ಬೆಂಗಳೂರು, ಮಾ.೨೧: ಬೆಂಗಳೂರು ನಗರಕ್ಕೆ ಕೆಲವು ವರ್ಷಗಳಿಂದ ಗ್ರಹಣ ಹಿಡಿದಿದೆ ಎಂದು ವಿದೇಶಾಂಗ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ರವಿವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತಕುಮಾರ್, ಸೋನಿಯಾಗಾಂಧಿ ಮತ್ತು ಡಾ.ಮನ್‌ಮೋಹನ್‌ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶಕ್ಕೆ ಗ್ರಹಣ ಹಿಡಿದಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.
ಕೃಷ್ಣ ವಲಸೆಯ ಹಕ್ಕಿ
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಕುಮಾರ್, ಕೃಷ್ಣ ಬೆಂಗಳೂರನ್ನು ತ್ಯಜಿಸಿ ವಲಸೆ ಹೋಗಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಅವರಿಗೆ, ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದಿದ್ದರೆ, ಮತ್ತೆ ಅಲ್ಲಿಂದಲೆ ಸ್ಪರ್ಧಿಸಬಹುದಿತ್ತು. ಬೆಂಗಳೂರನ್ನು ಸಿಂಗಾಪುರವನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಲೆ ವಲಸೆ ಹೋದರು. ಕೃಷ್ಣ ಮಟ್ಟದ ರಾಜಕೀಯ ಹಕ್ಕಿಗಳು ಯಾವುದೆ ಕಾರಣಕ್ಕೂ ವಲಸೆ ಹೋಗಬಾರದು ಎಂದು ವಾಗ್ಧಾಳಿ ನಡೆಸಿದರು.
ಅಭಿವೃದ್ಧಿ ಕಾರ್ಯಗಳೆ ಚುನಾವಣಾ ಅಸ್ತ್ರ
ಕಳೆದ ಎರಡು ವರ್ಷಗಳ ಹಿಂದೆ ರಾಜ್ಯಕ್ಕೆ ಹಿಡಿದಿದ್ದ ಗ್ರಹಣ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಿಟ್ಟಿದೆ. ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ೧೦೦೦ಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.