ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ |
ಪ್ರಕಟಿಸಿದ ದಿನಾಂಕ : 2010-03-22
{ ಚಿತ್ರ: ದುರ್ಗಪ್ರಸಾದ್ ಉಪಾಧ್ಯಾಯ. ಕೆ}
ಉಡುಪಿ, ಮಾ.೨೧: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ರವಿವಾರ ಸನ್ಮಾನಿಸಲಾಯಿತು.


ಸಂಸ್ಕೃತ ವಿದ್ವಾಂಸ ಪ್ರೊ.ಹರಿದಾಸ್ ಉಪಾಧ್ಯಾಯ, ಉದ್ಯಮಿ ರಬೀಂದ್ರ ನಾಯಕ್, ಅಸ್ಥಿ ಚಿಕಿತ್ಸಾ ತಜ್ಞ ಡಾ.ಭಾಸ್ಕರಾ ನಂದಕುಮಾರ್, ಸಂಶೋಧಕ ಕೆ.ಎಲ್.ಕುಂಡಂತಾಯ, ನಿವೃತ್ತ ಪತ್ರಕರ್ತ ಶ್ರೀಕರ್ ಭಟ್, ಸಾಹಿತ್ಯ ಪರಿಚಾರಕ ನಂದಳಿಕೆ ಬಾಲಚಂದ್ರ ರಾವ್, ವಯಲಿನ್ ವಿದುಷಿ ವಸಂತಿ ರಾಮ ಭಟ್, ಯಕ್ಷಗಾನ ನೃತ್ಯಗುರು ಸಂಜೀವ ಸುವರ್ಣ, ಸಾಹಿತಿ ಕೆ.ಆರ್. ಕೊತ್ವಾಲ್, ಶಾಂತಾ ಸುರೇಶ ಹೆಬ್ಬಾರ್, ವಾಲಗ ಕಲಾವಿದ ಓಬು ಸೇರಿಗಾರ, ಭೂತನೃತ್ಯ ಕಲಾವಿದ ಶೇಖರ ಪರವ ಪಾಡಿಗಾರು, ಸಂಘ ಸಂಸ್ಥೆಗಳ ಪರವಾಗಿ ತಲ್ಲೂರು ಶಿವರಾಮ ಶೆಟ್ಟಿ (ಉಡುಪಿ ಯಕ್ಷಗಾನ ಕಲಾರಂಗ), ರಾಘವೇಂದ್ರ ಉಪಾಧ್ಯ (ಅಂಬಲ ಪಾಡಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿ), ಜರ್ನಾದನ್ (ಉಡುಪಿ ವಿಶೇಷ ಮಕ್ಕಳ ಶಾಲೆ ಸ್ಪಂದನ)ರನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಸನ್ಮಾನಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಮ್ಮೇಳನಾಧ್ಯಕ್ಷ ಡಾ.ಯು. ಪಿ. ಉಪಾಧ್ಯಾಯ, ಕಸಾಪ ಜಿಲ್ಲಾಧ್ಯಕ್ಷ ಅಂಬಾತ ನಯ ಮುದ್ರಾಡಿ ಉಪಸ್ಥಿತರಿದ್ದರು.
ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಮೇಟಿ ಮುದಿಯಪ್ಪ ವಂದಿಸಿದರು. ಡಾ.ಗಣನಾಥ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
ಉಡುಪಿ: ಈ ಹಿಂದೆ ಸಂಸ್ಕೃತ ಭಾಷೆಯ ದಾಳಿಗೆ ತತ್ತರಿಸಿದ್ದ ಕನ್ನಡ ಭಾಷೆ ಸಾಕಷ್ಟು ಪದಗಳನ್ನು ಕಳೆದು ಕೊಂಡಿತ್ತು. ಸಂಸ್ಕೃತದಿಂದ ಕನ್ನಡಕ್ಕೆ ಬಹಳಷ್ಟು ಅನ್ಯಾಯ ವಾಗಿರುವುದು ನಿಜ. ಆದರೆ ಈಗ ಮತ್ತೆ ಇಂಗ್ಲಿಷ್ ಭಾಷೆಯ ಪ್ರಭಾವಕ್ಕೆ ಒಳಗಾಗಿ ಮತ್ತಷ್ಟು ಪದಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ನಿ.ಬೀ. ಅಣ್ಣಾಜಿ ಬಲ್ಲಾಳ್ ವೇದಿಕೆಯಲ್ಲಿ ಇಂದು ನಡೆದ ಉಡುಪಿ ಜಿಲ್ಲಾ ಆರನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾ ರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಮುಂದಿನ ೫೦ ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಕನ್ನಡ ಮಾತ ನಾಡುವವರು ಸಿಗುವುದೇ ಕಷ್ಟ ಎಂಬ ಪರಿಸ್ಥಿತಿ ಉದ್ಭವಿಸಿದೆ. ಆಂಗ್ಲ ಮಾಧ್ಯಮ ಶಾಲೆಯಿಂದಾಗಿ ಇಂದು ಕನ್ನಡ ಮಾತನಾಡುವ ಮಕ್ಕಳೇ ನಮಗೆ ಬೆಂಗಳೂರಿನಲ್ಲಿ ಸಿಗುತ್ತಿಲ್ಲ. ಸರಕಾರ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪರವಾನಿಗೆ ನೀಡುವುದನ್ನು ನಿಲ್ಲಿಸು ವವರೆಗೆ ಕನ್ನಡ ಉಳಿಸುವ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದರು.
