| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಕೇಂದ್ರದ ನರ್ಮ್ ಅನುದಾನದ ದುರ್ಬಳಕೆಯಲ್ಲಿ ತೊಡಗಿರುವ ಬಿಜೆಪಿ ಸರಕಾರ: ಎಚ್.ಡಿ.ಕುಮಾರಸ್ವಾಮಿ |
ಪ್ರಕಟಿಸಿದ ದಿನಾಂಕ : 2010-03-22
ಬೆಂಗಳೂರು, ಮಾ.೨೧: ರಾಜ್ಯ ಬಿಜೆಪಿ ಸರಕಾರವು ಬೆಂಗಳೂರಿನ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸದೆ, ಕೇಂದ್ರ ಸರಕಾರದ ನರ್ಮ್ ಯೋಜನೆಯಡಿಯಲ್ಲಿ ಲಭಿಸುತ್ತಿರುವ ಸಾವಿರಾರು ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ತಲ್ಲೀನವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಗರದ ಬಸವನಗುಡಿ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ರೋಡ್ ಶೋ ಮೂಲಕ ಪ್ರಚಾರ ನಡೆಸಿದ ಸಂದರ್ಭದಲ್ಲಿ ಅವರು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಬೆಂಗಳೂರು ನಗರದ ಅಭಿವೃದ್ಧಿ ವಿರೋಧಿಯಲ್ಲ. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಆಡಳಿತಾವಧಿಯಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ವರ್ತುಲ ರಸ್ತೆ ನಿರ್ಮಾಣ, ಕಾವೇರಿ ನದಿಯಿಂದ ನಗರಕ್ಕೆ ೯ ಟಿಎಂಸಿ ಅಡಿ ನೀರು ಪೂರೈಕೆಗೆ ಕ್ರಮ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು.
ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಜಾರಿಗೆ ತಂದ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ಬಿಜೆಪಿ ಸರಕಾರ ಮರೆ ಮಾಚುತ್ತಿದೆ. ಮೆಟ್ರೋ ರೈಲು ಕಾಮಗಾರಿಗೆ ಚಾಲನೆ, ಎಲೆಕ್ಟ್ರಾನಿಕ್ ಸಿಟಿ ಭಾಗದ ಎಲಿವೆಟೆಡ್ ಮೇಲ್ಸುತುವೆ, ಕಾಲೇಜು ಹಾಗೂ ಆಸ್ಪತ್ರೆಗಳಿಗೆ ನೀಡಲಾದ ಅನುದಾನದ ಬಗ್ಗೆ ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಸರಕಾರ ಬೆಂಗಳೂರು ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸದೆ, ಕೇವಲ ನರ್ಮ್ ಯೋಜನೆಯಲ್ಲಿ ಲಭಿಸುತ್ತಿರುವ ಸಾವಿರಾರು ಕೋಟಿ ರೂ. ಅನುದಾನವನ್ನು ಲೂಟಿ ಮಾಡುವುದರಲ್ಲಿ ತಲ್ಲೀನವಾಗಿದೆ. ಅಲ್ಲದೆ, ರಾಜ್ಯದ ಮೇಲಿನ ಸಾಲದ ಹೊರೆಯನ್ನು ೮೨ ಸಾವಿರ ಕೋಟಿ ರೂ.ಗೆ ಹೆಚ್ಚಿಸಿದ್ದೇ ಈ ಸರಕಾರದ ಸಾಧನೆ ಎಂದು ಅವರು ಕಿಡಿಕಾರಿದರು.
ಬೆಂಗಳೂರಿನ ಜನತೆ ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಸರಕಾರಿ ನೌಕರರಿಗೆ ವೇತನ ನೀಡಲು ಸರಕಾರ ತಿಣಕಾಡುವ ಪರಿಸ್ಥಿತಿ ರಾಜ್ಯ ಸರಕಾರಕ್ಕೆ ಬಂದೊದಗಿದೆ. ಈ ಜನ ವಿರೋಧಿ ಸರಕಾರಕ್ಕೆ ನಗರದ ಪ್ರಜ್ಞಾವಂತ ಮತದಾರರು ಬಿಬಿಎಂಪಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ರಘುಪತಿ, ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|
|
|