ಇದೆಂತಹಾ ನ್ಯಾಯ? :ಭಾರೀ ನರರಾಕ್ಷಸನೊಬ್ಬನಿಗೆ ಸಣ್ಣದೊಂದು ಸೊಳ್ಳೆ ಕಚ್ಚಿದರೆ ಏನು ಪ್ರಯೋಜನ |
ಪ್ರಕಟಿಸಿದ ದಿನಾಂಕ : 2010-07-26
ಭಾರೀ ನರರಾಕ್ಷಸನೊಬ್ಬನಿಗೆ ಸಣ್ಣದೊಂದು ಸೊಳ್ಳೆ ಕಚ್ಚಿದೆ. ಆ ರಾಕ್ಷಸನ ಕುರಿತಂತೆ ನಾವೆಷ್ಟು ಅಸಹಾಯಕರೆಂದರೆ, ಸೊಳ್ಳೆ ಕಚ್ಚುವ ಮೂಲಕ ಆತನಿಗೆ ಸರಿಯಾದ ಶಾಸ್ತಿಯಾಯಿತೆಂಬ ಸಂಭ್ರ ಮದಲ್ಲಿದ್ದೇವೆ. ಸೊಳ್ಳೆ ಕಚ್ಚುವುದನ್ನು ಸಹಿಸಲು ಸಿದ್ಧನಿಲ್ಲದ ನರರಾಕ್ಷಸ ಸಿಟ್ಟಿನಿಂದ ಹೂಂಕರಿಸಿ ದ್ದಾನೆ. ಅದು ರಾಕ್ಷಸನ ಚೀತ್ಕಾರವೆಂಬಂತೆ ಭಾವಿಸಿ ನಮಗೆ ನಾವೇ ಸಮಾಧಾನ ಪಟ್ಟುಕೊಂಡಿ ದ್ದೇವೆ. ನರರಾಕ್ಷಸನನ್ನು ಮುಟ್ಟುವುದಕ್ಕೂ ಅಂಜುವ ಸನ್ನಿವೇಶದಲ್ಲಿ ಕನಿಷ್ಠ ಸೊಳ್ಳೆಯಾದರೂ ಆತನಿಗೆ ಕಚ್ಚಿತಲ್ಲ ಎನ್ನುವ ಆತ್ಮತೃಪ್ತಿ ನಮಗೆ. ಅದೇ ಅವನಿಗಾದ ಶಿಕ್ಷೆ ಎಂದು ನಮ್ಮನ್ನು ನಾವೇ ಸಂತೈಸಿ ಕೊಳ್ಳುತ್ತಿದ್ದೇವೆ.
ಗುಜರಾತಿನಲ್ಲಿ ನಡೆದ, ನಡೆಯುತ್ತಿರುವ ಬೆಟ್ಟದಷ್ಟು ದೊಡ್ಡದಾದ ಅನ್ಯಾಯಕ್ಕೆ, ಅಮಿತ್ ಶಾ ಬಂಧನದಿಂದ ನ್ಯಾಯ ಸಿಕ್ಕಿದೆ ಎಂದು ಭಾವಿಸಿದವರಿಗೆಲ್ಲ ಮೇಲಿನ ಕತೆಯನ್ನು ಅನ್ವಯಿಸ ಬಹುದು. ಈ ದೇಶ ಪ್ರಜಾಸತ್ತಾತ್ಮಕವಾದುದು, ಸಂವಿಧಾನ ಇಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದನ್ನು ನಂಬಿದ ತಪ್ಪಿಗೆ ನಾವೆಲ್ಲರೂ, ಅಮಿತ್ ಶಾನಿಗೆ ಶಿಕ್ಷೆಯಾಗಿಯೇ ಬಿಟ್ಟಿತು ಎಂದು ಸಂಭ್ರಮ ಪಡಬೇಕಾಗಿದೆ. ಭಾರೀ ಗದ್ದಲದೊಂದಿಗೆ ಸಿಬಿಐ ಅಮಿತ್ ಶಾನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಬಿಟ್ಟುಕೊಟ್ಟಿತು.