ಟಿವಿಯಿಂದಾಗಿ ಮಕ್ಕಳು ಓದುವುದನ್ನೆ ಮರೆತು ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಅಭಿಮಾನ ಹಾಗೂ ಭಾಷೆಯನ್ನು ಉಳಿಸುವ ಬಗ್ಗೆ ಸಾಕಷ್ಟು ಚಿಂತನೆ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ನಲ್ಲೂರು ಪ್ರಸಾದ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ.ಯು.ಪಿ.ಉಪಾಧ್ಯಾಯ ಹಾಗೂ ಅವರ ಪತ್ನಿ ಡಾ.ಸುಶೀಲಾ ಉಪಾಧ್ಯಯ ಅವರನ್ನು ಸನ್ಮಾನಿಸ ಲಾಯಿತು. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡಬೇಕಾಗಿದೆ. ಮಕ್ಕಳನ್ನು ಆಕರ್ಷಿಸುವಂತಹ ಕೃತಿಗಳನ್ನು ಲೇಖಕರು ಹೆಚ್ಚು ಹೆಚ್ಚಾಗಿ ಬರೆ ಯಬೇಕು. ಆಗ ಮಾತ್ರ ಮಕ್ಕಳಲ್ಲಿ ಕನ್ನಡ ಅಭಿಮಾನ ಬೆಳೆಸಲು ಸಾಧ್ಯವಾಗುತ್ತದೆ ಎಂದು ಡಾ.ಯು.ಪಿ.ಉಪಾಧ್ಯಾಯ ಹೇಳಿದರು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಜಿಲ್ಲಾಧ್ಯಕ್ಷ ಅಂಬಾತನಯ ಮುದ್ರಾಡಿ, ಉಡುಪಿ ತಾಲೂಕು ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಕುಂದಾಪುರ ತಾಲೂಕು ಅಧ್ಯಕ್ಷ ರಮಾನಂದ ಕಾಮತ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಭುವನ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.
ಡಾ.ಪಾದೆಕಲ್ಲು ವಿಷ್ಣು ಭಟ್ ಸ್ವಾಗತಿಸಿದರು. ಡಾ.ಪದ್ಮನಾಭ ಕೇಕುಣ್ಣಾಯ ವಂದಿಸಿದರು. ಪ್ರೊ.ಹೇರಂಜೆ ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುಂದಾಪುರದ ರಂಗ ಅಧ್ಯಯನ ಕೇಂದ್ರದ ಕಲಾವಿದ ರಿಂದ ‘ಕೈದಿಗಳ ಕಥನ’ ನಾಟಕ ಪ್ರದರ್ಶನಗೊಂಡಿತು.
ಕನ್ನಡ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ: ಡಾ.ನಲ್ಲೂರು ಪ್ರಸಾದ್

ಕನ್ನಡ ಪುಸ್ತಕ ಓದುವವರ ಸಂಖ್ಯೆ ಕಡಿವೆಯಾಗುತ್ತಿವೆ ಎಂಬ ಅಪವಾದ ಸುಳ್ಳು. ದಿನದಿಂದ ದಿನಕ್ಕೆ ಪುಸ್ತಕ ಮಾರಾಟದ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ಚಿತ್ರದುರ್ಗ ಸಮ್ಮೇಳನದಲ್ಲಿ ಮೂರು ಕೋಟಿ ರೂ. ಮೌಲ್ಯದ ಪುಸ್ತಕಗಳು ಮಾರಾಟವಾಗಿದ್ದರೆ, ಇತ್ತೀಚೆಗೆ ನಡೆದ ಗದಗ ಸಾಹಿತ್ಯ ಸಮ್ಮೇಳನದಲ್ಲಿ ಆರು ಕೋಟಿ ರೂ. ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.
ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕೆಲವು ಕನ್ನಡದ ಅಮೂಲ್ಯ ಶಬ್ದಗಳು ಇತರ ಭಾಷೆಗಳ ಹೊಡೆತಕ್ಕೆ ಸಿಲುಕಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಈಗಾಗಲೇ ೫೦ಲಕ್ಷ ರೂ. ವೆಚ್ಚದಲ್ಲಿ ೮ ನಿಘಂಟುಗಳನ್ನು ಸಿದ್ಧಪಡಿಸಿದೆ. ಪ್ರಾದೇಶಿಕ ಪದಕೋಶ ನಿಘಂಟು ರಚನೆಗೆ ಸಮಿತಿ ರಚಿಸಲಾಗಿದ್ದು, ಅದಕ್ಕೆ ಕೆ.ವಿ.ನಾರಾಯಣ ಅವರನ್ನು ಸಂಪಾದಕರನ್ನಾಗಿ ಆಯ್ಕೆ ಮಾಡಲಾಗಿದೆ. ಅದೇ ರೀತಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು ೪೦ಮಂದಿ ಭಾಷಾ ತಜ್ಞರನ್ನು ಇದಕ್ಕೆ ಸೇರಿಸಿಕೊಳ್ಳಲಾಗಿದೆ ಎಂದರು.
ಕಸಾಪ ಕೇವಲ ಬೆಂಗಳೂರಿನ ಸೊತ್ತಲ್ಲ. ಅದು ಹಳ್ಳಿ ಹಳ್ಳಿಗಳಿಗೆ ಹೋದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಜಿಲ್ಲಾ ಸಾಹಿತ್ಯ ಸಮ್ಮೇಳನ ಗಳಿಗೆ ೧.೭೫ಕೋಟಿ ರೂ., ನಿಘಂಟುಗಳ ರಚನೆಗೆ ೧ ಕೋಟಿ ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಗೆ ೧ ಕೋಟಿ ರೂ. ಅನುದಾನ ವನ್ನು ಸರಕಾರ ನೀಡಿದೆ ಎಂದು ಡಾ.ನಲ್ಲೂರು ಪ್ರಸಾದ್ ಹೇಳಿದರು.
ಸಮ್ಮೇಳನದ ಗೋಷ್ಠಿಗಳು ಖಾಲಿಖಾಲಿ!

ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಇಂದು ಬೆಳಗ್ಗೆ ನಡೆದ ಗೋಷ್ಠಿಗಳಿಗೆ ಪ್ರೇಕ್ಷಕರ ಕೊರತೆ ಕಾಡಿತ್ತು. ಕೇವಲ ಬೆರಳೆಣಿಕೆಯ ಜನ ಮಾತ್ರ ಕುಳಿತು ಗೋಷ್ಠಿಗಳನ್ನು ಆಲಿಸುತ್ತಿದ್ದರೆ, ಉಳಿದ ಕುರ್ಚಿಗಳು ಖಾಲಿಖಾಲಿ ಕಂಡು ಬಂದವು.
ಮೊದಲು ಸಾಂಸ್ಕೃತಿಕ ಕಾರ್ಯಕ್ರಮವನ್ನು ಜನರಿಲ್ಲದೆ ಆರಂಭಿಸಬೇಕಾಯಿತು. ಬಳಿಕ ನಡೆದ ‘ಕರಾವಳಿಯ ಕಲಾವಿದರ ಸಂಸ್ಮರಣೆ’ ಎಂಬ ಗೋಷ್ಠಿ ನಡೆಯುತ್ತಿರುವ ಸಭಾಂಗಣದಲ್ಲಿ ಸಾಹಿತ್ಯಾಭಿಮಾನಿಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಲ್ಲಿತ್ತು.
ಅಲ್ಲದೆ ಪುಸ್ತಕ ಮಾರಾಟ ನಡೆಯುತ್ತಿದ್ದರೂ ಖರೀದಿ ಯೆಡೆಗೆ ಉಡುಪಿ ಜನತೆ ಅಷ್ಟೇನು ಆಸಕ್ತಿ ತೋರಲಿಲ್ಲ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-22 00:00:00
|
|
|