ಚಿದಂಬರ ಬರೆಯುವ ವಡ್ಡರ್ಸೆ ಸರಣಿ-6: ಕರಾವಳಿಯಲ್ಲಿ ಮುಂಗಾರು ಉಂಟುಮಾಡಿದ ತಲ್ಲಣ |
ಪ್ರಕಟಿಸಿದ ದಿನಾಂಕ : 2010-07-04
ಕರಾವಳಿಯಲ್ಲಿ ಮುಂಗಾರು ಉಂಟುಮಾಡಿದ ತಲ್ಲಣ
ಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಸರಣಿ ಈಗ ಗಲ್ಫ್ ಕನ್ನಡಿಗದಲ್ಲೂ ಪ್ರಕಟವಾಗುತ್ತದೆ. ಇದು ಈ ಸರಣಿಯ ಆರನೇ ಲೇಖನ .
`ಮುಂಗಾರು' ತಂಡ ಪತ್ರಿಕೆ ಹೊರತರುವ ತಾಲೀಮಿನಲ್ಲಿ ನಿರತವಾಯಿತು. ದಿನವೂ ಡಮ್ಮಿ ಪತ್ರಿಕೆ ಸಿದ್ದಪಡಿಸುವುದು ಮತ್ತು ಮುದ್ರಿಸುವುದು ನಿತ್ಯದ ಕಾಯಕವಾಯಿತು. ಈ ಹೊತ್ತಿ ಗಾಗಲೇ ಪೂರ್ಣಪ್ರಮಾಣದ ತಂಡ ಕರಾವಳಿಯಲ್ಲಿ ಜನಶಕ್ತಿ ಬೆಳೆತೆಗೆಯುವ ಶೆಟ್ಟರ ಕಲ್ಪನೆಯನ್ನು ಸಾಕಾರ ಗೊಳಿಸಲು ಪಣತೊಟ್ಟಿತ್ತು.
ಪ್ರಜಾವಾಣಿಯಿಂದ ಬಂದಿದ್ದ ಇಂದೂಧರ ಹೊನ್ನಾಪುರ ಅವರ ನೇತೃತ್ವದ ನುರಿತವರು ಮತ್ತು ಕರಾವಳಿ ಭಾಗದದಿಂದ ಹೊಸದಾಗಿ ಆಯ್ಕೆಯಾಗಿದ್ದ ಏಳುಮಂದಿ ಯುವಕರಾದ ನಾವು ಶೆಟ್ಟರ ಗರಡಿಯಲ್ಲಿ ಪಳಗುತ್ತಿದ್ದೆವು. ಆಗ ತಾನೆ ಉದಯವಾಣಿ ತೊರೆದು ಮುಂಗಾರು ಸೇರಿದ್ದ ಜಿ.ಕೆ. ಮಧ್ಯಸ್ಥ ಅವರು ಮಾತ್ರ ಈಭಾಗದಿಂದ ಬಂದವರಲ್ಲಿ ಅನುಭವಸ್ಥರು.
ಹೊಸಬರಾದ ನಮಗೆ ದಿನಪತ್ರಿಕೆಗೆ ಲೇಖನ ಬರೆಯುವುದು, ಸ್ಟೋರಿ ಬರೆಯುವುದು ಜೊತೆಗೆ ನಾವು ಬರೆದದ್ದೆಲ್ಲ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎನ್ನುವ ಪೊಗರು ಕೂಡಾ ಥ್ರಿಲ್ ಕೊಡುತ್ತಿತ್ತು. ಈ ಮೊದಲು ಲೇಖನ ಬರೆದು ತಿಂಗಳಾನುಗಟ್ಟಲೆ ಕಾದಮೇಲೆ ಅದು ಸ್ವೀಕೃತವಾಗಿದೆ ಎಂದೋ, ಪ್ರಕಟಿಸಲು ಅಸಾಧ್ಯವೆಂಬ ವಿಷಾದ ಸಂದೇಶ ಹೊತ್ತ ಪತ್ರ ಗಳನ್ನು ಕಾಣುತ್ತಿದ್ದ ನನ್ನಂಥವರಿಗೆ ಆ ಕ್ಷಣ ಬರೆದುಕೊಟ್ಟದ್ದು ರಾತ್ರಿಯಾಗುವಾಗ ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ ಅಂತಾದರೆ ಅದೆಷ್ಟು ಖುಷಿ ಆಗುತ್ತಿತ್ತು ಆ ದಿನಗಳನ್ನು ಈಗ ಊಹಿಸಿಕೊಂಡರೆ ನನಗೇ ನಗು ಬರುತ್ತದೆ.
