ಇಂದಿನಿಂದ ಓಬವ್ವನ ನಾಡಲ್ಲಿ ಸಾಹಿತ್ಯ ತೇರು(ಸ೦ಗ್ರಹ) |
ಪ್ರಕಟಿಸಿದ ದಿನಾಂಕ : 2009-02-18
೭೫ನೇ ಸಮ್ಮೇಳನಕ್ಕೆ ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಚಾಲನೆ
ಚಿತ್ರದುರ್ಗ, ಫೆ.೩ .ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆಯ ಹೊತ್ತಿಗೆ ವೃಂದಗಾನದಲ್ಲಿ ಅನುರಣಿಸುತ್ತಿದ್ದದ್ದು ನಾಡಗೀತೆ 'ಜಯಭಾರತ ಜನನಿಯ ತನುಜಾತೆ' ಮತ್ತು ಅದನ್ನು ಹೇಗೆ ನಾಲ್ಕು ನಿಮಿಷ ಮೂವತ್ತು ಸೆಕೆಂಡಿನೊಳಗೆ ಹಾಡಿ ಮುಗಿಸಬೇಕು ಎಂಬ ಸಂಗೀತ ನಿರ್ದೇಶಕರ ಸೂಚನೆ.
ಮಾರನೆ ದಿನ ಸಾಹಿತ್ಯ ಸಮ್ಮೇಳನ ನಡೆಯಲಿದೆ ಅನ್ನುವುದಕ್ಕೆ ಅಲ್ಲಿದ್ದ ಏಕೈಕ ಸಾಕ್ಷಿ ಅದೊಂದೇ. ಬಿಟ್ಟರೆ, ಮಾಧ್ಯಮ ಕೇಂದ್ರದ ಎದುರು ನೋಂದಣಿ ಮಾಡಿಸಿಕೊಳ್ಳಲು ಪಡಿಪಾಟಲು ಪಡುತ್ತಿದ್ದ ಮಾಧ್ಯಮದ ಮಂದಿಯ ದೊಡ್ಡ ಗುಂಪು. ಉಳಿದಂತೆ ಚಿತ್ರದುರ್ಗ ಎಂದಿನಂತಿತ್ತು. ಅದೇ ಮಣಗಟ್ಟಲೆ ಬಿಸಿಲು, ಮೊಳದುದ್ದ ಸೆಕೆ ಮತ್ತು ಲಾರಿಗಳು ಸುರಿಯುತ್ತಿದ್ದ ನೀರನ್ನೂ ಲೆಕ್ಕಿಸದೇ ಆಕಾಶಕ್ಕೇಳುತ್ತಿದ್ದ ಧೂಳು. ಕೊಂಚ ನಿರುತ್ಸಾಹ, ಚೂರು ಬೇಸರ, ಸುಡು ಬಿಸಿಲಿನ ಝಳದೊಂದಿಗೆ ೭೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಿತ್ರದುರ್ಗದಲ್ಲಿ ಕ್ಷಣಗಣನೆ ಆರಂಭವಾಗಿದೆ. ನಿರುತ್ಸಾಹ ಮತ್ತು ಬೇಸರಕ್ಕೆ ಕಾರಣ- ಸಾಹಿತ್ಯ ಸಮ್ಮೇಳನ ಒಮ್ಮೆ ನಿಗದಿಯಾಗಿ ಮುಂದಕ್ಕೆ ಹೋಗಿರುವುದು. ಇನ್ನು, ಬಿಸಿಲು ಮದಕರಿ ನಾಯಕನ ಕರ್ಮಭೂಮಿಯ ಯಾವತ್ತಿನ ನೆಂಟ!
ಬುಧವಾರ ಬೆಳಗ್ಗೆ ಇಲ್ಲಿ ೪ ದಿನದ ಕನ್ನಡ ಜಾತ್ರೆ ಆರಂಭವಾಗುತ್ತದೆ. ಸಿದ್ಧತೆಗಳು ಯಾಂತ್ರಿಕವಾಗಿ ನಡೆಯುತ್ತಿದ್ದರೂ ಹಬ್ಬದ ವಾತಾವರಣವಂತೂ ಇಲ್ಲ. 'ನಾಳೆ ಬೆಳಗ್ಗೆ ನೋಡಿ ಸರ್, ಸಾಗರದಂತೆ ಜನ ಹರಿದು ಬರುತ್ತಾರೆ. ಚಿತ್ರದುರ್ಗದಲ್ಲಿರುವಷ್ಟು ಸಾಹಿತ್ಯಾಸಕ್ತರು ಬೇರೆಲ್ಲೂ ಇಲ್ಲ.' ಈ ನಿರುತ್ಸಾಹದ ವಾತಾವರಣ ಸಾಹಿತ್ಯಾಸಕ್ತಿಯ ಮಾನದಂಡವಲ್ಲ ಎಂಬುದನ್ನು ಸೂಚಿಸುವಂತೆ ಉತ್ಸಾಹಿ ಕಾರ್ಯಕರ್ತರು ಸ್ಪಷ್ಟನೆ ಕೊಡುತ್ತಾರೆ.
