ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated) |
ಪ್ರಕಟಿಸಿದ ದಿನಾಂಕ : 2010-07-28
ಇಸ್ಲಾಮಾಬಾದ್ ಬಳಿಯ ಮರ್ಗಲ್ಲಾ ಬೆಟ್ಟದಲ್ಲಿ ದುರಂತ ಭೀಕರ ವಿಮಾನ ಅಪಘಾತ: 155 ಸಾವು
‘ಏರ್ ಬ್ಲೂ’ ವಿಮಾನಯಾನ ಸಂಸ್ಥೆಗೆ ಸೇರಿದ ಏರ್‌ಬಸ್ ಎ-321 ವಿಮಾನವು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 147 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು.
ಇಸ್ಲಾಮಾಬಾದ್ (ಪಿಟಿಐ): ಇಲ್ಲಿಗೆ ಸಮೀಪದ ದುರ್ಗಮ ಮಾರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ 9.45ರ ಸುಮಾರಿಗೆ ದಟ್ಟ ಮಂಜು ಮತ್ತು ಮೋಡ ಕವಿದ ವಾತಾವರಣದಲ್ಲಿ ಪಾಕಿಸ್ತಾನದ ಖಾಸಗಿ ಪ್ರಯಾಣಿಕ ವಿಮಾನವೊಂದು ದುರಂತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 155 ಮಂದಿ ಮೃತಪಟ್ಟಿದ್ದಾರೆ.
‘ಏರ್ ಬ್ಲೂ’ ವಿಮಾನಯಾನ ಸಂಸ್ಥೆಗೆ ಸೇರಿದ ಏರ್‌ಬಸ್ ಎ-321 ವಿಮಾನವು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 147 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು. ಸತ್ತವರಲ್ಲಿ ಐವರು ಮಕ್ಕಳು ಮತ್ತು 29 ಮಹಿಳೆಯರೂ ಸೇರಿದ್ದಾರೆ.
ಕರಾಚಿಯಲ್ಲಿ ಈ ವಿಮಾನದಲ್ಲಿ ಪ್ರಯಾಣಿಸಲು 159 ಮಂದಿ ಟಿಕೆಟ್ ಖರೀದಿಸಿದ್ದರು. ಆದರೆ 12 ಮಂದಿ ವಿಮಾನವನ್ನು ತಪ್ಪಿಸಿಕೊಂಡಿದ್ದರು ಅಥವಾ ಕೊನೆಯ ಕ್ಷಣದಲ್ಲಿ ಯಾನ ರದ್ದುಪಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಭೀಕರ ದುರಂತದಲ್ಲಿ ಬದುಕುಳಿದ ಐದು ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಒಳಾಡಳಿತ ಸಚಿವ ರೆಹಮಾನ್ ಮಲಿಕ್‌ಅವರೇ ಮೊದಲು ಹೇಳಿದ್ದರು. ಆದರೆ ದುರಂತದಲ್ಲಿ ಯಾರೂ ಬದುಕಿ ಉಳಿದಿಲ್ಲ, ಯಾರನ್ನೂ ರಕ್ಷಿಸಲಾಗಿಲ್ಲ ಎಂಬುದು ಸಂಜೆ ಸ್ಪಷ್ಟವಾಯಿತು. ಸಂಜೆ ಸ್ವತಃ ಸಚಿವ ಮಲಿಕ್ ಅವರೇ ದುರಂತದಲ್ಲಿ ಎಲ್ಲರೂ ಸತ್ತಿದ್ದಾರೆ ಎಂದು ಪ್ರಕಟಿಸಿದರು.