ಕನಿಷ್ಠ ವಿಚಾರಣೆಗಾಗಿ ಕಸ್ಟಡಿಗೂ ಕೇಳಲಿಲ್ಲ. ಒಂದು ದೊಡ್ಡ ಅನ್ಯಾಯದ ಹಿಂದಿರುವ ಆರೋಪಿ ಯನ್ನು ಸಿಬಿಐ ವಿಚಾರಣೆ ನಡೆಸಿದ ರೀತಿ ಇದು. ಅಮಿತ್ ಶಾನ ಕುರಿತಂತೆ ಸಿಬಿಐ ಜೊತೆಗಿರುವ ದಾಖಲೆಗಳನ್ನು ಗಣನೆಗೆ ತೆಗೆದುಕೊಂಡರೆ, ಆತ ಎಂದೋ ಬಂಧನಕ್ಕೊಳಗಾಗಬೇಕಾಗಿತ್ತು. ಆದರೆ ಮೀನಾಮೇಷ ಎಣಿಸಿ, ಹಲವು ತಿಂಗಳ ಬಳಿಕ ಆತನಿಗೆ ನೋಟಿಸ್ ಜಾರಿ ಮಾಡಿತು. ಇದೀಗ ಅನಿವಾರ್ಯವಾಗಿ ಆತನನ್ನು ಬಂಧಿಸಿದೆ. ಅಥವಾ ಬಂಧಿಸಿದಂತೆ ಮಾಡಿ, ಆತನ ಬಿಡುಗಡೆಗೆ ದಾರಿ ಸುಗಮ ಮಾಡಿ ಕೊಟ್ಟಿದೆ.
ಅಮಿತ್‌ಶಾನ ರಾಜೀನಾಮೆ, ಶರಣಾಗತಿ ಇತ್ಯಾದಿ ನಾಟಕಗಳನ್ನು ಒಂದೇ ಮಾತಿನಲ್ಲಿ ನರರಾಕ್ಷ ಸನೊಬ್ಬನಿಗೆ ಸೊಳ್ಳೆ ಕಚ್ಚಿದ ರೀತಿ ಎಂದು ಬಣ್ಣಿಸಬಹುದಾಗಿದೆ. ಸಂವಿಧಾನ ಮತ್ತು ಪ್ರಜಾಸತ್ತೆ ಯ ಒಂದು ಅಣಕು ಪ್ರದರ್ಶನ ಇದು. ಅಂದ ಹಾಗೆ, ಈ ಕತೆಯಲ್ಲಿ ಬರುವ ನರರಾಕ್ಷಸ ಅಮಿತ್ ಶಾ ಅಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಡ ಬೇಕಾಗಿದೆ.
ಅಮಿತ್ ಶಾ ಇಲ್ಲಿ ನೆಪ ಮಾತ್ರ. ಸೊಳ್ಳೆ ನಿಜಕ್ಕೂ ಕಚ್ಚಿರುವುದು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ. ಸಿಬಿಐ ಬಂಧಿಸಿರುವುದು ಅಮಿತ್ ಶಾನನ್ನೇ ಆಗಿದ್ದರೂ, ಅದು ಪರೋಕ್ಷ ವಾಗಿ ಗುರಿ ಮಾಡಿರುವುದು ನರೇಂದ್ರ ಮೋದಿಯನ್ನು. ಆತನನ್ನು ಮುಟ್ಟುವ ಧೈರ್ಯವಿಲ್ಲ ಎನ್ನುವ ಕಾರಣಕ್ಕೆ, ಶಾನನ್ನು ಕಚ್ಚಿದೆ.
ಸೊಹ್ರಾಬುದ್ದೀನ್ ಎನ್‌ಕೌಂಟರ್, ಆತನ ಪತ್ನಿಯ ಬರ್ಬರ ಹತ್ಯೆ, ಬಳಿಕ ಈ ಘಟನೆಯ ಒಬ್ಬನೇ ಒಬ್ಬ ಸಾಕ್ಷಿ ತುಳಸಿ ಪ್ರಜಾಪತಿಯ ಹತ್ಯೆ ಇವೆಲ್ಲ ಗುಜರಾತ್‌ನ ಹತ್ಯಾಕಾಂಡ ಸರಣಿಯ ಉಪಕತೆಗಳು ಮಾತ್ರ. ಗೃಹ ಸಚಿವ ಇದರಲ್ಲಿ ನೇರ ಶಾಮೀಲಾಗಿದ್ದಾನೆ ಎನ್ನುವ ಕಾರಣಕ್ಕಾಗಿ ನಾವು ಬೆಚ್ಚಿ ಬೀಳಬೇಕಾಗಿಲ್ಲ. ಇಡೀ ಗುಜರಾತ್ ಸರಕಾರವೇ ಇದರಲ್ಲಿ ಶಾಮೀಲಾಗಿದೆ.