ಹಾಗೆ ನೋಡಿದರೆ, ಅವರ ಮಾತು ಅರ್ಥವಿಲ್ಲದ್ದೇನೂ ಅಲ್ಲ. ಏಕೆಂದರೆ ಇದು ಆದಾಯ ಹಾಗೂ ಖರ್ಚಿನಲ್ಲಿ ಇತಿಹಾಸ ಸೃಷ್ಟಿಸುತ್ತಿರುವ ಸಮ್ಮೇಳನ. ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನವೊಂದಕ್ಕೆ ಸರ್ಕಾರ ಮೂರು ಚಿಲ್ಲರೆ ಕೋಟಿ ರುಪಾಯಿ ಖರ್ಚು ಮಾಡುತ್ತಿದೆ.
ಜನರ ಔದಾರ್ಯವೂ ಕಡಮೆಯೇನಿಲ್ಲ. ಸರ್ಕಾರ ಖರ್ಚು ಮಾಡುತ್ತಿರುವುದಕ್ಕಿಂತ ಹೆಚ್ಚು ದೇಣಿಗೆ ಸಂಗ್ರಹವಾಗಿದೆ. ಜೊತೆಗೆ ಲೋಡುಗಟ್ಟಲೆ ಅಕ್ಕಿ, ಎಣ್ಣೆ, ಕಾಳು ಕಡಿಗಳು ಉಗ್ರಾಣಕ್ಕೆ ಬಂದು ಬಿದ್ದಿವೆ.
ಇಷ್ಟೆಲ್ಲ ಸಾಧ್ಯವಾಗಿದ್ದು ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹುಮ್ಮಸ್ಸಿನಿಂದ. ಅವರು ಕನ್ನಡಿಗರಲ್ಲ ಎಂಬುದು ಯಾರಿಗೂ ಅರಿವಾಗದಂತೆ ಕೆಲಸ ಮಾಡಿದ್ದಾರೆ. ಅವರ ಕೋರಿಕೆಗೆ ಜಿಲ್ಲೆಯ ಆಸುಪಾಸಿನ ಮಂದಿ ಅಷ್ಟೇ ತುಂಬು ಮನಸ್ಸಿನಿಂದ ಸ್ಪಂದಿಸಿದ್ದಾರೆ. ಗೋಷ್ಠಿಗಳು ಫಲಕಾರಿಯಾಗಿ, ಸಮ್ಮೇಳನದ ನಿರ್ಣಯಗಳು ಜಾರಿಯಾಗುವಂತೆ ನೋಡಿಕೊಂಡರೆ ಇದು ಖಂಡಿತ ಯಶಸ್ವಿ ಸಮ್ಮೇಳನವಾಗುತ್ತದೆ. ಆ ಜವಾಬ್ದಾರಿ ಸಾಹಿತಿಗಳ ಮೇಲಿದೆ.
- ನಿಜಕ್ಕೂ ಸುಂದರ ವೇದಿಕೆ:
ಧಗೆಯ ಊರಿಗೆ ಗಾಳಿ ಬೀಸಲೋ ಎಂಬಂತೆ ಸದಾ ಗಾಳಿಯಂತ್ರಗಳು ಸುತ್ತುವ ಬೆಟ್ಟದ ಸಾಲಿನ ತಪ್ಪಲಿನಲ್ಲಿ ಭವ್ಯ ವೇದಿಕೆ. ೧೦ ಸಾವಿರ ಆಸನಗಳ 'ರಾಜಾ ವೀರ ಮದಕರಿನಾಯಕ' ಸಭಾಂಗಣ. ಜನರ ಹರಿವು ಹೆಚ್ಚಿದರೆ ಸುತ್ತಲೂ ಕುಳಿತು ಕಲಾಪ ವೀಕ್ಷಿಸಬಹುದಾದ ಕ್ರೀಡಾಂಗಣದ ಮೆಟ್ಟಿಲುಗಳ ಸಾಲು. ವೇದಿಕೆಯ ಹಿನ್ನೆಲೆಯಲ್ಲಿ ಉರಿ ಬಿಸಿಲಿನಲ್ಲೂ ಮಂಜು ಮುಸುಕಿದಂತೆ ಕಾಣುವ ಪರ್ವತ ಪಂಕ್ತಿ. ಅದರ ಮೇಲೆ ಚಿತ್ರದುರ್ಗದ ಟ್ರೇಡ್‌ಮಾರ್ಕ್ ಗಾಳಿಯಂತ್ರಗಳು.