ಹೆಸರಾಂತ ದಮನೆಕೊ ರೆಸಾರ್ಟ್ ಸಮೀಪ ಈ ದುರಂತ ಸಂಭವಿಸಿದೆ. ವಿಮಾನ ಇನ್ನೇನು ಇಲ್ಲಿನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯಬೇಕು ಎನ್ನುವಷ್ಟರಲ್ಲಿ ಬೆಟ್ಟದ ಕೊರಕಲಿಗೆ ಅಪ್ಪಳಿಸಿ ಛಿದ್ರಗೊಂಡಿತು. ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ವಿಮಾನದಲ್ಲಿದ್ದ ಬಹುತೇಕ ಮೃತದೇಹಗಳು ಗುರುತು ಹಿಡಿಯಲಾರದಷ್ಟು ಕರಕಲಾದವು.
ಎರಡು ಬೆಟ್ಟಗಳ ನಡುವಿನ ಆಳವಾದ ಕಂದಕದಲ್ಲಿ ವಿಮಾನದ ಅವಶೇಷಗಳು ಚದುರಿ ಬಿದ್ದಿದ್ದು,ಹಲವು ಗಂಟೆಗಳ ಬಳಿಕವೂ ಬೆಂಕಿ ಉರಿಯುತ್ತಲೇ ಇತ್ತು. ಜೋರಾಗಿ ಸುರಿಯುತ್ತಿದ್ದ ಮಳೆಯೂ ಬೆಂಕಿಯನ್ನು ಆರಿಸುವಲ್ಲಿ ವಿಫಲವಾಯಿತು. ದುರಂತ ನಡೆದು ಹಲವು ಗಂಟೆಗಳ ಬಳಿಕವಷ್ಟೇ ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತೆರಳಲು ಸಾಧ್ಯವಾಯಿತು. ಆ ವೇಳೆಗೆ ಅದೆಷ್ಟೋ ದೇಹಗಳು ಪೂರ್ತಿ ಭಸ್ಮವಾಗಿದ್ದವು. ಕೆಲವು ತಲೆಬುರುಡೆಗಳು, ಎಲುಬುಗಳನ್ನೇ ಚೀಲಗಳಲ್ಲಿ ತುಂಬಿ ತರಲಾಗಿದೆ.
‘ಬದುಕಿ ಉಳಿದಿರಬಹುದಾದವರಿಗಾಗಿ ನಾವು ಕಾಡಿನಲ್ಲಿ ಕೂಗಿದೆವು. ಆದರೆ ಯಾವುದೇ ಸ್ಪಂದನ ದೊರೆತಿಲ್ಲ.ಹೀಗಾಗಿ ಎಲ್ಲರೂ ಸತ್ತಿರಬೇಕೆಂದು ಭಾವಿಸಿದ್ದೇವೆ’ ಎಂದು ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ.
ಇಸ್ಲಾಮಾಬಾದ್ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ದಟ್ಟ ಮೋಡ ಮತ್ತು ಮಂಜು ಮುಸುಕಿದ ವಾತಾವರಣ ಇಲ್ಲಿ ನೆಲೆಸಿದೆ. ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಇಸ್ಲಾಮಾಬಾದ್‌ಗೆ ಆಗಮಿಸುವ ತನ್ನೆಲ್ಲಾ ವಿಮಾನಗಳನ್ನು ಲಾಹೋರ್‌ನತ್ತ ಕಳುಹಿಸುತ್ತಿದೆ. ಆದರೂ ಈ ಖಾಸಗಿ ವಿಮಾನಕ್ಕೆ ಇಲ್ಲಿಗೆ ಆಗಮಿಸುವುದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಕ್ರಮಕ್ಕೆ ನಾಗರಿಕ ವಿಮಾನಯಾನ ಪ್ರಾಧಿಕಾರ ಅಚ್ಚರಿ ವ್ಯಕ್ತಪಡಿಸಿದೆ.
