ಶಿರಾಡಿ ಘಾಟ್ ದುರಸ್ತಿಗೆ ಆಗ್ರಹಿಸಿ ಧರಣಿ |
ಪ್ರಕಟಿಸಿದ ದಿನಾಂಕ : 2010-03-22
ಸಕಲೇಶಪುರ: ಶಿರಾಡಿ ಘಾಟ್ ರಸ್ತೆಯ ಶೀಘ್ರ ದುರಸ್ತಿಗೆ ಒತ್ತಾಯಿಸಿ ಕರ್ನಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಗುಂಡ್ಯಾ ಗ್ರಾಮದಲ್ಲಿ ಶನಿವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿರುವ ಈ ಹೆದ್ದಾರಿಯನ್ನು ದುರಸ್ತಿ ಮಾಡಲು ಮೀನಮೇಷ ಎಣಿಸುತ್ತಿರುವ ಕಾರಣ ಮಂಗಳೂರು ಬೆಂಗಳೂರು ಮಧ್ಯ ಸಂಚರಿಸುವ ಲಕ್ಷಾಂತರ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಮ್ಮ ಪಕ್ಷದಿಂದ ಹಲವು ಬಾರಿ ಸಂಬಂಧಪಟ್ಟ ಇಲಾಖೆಯೊಡನೆ ಪತ್ರ ವ್ಯವಹಾರ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಹೆದ್ದಾರಿ ಹಾದು ಹೋಗಿರುವ ಜಿಲ್ಲೆಯ ಸಂಸದರ ನಿರ್ಲಕ್ಷ್ಯವು ಇದಕ್ಕೆಲ್ಲಾ ಕಾರಣ. ಹಾಸನ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಈ ಹೆದ್ದಾರಿ ಸಹಾಯಕವಾಗಿದೆ. ಆದರೂ, ಈ ಜಿಲ್ಲೆಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುವ ದೇವೇಗೌಡರು ಹೆದ್ದಾರಿ ದುರಸ್ತಿಗೆ ಯಾವುದೇ ಮನವಿ ಮಾಡದಿರುವುದು ಜಿಲ್ಲೆಯ ಜನರಿಗೆ ಬಗೆದಿರುವ ದ್ರೋಹವಾಗಿದೆ ಎಂದರು. ಯಾವುದೂ ಸಮಸ್ಯೆಗಳನ್ನು ಬೃಹತ್ ಮಾಡಿ ಹೋರಾಟಕ್ಕೆ ಇಳಿಯುವ ದೇವೇಗೌಡರಿಗೆ ಜಿಲ್ಲೆಯ ಸಮಸ್ಯೆಯೇ ಅರ್ಥವಾಗದಿರುವುದು ಆಶ್ಚರ್ಯ ಎಂದರು.
ರಾಷ್ಟ್ರೀಯ ಹೆದ್ದಾರಿ ೪೮ರ ಅವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಹಾಗೂ ಹೆದ್ದಾರಿ ಪ್ರಾಧಿಕಾರವನ್ನು ಈ ನಿಟ್ಟಿನಲ್ಲಿ ಗಮನ ಸೆಳೆಯಲು ಧರಣಿ ಹಮ್ಮಿಕೊಳ್ಳಲಾಗಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರಗೆ ಉಪವಾಸ ಕೈಬಿಡುವುದಿಲ್ಲ ಎಂದು ಘೋಷಿಸಿದರು.
ಇವರ ಹೋರಾಟಕ್ಕೆ ಸಕಲೇಶಪುರದ ಹಲವಾರು ಪ್ರಗತಿಪರ ಸಂಘಟನೆಗಳು ಬೆಂಬಲ ಘೋಷಿಸಿದ್ದು, ಹೋರಾಟ ತೀವ್ರಗೊಳ್ಳುವ ಸೂಚನೆ ದೊರೆತಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22
|
|
|