ಗುಜರಾತ್‌ನಲ್ಲಿ ನಡೆದ ಸಾಲು ಸಾಲು ಎನ್‌ಕೌಂಟರ್‌ಗಳ ನೇತೃತ್ವವನ್ನು ವಹಿಸಿರುವುದೇ ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ. ಉಳಿದವರೆಲ್ಲ ಆತನ ಆಜ್ಞಾವರ್ತಿಗಳು. ಕೋಮುಗಲಭೆಯ ಹೆಸರಿನಲ್ಲಿ ಸಹಸ್ರಾರು ಮುಸ್ಲಿಮರ ಬರ್ಬರ ಹತ್ಯಾಕಾಂಡದಿಂದ ಹಿಡಿದು, ಪೊಲೀಸ್ ನಕಲಿ ಎನ್‌ಕೌಂಟರ್ ಪ್ರಕರಣಗಳವರೆಗೆ ಎಲ್ಲದರಲ್ಲೂ ಮೋದಿಯ ಕೈವಾಡವಿದೆ. ಇದು ಇಡೀ ದೇಶಕ್ಕೆ ಗೊತ್ತಿರುವ ಸತ್ಯ. ಅಮಿತ್ ಶಾ ಮೋದಿಯ ಬಲಗೈ ಬಂಟ.
ಆತನ ಸೂಚನೆಯಂತೆ ತನ್ನ ಖಾತೆಯನ್ನು ಶಾ ದುರುಪಯೋಗ ಪಡಿಸಿಕೊಂಡ ಅಷ್ಟೇ. ಗುಜರಾತ್‌ನಲ್ಲಿ ನಡೆದ ಹತ್ಯೆಗಳಿಗಾಗಿ ನಿಜಕ್ಕೂ ಶಿಕ್ಷೆಯಾಗಬೇಕಾದುದು ನರೇಂದ್ರ ಮೋದಿಗೆ. ಸೊಹ್ರಾಬುದ್ದೀನ್ ಎನ್‌ಕೌಂಟರ್‌ಗೆ ಸಂಬಂಧಿಸಿ ಸಿಬಿಐ ನ್ಯಾಯವನ್ನೇನೂ ಕೊಟ್ಟಿಲ್ಲ. ನಕಲಿಎನ್ ಕೌಂಟರ್ ನಡೆದು ಸುಮಾರು ಐದು ವರ್ಷಗಳ ಬಳಿಕ ಅಮಿತ್‌ಶಾನ ವಿಚಾರಣೆಗೆ ಸಿಬಿಐ ಮುಂದಾಗಿದೆ. ಆತನಿಗೆ ಶಿಕ್ಷೆಯೇನೂ ಆಗಿಲ್ಲ. ಬರೇ ಆತನ ವಿಚಾರಣೆಗಾಗಿ ಸಿಬಿಐ ಇಷ್ಟು ತಿಣುಕಾಡಿತು.
ಆತನನ್ನು ವಿಚಾರಣೆ ನಡೆಸುವುದೇ ಇಷ್ಟು ಕಷ್ಟವೆಂದಾದರೆ, ಆತನಿಗೆ ಸಿಬಿಐ ಶಿಕ್ಷೆ ಕೊಡಿಸುವುದು ನಿಜವೆ? ನರೇಂದ್ರ ಮೋದಿಯ ಬಂಟನ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಇಷ್ಟೆಲ್ಲ ಕಷ್ಟ ವಾಯಿತೆಂದ ಮೇಲೆ ನರೇಂದ್ರ ಮೋದಿ ಯನ್ನು ಸಿಬಿಐ ವಿಚಾರಣೆ ನಡೆಸುತ್ತದೆ ಮತ್ತು ಆತನಿಗೆ ಶಿಕ್ಷೆ ನೀಡುತ್ತದೆ ಎಂದು ನಾವು ಊಹಿಸುವುದಾದರೂ ಸಾಧ್ಯವೆ?
ಎಲ್ಲಿಯವರೆಗೆ ನರೇಂದ್ರ ಮೋದಿಗೆ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ, ಗುಜರಾತ್‌ನ ಸಂತ್ರಸ್ತರಿಗೆ ನ್ಯಾಯ ಸಿಗುವುದು ಸಾಧ್ಯವಿಲ್ಲ. ಬಹಿರಂಗವಾಗಿ ಕಾನೂನಿನ ನೇತೃತ್ವದಲ್ಲೇ ನಡೆದ ಹತ್ಯಾಕಾಂಡ ಕ್ಕೊಳಗಾದವರಿಗೆ ನ್ಯಾಯ ಸಿಕ್ಕಿಲ್ಲವೆಂದರೆ, ನಾವು ಈ ದೇಶದಲ್ಲಿ ಸಂವಿಧಾನ, ಪ್ರಜಾಸತ್ತೆ ಅಸ್ತಿತ್ವದಲ್ಲಿದೆ ಎಂದು ಒಪ್ಪಬೇಕಾದರೂ ಯಾಕೆ?