ಅಗತ್ಯದ ಹವಾಮಾನ ಮತ್ತು ತಾಂತ್ರಿಕ ಪರಿಶೀಲನೆಗಳ ಬಳಿಕವೇ ವಿಮಾನಕ್ಕೆ ಇಲ್ಲಿನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯುವುದಕ್ಕೆ ಅನುಮತಿ ನೀಡಲಾಗಿತ್ತು. ಬೆಳಿಗ್ಗೆ 9.45ರ ಸುಮಾರಿಗೆ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ವಿಮಾನವು ಎಟಿಸಿಯೊಂದಿಗೆ ಸಂಪರ್ಕ ಕಳೆದುಕೊಂಡಿತು ಎಂದು ನಾಗರಿಕ ವಿಮಾನಯಾನ ಇಲಾಖೆಯ ವಕ್ತಾರ ಪರ್ವೇಜ್ ಜಾರ್ಜ್ ಹೇಳಿದ್ದಾರೆ.
ದಟ್ಟ ಅರಣ್ಯದಲ್ಲಿ ವಿಮಾನದ ಅವಶೇಷಗಳು ದೂರಕ್ಕೆ ಚದುರಿ ಬಿದ್ದುದು ಟಿವಿ ಚಾನೆಲ್‌ಗಳ ಪ್ರಸಾರದಲ್ಲಿ ಗೊತ್ತಾಗುತ್ತಿದ್ದು, ದುರಂತ ಸ್ಥಳದಲ್ಲಿ ಬೆಂಕಿ, ಹೊಗೆ ಹಲವು ತಾಸುಗಳ ತನಕ ಮೇಲೇಳುತ್ತಿದ್ದುದು ಕಾಣಿಸುತ್ತಿತ್ತು.ರಾಜಧಾನಿಯಲ್ಲಿ ಈ ವಿಮಾನ ಅತ್ಯಂತ ಕೆಳಭಾಗದಲ್ಲಿ ಹೋಗುತ್ತಿತ್ತು, ಅದು ಸಮತೋಲನ ಕಳೆದುಕೊಂಡಂತಹ ಸ್ಥಿತಿಯಲ್ಲಿತ್ತು. ಕೆಲವೇ ಕ್ಷಣದಲ್ಲಿ ದೊಡ್ಡ ಸದ್ದಿನೊಂದಿಗೆ ಮಾರ್ಗಲ್ಲಾ ಬೆಟ್ಟಕ್ಕೆ ಅಪ್ಪಳಿಸಿದ್ದು ಕೇಳಿಸಿತು. ಸ್ಥಳದಲ್ಲಿ ಭಾರಿ ಹೊಗೆ ಮೇಲೇಳುತ್ತಿತ್ತು ಎಂದು ಡಮನೆಕೊ ರೆಸಾರ್ಟ್‌ಗೆ ಕುಟುಂಬ ಸಮೇತ ಬಂದಿದ್ದ ಪ್ರತ್ಯಕ್ಷದರ್ಶಿ ಸಕ್ಲೇನ್ ಅಲ್ತಾಫ್ ತಿಳಿಸಿದರು.
ವಿಮಾನನಿಲ್ದಾಣದಲ್ಲಿ ನೂರಾರು ಮಂದಿ ತಮ್ಮ ಬಂಧುಗಳಿಗಾಗಿ ಆತಂಕದಿಂದ ನಿರೀಕ್ಷಿಸುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.ಈ ವಿಮಾನ 10 ವರ್ಷಗಳಷ್ಟು ಹಳೆಯದು. ಏರ್‌ಬ್ಲೂ ಸಂಸ್ಥೆಯು 2006ರಲ್ಲಿ ಈ ವಿಮಾನವನ್ನು ಭೋಗ್ಯಕ್ಕೆ ಪಡೆದಿತ್ತು ಎಂದು ಏರ್‌ಬಸ್ ಕಂಪೆನಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಈಚಿನ ವರ್ಷಗಳಲ್ಲಿ ಸಂಭವಿಸಿದ ಭಾರಿ ದೊಡ್ಡ ವಿಮಾನ ದುರಂತ ಇದು. 2006ರ ಜುಲೈನಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಫೊಕ್ಕೆರ್ ಎಫ್ 27 ವಿಮಾನ ಅಪಘಾತಕ್ಕೀಡಾಗಿ 45 ಮಂದಿ ಸತ್ತಿದ್ದರು.