ಬಹುಶಃ ಇತ್ತೀಚಿನ ಯಾವ ಸಮ್ಮೇಳನಕ್ಕೂ ಸಿಗದ ಅತ್ಯಂತ ಸುಂದರ ವೇದಿಕೆಯನ್ನು ಹೊಂದುವ ಅವಕಾಶ ಈ ಸಲದ ಸಮ್ಮೇಳನದ್ದು.
- ಅತ್ಯಂತ ಹೆಚ್ಚು ಪುಸ್ತಕ ಮಳಿಗೆ:
ಸಮ್ಮೇಳನಕ್ಕೆ ಬರುವವರಿಗೆ ಈ ವರ್ಷ ಒಂದು ಅನುಕೂಲ ಏನೆಂದರೆ, ಸಭಾಂಗಣ, ಪುಸ್ತಕದ ಮಳಿಗೆ, ಊಟದ ಮನೆ ಎಲ್ಲವೂ ಒಂದೇ ನಿಲುಕಿಗೆ ಎಟಕುತ್ತವೆ. ಪುಸ್ತಕ ಪ್ರಿಯರಿಗೆ ಇಷ್ಟವಾಗುವ ಸಂಗತಿ ಏನೆಂದರೆ, ಅತಿ ಹೆಚ್ಚು ಪುಸ್ತಕದ ಮಳಿಗೆಗಳಿವೆ. ಅವುಗಳ ಸಂಖ್ಯೆ ಭರ್ತಿ ೬೩೦. ಅದರಲ್ಲಿ ಕೆಲ ವಾಣಿಜ್ಯ ಮಳಿಗೆಗಳೂ ಇವೆ.
ಆದರೆ, ನಿರೀಕ್ಷಿಸಿದಷ್ಟು ಜನರೇ ಬರದಿದ್ದರೆ ಮಾಡುವುದೇನು ಎಂಬ ಸಣ್ಣ ಆತಂಕ ವೊಂದು ಕಾರ್ಯಕರ್ತರಲ್ಲಿದೆ. ಏಕೆಂದರೆ, ಮಾಜಿ ರಾಷ್ಟ್ರಪತಿಗಳ ನಿಧನದಿಂದ ಸಮ್ಮೇಳನ ಮುಂದಕ್ಕೆ ಹೋಗಿರುವುದು ಸಮ್ಮೇಳನಕ್ಕೆ ಹೋಗಬೇಕೆಂಬ ಯೋಜನೆ ಹಾಕಿಕೊಂಡಿದ್ದ ಅನೇಕರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ಆದರೂ ಸಿದ್ಧತೆಗೆ ತಕ್ಕ ಸ್ಪಂದನೆ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿ ಸಮ್ಮೇಳನ ಆರಂಭವಾಗುತ್ತಿದೆ. ತರಾಸು ಸ್ಮರಣೆಯಲ್ಲಿ ದುರ್ಗದ ಇತಿಹಾಸದ ಪುಟಗಳಿಗೆ ಸಾಹಿತ್ಯಪ್ರಿಯರ ಮನಸ್ಸುಗಳು ದಾಂಗುಡಿಯಿಡುತ್ತಿವೆ.
-ಸಮ್ಮೇಳನಾಧ್ಯಕ್ಷರಿಗೆ ಅದ್ಧೂರಿ ಸ್ವಾಗತ
ಚಿತ್ರದುರ್ಗ: ಅಖಿಲ ಭಾರತ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎಲ್. ಬಸವರಾಜು ಅವರು ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ನಗರದ ಹೊರವಲಯದ ಚಳ್ಳಕೆರೆ ಟೋಲ್ ಗೇಟ್ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.
