ರಂಗನಾಥಪುರ ಅಪಘಾತ ಪ್ರಕರಣ ‘ಸರಕಾರ ಪರಿಹಾರ ನೀಡಲಿ’: ರೇವಣ್ಣ
ಪ್ರಕಟಿಸಿದ ದಿನಾಂಕ : 2010-03-22
ಹಾಸನ, ಮಾ. ೨೧: ಶನಿವಾರ ರಾತ್ರಿ ರಂಗನಾಥಪುರ ಗೇಟ್ ಬಳಿ ನಡೆದ ಭೀಕರ ಅಪಘಾತಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರಕಾರ ತಲಾ ೨ ಲಕ್ಷ ರೂ. ಪರಿಹಾರ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.
ಹಾಸನದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ದುರಂತದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬದ ೧೦ ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರಕಾರ ಎರಡು ಲಕ್ಷ ರೂ. ಪರಿಹಾರ ನೀಡಬೇಕೆಂದರು.
ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು. ಈ ಕುರಿತು ಸಾರಿಗೆ ಸಚಿವ ಆರ್.ಅಶೋಕ್‌ರೊಂದಿಗೆ ಮಾತುಕತೆ ನಡೆಸುವುದಾಗಿ ರೇವಣ್ಣ ತಿಳಿಸಿದರು.
ಹಳೇ ಮ್ಯಾಕ್ಸಿಕ್ಯಾಬ್‌ಗಳಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳ ಸಂಚಾರ ರದ್ದುಪಡಿಸಬೇಕು ಎಂದು ಒತ್ತಾಯಿಸಿದ ರೇವಣ್ಣ, ಸಾರಿಗೆ ಇಲಾಖೆಯ ಬ್ರೇಕ್ ಇನ್ಸ್‌ಪೆಕ್ಟರ್‌ಗಳು ಇಂತಹ ವಾಹನಗಳನ್ನು ಹಿಡಿಯುವ ಬದಲು ಮಾಮೂಲಿ ಪಡೆದು ಸುಮ್ಮನಾ ಗುತ್ತಿದ್ದಾರೆ ಎಂದು ಕಿಡಿ ಕಾರಿದರು.
ಇದೇ ವೇಳೆ ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಪ್ರಮಾಣಿಕೃತ ಬಿತ್ತನೆ ಬೀಜ ಒದಗಿಸುವ ನಿಟ್ಟಿನಲ್ಲಿ ತೋಟಗಾರಿಕಾ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಈ ವಾರದ ಕೊನೆಯಲ್ಲಿ ಸಚಿವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ರೇವಣ್ಣ ತಿಳಿಸಿದರು.
ಆಲೂಗಡ್ಡೆ ಬಿತ್ತನೆ ಬೀಜಕ್ಕೆ ರಾಜ್ಯ ಸರಕಾರ ಶೇ. ೫೦ರಷ್ಟು ರಿಯಾಯಿತಿ ನೀಡಬೇಕು. ಅಲ್ಲದೆ ಕೇಂದ್ರ ಸರಕಾರ ದಿಂದಲೂ ಶೇ. ೨೫ರಷ್ಟು ರಿಯಾಯಿತಿ ನೀಡುವಂತೆ ರಾಜ್ಯ ಸರಕಾರ ಪ್ರಸ್ತಾವನೆ ಸಲ್ಲಿಸಬೇಕೆಂದು ಆಗ್ರಹಿಸಿದರು.