1992ರ ಸೆಪ್ಟೆಂಬರ್‌ನಲ್ಲಿ ಕಠ್ಮಂಡು ಸಮೀಪ ಪಿಐಎ ಏರ್‌ಬಸ್ ಎ 300 ವಿಮಾನ ಬೆಟ್ಟಕ್ಕೆ ಅಪ್ಪಳಿಸಿದ್ದರಿಂದ 167 ಮಂದಿಮೃತಪಟ್ಟಿದ್ದರು.
ಪಾಕ್ ವಿಮಾನ ದುರಂತಗಳ ಕ(ಹಿ)ನ್ನೋಟ
ಮೇ 20, 1965: ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್(ಪಿಐಎ)ನ 707 ಬೋಯಿಂಗ್‌ನ ಆರಂಭಿಕ ಹಾರಾಟದ ವೇಳೆ ಕೈರೊದಲ್ಲಿ ಪತನ. 124 ಪ್ರಯಾಣಿಕರ ಸಾವು
ಆಗಸ್ಟ್ 6, 1970: ಗುಡುಗು ಮಳೆಯ ಹವಾಮಾನ ಪರಿಸ್ಥಿತಿಯಲ್ಲಿ ಇಸ್ಲಾಮಾಬಾದ್ ನಿಲ್ದಾಣದಿಂದ ಟೇಕ್‌ಆಫ್ ಮಾಡುತ್ತಿದ್ದ ಪಿಐಎಯ ಫಾಕರ್ ಎಫ್27 ವಿಮಾನ ದುರಂತ;30 ಪ್ರಯಾಣಿಕರ ದುರ್ಮರಣ
ಡಿಸೆಂಬರ್ 8, 1972: ಪಿಐಎಯ ಫಾಕರ್ ಎಫ್ 27 ವಿಮಾನ ರಾವಲ್ಪಿಂಡಿಯಲ್ಲಿ ದುರಂತಕ್ಕೀಡಾಗಿ 26 ಪ್ರಯಾಣಿಕರ ಸಾವು ನವೆಂಬರ್ 26,1979: ಸೌದಿ ಅರೆಬಿಯದಿಂದ ಹಜ್ಜ್ ಯಾತ್ರಾರ್ಥಿಗಳನ್ನು ಕರೆತರುವ ವೇಳೆ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಹಂತದ ವೇಳೆ ಪಿಐಎಯ ಬೋಯಿಂಗ್707 ವಿಮಾನ ದುರಂತಕ್ಕೀಡು. 156 ಮಂದಿಯ ಮೃತ್ಯು.
ಅಕ್ಟೋಬರ್ 23,1986:ಪಿಐಎಯ ಫಾಕರ್ ಎಫ್27 ಪೇಶಾವರದಲ್ಲಿ ದುರಂತಕ್ಕೀಡು; 54 ಮಂದಿ ಪ್ರಯಾಣಿಕರಲ್ಲಿ 13 ಮಂದಿಯ ಸಾವು.
ಆಗಸ್ಟ್ 17,1988: ಅಮೆರಿಕ ನಿರ್ಮಿತ ಹರ್ಕ್ಯುಲಸ್ ಸಿ-130 ಸೇನಾ ವಿಮಾನ ಪತನ; ಸೇನಾ ಆಡಳಿತಗಾರ ಜ.ಮುಹಮ್ಮದ್ ಝಿಯಾವುಲ್ ಹಕ್ ಮತ್ತು ಪಾಕ್ ಸೇನಾಧಿಕಾರಿಗಳು ಹಾಗೂ ಅಮೆರಿಕದ ರಾಯಭಾರಿ ಸೇರಿದಂತೆ ಇತರ 30 ಮಂದಿಯ ಸಾವು.
