| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಬೆಂಗಳೂರು: ವಿದ್ಯುತ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶೀಘ್ರದಲ್ಲೇ ಕಾನೂನು: ರಾಮಚಂದ್ರಗೌಡ |
ಪ್ರಕಟಿಸಿದ ದಿನಾಂಕ : 2010-03-22
ಬೆಂಗಳೂರು, ಮಾ.೨೧: ವಿದ್ಯುತ್ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನನ್ನು ಶೀಘ್ರದಲ್ಲೆ ಜಾರಿಗೊಳಿಸಲು ಸರಕಾರ ಚಿಂತನೆ ನಡೆಸಿದೆ ಎಂದು ವೈದಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಹೇಳಿದ್ದಾರೆ.
ನಗರದ ಅವಿನ್ಯೂ ರಸ್ತೆಯಲ್ಲಿ ರವಿವಾರ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯುತ್ ಗುತ್ತಿಗೆದಾರರು ಬಹು ಅಂತಸ್ತಿನ ಕಟ್ಟಡಗಳಲ್ಲಿ ಕಳಪೆ ಗುಣಮಟ್ಟದ ಉಪಕರಣ ಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ವಿದ್ಯುತ್ ದುರಂತಗಳು ಸಂಭವಿಸುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ. ಇನ್ನು ಮುಂದೆ ಇಂತಹ ದುರಂತಗಳಿಗೆ ಕಟ್ಟಡದ ವಿದ್ಯುತ್ ಗುತ್ತಿಗೆದಾರರನ್ನೆ ಹೊಣೆ ಮಾಡಲಾಗುವುದು. ಅಲ್ಲದೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕಾನೂನು ರೂಪಿಸಲಾಗುವುದು ಎಂದು ರಾಮಚಂದ್ರಗೌಡ ಎಚ್ಚರಿಕೆ ನೀಡಿದರು.
ಸರಕಾರ ಜಾರಿಗೆ ತಂದಿರುವ ಭಾಗ್ಯಜ್ಯೋತಿ ಯೋಜನೆಯಲ್ಲೂ ಕಳಪೆ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಕೆ ಮಾಡದಂತೆ ಗುತ್ತಿಗೆದಾರರು ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಸರಕಾರ ಇದುವರೆಗೆ ಹೆಚ್ಚುವರಿಯಾಗಿ ೧೩೬೦ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಿದೆ. ೨೦೧೦-೧೧ನೆ ಸಾಲಿನಲ್ಲಿ ೧,೬೦೦ ಮೆ.ವ್ಯಾ. ಸೇರಿದಂತೆ, ಅಧಿಕಾರ ಅವಧಿ ಮುಗಿಯುವ ೫ ವರ್ಷದೊಳಗೆ ೫ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಿದೆ ಎಂದು ಅವರು ಹೇಳಿದರು.
೧೯೨೨ನೆ ಸಾಲಿನ ಬ್ರಿಟೀಷರ ಕಾಲದಲ್ಲಿ ಪ್ರಾರಂಭಗೊಂಡ ವಿದ್ಯುತ್ ಗುತ್ತಿಗೆದಾರರ ಸಂಘ ಅನೇಕ ಮನೆಗಳನ್ನು ಬೆಳಗಿದೆ. ೧೯೭೬ರಲ್ಲಿ ಈ ಸಂಘಕ್ಕೆ ಆಗಿನ ಸರಕಾರ ೭ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿದ್ದರೂ, ಅನೇಕ ಕಾರಣಗಳಿಂದ ಕಟ್ಟಡ ನಿರ್ಮಾಣ ಸಾಧ್ಯವಾ ಗಲಿಲ್ಲ. ೨೯ವರ್ಷಗಳ ನಂತರ ೭ ಅಂತಿಸ್ತಿನ ಬದಲು ೫ ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿರುವುದು ಸಂತಸದ ವಿಷಯ ಎಂದು ರಾಮಚಂದ್ರಗೌಡ ನುಡಿದರು.
ಸಮಾರಂಭದಲ್ಲಿ ಶಾಸಕ ಜಿ.ದಿನೇಶ್ ಗುಂಡೂರಾವ್, ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಎಂ.ನಟರಾಜ್, ಸಂಘದ ಮುಖಂಡ ಎಂ.ನಟರಾಜ್, ಎಸ್.ವಸಂತ್, ಎಂ.ಎನ್.ಉಮೇಶ್ ಮುಂತಾದವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|
|
|