ಇಳಿ ಹೊತ್ತಿನ ೪-೩೦ರವೇಳೆಗೆ ಕುಟುಂಬದೊಂದಿಗೆ ಆಗಮಿಸಿದ ಎಲ್. ಬಸವರಾಜು ಅವರಿಗೆ ಮಹಿಳೆಯರು ಪೂರ್ಣಕುಂಭದ ಸ್ವಾಗತ ನೀಡಿದರು. ಕಾರಿನಲ್ಲಿಯೇ ಕುಳಿತು ಜನರತ್ತ ಕೈಬೀಸಿದ ಬಸವರಾಜು ಇಳಿಯುವ ಪ್ರಯತ್ನ ಮಾಡದೆ ನೇರವಾಗಿ ಎಸ್‌ಜೆಎಂ ಗೆಸ್ಟ್ ಹೌಸ್‌ಗೆ ತೆರಳಿದರು. ಕಸಾಪದ ಕೇಂದ್ರ ಸಮಿತಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್, ಜಿಲ್ಲಾಧಿಕಾರಿ ಬಿಸ್ವಾಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಕೆ.ಎಂ. ವೀರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
-ಕಸಾಪ ವೆಬ್‌ಸೈಟ್‌ಲ್ಲಿ ಇನ್ನೂ ಶಿವಮೊಗ್ಗ ಸಮ್ಮೇಳನ
ಬೆಂಗಳೂರು: ಅಧ್ಯಕ್ಷರಾಗಿ ಯಾರೇ ಬರಲಿ ಕನ್ನಡ ಸಾಹಿತ್ಯ ಪರಿಷತ್ ಮಾತ್ರ ಸುಧಾರಿಸುವುದಿಲ್ಲ!
ಬರೀ ಮಾತು, ಭರವಸೆಗಳನ್ನೇ ನೀಡುತ್ತಾ ಅಧ್ಯಕ್ಷರು ತಮ್ಮ ಕಾಯಕ ಪೂರೈಸಿ ಬಿಡುತ್ತಾರೆ. ಅದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಅದರ ವೆಬ್‌ಸೈಟ್.
ಚಿತ್ರದುರ್ಗದಲ್ಲಿ ಅಮೃತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ, ಕಸಾಪ ವೆಬ್‌ಸೈಟ್ ಮಾತ್ರ ಇನ್ನೂ ಶಿವಮೊಗ್ಗದ ೭೪ನೇ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲೇ ಇದೆ! ಅಷ್ಟೇ ಅಲ್ಲ ಕಸಾಪ ಅಧ್ಯಕ್ಷರು ಇನ್ನೂ ಪ್ರೊ. ಚಂದ್ರಶೇಖರ ಪಾಟೀಲರೇ! ಇದು ವೆಬ್‌ಸೈಟ್ ಪ್ರವೇಶಿಸಿದರೆ ಕಾಣಸಿಗುವ ದುಃಸ್ಥಿತಿ. ಕಾರಣ ಆರ್ಥಿಕ ಪರಿಸ್ಥಿತಿ.
ರಾಜಕಾರಣಿಗಳನ್ನು ಹೊರಗಿಡಬೇಕು
ಚಿತ್ರದುರ್ಗ: ಕನ್ನಡ ಸಾಹಿತ್ಯ ಸಮ್ಮೇಳನಗಳಿಂದ ರಾಜಕಾರಣಿಗಳನ್ನು ಹೊರಗಿಡಬೇಕು. ಸಮ್ಮೇಳನಕ್ಕೆ ನೆರವು ನೀಡುವಂತೆ ಅವರ ಮುಂದೆ ಕೈಚಾಚಿ ನಿಲ್ಲುವ ಪ್ರವೃತ್ತಿ ದೂರ ಸರಿಸಬೇಕು. ಸಮಸ್ತ ಕನ್ನಡಿಗರೇ ನಿಧಿ ಸ್ಥಾಪಿಸಿಕೊಂಡು ಸಮ್ಮೇಳನಗಳನ್ನು ಆಚರಿಸಬೇಕು.
ಅಖಿಲ ಭಾರತ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎಲ್. ಬಸವರಾಜು ವ್ಯಕ್ತಪಡಿಸಿದ ಅಭಿಪ್ರಾಯವಿದು. ಇಲ್ಲಿನ ಎಸ್‌ಜೆಎಂ ಗೆಸ್ಟ್ ಹೌಸ್‌ನಲ್ಲಿ ಮಂಗಳವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವ್ಯವಸ್ಥೆ ಕೆಟ್ಟು ಹೋಗಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಬಂದು ೬೦ ವರ್ಷಗಳು ಕಳೆದರೂ ಸಮುದಾಯಗಳು ಉದ್ಧಾರವಾಗದೇ ಹಾಗೆಯೇ ಉಳಿದಿವೆ ಎಂದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-02-18
|
|
|