ಆಗಸ್ಟ್ 25, 1989: ಉತ್ತರ ಪಾಕಿಸ್ತಾನದಿಂದ 54 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಫಾಕರ್ ವಿಮಾನ ನಾಪತ್ತೆ; ಅವಶೇಷಗಳು ಇದುವರೆಗೂ ಪತ್ತೆಯಾಗಿಲ್ಲ.
ಸೆಪ್ಟಂಬರ್ 28, 1992:ಪಿಐಎಯ ಏರ್‌ಬಸ್ ಎ300 ಪತನ; 167 ಮಂದಿಯ ಮೃತ್ಯು.
ಫೆಬ್ರವರಿ 19, 2003: ವಾಯುಪಡೆಯ ಫಾಕರ್ ಎಫ್ 27 ಕೊಹಾತ್‌ನಲ್ಲಿ ಪತನ; ವಾಯುಸೇನೆಯ ಮುಖ್ಯಸ್ಥ ಮುಶಾಫ್ ಅಲಿ, ಅವರ ಪತ್ನಿ ಹಾಗೂ ಇತರ 15 ಮಂದಿಯ ಸಾವು.
ಫೆಬ್ರವರಿ 24, 2003:ಅಫ್ಘಾನ್‌ನ ಗಣಿ ಹಾಗೂ ಕೈಗಾರಿಕೆ ಸಚಿವ ಜುಮಾ ಮುಹಮ್ಮದ್ ಮೊಹಮ್ಮದಿ ಹಾಗೂ ಇತರ ನಾಲ್ವರು ಅಧಿಕಾರಿಗಳನ್ನು ಕೊಂಡೊಯ್ಯುತ್ತಿದ್ದ 402ಬಿ ವಿಮಾನ ಅರಬಿ ಸಮುದ್ರದಲ್ಲಿ ಪತನ.
ಜುಲೈ 10, 2006: ಪಿಐಎಯ ಫಾಕರ್ ಎಫ್27 ಮುಲ್ತಾನ್ ನಗರದಲ್ಲಿ ಟೇಕ್ ಅಫ್ ಆದ ಕೆಲವೇ ಕ್ಷಣಗಳಲ್ಲಿ ಅಗ್ನಿ ಆಕಸ್ಮಿಕದಿಂದ ಭಸ್ಮ; 4 ಮಂದಿ ಸಿಬ್ಬಂದಿ ಸೇರಿ ಒಟ್ಟು 41 ಮಂದಿ ಪ್ರಯಾಣಿಕರ ದುರ್ಮರಣ
|
ಬುಧವಾರ ಬೆಳಿಗ್ಗೆ ಇಸ್ಲಾಮಾಬಾದ್ ಗೆ ಸಮೀಪದ ಮರ್ಗುಲ್ಲಾ ಬೆಟ್ಟದ ಹತ್ತಿರ ಪ್ರಯಾಣಿಕರ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಒಟ್ಟು 152 ಮಂದಿ ದುರ್ಮರಣಕ್ಕೀಡಾಗಿದ್ದಾರೆ. |
|
|
ಪ್ರತಿಕೂಲ ಹವಾಮಾನದ ಕಾರಣ ಬುಧವಾರ ಬೆಳಿಗ್ಗೆ ಇಲ್ಲಿಗೆ ಸಮೀಪದ ಮರ್ಗುಲ್ಲಾ ಬೆಟ್ಟದ ಹತ್ತಿರ ಪ್ರಯಾಣಿಕರ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಒಟ್ಟು 152 ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ವಿಮಾನ ಸಾರಿಗೆ ಸಂಸ್ಥೆ 'ಏರ್ ಬ್ಲೂ'ಗೆ ಸೇರಿದ್ದ ಈ ವಿಮಾನವು, ಕರಾಚಿಯಿಂದ ಇಸ್ಲಾಮಾಬಾದ್ ಕಡೆಗೆ ಹೋಗುವಾಗ ಮರ್ಗುಲ್ಲಾ ಬೆಟ್ಟಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಆ ನತದೃಷ್ಟ ವಿಮಾನದಲ್ಲಿ 146 ಮಂದಿ ಪ್ರಯಾಣಿಕರು ಮತ್ತು 6 ಜನ ಸಿಬ್ಬಂದಿ ಇದ್ದರೆಂದು ಪಾಕಿಸ್ತಾನದ ವಿಮಾನಯಾನ ಪ್ರಾಧಿಕಾರದ ವಕ್ತಾರ ಪರ್ವೇಜ್ ಜಾರ್ಜ್ ಅವರು ತಿಳಿಸಿದ್ದಾರೆ.
