಯಾದ ಸ್ಪಂದನೆಯಲ್ಲ. ಸಾಮರ್ಥ್ಯವಿದ್ದರೆ, ಅಕ್ರಮ ಗಣಿ ಲೂಟಿ ನಡೆಯದಂತೆ ತಡೆಯಬೇಕು. ರಾಜ್ಯದ ಬಂದರಿನಲ್ಲಿ ರಪ್ತು ಬಂದ್ ಆದರೆ ಏನು ಪ್ರಯೋಜನವಾಗುವುದಿಲ್ಲ. ನೆರೆಯ ರಾಜ್ಯಗಳ ಬಂದರಿನ ಮೂಲಕ ಲೂಟಿಯಾದ ರಾಜ್ಯದ ಸಂಪತ್ತು ವಿದೇಶ ಸೇರುತ್ತವೆ ಎಂದು ಹೇಳಿದರು.
ಕಾಂಗ್ರೆಸ್ ಪಾದಯಾತ್ರೆಯನ್ನು ತೀವ್ರವಾಗಿ ಟೀಕಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಾನು ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ, ಆ ಈಶ್ವರಪ್ಪನಿಗೆ ಬುದ್ದಿ ಕಮ್ಮಿ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಕಾಂಗ್ರೆಸ್ ಪಾದಯಾತ್ರೆಯನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಇದು ಜನಾಂದೋಲನವಾಗಿ ರೂಪುಗೊಂಡಿದೆ. ಜನರ ನಿಲುವು ಏನು ಎಂಬುದು ಗೋಡೆ ಬರಹದಂತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಒಂದೋ ಸರ್ಕಾರ ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ವಹಿಸಬೇಕು ಇಲ್ಲವೇ ಖುರ್ಚಿ ಬಿಟ್ಟು ಕೆಳಗಿಳಿದು ಹೊಸ ಜನಾದೇಶ ಕೋರಬೇಕು ಎಂದು ಒತ್ತಾಯಿಸಿದರು.
ತಮ್ಮ ಕಾಲದಲ್ಲೇ ಅತಿ ಹೆಚ್ಚು ಅದಿರು ಲೂಟಿಯಾಗಿದೆ ಎಂಬುದನ್ನು ಮುಖ್ಯಮಂತ್ರಿಯವರು ಸದನದಲ್ಲೇ ಒಪ್ಪಿಕೊಂಡಿದ್ದಾರೆ. ಈ ರೀತಿ ಒಪ್ಪಿಕೊಂಡ ನಂತರವೂ ಸುಮ್ಮನೇ ಕೂತರೆ ಹೇಗೆ. ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಮೂಲಕ ಒಳ್ಳೆಯ ಸಂದೇಶ ರವಾನಿಸಬೇಕು. ಅದು ಸಾಧ್ಯವಿಲ್ಲ ಎಂದರೆ ಕಾಂಗ್ರೆಸ್ ಜನರ ಬಳಿ ಹೋಗದೇ ಬೇರೆ ದಾರಿಯೇ ಇರುವುದಿಲ್ಲ. ಈ ಹಿನ್ನೆಲೆಯಲ್ಲೇ ಪಾದಯಾತ್ರೆ ಹಾಗೂ ಬಳ್ಳಾರಿ ಸಮಾವೇಶ ಕಾಂಗ್ರೆಸ್ ಹೋರಾಟದ ಅಂತ್ಯವಲ್ಲ ಅದು ಆರಂಭ. ಸಿಬಿಐ ತನಿಖೆಗೆ ಅದಿರು ಲೂಟಿ ಪ್ರಕರಣ ಒಪ್ಪಿಸುವರೆಗೂ ಇದು ಮುಂದುವರಿ ಯಲಿದೆ ಎಂದು ಅವರು ತಿಳಿಸಿದರು.
ರಾಜ್ಯದ ೧೦ ಬಂದರುಗಳಿಂದ ಅದಿರು ರಫ್ತು ನಿಷೇಧ ಕ್ರಮ ಮೂರ್ಖತನದ್ದು ಎಂದ ಅವರು ರಾಜ್ಯ ಸರ್ಕಾರ ರಫ್ತು ನಿಷೇಧಿಸಿರುವ ಹೆಚ್ಚಿನ ಬಂದರುಗಳು ಮೀನುಗಾರಿಕೆ ಬಂದರುಗಳಾಗಿವೆ. ಈ ನಿರ್ಧಾರದಿಂದ ಮೀನುಗಾರರಿಕೆ ತೊಂದರೆಯಾಗಲಿದೆ. ಹೀಗಾಗಿ ಕೂಡಲೇ ಸರ್ಕಾರ ಈ ಆದೇಶಕ್ಕೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಅಕ್ರಮ ಗಣಿಗಾರಿಕೆ ಮೂಲಕ ರಾಜ್ಯದ ಸಂಪತ್ತು ಲೂಟಿ ಹೊಡೆದಿರುವವರ ತಲೆದಂಡ ಆಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಾದರೇ ಜನಾದೇಶ ಕೋರಲು ಮುಂದಾಗಲಿ ಎಂದರು.
ಕಾಂಗ್ರೆಸ್ ಪಾದಯಾತ್ರೆಗೆ ಕಾರಣ ಅದಿರು ಲೂಟಿ ಒಂದೇ ಅಲ್ಲ. ಸರ್ಕಾರದ ಇನ್ನೂ ಹಲವಾರು ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ಹೋರಾಟ ನಡೆದಿದೆ. ಈ ಭ್ರಷ್ಟ, ದುಷ್ಟ ಸರ್ಕಾರದ ಪತನವಾಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಅವರು ತಿಳಿಸಿದರು.
ಇದಕ್ಕೆ ಪಾದಯಾತ್ರೆ ಅಂತಾರೇನ್ರೀ? ಅದೊಂದು ಡ್ಯಾನ್ಸ್ ಶೋ ಅಷ್ಟೇ, ರಸ್ತೆಯುದ್ದಕ್ಕೂ ಕುಣಕೊಂಡು, ಅಂತ್ಯಾಕ್ಷರಿ ಹಾಡು ಹೇಳ್ಕೊಂಡು ಸಾಗುತ್ತಿರುವುದು ನೋಡಿದರೆ ಪಾದಯಾತ್ರೆ ಎನ್ನಲಾದೀತೆ? -ಗಾಲಿ ಕರುಣಾಕರ ರೆಡ್ಡಿ
ಪ್ರತಿಷ್ಠೆ, ಸ್ವಾರ್ಥಕ್ಕಾಗಿ ಪಾದಯಾತ್ರೆ: ರೇಣು
ಬೆಂಗಳೂರು: ಕಾಂಗ್ರೆಸ್ ಮುಖಂಡರು ಪ್ರತಿಷ್ಠೆ ಮತ್ತು ಸ್ವಾರ್ಥಕ್ಕಾಗಿ ಪಾದಯಾತ್ರೆ ನಡೆಸುತ್ತಿ ದ್ದಾರೆ ಹೊರತು ಅದರ ಹಿಂದೆ ಜನಪರ ಕಾಳಜಿ ಇಲ್ಲ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಟೀಕಿಸಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆ ಗಳಿವೆ. ಆ ಬಗ್ಗೆ ಗಮನಹರಿಸದೇ ರಾಜಕೀಯ ಲಾಭಕ್ಕಾಗಿ ಯಾತ್ರೆ ಕೈಗೊಂಡಿರುವುದು ಸರಿಯಲ್ಲ ಎಂದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-28 00:00:00
|
|
|