ಕಾರವಾರ: ಅಂತೂ ಸಿದ್ಧಗೊಂಡ ಕಾರವಾರ ಈಜುಗೊಳ! |
ಪ್ರಕಟಿಸಿದ ದಿನಾಂಕ : 2010-03-22
ಕಾರವಾರ, ಮಾ. ೨೧ : ಕಾರವಾರಿಗರಿನ್ನು ಡೈವಿಂಗ್ ಮಾಡಬಹುದು. ಕಡಲ ಅಲೆಗಳ ನಡುವೆ ಆತಂಕದಿಂದ ಈಜಾಡುತ್ತಿದ್ದವರು ಈಗ ಸುರಕ್ಷಿತವಾಗಿ ಈಜಬಹುದು. ಏಕೆಂದರೆ ನಗರಸಭೆ ನಿರ್ಮಿತ ಸುಸಜ್ಜಿತ ಈಜು ಗೊಳ ಸಿದ್ಧಗೊಂಡಿದ್ದು, ಉದ್ಘಾಟನೆಗೆ ಕಾಯುತ್ತಿದೆ.
ಈಜುಗೊಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಏಪ್ರಿಲ್ ೨೦೦೮ರಲ್ಲಿ. ಗುತ್ತಿಗೆದಾರರು ಹಾಗೂ ನಗರಸಭೆ ನಡುವಣ ಮುಸುಕಿನ ಗುದ್ದಾಟದಿಂದ ಈಜುಗೊಳ ಸಿದ್ಧಗೊಳ್ಳಲು ಎರಡು ವರ್ಷಗಳೇ ಬೇಕಾಯಿತು. ಹಾಗೆ ನೋಡಿದರೆ ಈಜುಗೊಳ ಡಿಸೆಂಬರ್ ೨೦೦೮ರ ವೇಳೆಗೆ ಉದ್ಘಾಟನೆಗೊಳ್ಳಬೇಕಿತ್ತು.
೨೦೦೯ ಫೆಬ್ರವರಿ ವೇಳೆಗೆ ಉದ್ಘಾಟನೆ ಮಾಡೋಣ ಎಂದು ಅಂದಿನ ಜಿಲ್ಲಾಧಿಕಾರಿ ಗೋವಿಂದ ರಾಜ್ ಹೇಳಿದ್ದರು. ಆದರೆ ಆಗಲೂ ಕಾಲ ಕೂಡಿಬರಲಿಲ್ಲ. ಈಜುಗೊಳವೂ ಸಿದ್ಧಗೊಳ್ಳಲಿಲ್ಲ. ಇದೀಗ ಈಜುಗೊಳದಲ್ಲಿ ನೀರನ್ನು ತುಂಬಲಾಗಿದೆ. ಈಜುಗೊಳದಲ್ಲಿ ಪ್ರಾಯೋಗಿಕವಾಗಿ ಈಜು ನಡೆಯು ತ್ತಿದೆ.
೨.೫೦ ಲಕ್ಷ ರು. ವ್ಯಯ
ಈಜುಗೊಳ ನಿರ್ಮಾಣಕ್ಕೆ ಒಟ್ಟೂ ೧೪೧ ಲಕ್ಷ ರುಪಾಯಿ ತಗುಲಿದೆ. ಪುಟ್‌ಪಾತ್ ಹಾಗೂ ಲೈ ಟಿಂಗ್‌ಗಾಗಿ ನಗರಸಭೆ ಹೆಚ್ಚುವರಿಯಾಗಿ ೨.೫೦ ಲಕ್ಷ ರುಪಾಯಿ ವ್ಯಯಿಸಿದೆ. ಈಜುಗೊಳದ ಸುತ್ತ ಹೋರ್ಡಿಂಗ್ ಅಳವಡಿಸುವ ಕಾರ್ಯವೂ ಇದೀಗ ಮುಕ್ತಾಯಗೊಂಡಿದೆ.
ಗುರುರಾಜ ನಾಯಕ ಎನ್ನುವವರಿಗೆ ಈಜುಗೊಳದ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ. ಈಜಲು ಆಗಮಿಸುವ ವಯಸ್ಕರಿಗೆ ಪ್ರತಿ ಗಂಟೆಗೆ ೨೦ ರುಪಾಯಿ, ಮಕ್ಕಳಿಗೆ ೧೫ ರುಪಾಯಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಈಜುಗೊಳದಲ್ಲಿನ ಶೇ. ೧೦ರಷ್ಟು ನೀರು ಪ್ರತಿದಿನ ಬದಲಾ ವಣೆಗೊಳ್ಳುತ್ತದೆ. ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ನೀರಿಗೆ ಕೆಮಿಕಲ್ ಬೆರೆಸಲಾಗುತ್ತದೆ. ಈಜು ಕಲಿಸಲು ತರಬೇತಿದಾರರು ಇರುವುದರಿಂದ ಆಸಕ್ತರು ಕೇವಲ ೧೫ ದಿನಗಳಲ್ಲಿ ಈಜು ಕಲಿಯಬಹುದು.
ಈಚೆಗೆ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಕಾರವಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಈಜುಗೊಳ ಉದ್ಘಾಟಿಸಲು ನಗರಸಭೆ ಆಸಕ್ತಿ ತಾಳಿತ್ತು. ಆದರೆ ಸಮಯಾಭಾವದಿಂದ ಆಗಲೂ ಉದ್ಘಾಟನೆಗೊಂಡಿರಲಿಲ್ಲ. ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ ಈಜುಗೊಳ ನಿರ್ಮಾಣ ಕಾಮಗಾರಿ ಬಗ್ಗೆ ಮುತುವರ್ಜಿ ವಹಿಸಿದ್ದರು. ಈಗ ಮೀನುಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಅವರಿಗಾಗಿ ಈಜುಗೊಳ ಕಾಯುತ್ತಿದೆ.
ಕಾರವಾರಕ್ಕೆ ಈಜುಗೊಳ ಇನ್ನೊಂದು ಪ್ರಮುಖ ಆಕರ್ಷಣೆಯಾಗಲಿದೆ. ಆದರೆ ಕಾರವಾರದಲ್ಲಿ ಪ್ರವಾಸಿ ಆಕರ್ಷಣೆಗೆಂದು ಈ ಹಿಂದೆ ಕೈಗೊಂಡ ಹಲವು ಯೋಜನೆಗಳು ಸರಿಯಾದ ನಿರ್ವಹಣೆ ಇಲ್ಲದೆ ಜನರು, ಪ್ರವಾಸಿಗರಿಂದ ದೂರವೇ ಉಳಿದಿದೆ. ಈ ಈಜುಗೊಳವೂ ಆ ಪಟ್ಟಿಯಲ್ಲಿ ಸೇರ್ಪಡೆಯಾಗಬಾರದು ಎನ್ನುವುದು ಜನತೆಯ ಆಶಯ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|