ಕಳೆದ ಒಂದೆರಡು ದಿನಗಳಿಂದ ಇಸ್ಲಾಮಾಬಾದ್ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಮೋಡಗಳು ತೀರ ಕೆಳಮಟ್ಟದಲ್ಲಿದ್ದು ನಗರದ ಮೇಲೆ ಮಂಜು ಕವಿದಿದೆ,
ರಸ್ತೆ ಸಂಪರ್ಕ ಸಾಧ್ಯವಾಗದ ದುರ್ಗಮ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಅಪಘಾತ ಸ್ಥಳಕ್ಕೆ ತೆರಳಲು ತಮಗೆ ಕಷ್ಟವಾಗುತ್ತಿದೆ ಎಂದು ಪರಿಹಾರ ತಂಡದ ಸದಸ್ಯರು ತಿಳಿಸಿದ್ದಾರೆ |
ಇಸ್ಲಾಮಾಬಾದ್: 159 ಮಂದಿಯನ್ನು ಹೊತ್ತುಕೊಂಡು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಬರುತ್ತಿದ್ದ 'ಏರ್ ಬ್ಲೂ' ಖಾಸಗಿ ಪ್ರಯಾಣಿಕರ ವಿಮಾನ ಭಾರೀ ಮಳೆ ಮತ್ತು ಮಂಜಿನ ಕಾರಣದಿಂದ ರಾಜಧಾನಿ ಸಮೀಪದ ಮರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ಪತನಗೊಂಡಿದೆ.
ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಪ್ರತಿಕೂಲ ಹವಾಮಾನದ ಕಾರಣದಿಂದ ಸಾವು-ನೋವಿನ ಸಂಖ್ಯೆ ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಯಾರೊಬ್ಬರೂ ಜೀವಂತವಾಗಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ. ಇದುವರೆಗೆ ಒಂದು ಶವವನ್ನಷ್ಟೇ ಹೊರಗೆ ತೆಗೆಯಲಾಗಿದೆ ಎಂದು ವರದಿಗಳು ಹೇಳಿವೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ 146 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳನ್ನು ಹೊತ್ತಿದ್ದ ವಿಮಾನವು ಕರಾಚಿಯಿಂದ ಇಸ್ಲಾಮಾಬಾದ್‌ಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಆದರೆ ವಿಮಾನದಲ್ಲಿ 159 ಮಂದಿ ಇದ್ದರು ಎಂದು ಹೇಳ ಲಾಗುತ್ತಿದೆ. ಪತನಕ್ಕೆ ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲವಾದರೂ, ಭಾರೀ ಮಳೆಯಿಂದಾಗಿ ಹೀಗಾಯಿತು ಎಂದು ಹೇಳಲಾಗಿದೆ.
