ಭುವನೇಶ್ವರ, ಮಾ.೨೧: ಒರಿಸ್ಸಾದ ಬಂಗಾಲ ಕೊಲ್ಲಿಯಲ್ಲಿ ಯುದ್ಧ ಹಡಗೊಂದರಿಂದ ೨೯೦ ಕಿ.ಮೀ. ವ್ಯಾಪ್ತಿಯ ಲಂಬವಾಗಿ ಸಾಗುವ ಶಬ್ದಾತೀತ ವೇಗದ ಬ್ರಹ್ಮೋಸ್ ಕ್ಷಿಪಣಿಯೊಂದರ ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತವಿಂದು ಇಂತಹ ಯುದ್ದೋಪಯೋಗಿ ಶಬ್ದಾತೀತ ವೇಗದ ಕ್ಷಿಪಣಿ ಹೊಂದಿದ ಮೊದಲ ದೇಶವೆನಿಸಿದೆ.
ಭಾರತದ ಸಮರ ನೌಕೆ ‘ರಣರ್’ನಿಂದ ಪೂರ್ವಾಹ್ಣ ೧೧:೩೦ರ ವೇಳೆ ಈ ಲಂಬ ಮಾದರಿಯ ಕ್ಷಿಪಣಿಯನ್ನು ಹಾರಿ ಬಿಡಲಾಯಿತು. ಅದು ಗುರಿ ಹಡಗನ್ನು ಯಶಸ್ವಿಯಾಗಿ ಅಪ್ಪಳಿಸಿತು. ಗುರಿ ನಿಖರವಾಗಿತ್ತು ಹಾಗೂ ಯೋಜನೆ ಯಶಸ್ವಿಯಾಗಿದೆಯೆಂದು ಬ್ರಹ್ಮೋಸ್‌ನ ಮುಖ್ಯಸ್ಥ ಎ. ಶಿವತನು ಪಿಳ್ಳೆ ತಿಳಿಸಿದ್ದಾರೆ.
ಇಂದಿನ ಪರೀಕ್ಷೆಯೊಂದಿಗೆ ಯುದ್ದೋಪಯೋಗಿ ಶಬ್ದಾತೀತ ವೇಗದ ಕ್ರೂಯಿಸ್ ಕ್ಷಿಪಣಿಯನ್ನು ತನ್ನ ಅಸ್ತ್ರಾಗಾರಕ್ಕೆ ಸೇರಿಸಿದ ಪ್ರಥಮ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆಯೆಂದು ಅವರು ದಿಲ್ಲಿಯಲ್ಲಿಂದು ಹೇಳಿದ್ದಾರೆ.
ಈ ಯಶಸ್ವಿಗಾಗಿ ಬ್ರಹ್ಮೋಸ್ ವಿಜ್ಞಾನಿಗಳನ್ನು ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಹಾಗೂ ರಕ್ಷಣಾ ಸಚಿವ ಎ.ಕೆ. ಆಂಟನಿ ಪ್ರತ್ಯೇಕವಾಗಿ ಅಭಿನಂದಿಸಿದ್ದಾರೆ.