೧೯೮೪ ಸೆಪ್ಟಂಬರ್ ೯ ಮಂಗಳೂರು ಪುರಭವನದಲ್ಲಿ `ಮುಂಗಾರು' ಬಿಡುಗಡೆ ಸಮಾರಂಭ. ಈಗಲಾದರೆ ಮುಖ್ಯಮಂತ್ರಿಯೋ, ಕೇಂದ್ರ ಮಂತ್ರಿಯೋ ಮುಖ್ಯ ಅತಿಥಿ ಖಂಡಿತ. ಆದರೆ ಆ ದಿನ ಪತ್ರಿಕೆ ಬಿಡುಗಡೆ ಮಾಡಿದವರು ಕನ್ನಡದ ಖ್ಯಾತ ಬರಹಗಾರ ದೇವನೂರ ಮಹಾದೇವ. ಆದೇ ಮೊದಲು ದೇವನೂರು ಅವರನ್ನು ಹತ್ತಿರದಿಂದ ನೋಡಿದ್ದು.
ಕುರುಚಲು ಗಡ್ಡ, ಮಾಸಲು ಅಂಗಿ, ದೇಹ ಅದೆಷ್ಟು ದಿನಗಳಿಂದ ನೀರು ಕಂಡಿಲ್ಲವೋ ಅನ್ನುವ ರೀತಿ ಗೋಚರಿಸಿದರು. ಒಂದು ರೀತಿಯಲ್ಲಿ ನಾನು ಊಹಿಸಿಕೊಂಡಿದ್ದ ದೇವನೂರು ಇವರಲ್ಲ ಅನ್ನುವಷ್ಟರ ಮಟ್ಟಿಗೆ ಅವರನ್ನು ಕಂಡು ಆಘಾತಗೊಂಡೆ. ಮಣ್ಣಿನ ವಾಸನೆ, ಆಡುಭಾಷೆಯ ಸೊಗಡು ಬರಹದಲ್ಲಿ ಬರಬೇಕಾದರೆ ಮಣ್ಣು-ಧೂಳು ಕೊಳಕಿನಂತೆ ಕಾಣಬೇಕೇ? ಎನ್ನುವ ಮೂರ್ಖತನದ ಭಾವನೆಗಳು ಆಕ್ಷಣ ಬಂದದ್ದಂತೂ ನಿಜ.
ದೇವನೂರು ಕಾರ್ಯಕ್ರಮ ಮುಗಿಸ್ಕೊಂಡು ಶೆಟ್ರ ಜೊತೆ ಬೈಕಂಪಾಡಿ ಮುಂಗಾರು ಕಚೇರಿಗೆ ಬಂದರು. ಇನ್ನೂ ಹತ್ತಿರದಿಂದ ದೇವನೂರು ಅವರನ್ನು ಕಂಡೆ. ನಗುತ್ತಾ ಕೈಕುಲುಕಿ ಪರಿಚಯ ಮಾಡಿಕೊಂಡರು. ಕೆಂಡ ಉಗುಳುವಂತಿದ್ದ ಅವರ ಕಣ್ಣುಗಳನ್ನು ಕಂಡಾಗ ಸಿದ್ದಲಿಂಗಯ್ಯ ಅವರ ಕವಿತೆಯಲ್ಲಿ ಬರುವ `ಉಕ್ಕಿನ ದೇಹ ಹೂವಿನ ಮನಸ್ಸು' ಇದೇ ಇರಬೇಕಲ್ಲವೇ ಅಂದುಕೊಂಡೆ.
ಆದರೆ ದೇವನೂರು ಅವರದು ಸಣಕಲು ದೇಹ ಬಿಡಿ ಅಂದಿತು ಮನಸು. ದೇವನೂರು ಎಲ್ಲರನ್ನು ದ್ದೇಶಿಸಿ ಮಾತನಾಡಿ ಶೆಟ್ರೊಂದಿಗೆ ಕಾರುಹತ್ತಿ ಹೊರಟರು, ಮತ್ತೆ ಅವರನ್ನು ಹತ್ತಿರದಿಂದ ಕಾಣು ವ ಅವಕಾಶ ಸಿಕ್ಕಿಲ್ಲ ಇಲ್ಲಿಯವರೆಗೆ.