ವಿಮಾನ ಬೆಟ್ಟದಲ್ಲಿ ಪತನಗೊಳ್ಳುವ ಮೊದಲು ವಾಯು ಸಂಚಾರ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿದುಕೊಂಡಿತ್ತು. ಬೆಳಿಗ್ಗೆ ಸುಮಾರು 9.30ಕ್ಕೆ ಈ ಅಪಘಾತ ಸಂಭವಿಸಿದೆ. ಇದೀಗ ಹೆಲಿಕಾಫ್ಟರುಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ವಿಮಾನ ಪತನಗೊಂಡಿರುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಪಾಕಿಸ್ತಾನ ನಾಗರಿಕ ವಾಯುಯಾನ ಇಲಾಖೆಯ ಅಧಿಕಾರಿಗಳು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದ್ದಾರೆ.
ಅಪಘಾತ ನಡೆದ ಕೆಲವೇ ಹೊತ್ತಿನಲ್ಲಿ ಪಾಕಿಸ್ತಾನದ ಸುದ್ದಿ ವಾಹಿನಿಗಳು ಸ್ಥಳಕ್ಕೆ ಧಾವಿಸಿ ಅವಘಢದ ದೃಶ್ಯಗಳನ್ನು ನೇರ ಪ್ರಸಾರ ಮಾಡಿದವು. ದಟ್ಟಾರಣ್ಯ ಪ್ರದೇಶದಲ್ಲಿ ಘಟನೆ ನಡೆದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ವರದಿಗಳು ಹೇಳಿವೆ.
ಮಾರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ವಿಮಾನ ಪತನಗೊಂಡಿರುವುದು ಖಚಿತವಾಗಿದೆ. ಅಲ್ಲಿ ಭಾರೀ ಹೊಗೆ ತುಂಬಿಕೊಂಡಿದೆ. ಬೆಟ್ಟ ಪ್ರದೇಶವಾಗಿರುವುದರಿಂದ ರಸ್ತೆ ಸಂಪರ್ಕವೂ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಇಸ್ಲಾಮಾಬಾದ್ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28 00:00:00
|
|
| Panchajanya, kuwait | 2010-07-30 | | ದ್ವೇಷ ಎಷ್ಟೇ ಇದ್ದರೂ ಇಂತಹ ಸಮಯದಲ್ಲೂ ಅವರ ದುಃಖ ದಲ್ಲಿ ಪಾಲ್ಗೊಳ್ಳದಿರುವುದು ಭಾರತೀಯರ ಲಕ್ಷಣವಲ್ಲ.ಏಕೆಂದರೆ ಇಂತಹ ಸಾವನ್ನು ತುಂಬಾ ಸನಿಹದಿಂದ ಕಂಡವರು ನಾವು.ನಮ್ಮ ಸಹೋದರರನ್ನ ಇದೆ ರೀತಿ ಬಜ್ಪೆ ವಿಮಾನದುರಂತದಲ್ಲಿ ಕಳೆದುಕೊಂಡಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಅನುಕಂಪ ಗಳಿಸಿಕೊಂಡಿದ್ದೆವು.ಆಗ ಪಾಕಿಸ್ತಾನ ಸಂತಾಪ ವ್ಯಕ್ತಪಡಿಸಿದೆಯೋ ಇಲ್ಲವೋ,ಅದು ಬೇರೆ ವಿಷಯ.ಆದರೆ ನಾವು ಭಾರತೀಯರು.ದುರಂತದಲ್ಲಿ ಮಡಿದ ಪಾಕಿಸ್ತಾನಿಯರ ಕುಟುಂಬಕ್ಕೆ ಆ ದುಃಖವನ್ನು ಸಹಿಸುವ ಶಕ್ತಿ ಭಗವಂತನು ನೀಡಲಿ,ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡುವುದು ಭಾರತೀಯರಾದ ನಮ್ಮ ಹೆಚ್ಚುಗಾರಿಕೆ.ನಾವು ಕೂಡ ಇಂತಹ ಒಂದು ಆಘಾತದಿಂದ ಇನ್ನೂ ಹೊರಬಂದಿಲ್ಲ ಅಲ್ಲ ಸೋದರರೇ.....? |
|