ಸಿಬಿಐಯನ್ನು ಕಾಂಗ್ರೆಸ್ ಪಕ್ಷ ದುರುಪಯೋಗ ಪಡಿಸಿದೆ ಎಂದು ಹೇಳುತ್ತಿದೆ ಬಿಜೆಪಿ. ನಿಜ. ಸಿಬಿಐಯನ್ನು ಕೆಲ ಕಾಂಗ್ರೆಸ್ ಮುಖಂಡರು ದುರುಪಯೋಗ ಪಡಿಸಿದ ಕಾರಣದಿಂದಲೇ, ನರೇಂದ್ರ ಮೋದಿ ಮತ್ತು ಆತನ ಸಹಚರರು ಇನ್ನೂ ಸಿಬಿಐ ಬಲೆಗೆ ಬೀಳದೆ ಗುಜರಾತಿನಲ್ಲಿ ಯಶಸ್ವಿಯಾಗಿ ದರ್ಬಾರು ನಡೆಸುತ್ತಿದ್ದಾರೆ. ಸಿಬಿಐಯನ್ನು ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ನಾಯಕರು ಬಿಟ್ಟಿದ್ದರೆ, ಅಮಿತ್ ಶಾ ಮಾತ್ರವಲ್ಲ, ನರೇಂದ್ರ ಮೋದಿಯೂ ಇಂದು ಜೈಲಲ್ಲಿರಬೇಕಾಗಿತ್ತು.
ದೇಶದ ಮುಂದೆ ಹುಲಿ ಹಿಡಿಯುವ ನಾಟಕವಾಡುತ್ತಿರುವ ಸಿಬಿಐ ಒಂದು ಇಲಿಯನ್ನಾದರೂ ಹಿಡಿದ ಉದಾಹರಣೆ ನಮ್ಮ ಮುಂದಿದೆಯೆ? ಕಾಂಗ್ರೆಸ್ ನಾಯಕರು ಮನಸ್ಸು ಮಾಡಿದ್ದರೆ, ಗುಜರಾತಿನ ಆರೋಪಿಗಳಿಗೆ ಕನಿಷ್ಠ ಶಿಕ್ಷೆಯಾದರೂ ಆಗುತ್ತಿತ್ತು. ಆದರೆ ನಡೆಯುತ್ತಿರುವುದೇನು? ಕಾಂಗ್ರೆಸ್ ಹೊಡೆದಂತೆ ನಟಿಸುತ್ತಿದೆ. ಬಿಜೆಪಿ ಅತ್ತಂತೆ ನಾಟಕವಾಡುತ್ತಿದೆ. ನಾವೆಲ್ಲ ಈ ಪ್ರಹಸನವನ್ನು ಮೂರ್ಖರಂತೆ ನೋಡಿ, ಸಂಭ್ರಮ ಪಟ್ಟುಕೊಳ್ಳುತ್ತಿದ್ದೇವೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-26 00:00:00
|
|
| sunil, uppinangady | 2010-11-01 | | Sohrabudhin is not a NATIONAL LEDER, he is a criminal.. |
| Aveen, Bangalore | 2010-08-03 | | ಮಾನ್ಯರೇ,
ನಿಮ್ಮ ಅಂಕಣವನ್ನು ಓದಿದೆ. ತೆಗೆದು ಹಾಕಲಾರದ ಕೆಲವು ಮಾತಿದ್ದರೂ ಒಪ್ಪುವಂಥಾ ಒಂದು ಮಾತೂ ಅಂಕಣದಲ್ಲಿ ಪ್ರಸ್ತಾಪವಾಗಿಲ್ಲ.. ಏಕ ಕುಮ್ಕವಾಗಿ ಘಟನೆಯ ಹಿನ್ನಲೆಯನ್ನು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂಥ 3rd party ಸ್ತಾನದಲ್ಲಿ ನಿಮ್ಮ ವಿಶ್ಲೇಷಣೆಯನ್ನ ಬರೆಯಿರಿ. ನಿಮಗೆ ಘಟನೆಯ ಪೂರ್ವಾಪರ ಬೇಕಿದ್ದಲ್ಲಿ ಕೆಳಗಿನ ಕೊಂಡಿಯನ್ನು ನೋಡಿ.
http://www.vijaykarnatakaepaper.com |
|