ಹುಟ್ಟು ಹಬ್ಬ ಆಚರಿಕೊಂಡಂಥ ಅನುಭವ `ಮುಂಗಾರು' ಬಿಡುಗಡೆಯ ದಿನ ನನಗೆ. ಬಹುಷ ಇಂದೂಧರ, ಶಂಕರ್ ಅವರಿಗೂ ಇದೇ ಅನುಭವ ಇರಬೇಕು ಎಲ್ಲರನ್ನು ಛೇಡಿಸಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದರು ಇಬ್ಬರೂ. ಪತ್ರಿಕೆಯ ಪುಟ ತೋರಿಸಿಕೊಂಡು ಆ ದಿನದ ಕಾರ್ಟೂನ್, ವ್ಯಂಗ್ಯಚಿತ್ರ ಬರೆದಿದ್ದ ಕಲ್ಲಪ್ಪ ಮಕಾಳಿ, ವಿ.ಮನೋಹರ್ ಅವರನ್ನು ಹೊಗಳುತ್ತಿದ್ದರು ಇಂದೂ ಧರ್.
ಆದರೆ ಮಾರುಕಟ್ಟೆಯಲ್ಲಿ ಮೊದಲ ದಿನದ ಪತ್ರಿಕೆಯ ಬಗ್ಗೆ ಎರಡು ನೇರ ಅಭಿಪ್ರಾಯಗಳು ಸುಳಿ ದಾಡುತ್ತಿದ್ದವು. ಮುಖಪುಟದಲ್ಲಿ ಪುರೋಹಿತರ ಕೈತಪ್ಪಿ ತೀರ್ಥ ಚೊಂಬು ಉರುಳಿರುವ ಮೂರು ಕಾಲಂ ಕಾರ್ಟೂನ್ ಅಭಿಪ್ರಾಯಗಳ ತರಂಗಗಳನ್ನೆಬ್ಬಿಸಿದ್ದವು. ಪತ್ರಿಕೆಯ ಮೊದಲ ದಿನವೇ ಸಂಪ್ರದಾಯವಾದಿಗಳ ನಂಬಿಕೆಯನ್ನು ಕಣಕಿದ್ದು ಯಾಕೆಂದು ಒಂದು ವರ್ಗ? ಪ್ರಶ್ನೆ ಮಾಡಿದರೆ, ಮತ್ತೊಂದು ವರ್ಗ ತಾವು ಶತಮಾನಗಳಿಂದ ಕೇಳುತ್ತಿದ್ದ ಪ್ರಶ್ನೆಗಳಿಗೆ ಧ್ವನಿಯಾಗುವ ಪತ್ರಿಕೆ ಓದುಗರಿಗೆ ಸಿಗುತ್ತಿರುವುದಕ್ಕೆ ಬೀಗುತ್ತಿತ್ತು.
ರಘುರಾಮ ಶೆಟ್ರಂತೂ ಫುಲ್ ಖುಷ್ ಮೂಡ್ನಲ್ಲಿದ್ದರು. ಆ ದಿನ ಅದೆಷ್ಟು ಗಣೇಶ್ ಬೀಡಿ ಸೇದಿ ಎಸೆದರೋ ಗೊತ್ತಿಲ್ಲ. ಅಂತೂ ಅಂದುಕೊಂಡಂತೆ ಪತ್ರಿಕೆ ಹೊರತಂದ ಸಂತೃಪ್ತಿಯನ್ನು ಅವರ ಮುಖದಲ್ಲಿ ಕಂಡೆ. ಹೊಗಳಿಕೆ-ತೆಗಳಿಕೆ ಎರಡನ್ನೂ ಏಕಕಾಲದಲ್ಲಿ ಸಮಾನವಾಗಿ ಕೇಳಿಸಿಕೊಂಡದ್ದು ಅದೇ ಮೊದಲು.
(ಮುಂದುವರೆಯುವುದು)

- ಚಿದಂಬರ ಬೈಕಂಪಾಡಿ
ವರದಿಯ ವಿವರಗಳು |
 |
ಕೃಪೆ : ಕೆ೦ಡಸ೦ಪಿಗೆ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-04
|
|
|